ಆಯುರ್ವೇದದಲ್ಲಿ ಸಣ್ಣ ಮಕ್ಕಳಿಗೆ ‘ಸ್ವರ್ಣ ಪ್ರಾಶನ’ ಮಾಡಿಸುವ ಪದ್ಧತಿ ಇಂದಿಗೂ ಇದೆ. ಇದು ಮಗುವಿನ ಬುದ್ಧಿಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಮೆದುಳಿನ ನರಗಳನ್ನು ಸದೃಢಗೊಳಿಸಿ, ವಯಸ್ಸಾದ ಮೇಲೆ ಬರುವ ಮರೆವಿನ ಕಾಯಿಲೆಯನ್ನು ದೂರವಿಡುತ್ತದೆ.

ಬಂಗಾರದ ಬಟ್ಟಲಲ್ಲಿ ಊಟ ಮಾಡೋ ಕಾಲ ಹೋಯ್ತು, ಈಗ ಬಂಗಾರವನ್ನೇ ತಿನ್ನೋ ಕಾಲ ಬಂತು! ಏನಿದು ‘ಎಡಿಬಲ್ ಗೋಲ್ಡ್’ ಕರಾಮತ್ತು?

Add Asianetnews Kannada as a Preferred SourcegooglePreferred

ಸಾಮಾನ್ಯವಾಗಿ ಅಕ್ಷಯ ತೃತೀಯ ಬಂತೆಂದರೆ ಸಾಕು, ಜನ ಚಿನ್ನದ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಕಿವಿಗೆ ಓಲೆ, ಕೊರಳಿಗೆ ಸರ ಅಥವಾ ಕೈಗೆ ಬಳೆ ಮಾಡಿಸಿಕೊಳ್ಳುವುದು ಎಲ್ಲರಿಗೂ ಗೊತ್ತು. ಆದರೆ, ನೀವು ಎಂದಾದರೂ ಚಿನ್ನವನ್ನು (Gold) ತಿಂದಿದ್ದೀರಾ? ಹೌದು, ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ! ಈಗಿನ ಹೈ-ಫೈ ಲೈಫ್‌ಸ್ಟೈಲ್‌ನಲ್ಲಿ ಚಿನ್ನ ಕೇವಲ ಆಭರಣವಾಗಿ ಉಳಿದಿಲ್ಲ, ಅದು ಐಷಾರಾಮಿ ಖಾದ್ಯಗಳ ಮೇಲೆ ‘ಜರಿ’ಯಾಗಿ ಮಿಂಚುತ್ತಿದೆ. ಸ್ವಿಟ್ಜರ್ಲೆಂಡ್‌ನಿಂದ ದುಬೈವರೆಗೆ, ಈಗ ಭಾರತದ ದೊಡ್ಡ ದೊಡ್ಡ ನಗರಗಳಲ್ಲೂ ‘ಎಡಿಬಲ್ ಗೋಲ್ಡ್’ ಅಥವಾ ತಿನ್ನುವ ಚಿನ್ನದ ಕ್ರೇಜ್ ಜೋರಾಗಿದೆ.

ಇದು ಹೇಗೆ ತಯಾರಾಗುತ್ತದೆ ಗೊತ್ತಾ?

ಸಿಹಿ ತಿಂಡಿಗಳ ಮೇಲೆ ಬೆಳ್ಳಿಯ ಹಾಳೆಯನ್ನು (Silver Vark) ನೋಡಿರುತ್ತೀರಿ. ಅದೇ ರೀತಿ ಚಿನ್ನದ ಹಾಳೆಯನ್ನು ಕೂಡ ತಯಾರಿಸಲಾಗುತ್ತದೆ. ಆದರೆ ಇದು ಅಷ್ಟು ಸುಲಭವಲ್ಲ. ಶುದ್ಧ ಚಿನ್ನವನ್ನು ಸುಮಾರು 2,000 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಭೀಕರ ಶಾಖದಲ್ಲಿ ಕರಗಿಸಿ, ನಂತರ ಅದನ್ನು ಸಣ್ಣ ಬಾರ್‌ಗಳಾಗಿ ಮಾಡಲಾಗುತ್ತದೆ. ಈ ಬಾರ್‌ಗಳನ್ನು ವಿಶೇಷ ಯಂತ್ರಗಳ ಸಹಾಯದಿಂದ ಕುಟ್ಟಿ, ತಟ್ಟಿ ಎಷ್ಟು ತೆಳ್ಳಗೆ ಮಾಡಲಾಗುತ್ತದೆ ಎಂದರೆ, ಅದರ ದಪ್ಪ ಕೇವಲ 0.0001 ಮಿಲಿ ಮೀಟರ್ ಇರುತ್ತದೆ! ಅಂದರೆ ಒಂದು ಕೂದಲಿನ ಎಳೆಗಿಂತಲೂ ನೂರಾರು ಪಟ್ಟು ತೆಳ್ಳಗೆ. ಇದನ್ನೇ ನಾವು ಐಷಾರಾಮಿ ಸಿಹಿತಿಂಡಿಗಳು ಅಥವಾ ಕೇಕ್‌ಗಳ ಮೇಲೆ ಅಲಂಕಾರಕ್ಕಾಗಿ ಬಳಸುತ್ತೇವೆ.

ಚಿನ್ನ ತಿಂದರೆ ಆರೋಗ್ಯಕ್ಕೆ ಏನು ಲಾಭ?

ಬರಿ ಪ್ರದರ್ಶನಕ್ಕಾಗಿ ಮಾತ್ರ ಚಿನ್ನ ತಿನ್ನುವುದಲ್ಲ, ಇದರ ಹಿಂದೆ ಆಯುರ್ವೇದದ ನಂಟೂ ಇದೆ. ನಮ್ಮ ಪೂರ್ವಜರು ಚಿನ್ನ ಮತ್ತು ಬೆಳ್ಳಿಯನ್ನು ಔಷಧಿಯಾಗಿ ಬಳಸುತ್ತಿದ್ದರು ಎನ್ನುವುದಕ್ಕೆ ಇತಿಹಾಸವಿದೆ.

ಮೆದುಳಿನ ಶಕ್ತಿ ಹೆಚ್ಚಳ: ಆಯುರ್ವೇದದಲ್ಲಿ ಸಣ್ಣ ಮಕ್ಕಳಿಗೆ ‘ಸ್ವರ್ಣ ಪ್ರಾಶನ’ ಮಾಡಿಸುವ ಪದ್ಧತಿ ಇಂದಿಗೂ ಇದೆ. ಇದು ಮಗುವಿನ ಬುದ್ಧಿಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಮೆದುಳಿನ ನರಗಳನ್ನು ಸದೃಢಗೊಳಿಸಿ, ವಯಸ್ಸಾದ ಮೇಲೆ ಬರುವ ಮರೆವಿನ ಕಾಯಿಲೆಯನ್ನು ದೂರವಿಡುತ್ತದೆ.

ಖನಿಜಗಳ ಖಜಾನೆ: ಚಿನ್ನದಲ್ಲಿ ಮೆಗ್ನೀಶಿಯಂ, ಕಬ್ಬಿಣ, ಸತು (Zinc) ಹಾಗೂ ವಿಟಮಿನ್ ಎ, ಸಿ, ಇ ಅಂಶಗಳು ಸಮೃದ್ಧವಾಗಿವೆ. ಇದು ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಕಾಪಾಡಲು ನೆರವಾಗುತ್ತದೆ.

ಸದಾ ಕಾಲ ತಾರುಣ್ಯ: ಎಲ್ಲರಿಗೂ ಸದಾ ಕಾಲ ಯಂಗ್ ಆಗಿ ಕಾಣಬೇಕು ಎಂಬ ಆಸೆ ಇರುತ್ತದೆ. ಚಿನ್ನವು ಚರ್ಮದ ಸುಕ್ಕನ್ನು ಕಡಿಮೆ ಮಾಡಿ, ತ್ವಚೆಯಲ್ಲಿ ನೈಸರ್ಗಿಕ ಹೊಳಪನ್ನು ತರುತ್ತದೆ. ಅದಕ್ಕಾಗಿಯೇ ಇತ್ತೀಚೆಗೆ ‘ಗೋಲ್ಡ್ ಫೇಶಿಯಲ್’ ಕೂಡ ಅಷ್ಟೊಂದು ಫೇಮಸ್ ಆಗಿದೆ. ಇದನ್ನು ಸೇವಿಸುವುದರಿಂದ ಒಳಗಿನಿಂದಲೇ ಸೌಂದರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಐಷಾರಾಮಿ ರಾಜಭೋಜನ!

ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಆದರೆ ಇಂದು ಆ ಚಿನ್ನವನ್ನೇ ಸವಿಯುವುದು ಒಂದು ಗೌರವದ ಸಂಕೇತವಾಗಿ ಮಾರ್ಪಟ್ಟಿದೆ. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಅಥವಾ ವಿವಾಹ ಸಮಾರಂಭಗಳಲ್ಲಿ ಚಿನ್ನದ ಲೇಪಿತ ಐಸ್‌ಕ್ರೀಂ, ಕೇಕ್ ಅಥವಾ ಪಾನ್ ಸವಿಯುವುದು ಈಗಿನ ಟ್ರೆಂಡ್.

ಒಟ್ಟಿನಲ್ಲಿ, ಚಿನ್ನ ಕೇವಲ ಲಾಕರ್‌ನಲ್ಲಿ ಇಡುವ ವಸ್ತುವಲ್ಲ, ಅದು ನಿಮ್ಮ ತಟ್ಟೆಯ ಅಂದವನ್ನು ಮತ್ತು ನಿಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವ ಶಕ್ತಿಯನ್ನೂ ಹೊಂದಿದೆ. ಜೇಬಿನಲ್ಲಿ ಹಣವಿದ್ದು, ರಾಯಲ್ ಅನುಭವ ಪಡೆಯಬೇಕೆನ್ನುವವರು ಒಮ್ಮೆ ಈ ‘ಗೋಲ್ಡ್ ಡಿಶ್’ ಟ್ರೈ ಮಾಡಬಹುದು. ಹೊಟ್ಟೆಗೂ ಹಿತ, ಕಣ್ಣಿಗೂ ತಂಪು, ಅಂದಹಾಗೆ ಜೇಬಿನ ವಿಷಯ ಇಲ್ಲಿ ಗೌಣ!

ವಿಶೇಷ ಸೂಚನೆ: ಆಧುನಿಕ ವಿಜ್ಞಾನದ ಪ್ರಕಾರ, ಶುದ್ಧ ಚಿನ್ನವನ್ನು (23-24 ಕ್ಯಾರೆಟ್ ಚಿನ್ನ) ತಿಂದರೆ ಅದು ಜೀರ್ಣವಾಗುವುದಿಲ್ಲ. ಸಂಸ್ಕರಿಸಿದ, ಚಿನ್ನದ ಜರಿಯ ಅಥವಾ ಬೇರೆ ಲೋಹದ ಜೊತೆ ಮಿಕ್ಸ್ ಮಾಡಿದ ಚಿನ್ನವನ್ನು ತಿಂದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನಲಾಗುತ್ತಿದೆ. ಆದರೆ, ಆಯುರ್ವೇದ ಶಾಸ್ತ್ರದ ಪ್ರಕಾರ, ಚಿಕ್ಕ ಮಕ್ಕಳಿಗೆ 'ಸ್ವರ್ಣ ಪ್ರಾಶನ' ಮಾಡಿಸುವ ಅಭ್ಯಾಸ ನಮ್ಮ ಸನಾತನ ಧರ್ಮದಲ್ಲಿ (ಆಯುರ್ವೇದ ಪದ್ಧತಿ) ಮೊದಲಿನಿಂದಲೂ ಬಳಕೆಯಲ್ಲಿದೆ. ಯಾವುದಕ್ಕೂ ನೀವು ಚಿನ್ನವನ್ನು ಯಾವುದೇ ರೂಪದಲ್ಲಿ ತಿನ್ನುವ ಮೊದಲು- ಹೆಚ್ಚಿನ ಮಾಹಿತಿಗೆ ಆಯುರ್ವೇದ ಶಾಸ್ತ್ರಜ್ಞರು ಅಥವಾ ನಿನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.