ಹುಳುಕು ಹಲ್ಲು ನಿರ್ಲಕ್ಷಿಸಿದವನ ಜೀವವೇ ಹೋಯ್ತು: ದುರಂತ ಕತೆ ಹೇಳಿದ ಪತ್ನಿ
ಇಂಡೋನೇಷ್ಯಾದಲ್ಲಿ ಹುಳುಕು ಹಲ್ಲು ನೋವನ್ನು ನಿರ್ಲಕ್ಷಿಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ಪಡೆಯದೇ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ವ್ಯಕ್ತಿಯ ಕ್ಯಾವಿಟಿ ಕುತ್ತಿಗೆ ಮತ್ತು ಭುಜಗಳಿಗೆ ಹರಡಿ ಸೋಂಕು ಉಂಟುಮಾಡಿತ್ತು.

ಹಲ್ಲು ನೋವು ಅನುಭವಿಸಿದವರಿಗೆ ಗೊತ್ತು. ಏನು ನೋವನ್ನಾದರೂ ಸಹಿಸಬಹುದು ಆದರೆ ಹಲ್ಲು ನೋವನ್ನು ಮಾತ್ರ ಸಹಿಸಲಾಗದು ಎಂಬುದನ್ನು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಹಲ್ಲು ನೋವು ಶುರುವಾದರೆ ಇಡೀ ತಲೆ ಮುಖ ಪೂರ್ತಿ ನೋಯಲು ಶುರುವಾಗುತ್ತದೆ. ಆದರೆ ಸಣ್ಣಗೆ ಶುರುವಾಗುವ ಹಲ್ಲು ನೋವನ್ನು ಆರಂಭದಲ್ಲಿ ಅನೇಕರು ನಿರ್ಲಕ್ಷಿಸುವುದೇ ಹೆಚ್ಚು ಕಡೆಗೆ ನೋವು ತಡೆಯಲಾಗದಿದ್ದರಷ್ಟೇ ಅನೇಕರು ಆಸ್ಪತ್ರೆಗೆ ಹೋಗುತ್ತಾರೆ. ಹಲ್ಲಿಗೆ ತಗಲುವ ದುಬಾರಿ ಚಿಕಿತ್ಸೆಯೂ ಇದಕ್ಕೆ ಕಾರಣವಿರಬಹುದು. ಆದರೆ ಈಗ ನಾವು ಹೇಳುತ್ತಿರುವ ವಿಚಾರ ಕೇಳಿದರೆ ನೀವು ಬೆಚ್ಚಿ ಬೀಳುವುದಂತು ಗ್ಯಾರಂಟಿ, ಹುಳುಕು ಹಲ್ಲಿಗೆ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ವ್ಯಕ್ತಿಯೋರ್ವನ ಜೀವವೇ ಹೋಗಿದೆ.
ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಹಲ್ಲಿನ ಕ್ಯಾವಿಟಿ(ಹುಳುಕು ಹಲ್ಲು)ಗೆ ಔಷಧಿ ಪಡೆಯದೇ ನಿರ್ಲಕ್ಷಿಸಿದರಿಂದ ಸೋಂಕು ನಂತರ ಭುಜ ಹಾಗೂ ಹೆಗಲಿಗೆ ಪಸರಿಸಿದ ಪರಿಣಾಮ ಆತನ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಇಂಡೋನೇಷ್ಯಾದ ಫಿರ್ಮಸ್ಯಾಹ್ ಎಂಬಾತ ಹುಳುಕು ಹಲ್ಲಿಗೆ ಚಿಕಿತ್ಸೆ ಪಡೆಯದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಆತನ ಪತ್ನಿ ಅಮಂಡಾ ಪ್ರವಿರಿಯಾ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟಿಕ್‌ಟಾಕ್‌ನಲ್ಲಿ ಮಾಹಿತಿ ನೀಡಿರುವ ಆಕೆ, ಆತನಿಗೆ ಹುಳುಕು ಹಲ್ಲು ನೋವಿದ್ದರೂ ಕೂಡ ಚಿಕಿತ್ಸೆಗೆ ಹೋಗದೇ ಕೇವಲ ನೋವಿನ ಮಾತ್ರ ತೆಗೆದುಕೊಂಡು ಬಿಡುತ್ತಿದ್ದ.
ಫರ್ಮಾಸ್ಯಾ ಅವರ ಕೆನ್ನೆ ಹಲ್ಲುನೋವಿನಿಂಧಾಗಿ ಹೇಗೆ ಆರಂಭದಲ್ಲಿ ಊದಿಕೊಳ್ಳಲು ಪ್ರಾರಂಭಿಸಿತು ಎಂಬುದನ್ನು ಅಮಂಡಾ ತಿಳಿಸಿದ್ದಾರೆ. ಕೆನ್ನೆ ಊದುತ್ತಿದ್ದಂತೆ ನೋವು ಕಡಿಮೆಯಾಗುತ್ತದೆ ಎಂದು ಆಶಿಸುತ್ತಾ ಆ ಪ್ರದೇಶಕ್ಕೆ ಔಷಧೀಯ ಪ್ಯಾಚ್ ಹಚ್ಚಿದರು. ಬರೀ ಅಷ್ಟೇ ಅಲ್ಲ, ಹೀಗೆ ಔಷಧಿ ತಿನ್ನುತ್ತಾ ಸಹಜ ಎಂಬಂತೆ ಅವರು ಕೆಲಸಕ್ಕೂ ಹೋಗಿದ್ದರು. ಆದರೆ ನಂತರದಲ್ಲಿ ಅವರ ಕುತ್ತಿಗೆ ಕೂಡ ಊದಿಕೊಳ್ಳಲು ಶುರುವಾಯ್ತು. ಅಲ್ಲದೇ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅವರಿಗೆ ಉಸಿರಾಡುವುದಕ್ಕೆ ತಿನ್ನುವುದಕ್ಕೂ ಸಾಧ್ಯವಾಗದಂತೆ ಆಯ್ತು. ಹೀಗಾಗಿ ಕೂಡಲೇ ಅಮಂಡಾ ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿದರು.
ಆದರೆ ಅಲ್ಲಿ ನೆಬ್ಯುಲೈಜರ್ ಚಿಕಿತ್ಸೆ, ಚಿಕಿತ್ಸೆ ನೀಡಿದ ವೈದ್ಯರು ಆತನ ಹಲ್ಲಿನ ಸಮಸ್ಯೆಯನ್ನು ತಪಾಸಣೆ ಮಾಡದೇ ವೈದ್ಯರು ಮನೆಗೆ ಕಳುಹಿಸಿಕೊಟ್ಟರು. ಇತ್ತ ಆತನ ಸ್ಥಿತಿ ಮತ್ತೆ ಉಲ್ಬಣಿಸಿದ್ದು, ಅವರಿಗೆ ಕನಿಷ್ಠ ಊಟ ನಿದ್ದೆ ಮಾಡುವುದು ಕೂಡ ಕಷ್ಟವಾಯ್ತು. ಮತ್ತೆ ಅವರನ್ನು ಪತ್ನಿ ಅಮಂಡಾ ಆಸ್ಪತ್ರೆಗೆ ಕರೆದೊಯ್ದಿದ್ದು, ಹಲ್ಲಿನ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಇದರಿಂದ ಆಘಾತಕಾರಿ ವಿಚಾರ ತಿಳಿದು ಬಂದಿದೆ. ಆತನ ಹಲ್ಲಿನ ಕ್ಯಾವಿಟಿ ಈಗಾಗಲೇ ಆತನ ಕತ್ತು ಹಾಗೂ ಭುಜಗಳಿಗೆ ಪಸರಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ಮತ್ತೆ ನಡೆಸಿದ ಹಲವು ಪರೀಕ್ಷೆಗಳು ಅಲ್ಲೆಲ್ಲಾ ರೇಷಿ (ಕೀವು) ಆಗಿ ಅದು ಬೇರೆಡೆಗೆ ಹರಡಿರುವುದನ್ನು ತೋರಿಸಿದೆ. ಇದರಿಂದ ಕೂಡಲೇ ಆತನನ್ನು ತುರ್ತು ಶಸ್ತ್ರಚಿಕಿತ್ಸೆ ನಡೆಸುವುದಕ್ಕಾಗಿ ಐಸಿಯುಗೆ ದಾಖಲಿಸಿಕಕೊಂಡಿದ್ದಾರೆ.
ಅವರ ದೇಹದಲ್ಲಿ ಕೀವು ತುಂಬಿತ್ತು. ಹಾಗೂ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ವೈದ್ಯರು ಆತನ ಹಲ್ಲು ಹಾಗೂ ಶ್ವಾಸಕೋಶದ ಎಕ್ಸ್‌ರೇ ತೆಗೆದರು. ಈ ಊತವು ಕೇವಲ ಉರಿಯೂತವಲ್ಲ, ಬದಲಾಗಿ ಕೀವುಗಳಿಂದ ಕುತ್ತಿಗೆ ಮತ್ತು ಭುಜಗಳಿಗೆ ಹರಡಿದ ಸೋಂಕು ಎಂಬುದನ್ನು ಎಕ್ಸರೇ ಫಲಿತಾಂಶವೂ ತೋರಿಸಿತು ಎಂದು ಅಮಂಡಾ ವಿವರಿಸಿದರು. ಶಸ್ತ್ರಚಿಕಿತ್ಸೆಯ ಎರಡು ದಿನಗಳ ನಂತರ, ಫರ್ಮಾಸ್ಯಾ ಅವರ ಸ್ಥಿತಿ ಹದಗೆಟ್ಟಿತು, ಅವರಿಗೆ ನಿದ್ರಾಜನಕ ಔಷಧಿಗಳನ್ನು ನೀಡಬೇಕಾಯಿತು. ನಂತರ ಅವರು ಕೋಮಾಕ್ಕೆ ಬಿದ್ದು ಕೊನೆಗೆ ನಿಧನರಾದರು ಎಂದು ಅಮಂಡಾ ಹೇಳಿಕೊಂಡಿದ್ದಾರೆ.