Asianet Suvarna News Asianet Suvarna News

ಕೇವಲ 2 ನಿಮಿಷದಲ್ಲಿ ನಿದ್ರೆಗೆ ಜಾರೋದು ಹೇಗೆ? ಅಮೆರಿಕದ ಮಿಲಿಟರಿ ಮೆಥಡ್‌ ಹೀಗಿದೆ

ನೀವು ಗಂಟೆಗಟ್ಟಲೆ ಬೆಡ್‌ನಲ್ಲಿ ಹೊರಳಾಡುತ್ತಿರುತ್ತೀರಾ? ಉತ್ತರ ಹೌದು ಎಂದಾದರೆ, ನೀವು ನಿದ್ರೆಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೀರಿ. ನೀವು ಈ ತಂತ್ರವನ್ನು ಪ್ರಾಕ್ಟೀಸ್‌ ಮಾಡುವುದು ಉತ್ತಮ. ಹೌದು, ಕೇವಲ 2 ನಿಮಿಷಗಳಲ್ಲಿ ನಿಮ್ಮನ್ನು ಗಾಢ ನಿದ್ದೆಗೆ ಹೋಗಿಸುವ ಒಂದು ಟ್ರಿಕ್ ಇಲ್ಲಿದೆ.

How to fall asleep in just 2 minutes Such is the American military method bni
Author
First Published Sep 22, 2023, 11:28 AM IST

ಲೈಟ್‌ ಆಫ್‌ ಮಾಡಿ ಎರಡೇ ನಿಮಿಷಕ್ಕೆ ನಿದ್ರೆ! ಇದು ಹೆಚ್ಚಿನವರ ಕನಸು. ತುಂಬಾ ಮಂದಿ ಬೆಡ್‌ನಲ್ಲಿ ಗಂಟೆಗಟ್ಟಲೆ ಅತ್ತಿಂದಿತ್ತ ಹೊರಳಾಡುತ್ತಿರುತ್ತಾರೆ. ಫೋನ್ ಅನ್ನು ಪಕ್ಕಕ್ಕೆ ಇರಿಸಿದ ನಂತರವೂ ನೀವು ಗಂಟೆಗಟ್ಟಲೆ ಬೆಡ್‌ನಲ್ಲಿ ಹೊರಳಾಡುತ್ತಿರುತ್ತೀರಾ? ಉತ್ತರ ಹೌದು ಎಂದಾದರೆ, ನೀವು ನಿದ್ರೆಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೀರಿ. ಪ್ರತಿನಿತ್ಯ ನಿದ್ದೆ ಮಾಡುವ ಮೊದಲು ಇದೇ ಸಮಸ್ಯೆ ಎಂದಾದರೆ, ನೀವು ಈ ತಂತ್ರವನ್ನು ಪ್ರಾಕ್ಟೀಸ್‌ ಮಾಡುವುದು ಉತ್ತಮ. ಹೌದು, ಕೇವಲ 2 ನಿಮಿಷಗಳಲ್ಲಿ ನಿಮ್ಮನ್ನು ಗಾಢ ನಿದ್ದೆಗೆ ಹೋಗಿಸುವ ಒಂದು ಟ್ರಿಕ್ ಇಲ್ಲಿದೆ.

ಇದು ಅಮೆರಿಕದ ಮಿಲಿಟರಿಯ ವಿಧಾನವಂತೆ. ದಣಿದ ಸೈನಿಕರು ಯಾವುದೇ ಸಮಯದಲ್ಲಿ ಟಕ್ಕನೆ ನಿದ್ರಿಸಲು ಸಹಾಯ ಮಾಡಲು ಈ ನಿದ್ರಾ ತಂತ್ರವನ್ನು ಅಮೆರಿಕದ ಮಿಲಿಟರಿ ಅಭಿವೃದ್ಧಿಪಡಿಸಿದೆ. ಈ ತಂತ್ರವು 1981ರ ʼರಿಲ್ಯಾಕ್ಸ್ ಅಂಡ್ ವಿನ್: ಚಾಂಪಿಯನ್‌ಶಿಪ್ ಪರ್ಫಾರ್ಮೆನ್ಸ್ʼ ಎಂಬ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ.

ಫಿಟ್‌ನೆಸ್ ತರಬೇತುದಾರ ಜಸ್ಟಿನ್ ಅಗಸ್ಟಿನ್ ಅವರಿಂದ ಸುಮಾರು 19 ಲಕ್ಷ ಮಂದಿ ಈ ನಿದ್ರೆಯ ತಂತ್ರವನ್ನು ಪಡೆದು ಸುಖವಾಗಿ ನಿದ್ರೆ ಮಾಡುವ ಟೆಕ್ನಿಕ್‌ ಕಲಿತಿದ್ದಾರಂತೆ. "ನನ್ನ ಸಂಶೋಧನೆಯ ಪ್ರಕಾರ, ಇದನ್ನು ಮುಖ್ಯವಾಗಿ ಫೈಟರ್ ಪೈಲಟ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ನಿದ್ರೆಯ ಕೊರತೆಯನ್ನು ಕಡಿಮೆ ಮಾಡುತ್ತದೆ" ಎಂದು ಜಸ್ಟಿನ್ ವಿವರಿಸುತ್ತಾರೆ.

ಈ ತಂತ್ರವನ್ನು ಕರಗತ ಮಾಡಿಕೊಳ್ಳುವ 96 ಪ್ರತಿಶತದಷ್ಟು ಜನರು ತಮ್ಮ ಕಣ್ಣುಗಳನ್ನು ಮುಚ್ಚಿದ ಎರಡು ನಿಮಿಷಗಳಲ್ಲಿ ನಿದ್ರಿಸಲು ಸಮರ್ಥರಾಗುತ್ತಾರೆ ಎಂದು ಜಸ್ಟಿನ್ ಹೇಳುತ್ತಾರೆ. ಅದನ್ನು ಕರಗತ ಮಾಡಿಕೊಳ್ಳಲು ಆರು ವಾರಗಳ ಕಾಲ ಪ್ರತಿ ರಾತ್ರಿ ಈ ತಂತ್ರವನ್ನು ಅಭ್ಯಾಸ ಮಾಡಲು ಅವರು ಸಲಹೆ ನೀಡುತ್ತಾರೆ.

ಅದು ಹೇಗೆ? ನಿದ್ರೆಯ ತಂತ್ರ ಇಲ್ಲಿದೆ:
1. ಆರಾಮ ಭಂಗಿಯಲ್ಲಿ ಮಲಗಿ. ನಿಮ್ಮ ದೇಹವನ್ನು ಶಾಂತಗೊಳಿಸಿ. ವ್ಯವಸ್ಥಿತವಾಗಿ ನಿಮ್ಮ ದೇಹದ ಪ್ರತಿಯೊಂದು ಭಾಗವನ್ನು ತಲೆಯಿಂದ ಕಾಲಿನ ಕಿರು ಬೆರಳವರೆಗೆ ಮನಸ್ಸಿನಲ್ಲಿ ಸ್ಪರ್ಶಿಸಿ, ವಿಶ್ರಾಂತಿ ಪಡೆಯುವಂತೆ ಹೇಳಿಕೊಳ್ಳಿ. ಮೊದಲು ನಿಮ್ಮ ಹಣೆಯ ಸ್ನಾಯುಗಳಿಂದ ಪ್ರಾರಂಭಿಸಿ. ಕಣ್ಣುಗಳು, ಕೆನ್ನೆಗಳು, ದವಡೆಗಳನ್ನು ವಿಶ್ರಾಂತಿ ಮಾಡಿ. ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ.

2. ಮುಂದೆ, ನಿಮ್ಮ ಕುತ್ತಿಗೆ ಮತ್ತು ಭುಜಗಳನ್ನು ವಿಶ್ರಾಂತಿಗೊಳಿಸಿ. ನಿಮ್ಮ ಭುಜಗಳು ಆರಾಮವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಅವುಗಳನ್ನು ನಿಮಗೆ ಸಾಧ್ಯವಾದಷ್ಟು ಸಡಿಲ ಬಿಡಿ. ಕೈಗಳು ಮತ್ತು ಬೆರಳುಗಳನ್ನು ತೋಳುಗಳನ್ನು ಸಡಿಲಗೊಳಿಸಿ. ಒಂದು ಬೆಚ್ಚಗಿನ ಸಂವೇದನೆಯು ನಿಮ್ಮ ತಲೆಯಿಂದ ನಿಮ್ಮ ಬೆರಳ ತುದಿಯವರೆಗೆ ಚಲಿಸುತ್ತಿದೆ ಎಂದು ಊಹಿಸಿಕೊಳ್ಳಿ.

3. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಧಾನವಾಗಿ ಬಿಡಿ. ನಿಮ್ಮ ಎದೆ, ಹೊಟ್ಟೆ, ತೊಡೆಗಳು, ಮೊಣಕಾಲುಗಳು, ಕಾಲುಗಳು ಮತ್ತು ಪಾದಗಳವರೆಗೆ ವಿಶ್ರಾಂತಿಗೊಳಿಸಿ. ಈ ಬೆಚ್ಚಗಿನ ಸಂವೇದನೆಯು ನಿಮ್ಮ ಹೃದಯದಿಂದ ನಿಮ್ಮ ಕಾಲ್ಬೆರಳುಗಳವರೆಗೆ ಇಳಿಯುವುದನ್ನು ಊಹಿಸಿ.

ತಿನ್ನೋದೇನು ಕಡಿಮೆ ಮಾಡ್ಬೇಕಿಲ್ಲ, ತಿನ್ನೋ ರೀತಿ ಚೇಂಜ್ ಮಾಡ್ಕೊಂಡ್ರೆ ಸಾಕು ತೂಕ ಹೆಚ್ಚಾಗಲ್ಲ

4. ಯಾವುದೇ ಒತ್ತಡಗಳಿಂದ ನಿಮ್ಮ ಮನಸ್ಸನ್ನು ತೆರವುಗೊಳಿಸಿ. ಜಸ್ಟಿನ್ ಈ ಎರಡು ಸನ್ನಿವೇಶಗಳನ್ನು ಯೋಚಿಸಲು ಶಿಫಾರಸು ಮಾಡುತ್ತಾರೆ:

ಎ. ನಿಮ್ಮ ಮೇಲೆ ಸ್ಪಷ್ಟವಾದ ನೀಲಿ ಆಕಾಶವನ್ನು ಹೊರತುಪಡಿಸಿ ಬೇರೇನೂ ಇಲ್ಲದ ಶಾಂತ ಸರೋವರದ ಮೇಲೆ ನೀವು ದೋಣಿಯಲ್ಲಿ ಮಲಗಿದ್ದೀರಿ.
ಬಿ. ನೀವು ಕಪ್ಪು ಬಣ್ಣದ ಕೋಣೆಯಲ್ಲಿ ಕಪ್ಪು ವೆಲ್ವೆಟ್ ಆಸನದಲ್ಲಿ ಮಲಗಿರುವಿರಿ.

ಯಾವುದೇ ಸಮಯದಲ್ಲಿ ಬೇರೆ ಏನಾದರೂ ಯೋಚನೆ ತಲೆಗೆ ಬಂದರೆ, ವಿಚಲಿತರಾದರೆ ಹತ್ತು ಸೆಕೆಂಡುಗಳ ಕಾಲ ಹೀಗೆ ಹೇಳಿಕೊಳ್ಳಿ- ʼಆಲೋಚಿಸಬೇಡ, ಆಲೋಚಿಸಬೇಡ.ʼ

ಹೀಗೆ ಆರು ವಾರಗಳ ಕಾಲ ಪ್ರಾಕ್ಟೀಸ್‌ ಮಾಡಿದರೆ ಖಂಡಿತವಾಗಿಯೂ ನಿಮಗದು ಅಭ್ಯಾಸವಾಗುತ್ತದೆ ಮತ್ತು ಎರಡೇ ನಿಮಿಷಗಳಲ್ಲಿ ನಿದ್ರೆಗೆ ಜಾರುತ್ತೀರಿ ಎಂದು ಫಿಟ್‌ನೆಸ್‌ ತಜ್ಞರು ಹೇಳುತ್ತಾರೆ. ಪ್ರಯತ್ನಿಸಿ ನೋಡಿ. 

ತೂಕ ಇಳಿಕೆ ಜತೆ ಹೃದಯದ ಆರೋಗ್ಯ ಉತ್ತಮವಾಗಿರಲು ಈ ಆಹಾರ ಸೇವಿಸಿ ಎಂದ ಸಂಶೋಧಕರು!
 

Follow Us:
Download App:
  • android
  • ios