ಕೋವಿಡ್‌ ಗೆದ್ದವರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಳ !

ಕಳೆದ ಎರಡು ವರ್ಷಗಳಿಂದ ವಿಪರೀತ ಪ್ರಮಾಣದಲ್ಲಿ ತಲೆಗೂದಲು ಉದುರುತ್ತಿದೆ ಎಂದು ನಿಮಗನ್ನಿಸುತ್ತಿದೆಯೇ? ನಿಮಗೆ ಕೋವಿಡ್‌-19 ಬಂದು ಹೋಗಿರುವುದು ಇದಕ್ಕೆ ಕಾರಣವಾಗಿರಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Increase In Hair Loss Among Those Who Have Won Covid Vin

ವರದಿ: ರಾಕೇಶ್‌ ಎನ್‌.ಎಸ್‌.

ಕೋವಿಡ್‌ ಬಂದು ಹೋದ ಯುವ ಜನರಲ್ಲಿ ಕೂದಲು ಉದುರುವ ಸಮಸ್ಯೆ ವ್ಯಾಪಕವಾಗಿದೆ ಎಂಬ ಆತಂಕಕಾರಿ ಮಾಹಿತಿ ಸಂಶೋಧನೆಯೊಂದರಿಂದ ಹೊರ ಬಿದ್ದಿದೆ. ಕೋವಿಡ್‌ನಿಂದ ಸಾವು-ನೋವುಗಳ ಜೊತೆಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂಬ ತಜ್ಞರ ಆತಂಕ ನಿಜವಾಗುತ್ತಿದೆ ಎಂದು ಈ ಸಂಶೋಧನೆ ಹೇಳುತ್ತಿದೆ. ಬೆಂಗಳೂರಿನ ಹೇರ್‌ಲೈನ್‌ ಹೇರ್‌ ಮತ್ತು ಸ್ಕಿನ್‌ ರಿಸಚ್‌ರ್‍ ಅಂಡ್‌ ಟ್ರೀಟ್‌ಮೆಂಟ್‌ ಸೆಂಟರ್‌, ಕೋವಿಡ್‌ ದಿನಗಳಲ್ಲಿ ಕೂದಲು ಉದುರುವ ಪ್ರಕರಣಗಳು ಹೆಚ್ಚಾಗುತ್ತಾ ಬಂದ ಹಿನ್ನೆಲೆಯಲ್ಲಿ ನಗರದಲ್ಲಿನ ತನ್ನ ವಿವಿಧ ಕೇಂದ್ರಗಳಲ್ಲಿ ಕೋವಿಡ್‌ ಮತ್ತು ಕೂದಲು ಉದುರುವಿಕೆಗೆ ಸಂಬಂಧವಿದೆಯೇ ಎಂದು ಅಧ್ಯಯನವನ್ನು ಕೈಗೆತ್ತಿಕೊಂಡಿತ್ತು. 2020ರ ಜುಲೈಯಿಂದ 2022ರ ಜೂನ್‌ ತನಕ ಒಟ್ಟು 2,525 ಮಂದಿಯ ಸಮೀಕ್ಷೆ ನಡೆಸಿ ಈ ಬಗೆಗಿನ ವರದಿಯೊಂದನ್ನು ಪ್ರಕಟಿಸಿದೆ.

ಸಮೀಕ್ಷೆಯಲ್ಲಿ ಏನಿದೆ ?
ಸಮೀಕ್ಷಾ ಅವಧಿಯಲ್ಲಿ ಕೂದಲು ಉದುರುವ ಸಮಸ್ಯೆ (Hair Loss)ಯೊಂದಿಗೆ ಸಂಸ್ಥೆಗೆ ಬಂದಿದ್ದ ಶೇ.80ರಷ್ಟುಮಂದಿಗೆ ಈ ಮೊದಲು ಕೋವಿಡ್‌ ಪಾಸಿಟಿವ್‌ ಆಗಿತ್ತು. ಆ ಪೈಕಿ ಶೇ. 90ರಷ್ಟುಮಹಿಳೆಯರು (Woman) ಕಡಿಮೆ ಹಾಗೂ ತೀವ್ರ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರು. ಪುರುಷರಲ್ಲಿ (Men) ಶೇ. 85 ಪುರುಷರು ಕೂದಲು ಉದುರುವ ಮತ್ತು ಬೋಳು ಪ್ಯಾಚಸ್‌ಗಳಿರುವ ಬಗ್ಗೆ ಸಮಸ್ಯೆ ತೋಡಿಕೊಂಡಿದ್ದರು ಎಂದು ಸಂಸ್ಥೆಯ ಚರ್ಮರೋಗ ಮತ್ತು ಕೂದಲು ತಜ್ಞೆ ಡಾ. ಕಲಾ ವಿಮಲ್‌ ಹೇಳುತ್ತಾರೆ.

Covid Vaccine ಖರೀದಿ ಬಂದ್: ಸರ್ಕಾರದ ಬಳಿಯಿದೆ 6 ತಿಂಗಳಿಗೆ ಸಾಕಾಗುವಷ್ಟು ಲಸಿಕೆ ಸಂಗ್ರಹ

ಕೋವಿಡ್‌ ಪೂರ್ವದ ದಿನಗಳಿಗೆ ಹೋಲಿಸಿದರೆ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಬರುವ ರೋಗಿಗಳ (Patients) ಸಂಖ್ಯೆಯಲ್ಲಿ ಶೇ. 15ರಿಂದ ಶೇ.20ರಷ್ಟುಹೆಚ್ಚಳವಾಗಿದೆ. ಅದರಲ್ಲಿಯೂ ಯುವಕ -ಯುವತಿಯರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರುತ್ತಿದೆ. ನಮ್ಮ ಸಮೀಕ್ಷೆಯ ಅವಧಿಯಲ್ಲಿ ಬಂದವರಲ್ಲಿ ಶೇ.70 ಮಂದಿ 40 ವರ್ಷದೊಳಗಿನವರು. ಹಾಗೆಯೇ ಕೂದಲು ಉದುರುವ ಸಮಸ್ಯೆಯ ಜೊತೆಗೆ ರಕ್ತದೊತ್ತಡದ ಸಮಸ್ಯೆ ಹಾಗೂ ಮಹಿಳೆಯರಲ್ಲಿ ಅನಿಯಮಿತ ಋುತುಚಕ್ರದ (Menstruation) ಸಮಸ್ಯೆಯು ಕಾಣಿಸಿಕೊಂಡಿದೆ ಎಂದು ಡಾ.ಕಲಾ ವಿಮಲ್‌ ತಿಳಿಸುತ್ತಾರೆ.

40 ವಯಸ್ಸಿಗಿಂತ ಕಡಿಮೆ ಇರುವವರಲ್ಲಿ ಕೂದಲು ಉದುರುವಿಕೆಗೆ ಕೋವಿಡ್‌ ಕಾಟದ ಜೊತೆಗೆ ಕೆಲಸದಲ್ಲಿನ ಹೆಚ್ಚುವರಿ ಒತ್ತಡವೂ (Pressure) ಕಾರಣವಾಗಿರಬಹುದು. ಅಲ್ಲದೆ, 40-45 ವರ್ಷಗಳ ನಂತರ ಕೂದಲು ಉದುರಿದರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ತಲೆ ಕೂದಲು ಉದುರಿದರೆ ಕೂದಲು ರೋಗಗಳ ತಜ್ಞರನ್ನು (Experts) ಸಂಪರ್ಕಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಹೇಳುತ್ತಾರೆ.

ಎಷ್ಟು ಸಿರಪ್‌ ಕುಡಿದ್ರೂ ಕೆಮ್ಮು ನಿಲ್ತಿಲ್ಲ, ಕೋವಿಡ್‌ ಸೋಂಕಾಂತ ತಿಳ್ಕೊಳ್ಳೋದು ಹೇಗೆ ?

ಆರರಿಂದ ಒಂಬತ್ತು ತಿಂಗಳವರೆಗೆ ಕೂದಲು ಉದುರುವ ಸಮಸ್ಯೆ
ಕೋವಿಡ್‌ ಪೀಡಿತರಾಗಿದ್ದವರಲ್ಲಿ ಕೂದಲ ಚಕ್ರಕ್ಕೆ ಅಡಚಣೆ ಆಗುವುದೇ ಕೂದಲು ಉದುರುವಿಕೆ ಕಾರಣ. ಕೂದಲು ಚಕ್ರದಲ್ಲಿ ಮೂರು ಹಂತಗಳಿರುತ್ತವೆ. ಮೊದಲ ಹಂತ ಅನಾಜೆನ್‌, ಎರಡನೇ ಹಂತ ಕ್ಯಾಟಜೆನ್‌ ಮತ್ತು ಮೂರನೇ ಹಂತ ಟೆಲೋಜೆನ್‌. ಅನಾಜೆನ್‌ ಬೆಳವಣಿಗೆಯ ಹಂತವಾಗಿದ್ದು, ಪ್ರತಿ 28 ದಿನಗಳಿಗೊಮ್ಮೆ ಕೂದಲು 1 ಸೆಂ.ಮೀ ಬೆಳೆಯುತ್ತದೆ. ಕ್ಯಾಟಜೆನ್‌ ಹಂತವು ಬೆಳವಣಿಗೆಯ ಹಂತದ ಅಂತ್ಯದ ಭಾಗವಾಗಿದೆ. ಇದು ಸುಮಾರು 2 ರಿಂದ 3 ವಾರಗಳವರೆಗೆ ಇರುತ್ತದೆ. ಟೆಲೋಜೆನ್‌ ಸುಮಾರು 100 ದಿನಗಳವರೆಗೆ ಇರುವ ವಿಶ್ರಾಂತಿ ಹಂತವಾಗಿದೆ. ಕೋವಿಡ್‌ ಬಂದಾಗ ಕೂದಲಿನ ಹೆಚ್ಚಿನ ಎಳೆಗಳು ಅಕಾಲಿಕವಾಗಿ ಟೆಲೋಜೆನ್‌ ಅಥವಾ ವಿಶ್ರಾಂತಿ ಹಂತವನ್ನು ಪ್ರವೇಶಿಸುತ್ತವೆ. ಇದು ಕೋವಿಡ್‌ ಬಂದ ನಂತರದಲ್ಲಿ ಎರಡರಿಂದ ಮೂರು ತಿಂಗಳುಗಳಲ್ಲಿ ಕಂಡುಬರುತ್ತದೆ. ಈ ಕೂದಲು ಉದುರುವ ಸಮಸ್ಯೆ ಆರರಿಂದ ಒಂಬತ್ತು ತಿಂಗಳವರೆಗೆ ಇರುತ್ತದೆ ಎಂದು ಡಾ. ಕಲಾ ವಿಮಲ್‌ ವಿವರಿಸುತ್ತಾರೆ.

ಸಾಮಾನ್ಯವಾಗಿ ಕೂದಲು ಉದುರುವ ಸಮಸ್ಯೆಗೆ ಟಾಪಿಕಲ್‌ ಸೀರಮ್‌ಗಳು, ಮೌಖಿಕ ಆ್ಯಂಟಿ ಆಕ್ಸಿಡೆಂಟ್‌ಗಳು, ಲೇಸರ್‌ ಥೆರಪಿ, ಪ್ಲೇಟ್ಲೆಟ್‌ ರಿಚ್‌ ಪ್ಲಾಸ್ಮಾ ಚಿಕಿತ್ಸೆಗಳು ಪ್ರಯೋಜನ ನೀಡಿವೆ. ಈ ಚಿಕಿತ್ಸೆಗಳು ರೋಗಿಗಳ ಕೂದಲ ಬೆಳವಣಿಗೆಗೆ ಸಹಾಯ ಮಾಡಿದೆ. ಆದರೂ ಹೊಸ ಕೂದಲು ಬೆಳೆಯಲು ಸರಾಸರಿ 9 ರಿಂದ 12 ತಿಂಗಳುಗಳನ್ನು ತೆಗೆದುಕೊಂಡಿದೆ. ಜನರು ಆದಷ್ಟುಒತ್ತಡ ರಹಿತ ಜೀವನ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮುಂತಾದ ಜೀವನ ಕ್ರಮಗಳನ್ನು ರೂಢಿಸಿಕೊಂಡರೆ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ ಎಂದು ಡಾ.ಕಲಾ ವಿಮಲ್‌ ಹೇಳುತ್ತಾರೆ.

Latest Videos
Follow Us:
Download App:
  • android
  • ios