ಸೋಶಿಯಲ್ ಮೀಡಿಯಾದಲ್ಲಿ ಕೆಲವರು "ಬೆಳಗ್ಗೆ ನೀರು ಕುಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ, ಒಂದೇ ವಾರದಲ್ಲಿ 10 ಕೆಜಿ ತೂಕ ಇಳಿಯುತ್ತದೆ" ಅಂತ ಏನೇನೋ ಹೇಳ್ತಾರೆ. ಆದರೆ, ಅದರಲ್ಲಿ ಸತ್ಯ ಎಷ್ಟು? ಈ ಸ್ಟೋರಿ ನೋಡಿ..
ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯೋದು ಮ್ಯಾಜಿಕ್ ಡ್ರಿಂಕಾ ಅಥವಾ ಬರಿ ಸೋಶಿಯಲ್ ಮೀಡಿಯಾ ಟ್ರೆಂಡಾ? ಇಲ್ಲಿದೆ ಫುಲ್ ಡಿಟೇಲ್ಸ್!
Water Drinking Tips: ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಫೋನ್ ಚಾರ್ಜ್ ಮಾಡ್ತೀವೋ ಇಲ್ಲವೋ ಗೊತ್ತಿಲ್ಲ, ಆದರೆ ನಮ್ಮ ಬಾಡಿಯನ್ನು ಮಾತ್ರ 'ಹೈಡ್ರೇಟ್' ಮಾಡಲೇಬೇಕು ಅನ್ನೋ ಕ್ರೇಜ್ ಎಲ್ಲೆಡೆ ಶುರುವಾಗಿದೆ. ಇನ್ಸ್ಟಾಗ್ರಾಮ್ ರೀಲ್ಸ್ ಇರಲಿ, ವಾಟ್ಸಾಪ್ ಯುನಿವರ್ಸಿಟಿ ಇರಲಿ, "ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ನಿಮ್ಮ ಆಯಸ್ಸು ನೂರು ವರ್ಷ" ಅನ್ನೋ ಮಾತುಗಳು ಗಾಳಿಗಿಂತ ವೇಗವಾಗಿ ಹರಡುತ್ತಿವೆ. ಆದರೆ, ನಿಜಕ್ಕೂ ಈ 'ಜಲ ಚಿಕಿತ್ಸೆ' ನಮ್ಮ ದೇಹಕ್ಕೆ ಮಾಡುವ ಮ್ಯಾಜಿಕ್ ಏನು? ಅಥವಾ ಇದು ಕೇವಲ ಗಾಳಿ ಸುದ್ದಿಯೇ? ಈ ಬಗ್ಗೆ ವೈದ್ಯರು ಹೇಳೋ ಸೀಕ್ರೆಟ್ ಇಲ್ಲಿದೆ ನೋಡಿ!
ದೇಹವೆಂಬ ಇಂಜಿನ್ ಗೆ 'ವಾಟರ್ ಸರ್ವಿಸ್'!
ನೋಡಿ, ನಾವು ರಾತ್ರಿ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡ್ತೀವಿ. ಆ ಸಮಯದಲ್ಲಿ ನಮ್ಮ ದೇಹಕ್ಕೆ ಒಂದು ಹನಿ ನೀರು ಕೂಡ ಸಿಗೋದಿಲ್ಲ. ಅಂದ್ರೆ, ಬೆಳಗ್ಗೆ ಏಳುವಾಗ ನಮ್ಮ ಬಾಡಿ ಒಂದು ರೀತಿ 'ಡ್ರೈ' ಆಗಿರುತ್ತೆ. ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿಯೋದು ಅಂದ್ರೆ, ಆರಿ ಹೋಗಿರೋ ಗಿಡಕ್ಕೆ ನೀರು ಸುರಿದಂತೆ! ಇದು ನಿಮ್ಮ ದೇಹಕ್ಕೆ ತಕ್ಷಣ ಚೈತನ್ಯ ಕೊಡುತ್ತೆ ಮತ್ತು ರಾತ್ರಿಯಿಡೀ ಮಲಗಿದ್ದ ನಿಮ್ಮ ಅಂಗಾಂಗಗಳಿಗೆ "ಹೇ ಎದ್ದೇಳಿ, ಕೆಲಸ ಶುರು ಮಾಡೋಣ" ಅಂತ ಅಲಾರಾಂ ಹೊಡೆದಂತೆ ಕೆಲಸ ಮಾಡುತ್ತೆ.
ಜೀರ್ಣಕ್ರಿಯೆಗೆ ನೀರೇ ಬಾಸ್!
ಹಲವರು ಬೆಳಗ್ಗೆ ಬಾತ್‌ರೂಮ್‌ನಲ್ಲಿ ಗಂಟೆಗಟ್ಟಲೆ ಕಷ್ಟಪಡೋದನ್ನ ನಾವು ನೋಡ್ತೀವಿ. ಅಂತಹವರಿಗೆ ಈ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯೋ ಅಭ್ಯಾಸ ಒಂದು ರೀತಿ 'ಲಬ್ರಿಕೆಂಟ್' ಇದ್ದಂತೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸಿ, ಮಲಬದ್ಧತೆ ಅನ್ನೋ ವಿಲನ್‌ನನ್ನು ಕಿತ್ತೊಗೆಯಲು ಸಹಾಯ ಮಾಡುತ್ತೆ. ನಿಮ್ಮ ಹೊಟ್ಟೆ ಕ್ಲೀನ್ ಆಗಿದ್ರೆ, ಇಡೀ ದಿನ ನಿಮ್ಮ ಮೂಡ್ ಕೂಡ ಫ್ರೆಶ್ ಆಗಿರುತ್ತೆ ಅಲ್ವಾ?
ವೈರಲ್ ಸುಳ್ಳುಗಳಿಗೆ ಬೀಳಬೇಡಿ!
ಸೋಶಿಯಲ್ ಮೀಡಿಯಾದಲ್ಲಿ ಕೆಲವರು "ಬೆಳಗ್ಗೆ ನೀರು ಕುಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ, ಒಂದೇ ವಾರದಲ್ಲಿ 10 ಕೆಜಿ ತೂಕ ಇಳಿಯುತ್ತದೆ" ಅಂತ ಏನೇನೋ ಹೇಳ್ತಾರೆ. ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಷ್ಟು ನಿಜವೋ, ಅದು ಎಲ್ಲಾ ರೋಗಗಳಿಗೂ 'ರಾಮಬಾಣ' ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಇದು ಕೇವಲ ಆರೋಗ್ಯಕರ ಜೀವನಶೈಲಿಯ ಒಂದು ಭಾಗವಷ್ಟೇ ಹೊರತು, ಇದೊಂದೇ ಮ್ಯಾಜಿಕ್ ಮಾಡೋದಿಲ್ಲ ಅಂತ ವೈದ್ಯರು ಎಚ್ಚರಿಸುತ್ತಾರೆ.
ಯಾರಿಗೆ ಡೇಂಜರ್?
ಎಲ್ಲರೂ ಲೋಟಗಟ್ಟಲೆ ನೀರು ಕುಡಿಯಬಾರದು! ಮುಖ್ಯವಾಗಿ ಕಿಡ್ನಿ ಸಮಸ್ಯೆ ಇರೋರು ಅಥವಾ ಹಾರ್ಟ್ ಪ್ರಾಬ್ಲಮ್ ಇರೋರು ವೈದ್ಯರನ್ನ ಕೇಳದೆ ನೀರು ಕುಡಿಯೋ ಸಾಹಸ ಮಾಡಬೇಡಿ. ಯಾಕಂದ್ರೆ, ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ್ರೆ ಆರೋಗ್ಯಕ್ಕೆ ಅದು ಪೂರಕ ಆಗುವ ಬದಲು ಮಾರಕ ಆಗಬಹುದು!
ದಿನಚರಿ ಹೇಗಿರಲಿ?
ಬೆಳಗ್ಗೆ ಎದ್ದ ತಕ್ಷಣ 1 ಅಥವಾ 2 ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಅದಾದ ಮೇಲೆ ಒಂದು 20 ನಿಮಿಷ ವಾಕಿಂಗ್ ಅಥವಾ ವ್ಯಾಯಾಮ ಮಾಡಿ. ಆಮೇಲೆ ಒಂದು ಪೌಷ್ಟಿಕವಾದ ತಿಂಡಿ ತಿಂದ್ರೆ, ನೀವು ಆ ದಿನದ 'ಸೂಪರ್ ಸ್ಟಾರ್'!
ಒಟ್ಟಿನಲ್ಲಿ, ನೀರು ಕುಡಿಯೋದು ಒಳ್ಳೆಯ ಅಭ್ಯಾಸವೇ. ಆದರೆ ಅದನ್ನು 'ಫ್ಯಾಷನ್' ಅಥವಾ 'ಮ್ಯಾಜಿಕ್' ಅಂತ ಅಂದುಕೊಳ್ಳದೆ, ದೇಹದ ಅವಶ್ಯಕತೆ ಅಂತ ಭಾವಿಸಿ ಪಾಲಿಸೋದು ಜಾಣತನ. ಪ್ರತಿಯೊಬ್ಬರ ದೇಹವೂ ವಿಭಿನ್ನ. ಆದ್ದರಿಂದ ದೇಹದ ಅಗತ್ಯಕ್ಕೆ ತಕ್ಕಂತೆ ಬಾಯಾರಿಕೆ ಆದಾಗ ನೀರು ಕುಡಿಯುವುದು ಒಳ್ಳೆಯದು. ಸುಖಾಸುಮ್ಮನೇ ಲೀಟರ್ ಗಟ್ಟಲೇ ನೀರು ಕುಡಿಯುವುದು ಮುರ್ಖತನ ಎನ್ನಬಹುದು.
(ಸೂಚನೆ: ಯಾವುದೇ ಸೋಷಿಯಲ್ ಮೀಡಿಯಾ ಟಿಪ್ಸ್ ಅನುಸರಿಸುವ ಮೊದಲು ನೀವು ನಿಮ್ಮ ಕುಟುಂಬದ ವೈದ್ಯರ ಸಲಹೆ ಪಡೆಯವುದು ಉತ್ತಮ)


