ಎದೆ ಹಾಲುಣಿಸೋ ತಾಯಿ ಆ್ಯಂಟಿಬಯೋಟಿಕ್ಸ್ ಸೇವಿಸೋದು ಸೇಫಾ?
ಎದೆಹಾಲುಣಿಸೋ ತಾಯಿಗೆ ವೈದ್ಯರು ಆಂಟಿಬಯೋಟಿಕ್ಸ್ ಶಿಫಾರಸ್ಸು ಮಾಡಿದಾಗ ಅದ್ರಿಂದ ಮಗುವಿನ ಆರೋಗ್ಯದ ಮೇಲಾಗೋ ಪರಿಣಾಮಗಳ ಬಗ್ಗೆ ಆಕೆಯಲ್ಲಿ ಅನೇಕ ಪ್ರಶ್ನೆಗಳು ಮೂಡಬಹುದು.ಹಾಗಾದ್ರೆ ಆಂಟಿಬಯೋಟಿಕ್ಸ್ ತೆಗೆದುಕೊಳ್ಳೋ ಮುನ್ನ ತಾಯಿ ಏನ್ ಮಾಡ್ಬೇಕು?
ಎದೆಹಾಲುಣಿಸೋ ತಾಯಂದಿರು ಕೆಲವೊಮ್ಮೆಅನಾರೋಗ್ಯದ ಕಾರಣಕ್ಕೆ ಆಂಟಿಬಯೋಟಿಕ್ಸ್ ತೆಗೆದುಕೊಳ್ಳಬೇಕಾದ ಸಂದರ್ಭ ಎದುರಾಗಬಹುದು.ಆದ್ರೆ ಆಂಟಿಬಯೋಟಿಕ್ಸ್ ಸೇವನೆಯಿಂದ ಎದೆಹಾಲಿನಲ್ಲಿ ಏನಾದ್ರೂ ಬದಲಾವಣೆಯಾಗ್ಬಹುದಾ? ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾ? ಎಂಬ ಅನುಮಾನಗಳು ತಾಯಿ ಮನಸ್ಸಿನಲ್ಲಿ ಮೂಡೋದು ಸಹಜ. ಆದ್ರೆ ನಿಮ್ಮ ವೈದ್ಯರಿಗೆ ನೀವು ಮಗುವಿಗೆ ಹಾಲುಣಿಸುತ್ತಿದ್ದೀರಿ ಎಂಬುದು ಅರಿವಿರೋ ಕಾರಣ ಅವರು ಶಿಫಾರಸ್ಸು ಮಾಡೋ ಆಂಟಿಬಯೋಟಿಕ್ಸ್ ಸುರಕ್ಷಿತವಾಗಿಯೇ ಇರುತ್ತೆ. ಹೀಗಾಗಿ ಈ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಆದ್ರೆ ಆಂಟಿಬಯೋಟಿಕ್ಸ್ ತೆಗೆದುಕೊಳ್ಳುತ್ತಿರೋ ಸಮಯದಲ್ಲಿ ಎದೆಹಾಲುಣಿಸೋ ತಾಯಂದಿರು ಈ ಮೂರು ವಿಷಯಗಳ ಬಗ್ಗೆ ತಿಳಿದಿರಬೇಕು.
ಅಳು ಬಂದರೆ ತಡೀಬೇಡಿ, ಕಣ್ಣೀರು ಸುರಿಸಿದರೆ ಆರೋಗ್ಯಕ್ಕೆ ಒಳಿತು!
ಮಗುವಿನ ಮಲದ ಬಣ್ಣ ಬದಲಾವಣೆ
ಎದೆಹಾಲುಣಿಸೋ ಸಮಯದಲ್ಲಿ ಆಂಟಿಬಯೋಟಿಕ್ಸ್ ತೆಗೆದುಕೊಳ್ಳೋದ್ರಿಂದ ನಿಮ್ಮ ಮಗುವಿನ ಮಲ ಸಹಜವಾಗಿರದೇ ಇರಬಹುದು. ಅಂದ್ರೆ ಹೆಚ್ಚು ನೀರಾಗಿದ್ದು,ಹಸಿರು ಬಣ್ಣದಿಂದ ಕೂಡಿರಬಹುದು. ಇದಕ್ಕೆ ಬೇರೆ ಯಾವುದೇ ಔಷಧದ ಅಗತ್ಯವಿಲ್ಲ. ತಾಯಿ ಆಂಟಿಬಯೋಟಿಕ್ಸ್ ತೆಗೆದುಕೊಳ್ಳೋದು ನಿಲ್ಲಿಸಿದ ತಕ್ಷಣ ಈ ಸಮಸ್ಯೆಯೂ ದೂರವಾಗುತ್ತೆ.
ಮಗು ಜಾಸ್ತಿ ಹಟ ಮಾಡ್ಬಹುದು
ತಾಯಿ ಆಂಟಿಬಯೋಟಿಕ್ಸ್ ತೆಗೆದುಕೊಳ್ಳೋದ್ರಿಂದ ಮಗುವಿನ ಆರೋಗ್ಯದಲ್ಲಿ ಸ್ವಲ್ಪ ಹೆಚ್ಚುಕಡಿಮೆ ಆಗೋದು ಸಹಜ. ಇದ್ರಿಂದ ಮಗುವಿಗೆ ಕಿರಿಕಿರಿಯಾಗಿ ಜಾಸ್ತಿ ಅಳ್ಬಹುದು ಅಥವಾ ಹಟ ಮಾಡ್ಬಹುದು. ಕೊಲಿಕ್ ಸಮಸ್ಯೆ ತುಸು ಜಾಸ್ತಿಯೇ ಕಾಣಿಸಿಕೊಳ್ಳೋ ಕಾರಣ ಮಗು ಹಟ ಮಾಡೋದು ಸಹಜ. ಹಾಗಂತ ತಾಯಿ ಎದೆಹಾಲುಣಿಸೋದು ನಿಲ್ಲಿಸೋದು ಅಥವಾ ಆಂಟಿಬಯೋಟಿಕ್ ಕೋರ್ಸ್ ಅರ್ಧಕ್ಕೆ ನಿಲ್ಲಿಸೋ ಅಗತ್ಯವಿಲ್ಲ.
ಹೊಟ್ಟೆನೋವು ಸೇರಿದಂತೆ ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು
ಆಂಟಿಬಯೋಟಿಕ್ಸ್ ಸೇವನೆಯಿಂದ ಹೊಟ್ಟೆಯಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾಗ್ಬಹುದು, ಇದ್ರಿಂದ ತಾಯಿ ಹಾಗೂ ಮಗು ಇಬ್ಬರಿಗೂ ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮೈ ಮೇಲೆ ದದ್ದುಗಳು ಕೂಡ ಮೂಡ್ಬಹುದು. ತಾಯಿಯ ಸ್ತನಗಳು ಕೆಂಪಾಗಿ ನೋವು ಕಾಣಿಸಿಕೊಳ್ಳಬಹುದು. ಡೈಪರ್ ರಾಷ್, ಮಗುವಿನ ಬಾಯಿ ಮತ್ತು ನಾಲಿಗೆಯಲ್ಲಿ ಬಿಳಿ ಕಲೆಗಳು ಕಾಣಿಸಿಕೊಳ್ಳಬಹುದು.
ಎದೆಹಾಲೇ ಅಮೃತ
ನಿಜ, ಎಲ್ಲ ಸಂದರ್ಭಗಳಲ್ಲೂ ಮಗುವಿಗೆ ತಾಯಿ ಎದೆಹಾಲೇ ಅಮೃತ. ಆಂಟಿಬಯೋಟಿಕ್ಸ್ನಿಂದ ನಿಮ್ಮ ಮಗುವಿನ ಹೊಟ್ಟೆ ಆರೋಗ್ಯ ಕೆಡಬಹುದು. ಆದ್ರೆ ತಾಯಿ ಎದೆಹಾಲಲ್ಲಿಇದನ್ನು ಸರಿಪಡಿಸೋ ಸಾಮರ್ಥ್ಯವಿದೆ. ಹೀಗಾಗಿ ಆಂಟಿಬಯೋಟಿಕ್ಸ್ ತೆಗೆದುಕೊಂಡ ಬಳಿಕ ಎದೆಹಾಲು ಕುಡಿಸಿದ ಕಾರಣಕ್ಕೆ ಮಗುವಿನ ಆರೋಗ್ಯದಲ್ಲಿ ಬದಲಾವಣೆ ಕಾಣಿಸಿಕೊಂಡಿತು ಎಂಬ ಕಾರಣಕ್ಕೆ ಎದೆಹಾಲು ನಿಲ್ಲಿಸಿ ಫಾರ್ಮುಲಾ ಮಿಲ್ಕ್ ನೀಡ್ಬೇಡಿ. ಏಕೆಂದ್ರೆ ಫಾರ್ಮುಲಾ ಮಿಲ್ಕ್ ನೀಡೋದ್ರಿಂದ ಎದೆಹಾಲುಣಿಸಿದ್ದಕ್ಕಿಂತ ಹೆಚ್ಚಿನ ತೊಂದರೆ ಕಾಣಿಸಿಕೊಳ್ಳೋ ಸಾಧ್ಯತೆಯಿದೆ.
ವೈದ್ಯರೊಂದಿಗೆ ಈ ಬಗ್ಗೆ ಚರ್ಚಿಸಿ
ಎದೆಹಾಲುಣಿಸೋ ತಾಯಿ ಆಂಟಿಬಯೋಟಿಕ್ಸ್ ತೆಗೆದುಕೊಳ್ಳೋ ಮುನ್ನ ವೈದ್ಯರಿಗೆ ಮಗುವಿನ ವಯಸ್ಸು ಹಾಗೂ ಏನಾದ್ರೂ ಆರೋಗ್ಯ ಸಮಸ್ಯೆಗಳಿದ್ರೆ ಆ ಬಗ್ಗೆ ಮಾಹಿತಿ ನೀಡಿ. ಆ ಬಳಿಕ ಈ ಕೆಳಗಿನ ಪ್ರಶ್ನೆಗಳನ್ನು ಕೇಳಲು ಮರೆಯಬೇಡಿ.
-ಈ ಔಷಧ ಮಗುವಿಗೆ ಸುರಕ್ಷಿತವೇ?
-ಇದರ ಸೇವನೆಯಿಂದ ಮಗುವಿನ ಆರೋಗ್ಯದ ಮೇಲೆ ಏನಾದ್ರೂ ಅಡ್ಡಪರಿಣಾಮ ಉಂಟಾಗಬಹುದೇ?
-ನೀವು ಮಗುವಿಗೆ ಪ್ರೋಬಯೋಟಿಕ್ಸ್ ನೀಡಬೇಕೆ?
-ಮಗುವಿಗೆ ನೀಡೋ ಆಹಾರದಲ್ಲಿ ಏನಾದ್ರೂ ಬದಲಾವಣೆ ತರಬೇಕೆ?
ಕಿವಿ ಚುಚ್ಚುವ ಸಂಪ್ರದಾಯದ ಹಿಂದಿದೆ ವೈಜ್ಞಾನಿಕ ಕಾರಣ
ಆಂಟಿಬಯೋಟಿಕ್ಸ್ ಸುರಕ್ಷಿತವಾಗಿಲ್ಲದಿದ್ರೆ?
ಒಂದು ವೇಳೆ ವೈದ್ಯರು ಆಂಟಿಬಯೋಟಿಕ್ಸ್ ನಿಮ್ಮ ಮಗುವಿಗೆ ಸುರಕ್ಷಿತವಲ್ಲ ಎಂದು ಹೇಳಿದ್ರೆ ತಲೆಕೆಡಿಸಿಕೊಳ್ಳಬೇಡಿ,ಅದಕ್ಕೂ ಪರಿಹಾರಗಳಿವೆ.
-ವೈದ್ಯರ ಬಳಿ ನಿಮ್ಗೆ ಶಿಫಾರಸ್ಸು ಮಾಡಿರೋ ಆಂಟಿಬಯೋಟಿಕ್ಸ್ಗೆ ಪರ್ಯಾಯವಾಗಿ ಬೇರೆ ಔಷಧ ಇದೆಯೇ ಎಂದು ಪ್ರಶ್ನಿಸಿ.
-ಕಡಿಮೆ ಡೋಸ್ ಆಂಟಿಬಯೋಟಿಕ್ ತೆಗೆದುಕೊಳ್ಳಬಹುದಾ ಎಂದು ಪ್ರಶ್ನಿಸಿ.
-ಔಷಧವನ್ನುಎಷ್ಟು ದಿನಗಳ ಕಾಲ ತೆಗೆದುಕೊಳ್ಳಬೇಕು,ಅದು ದೇಹದಲ್ಲಿ ಎಷ್ಟು ದಿನಗಳವರೆಗೆ ಉಳಿಯುತ್ತೆ ಎಂಬ ಬಗ್ಗೆ ಕೇಳಿ ತಿಳಿದುಕೊಳ್ಳಿ.
ಮಗುವಿಗೆ ರಿಯಾಕ್ಷನ್ ಆದ್ರೆ?
ನೀವು ಆಂಟಿಬಯೋಟಿಕ್ಸ್ ತೆಗೆದುಕೊಂಡ ಬಳಿಕ ಮಗುವಿನ ಆಹಾರ ಸೇವನೆ, ನಿದ್ರೆಯಲ್ಲಿನ ಬದಲಾವಣೆಗಳ ಮೇಲೆ ಕಣ್ಣಿಟ್ಟಿರಿ. ಆರೋಗ್ಯದಲ್ಲಿಏನಾದ್ರೂ ಮಹತ್ವದ ಬದಲಾವಣೆ ಕಾಣಿಸಿಕೊಂಡ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.