ಗ್ಯಾಸ್ಟ್ರಿಕ್‌ ಎನ್ನುವ ಕಾರಣಕ್ಕೆ ಅನೇಕರು ಸಮೋಸಾದಿಂದ ದೂರ ಇರ್ತಾರೆ. ಆದ್ರೆ ಇಲ್ಲೊಬ್ಬ ಇದನ್ನೇ ಬಂಡವಾಳ ಮಾಡ್ಕೊಂಡಿದ್ದಾರೆ. ಸಿಎ ಒಬ್ಬರು ಮಾರ್ಕೆಟ್‌ ಗೆ ಆಯುರ್ವೇದಿಕ್‌ ಸಮೋಸಾ ಪರಿಚಯ ಮಾಡಿಸಿದ್ದಾರೆ.

ಸಮೋಸಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಬಿಸಿಬಿಸಿಯಾದ ಆಲೂಗಡ್ಡೆ ಸಮೋಸಾ ಕಂಡರೆ ಬಾಯಲ್ಲಿ ನೀರೂರುತ್ತದೆ. ಆದರೆ, ಸಮೋಸಾದಂತಹ ಕರಿದ ತಿಂಡಿ ತಿಂದ್ರೆ ಅನೇಕರಿಗೆ ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆ ಸಮಸ್ಯೆ ಕಾಡುತ್ತದೆ. ಇದನ್ನು ಗಮನಿಸಿದ ದೆಹಲಿಯ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಇದೀಗ ವಿಭಿನ್ನ ಪ್ರಯೋಗಕ್ಕೆ ಕೈಹಾಕಿದ್ದಾರೆ. ಅದುವೇ ಆಯುರ್ವೇದಿಕ್ ಸಮೋಸಾ.

ಆಯುರ್ವೇದಿಕ್‌ ಸಮೋಸಾ

ದೆಹಲಿಯ ಲಕ್ಷ್ಮೀ ನಗರ ಮೆಟ್ರೋ ನಿಲ್ದಾಣದ ಸಮೀಪ ಸುಜಿತ್ ಕುಮಾರ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಈ ವಿಶೇಷ ಸಮೋಸಾವನ್ನು ಮಾರಾಟ ಮಾಡುತ್ತಿದ್ದಾರೆ. ಸಮೋಸಾ ಪ್ರಿಯರಾಗಿರುವ ಸುಜಿತ್, ಕರಿದ ತಿಂಡಿಗಳಿಂದ ಎದುರಾಗುವ ಜೀರ್ಣಕ್ರಿಯೆ ಸಮಸ್ಯೆಗಳನ್ನು ಗಮನಿಸಿ, ಸಾಮಾನ್ಯ ಸಮೋಸಾಕ್ಕಿಂತ ಕೊಂಚ ವಿಭಿನ್ನವಾದ ರೆಸಿಪಿ ಸಿದ್ಧಪಡಿಸಿದ್ದಾರೆ.

ಸಾಮಾನ್ಯವಾಗಿ ಸಮೋಸಾದಲ್ಲಿ ಬಳಸುವ ಬೇಯಿಸಿದ ಆಲೂಗಡ್ಡೆ ಮತ್ತು ಹಗುರವಾದ ಮಸಾಲೆಗಳ ಜೊತೆಗೆ ಲವಂಗದ ಪುಡಿ, ಓಂ ಕಾಳು ಕಸೂರಿ ಮೇಥಿ, ಲವಣ ಭಾಸ್ಕರ ಚೂರ್ಣ ಹಾಗೂ ಜಟಾ ಮಾಂಸಿ ಗಿಡಮೂಲಿಕೆಗಳನ್ನು ಸೇರಿಸುತ್ತಾರೆ. ಲವಣ ಭಾಸ್ಕರ ಚೂರ್ಣವನ್ನು ಆಯುರ್ವೇದದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಜಟಾ ಮಾಂಸಿ ಗಿಡಮೂಲಿಕೆಯನ್ನು ಮನಸ್ಸಿನ ಶಾಂತಿಗೆ ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಇಲ್ಲಿ ಎರಡು ಸಮೋಸಾಗಳ ಒಂದು ಪ್ಲೇಟ್ಗೆ ಕೇವಲ 20 ರೂಪಾಯಿ ನಿಗದಿಪಡಿಸಲಾಗಿದೆ. ಇದರೊಂದಿಗೆ ಬೆಳ್ಳುಳ್ಳಿ ಮತ್ತು ಟೊಮೆಟೊ ಚಟ್ನಿಯನ್ನೂ ನೀಡಲಾಗುತ್ತದೆ.

ವಿಶೇಷವೆಂದರೆ, ಈ ಸಮೋಸಾದ ಪ್ರಮುಖ ಗ್ರಾಹಕರು ವಿದ್ಯಾರ್ಥಿಗಳು. ಲಕ್ಷ್ಮೀ ನಗರ ಸಿಎ, ಯುಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳ ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ವಾಸಿಸುತ್ತಿದ್ದು, ದೀರ್ಘ ಸಮಯದ ಓದಿನ ನಡುವೆ ಟಿಫಿನ್ ಊಟ ಮತ್ತು ತಡರಾತ್ರಿಯ ತಿಂಡಿಗಳನ್ನು ಅವಲಂಬಿಸಿರುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸಮೋಸಾ ತಯಾರಿಸಿರುವುದಾಗಿ ಸುಜಿತ್ ಕುಮಾರ್ ತಿಳಿಸಿದ್ದಾರೆ.

ಆದರೆ, ಈ ಸಮೋಸಾವನ್ನು ಕೂಡ ಎಂದಿನಂತೆ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಆಯುರ್ವೇದ ಪದಾರ್ಥಗಳನ್ನು ಸೇರಿಸಿರುವುದರಿಂದ ಇದು ಸಂಪೂರ್ಣ ಆರೋಗ್ಯಕರ ತಿಂಡಿಯಾಗುವುದಿಲ್ಲ. ಕರಿದ ಆಹಾರದಲ್ಲಿರುವ ಎಣ್ಣೆಯ ಅಂಶವೂ ಹಾಗೆಯೇ ಇರುತ್ತದೆ. ಆದರೂ, ಸಾಮಾನ್ಯ ಬೀದಿ ಬದಿಯ ತಿಂಡಿಗೆ ವಿಭಿನ್ನ ಪದಾರ್ಥಗಳನ್ನು ಸೇರಿಸಿ ಹೊಸ ಪ್ರಯೋಗ ಮಾಡಿರುವುದು ಗಮನ ಸೆಳೆದಿದೆ.