ಮಳೆಗಾಲದಲ್ಲಿ ಅಂಡರ್‌ವೇರ್ ಧರಿಸುವಾಗ ನಾವು ಮಾಡುವ ಸಾಮಾನ್ಯ ತಪ್ಪುಗಳು ಮತ್ತು ಅದರಿಂದ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ನೀವು ತಿಳಿದುಕೊಂಡಿದ್ದರೆ ಒಳ್ಳೆಯದು.

ಇತರ ಕಾಲಗಳ ಹಾಗೇ ಮಳೆಗಾಲವೂ ಅದೇ ಬಗೆಯ ಅಂಡರ್‌ವೇರ್ ಧರಿಸುತ್ತೇವೆ ಎಂದು ನೀವು ಭಾವಿಸಬಹುದು. ಆದರೆ, ಮಳೆಗಾಲದಲ್ಲಿ ಅಂಡರ್‌ವೇರ್ ಧರಿಸುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಈ ಕೆಳಗಿನ ತಪ್ಪುಗಳನ್ನು ಮಾಡಲೇಬಾರದು. ನಾವು ಮಾಡುವ ತಪ್ಪುಗಳು ಎಂಥದು ಹಾಗೂ ಇದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಏನು ಅನ್ನುವ ಬಗ್ಗೆ ಇಲ್ಲಿದೆ ಮಾಹಿತಿ:


ಮಳೆಗಾಲದಲ್ಲಿ ಸಾಮಾನ್ಯವಾಗಿ ಒಳ ಉಡುಪು ಬೇಗನೆ ಒಣಗುವುದಿಲ್ಲ. ಹೀಗಾಗಿ ಪ್ರತಿದಿನ ಅದನ್ನು ಒಗೆಯುವುದನ್ನು ಬಿಟ್ಟು ಎರಡು ದಿನ, ಮೂರು ದಿನ ಅದನ್ನೇ ಧರಿಸಿಕೊಳ್ಳುವ ಭೂಪ, ಭೂಪಿಣಿಯರೂ ಉಂಟು. ಒಳ ಉಡುಪನ್ನು ಪ್ರತಿದಿನ ಸ್ವಚ್ಛಗೊಳಿಸೋದನ್ನ ಬಿಟ್ಟು ಅದೇ ಒಳ ಉಡುಪುಗಳನ್ನ ಪದೇ ಪದೇ ಧರಿಸೋದ್ರಿಂದ ನೀವು ಸೋಂಕಿನ ದಾಳಿಗೆ ಬಹುಬೇಗ ತುತ್ತಾಗುತ್ತೀರಿ. ಈ ರೀತಿಯ ದುರಭ್ಯಾಸದಿಂದ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಸೋಂಕುಗಳು ಕಾಡುತ್ತವೆ. ಖಾಸಗಿ ಜಾಗದಲ್ಲಿ ರಿಂಗ್‌ವರ್ಮ್ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಮಳೆಗಾಲದಲ್ಲಿ ಅದು ಒಣಗುವುದಿಲ್ಲ ಎಂದು ಗೊತ್ತಿರುವುದರಿಂದ ಎರಡು ಪ್ರತಿ ಹೆಚ್ಚಿಗೆ ಒಳುಡುಪುಗಳು ನಿಮ್ಮ ಬಳಿ ಇರಲಿ.

ಪತ್ನಿ ಹೆರಿಗೆಯ ನಂತರ ಪುರುಷರನ್ನೂ ಕಾಡುತ್ತೆ ಖಿನ್ನತೆ!

ಕೆಲವೊಮ್ಮೆ ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ, ತೊಡೆಗಳ ಸಂದಿ ಬೆವರುತ್ತದೆ. ವರ್ಕ್ಔಟ್ ಮಾಡಿದಾಗ ಇದು ಇನ್ನೂ ಹೆಚ್ಚು. ಅಂಥ ಸಮಯದಲ್ಲಿ, ಬೆವರು ಆಗಿದೆ ಎಂದು ತಿಳಿದರೂ ಸಹ ಒಳ ಉಡುಪನ್ನ ಬದಲಾವಣೆ ಮಾಡದೇ ಇರೋದು ಸಹ ನಾವು ಮಾಡುವ ಬಹು ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ. ನಿಮ್ಮ ಗುಪ್ತಾಂಗ ಬೆವರೋದ್ರಿಂದ ಫಂಗಸ್ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮಗೆ ಗುಪ್ತಾಂಗ ತುರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಜಿಮ್​ ಮಾಡಿದ ಬಳಿಕ ಒಳ ಉಡುಪು ಬದಲಾಯಿಸೋದನ್ನ ಮರೆಯಬೇಡಿ.


ಮಳೆಗಾಲ ಹಾಗೂ ಚಳಿಯ ಪರಿಣಾಮ, ಮೈ ಬೆಚ್ಚಗಿರಲಿ ಎಂದು ಬಿಗಿಯಾದ ಉಡುಪು ಧರಿಸುತ್ತೇವೆ. ಹಾಗೇ ಬಿಗಿಯಾದ ಒಳ ಉಡುಪು ಧರಿಸುವುದು ಕೂಡ ನಾವು ಮಾಡುವ ತಪ್ಪುಗಳಲ್ಲಿ ಒಂದು. ಬಿಗಿಯಾದ ಒಳ ಉಡುಪು ಧರಿಸೋದ್ರಿಂದ ಚರ್ಮದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ರಕ್ತದ ಹರಿವಿಗೆ ಇದು ತೊಂದರೆ ಉಂಟು ಮಾಡುತ್ತದೆ. ನರಗಳು ಸಹ ಸಂಕುಚಿತಗೊಳ್ಳುತ್ತದೆ. ಹೀಗಾಗಿ ನಿಮ್ಮ ಅಳತೆಗೆ ಸೂಕ್ತವಾದ ಒಳ ಉಡುಪನ್ನೇ ಧರಿಸಿ.

ಹಾಗೇ ಈ ಕಾಲದಲ್ಲಿ ಸ್ಯಾಟಿನ್​, ಲೇಸ್​ ಹಾಗೂ ಸ್ಪ್ಯಾಂಡೆಕ್ಸ್​ಗಳಿಂದ ಫ್ಯಾನ್ಸಿ ಬಟ್ಟೆಗಳಿಂದ ತಯಾರಾದ ಒಳ ಉಡುಪುಗಳು ನಿಮ್ಮ ಗುಪ್ತಾಂಗದ ಆರೋಗ್ಯವನ್ನ ಹಾಳುಗೆಡಹಬಹುದು. ಇದು ಅಲ್ಲಿ ತೇವಾಂಶ ಬಿಡುಗಡೆಯಾಗುವುದನ್ನು ನಿಯಂತ್ರಿಸುತ್ತದೆ. ಹೀಗಾಗಿ ಚರ್ಮಕ್ಕೆ ಅನುಕೂಲಕರ ಎನಿಸುವ ಬಟ್ಟೆಯಿಂದ ತಯಾರಾದ ಒಳ ಉಡುಪುಗಳೇ ನಿಮ್ಮ ಆಯ್ಕೆಯಾಗಿರಲಿ. ತೆಳುವಾದ ಕಾಟನ್‌ ಅಂಡರ್‌ವೇರ್‌ಗಳು ಸೂಕ್ತ. 

ರಾತ್ರಿ ಎಡಮಗ್ಗುಲಲ್ಲೇ ಯಾಕೆ ಮಲಗಬೇಕು ಗೊತ್ತೆ?

ಸುಗಂಧಯುಕ್ತ ಡಿಟರ್ಜಂಟ್​ಗಳಿಂದ ನಿಮ್ಮ ಒಳ ಉಡುಪುಗಳನ್ನ ಸ್ವಚ್ಛಗೊಳಿಸೋದು ಸಹ ಗುಪ್ತಾಂಗದ ಅನಾರೋಗ್ಯಕ್ಕೆ ಕಾರಣವಾಗಲಿದೆ. ಇದರಲ್ಲಿ ಬಳಕೆ ಮಾಡುವ ಅಪಾಯಕಾರಿ ರಾಸಾಯನಿಕಗಳು ನಿಮ್ಮ ಚರ್ಮದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.

ಥಾಂಗ್ಸ್​ಗಳನ್ನ ಧರಿಸಿದಾಗ ಆರಾಮದಾಯಕ ಎನಿಸುವುದು ಎಷ್ಟು ಸತ್ಯವೋ ಇದರಿಂದ ಗುಪ್ತಾಂಗಗಳ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಅನ್ನೋದು ಸಹ ಅಷ್ಟೇ ಸತ್ಯ, ಥಾಂಗ್ಸ್​ಗಳ ಬಳಕೆಯಿಂದ ಮೂತ್ರ ಸಂಬಂಧಿ ಸೋಂಕು ಉಂಟಾಗುತ್ತದೆ. ಹೀಗಾಗಿ ನಿಮ್ಮ ಚರ್ಮಗಳಿಗೆ ಉಸಿರಾಡುವಷ್ಟು ಅವಕಾಶ ನೀಡುವಂತಹ ಒಳ ಉಡುಪುಗಳೇ ನಿಮ್ಮ ಆಯ್ಕೆಯಾಗಿರಲಿ.

ಆರೋಗ್ಯದ ವಿಚಾರ ಬಂದಾಗ ನಿಮ್ಮ ಉಳ ಉಡುಪುಗಳ ಬಗಗೆಗಿನ ಕಾಳಜಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಒಳ ಉಡುಪುಗಳನ್ನ ಧರಿಸುವ ವಿಚಾರದಲ್ಲಿ ಎಚ್ಚರಾಗಿರಿ.

ಮಣ್ಣಿನ ಮಡಿಕೆಯಲ್ಲಿ ಆಹಾರವನ್ನೇಕೆ ಬೇಯಿಸಿ ತಿನ್ನಬೇಕು?