Heart Health: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಹೃದಯಾಘಾತದ ಅಪಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಆಹಾರ ಪದ್ಧತಿಯೂ ಪ್ರಮುಖ ಕಾರಣವಾಗಿರಬಹುದು. ಅದರಲ್ಲೂ ಅಡುಗೆಗೆ ಬಳಸುವ ಎಣ್ಣೆಯ ಪ್ರಮಾಣದ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು.

ಅಡುಗೆ ಎಣ್ಣೆ ಎಷ್ಟು ಬಳಸಬೇಕು?

ಭಾರತೀಯ ಆಹಾರ ತನ್ನ ರುಚಿಯಿಂದಾಗಿ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳ ಜೊತೆಗೆ ಎಣ್ಣೆಯೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಪಲ್ಯಕ್ಕೆ ಒಗ್ಗರಣೆ ಹಾಕುವುದರಿಂದ ಹಿಡಿದು ಪರೋಟಾ ಬೇಯಿಸುವುದು, ಪಕೋಡಾ ಕರಿಯುವವರೆಗೆ ಎಣ್ಣೆ ಪ್ರತಿಯೊಂದು ಅಡುಗೆ ಮನೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ರುಚಿ ಹೆಚ್ಚಿಸುವ ಇದೇ ಎಣ್ಣೆಯನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಯಾವ ಎಣ್ಣೆ ಬಳಸುತ್ತೇವೆ ಎನ್ನುವುದರ ಜೊತೆಗೆ ಎಷ್ಟು ಪ್ರಮಾಣದಲ್ಲಿ ಬಳಸುತ್ತೇವೆ ಎಂಬುದೂ ಮುಖ್ಯ.

ತಜ್ಞ ವೈದ್ಯರ ಪ್ರಕಾರ ಆರೋಗ್ಯವಂತ ವ್ಯಕ್ತಿಯೊಬ್ಬರು ದಿನವೊಂದಕ್ಕೆ ಸುಮಾರು 15ರಿಂದ 20 ಮಿಲಿಲೀಟರ್ ಅಂದರೆ 3ರಿಂದ 4 ಚಮಚದಷ್ಟು ಎಣ್ಣೆಯನ್ನು ಮಾತ್ರ ಬಳಸುವುದು ಸೂಕ್ತ. ಈ ಲೆಕ್ಕಾಚಾರದ ಪ್ರಕಾರ ಒಬ್ಬ ವ್ಯಕ್ತಿಗೆ ತಿಂಗಳಿಗೆ ಸುಮಾರು 500ರಿಂದ 600 ಮಿಲಿಲೀಟರ್ ಎಣ್ಣೆ ಸಾಕಾಗುತ್ತದೆ. ನಾಲ್ಕು ಜನರಿರುವ ಕುಟುಂಬಕ್ಕೆ ತಿಂಗಳಿಗೆ ಸರಿಸುಮಾರು 2 ಲೀಟರ್ ಎಣ್ಣೆ ಸಾಕಾಗಬಹುದು. ಆದರೆ ಅನೇಕ ಭಾರತೀಯ ಕುಟುಂಬಗಳಲ್ಲಿ ಐದು ಜನರಿದ್ದರೂ ತಿಂಗಳಿಗೆ ಸುಮಾರು 5ರಿಂದ 10 ಕೆ.ಜಿ. ಎಣ್ಣೆ ಬಳಸುವ ಅಭ್ಯಾಸವಿದೆ.

ಹೃದಯದ ಆರೋಗ್ಯಕ್ಕೆ ಯಾವ ಅಡುಗೆ ಎಣ್ಣೆ ಉತ್ತಮ?

ಮಾರುಕಟ್ಟೆಯಲ್ಲಿ ಹಲವು ಎಣ್ಣೆಗಳು ಲಭ್ಯವಿದೆ. ತಜ್ಞರ ಪ್ರಕಾರ ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಉತ್ತಮ ಆಯ್ಕೆಗಳೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿರುವ ಕೆಲವು ಆರೋಗ್ಯಕರ ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಸಹಾಯ ಮಾಡಬಹುದು.

ಸಾಸಿವೆ ಎಣ್ಣೆಗೆ ಹೆಚ್ಚು ಆದ್ಯತೆ ನೀಡುವುದೇಕೆ?

ಮರದ ಗಾಣದಲ್ಲಿ ತೆಗೆದ ಸಾಸಿವೆ ಎಣ್ಣೆ ಭಾರತೀಯ ಅಡುಗೆಗೆ ಉತ್ತಮ ಆಯ್ಕೆಯಾಗಿದೆ. ಈ ಎಣ್ಣೆಯ ಹೊಗೆ ಹೊರಸೂಸುವ ತಾಪಮಾನ (Smoke Point) ಹೆಚ್ಚಿರುವುದರಿಂದ ಹೆಚ್ಚಿನ ಉರಿಯಲ್ಲಿ ಅಡುಗೆ ಮಾಡುವಾಗಲೂ ಬೇಗನೆ ಹಾಳಾಗುವುದಿಲ್ಲ. ಇದರಿಂದ ಅದರಲ್ಲಿರುವ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಉಳಿಯಲು ಸಹಾಯವಾಗುತ್ತದೆ. ಇನ್ನು ಆಲಿವ್ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಅಡುಗೆ ಮಾಡಲು ಅಥವಾ ಸಲಾಡ್‌ಗಳಿಗೆ ಬಳಸುವುದು ಉತ್ತಮ. ಇದನ್ನು ಡೀಪ್ ಫ್ರೈ ಮಾಡಲು ಬಳಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

ರಿಫೈನ್ಡ್ ಎಣ್ಣೆಯನ್ನು ಹೆಚ್ಚು ಬಳಸಬಾರದು ಏಕೆ?

ತಜ್ಞರ ಪ್ರಕಾರ, ಕೆಲವು ರಿಫೈನ್ಡ್ ಎಣ್ಣೆಗಳು ಹೆಚ್ಚಿನ ತಾಪಮಾನ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ತಯಾರಾಗುತ್ತವೆ. ಇವುಗಳನ್ನು ದೀರ್ಘಕಾಲ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ನಿರಂತರವಾಗಿ ಹೆಚ್ಚು ಪ್ರಮಾಣದಲ್ಲಿ ಎಣ್ಣೆ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆಯಿದ್ದು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಬಹುದು.

ಅತಿಯಾಗಿ ಎಣ್ಣೆ ಸೇವಿಸುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು?

ಅತೊಯಾದ ಎಣ್ಣೆ ಬಳಸುವುದರಿಂದ ದೇಹದ ತೂಕ ಹೆಚ್ಚಳ ಮತ್ತು ಬೊಜ್ಜು, ಮಧುಮೇಹದ ಅಪಾಯ, ದೇಹದಲ್ಲಿ ಉರಿಯೂತ, ಅಧಿಕ ಕೊಲೆಸ್ಟ್ರಾಲ್, ಹೃದಯಾಘಾತದ ಅಪಾಯ, ಪಾರ್ಶ್ವವಾಯು (ಸ್ಟ್ರೋಕ್) ಅಪಾಯ ಉಂಟಾಗಬಹುದು.

ದಿನ, ವಾರ ಮತ್ತು ತಿಂಗಳಿಗೆ ಎಷ್ಟು ಎಣ್ಣೆ ಬಳಸಬಹುದು?

ವೈದ್ಯರು ನೀಡಿರುವ ಸಲಹೆಯ ಪ್ರಕಾರ ಎಣ್ಣೆಯ ಬಳಕೆಯ ಪ್ರಮಾಣ ಹೀಗಿದೆ:

  • ದಿನಕ್ಕೆ: 15–20 ಮಿಲಿಲೀಟರ್ (ಸುಮಾರು 3–4 ಚಮಚ)
  • ವಾರಕ್ಕೆ: 105–140 ಮಿಲಿಲೀಟರ್
  • ತಿಂಗಳಿಗೆ: 500–600 ಮಿಲಿಲೀಟರ್

ಉತ್ತಮ ಗುಣಮಟ್ಟದ ಎಣ್ಣೆಯನ್ನು ಆಯ್ಕೆ ಮಾಡುವುದು ಎಷ್ಟು ಮುಖ್ಯವೋ, ಅದರ ಪ್ರಮಾಣವನ್ನು ನಿಯಂತ್ರಿಸುವುದೂ ಅಷ್ಟೇ ಮುಖ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.