ಮತ್ತೊಂದು ಕೊರೋನಾ ವೈರಸ್ ಅಪ್ಪಳಿಸಲಿದೆ, ಎದುರಿಸಲು ಸಜ್ಜಾಗಿ; ಚೀನಾ ವೈರಾಲಜಿಸ್ಟ್ ಎಚ್ಚರಿಕೆ!
ಇಡೀ ವಿಶ್ವವನ್ನೇ ಸ್ಥಗಿತಗೊಳಿಸಿದ ಚೀನಾದ ಕೋವಿಡ್ ವೈರಸ್ ಮಾಡಿದ ಅವಾಂತರ ಒಂದೆರೆಡಲ್ಲ. ಭಾರತ ಸೇರಿದಂತೆ ವಿಶ್ವ ಈ ವೈರಸ್ ನಿಯಂತ್ರಿಸಲು 2ಕ್ಕಿಂತ ಹೆಚ್ಚು ವರ್ಷಗಳೇ ತೆಗೆದುಕೊಂಡಿದೆ. ಇದೀಗ ಚೀನಾದ ಪ್ರಖ್ಯಾತ ವೈರಾಲಜಿಸ್ಟ್ ಎಚ್ಚರಿಕೆಯೊಂದು ನೀಡಿದ್ದಾರೆ. ಮತ್ತೊಂದು ಕೋವಿಡ್ ರೀತಿಯ ವೈರಸ್ ಎದುರಿಸಲು ಸಜ್ಜಾಗಿದೆ ಎಂದಿದ್ದಾರೆ.
ಬೀಜಿಂಗ್(ಸೆ.25) ಕೋವಿಡ್ ವೈರಸ್‌ನಿಂದ ಭಾರತ ಸೇರಿದಂತೆ ಇಡೀ ವಿಶ್ವವೇ ನರಳಾಡಿತ್ತು. ಹೆಣಗಳ ರಾಶಿ, ಆಸ್ಪತ್ರೆಗಳು ಭರ್ತಿ, ಹದಗೆಟ್ಟ ಆರೋಗ್ಯ, ವ್ಯವಾಹರ, ಉದ್ಯಮ, ಕಚೇರಿ, ಶಾಲೆ ಎಲ್ಲವೂ ಬಂದ್. ಆರೋಗ್ಯ ಕ್ಷೇತ್ರಕ್ಕೆ ಸವಾಲಾದ ಕೋವಿಡ್ ವೈರಸ್ ಎದುರಿಸಿ ನಿಯಂತ್ರಿಸಲು ಸರಿಸುಮಾರು ಎರಡೂವರೇ ವರ್ಷಗಳೇ ತೆಗೆದುಕೊಳ್ಳಬೇಕಾಯಿತು. ಲಸಿಕೆ ಮೂಲಕ ಭಾರತ ಹಾಗೂ ವಿಶ್ವ ಕೊರೋನಾ ನಿಯಂತ್ರಣ ಮಾಡಿತು. ಬಳಿಕ ಹಲವು ರೂಪಾಂತರಿಗಳು ಪ್ರತ್ಯಕ್ಷಗೊಂಡರೂ ಹೆಚ್ಚಿನ ಅನಾಹುತ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಇದೀಗ ಚೀನಾದ ಪ್ರಖ್ಯಾತ ವಿರಾಲಜಿಸ್ಟ್, ಬ್ಯಾಟ್‌ಮಾನ್ ಎಂದೇ ಹೆಸರುವಾಸಿಯಾಗಿರುವ ಶಿ ಝೆಂಗ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ವಿಶ್ವ ಮತ್ತೊಂದು ಕೊರೋನಾ ರೀತಿಯ ವೈರಸ್ ಎದುರಿಸಲು ಸಜ್ಜಾಗಿ ಎಂದಿದ್ದಾರೆ.
ಪ್ರಾಣಿಗಳು, ಪಕ್ಷಿಗಳು ಪ್ರಮುಖವಾಗಿ ಬಾವಲಿಗಳಿಂದ ಹರಡುವ ವೈರಸ್ ಕುರಿತು ಸಂಶೋಧನೆ ನಡೆಸುತ್ತಿರುವ ಶಿ ಝೆಂಗ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಕೊರೋನಾ ರೀತಿಯ ವೈರಸ್ ಮತ್ತೆ ಅಪ್ಪಳಿಸಲಿದೆ. ಇದಕ್ಕಾಗಿ ವಿಶ್ವ ಈಗಲೇ ಸಿದ್ಧತೆ ನಡೆಸಿಕೊಳ್ಳಬೇಕು ಎಂದಿದ್ದಾರೆ. ವುಹಾನ್ ವೈರಾಲಜಿ ಲ್ಯಾಬ್‌ನ ಪ್ರಮುಖ ಸಂಶೋಧಕಿಯಾಗಿರುವ ಝೆಂಗ್ಲಿ ನೀಡಿದ ಈ ಎಚ್ಚರಿಕೆ ಇದೀಗ ಮತ್ತೆ ತಲ್ಲಣ ಸೃಷ್ಟಿಸಿದೆ.
5 ತಿಂಗಳ ಬಳಿಕ ಕರ್ನಾಟಕದಲ್ಲಿ ಕೊರೋನಾಕ್ಕೆ ವೃದ್ಧ ಬಲಿ
ಮನುಷ್ಯನಿಗೆ ಆರೋಗ್ಯವನ್ನೇ ಹಾಳುಮಾಡಬಲ್ಲ ವೈರಸ್‌ಗಳ ಕುರಿತು ಶಿ ಝಿಂಗ್ಲಿ ಅಧ್ಯಯನ ನಡೆಸಿದ್ದಾರೆ. ಈ ಕುರಿತು ಬೃಹತ್ ವರದಿ ತಯಾರಿಸಿರುವ ಝೆಂಗ್ಲಿ, ಮಾನವನ ಆರೋಗ್ಯಕ್ಕೆ ಮಾರಕವಾಗಬಲ್ಲ 40 ಕೊರೋನಾ ರೀತಿಯ ವೈರಸ್ ಪತ್ತೆ ಹಚ್ಚಿದ್ದಾರೆ. ಈ 40 ವೈರಸ್ ಪೈಕಿ ಕೋವಿಡ್ ಸೇರಿದಂತೆ ಕೇವಲ 6 ವೈರಸ್ ಈಗಾಗಗಲೇ ಮಾನವನಿಗೆ ತೀವ್ರ ಸಂಕಷ್ಟ ತಂದಿದೆ. ಇನ್ನುಳಿದ ವೇರಿಯೆಂಟ್ ವೈರಸ್ ಭವಿಷ್ಯದಲ್ಲಿ ಅಪ್ಪಳಿಸಲಿದೆ ಎಂದಿದ್ದಾರೆ.
ಭಾರತ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಿಸಿದೆ. ಭಾರತದಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾದರೂ ಯಾವುದೇ ಆತಂಕವಿಲ್ಲ. ವೈರಸ್ ಪತ್ತೆಯಾದ ಬಳಿಕ ಚೇತರಿಕೆ ಪ್ರಮಾಣ ಶೇಕಡಾ 99.9 ರಷ್ಟಿದೆ. ಬೆಂಗಳೂರಿನಲ್ಲಿ ಭಾನುವಾರ ಒಂದು ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಇನ್ನು ಸೋಂಕಿನಿಂದ ಒಬ್ಬರು ಗುಣಮುಖರಾಗಿದ್ದು, ಮೃತಪಟ್ಟ ವರದಿಯಾಗಿಲ್ಲ. ಕಳೆದ 24 ಗಂಟೆಗಳ ಅವಧಿಯಲ್ಲಿ 1401 ಜನರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, 20 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿದೆ. ಉಳಿದ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್ ವೇಳೆ ಶವ ಚೀಲದ ಅಕ್ರಮ: ಮಾಜಿ ಮೇಯರ್‌ಗೆ ಜಾಮೀನು ನಿರಾಕರಣೆ