ಭಾರತೀಯ ಮೂಲದ ಅಮೆರಿಕನ್ ಆರ್ಮಿ ಸರ್ಜನ್ ಮೇಜರ್ ಜಗತ್ ಕುಮಾರ್ ಪಟೇಲ್, ತಲೆಬುರುಡೆ ತೆರೆಯದೆ ಮೂಗಿನ ಮೂಲಕವೇ ಗಾಲ್ಫ್ ಬಾಲ್ ಗಾತ್ರದ ಮೆದುಳಿನ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಈ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಿಂದಾಗಿ ರೋಗಿಯು ಕೇವಲ ಎರಡು ದಿನಗಳಲ್ಲಿ ಚೇತರಿಸಿಕೊಂಡಿದ್ದು, ಈ ಸಾಧನೆಗೆ ಜಾಗತಿಕ ಮನ್ನಣೆ ದೊರೆತಿದೆ.

ವಾಷಿಂಗ್ಟನ್: ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯ ಮೂಲದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಈಗ ಅಮೆರಿಕದ ಆರ್ಮಿ ಸರ್ಜನ್ ಒಬ್ಬರು ಅಂತಹದ್ದೇ ಒಂದು ಅಸಾಧಾರಣ ಸಾಧನೆ ಮಾಡಿದ್ದಾರೆ. ಮೆದುಳಿನ ಶಸ್ತ್ರಚಿಕಿತ್ಸೆ ಎಂದರೆ ತಲೆಬುರುಡೆ ಸೀಳಲೇಬೇಕು ಎಂಬ ಕಾಲ ಹೋಗಿದ್ದು, ಈಗ ಕೇವಲ ಮೂಗಿನ ಮೂಲಕವೇ ಗಾಲ್ಫ್ ಬಾಲ್ ಗಾತ್ರದ ಮೆದುಳಿನ ಗಂಟನ್ನು (Brain Tumor) ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಮೇಜರ್ ಜಗತ್ ಕುಮಾರ್ ಪಟೇಲ್ ಹೊಸ ಇತಿಹಾಸ ಬರೆದಿದ್ದಾರೆ.

ಯಾರೀ ಸಾಧಕ ವೈದ್ಯ?

ಭಾರತೀಯ ಮೂಲದ ಅಮೆರಿಕನ್ ಆರ್ಮಿ ಸರ್ಜನ್ ಮೇಜರ್ ಜಗತ್ ಕುಮಾರ್ ಪಟೇಲ್ ಅವರು ವಾಷಿಂಗ್ಟನ್ ಬಳಿಯ ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇವರು ನ್ಯೂರೋ ಸರ್ಜನ್ ಲೆಫ್ಟಿನೆಂಟ್ ಕರ್ನಲ್ ಚಾರ್ಲ್ಸ್ ಮಿಲ್ಲರ್ ಅವರೊಂದಿಗೆ ಸೇರಿ ಈ ವಿಶಿಷ್ಟ ಶಸ್ತ್ರಚಿಕಿತ್ಸೆಯನ್ನು ಪೂರೈಸಿದ್ದಾರೆ.

ಮೆರೈನ್ ಕಾರ್ಪ್ಸ್ ಸ್ಟಾಫ್ ಸಾರ್ಜೆಂಟ್ ಆಂಡಿ ಆರ್ಚರ್ ಎಂಬುವವರು ಕಳೆದ 15 ವರ್ಷಗಳಿಂದ ತೀವ್ರ ತಲೆನೋವು ಮತ್ತು ದೃಷ್ಟಿ ದೋಷದಿಂದ ಬಳಲುತ್ತಿದ್ದರು. ಪರೀಕ್ಷೆ ನಡೆಸಿದಾಗ ಅವರ ಮೆದುಳಿನ ಪಿಟ್ಯುಟರಿ ಗ್ರಂಥಿಯ ಮುಂದೆ ಸುಮಾರು 4.4 ಸೆಂಟಿಮೀಟರ್ ಗಾತ್ರದ ಗಡ್ಡೆ ಇರುವುದು ಪತ್ತೆಯಾಯಿತು. ಈ ಗಡ್ಡೆಯು ಅವರ ದೃಷ್ಟಿ ನರದ ಮೇಲೆ ಒತ್ತಡ ಹೇರುತ್ತಿದ್ದರಿಂದ ಅವರು ಕಣ್ಣು ಕಾಣದಾಗುವ ಅಪಾಯವಿತ್ತು.

ಮೂಗಿನ ಮೂಲಕ ಮಿದುಳಿಗೆ ದಾರಿ!

ಸಾಮಾನ್ಯವಾಗಿ ಇಂತಹ ದೊಡ್ಡ ಗಡ್ಡೆಗಳನ್ನು ತೆಗೆಯಲು ತಲೆಬುರುಡೆಯನ್ನು ತೆರೆಯುವ (Open Brain Surgery) ಅವಶ್ಯಕತೆ ಇರುತ್ತದೆ. ಆದರೆ ಮೇಜರ್ ಜಗತ್ ಕುಮಾರ್ ಪಟೇಲ್ ಅವರು 'ಮಿನಿಮಲಿ ಇನ್ವೇಸಿವ್' (Minimally Invasive) ಎಂಬ ಅತ್ಯಾಧುನಿಕ ವಿಧಾನವನ್ನು ಬಳಸಲು ನಿರ್ಧರಿಸಿದರು. ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಮೂಗಿನ ಮೂಲಕ ಕಳುಹಿಸಿ, ಮಿದುಳಿನವರೆಗೆ ದಾರಿ ಮಾಡಿಕೊಟ್ಟರು. ಈ ಮಾರ್ಗದ ಮೂಲಕವೇ ಶೇ. 99 ರಷ್ಟು ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು.

ಎರಡೇ ದಿನದಲ್ಲಿ ಚೇತರಿಕೆ

ಈ ಶಸ್ತ್ರಚಿಕಿತ್ಸೆಯ ವಿಶೇಷತೆ ಎಂದರೆ ಆಪರೇಷನ್ ಆದ ಕೇವಲ ಎರಡು ದಿನಗಳಲ್ಲಿ ರೋಗಿ ಆಂಡಿ ಆರ್ಚರ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ತಲೆಬುರುಡೆ ಸೀಳದ ಕಾರಣ ಯಾವುದೇ ಗಾಯದ ಗುರುತುಗಳಿಲ್ಲ. ಅವರ ದೃಷ್ಟಿ ಕೂಡ ಈಗ ಸುಧಾರಿಸುತ್ತಿದೆ. ಗಡ್ಡೆಯು ಸರಿಯಾದ ಸ್ಥಳದಲ್ಲಿದ್ದರೆ ಈಗ ಓಪನ್ ಸರ್ಜರಿಯ ಅಗತ್ಯವೇ ಇಲ್ಲ. ಮೂಗಿನ ಮೂಲಕವೇ ಅದನ್ನು ಸುರಕ್ಷಿತವಾಗಿ ತೆಗೆಯಬಹುದು ಎಂದು ಮೇಜರ್ ಪಟೇಲ್ ಹೆಮ್ಮೆಯಿಂದ ಹೇಳಿದ್ದಾರೆ. ಭಾರತೀಯ ಮೂಲದ ವೈದ್ಯನ ಈ ಅದ್ಭುತ ಚಾಣಾಕ್ಷತನಕ್ಕೆ ಅಮೆರಿಕದ ರಕ್ಷಣಾ ಇಲಾಖೆ (Pentagon) ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹೊಸ ವಿಧಾನವು ಮುಂದಿನ ದಿನಗಳಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಯಲ್ಲಿ ದೊಡ್ಡ ಕ್ರಾಂತಿ ಉಂಟುಮಾಡಲಿದೆ.