ಮೊಬೈಲ್ ನೋಡ್ತಾ ಊಟ ಮಾಡ್ತೀರಾ? ಆರೋಗ್ಯದ ಮೇಲೆ ಆಗೋ ಪರಿಣಾಮ ಒಂದೆರಡಲ್ಲ!
ಊಟದ ತಟ್ಟೆ ಮುಂದೆ ಕುಳಿತುಕೊಳ್ಳುವ ಮುನ್ನ ಕೈ ತೊಳೆಯೋ ಬದಲು ಮೊಬೈಲ್ ಹುಡುಕೋ ಜನರೇ ಹೆಚ್ಚಿದ್ದಾರೆ. ಮೊಬೈಲ್ ನೋಡ್ತಾ ಆಹಾರ ತಿನ್ನೋರಿಗೆ ಏನು ತಿಂದೆ ಅನ್ನೋದೇ ಗೊತ್ತಿರೋದಿಲ್ಲ. ಇದು ನಿಮ್ಮ ಆರೋಗ್ಯವನ್ನು ಸದ್ದಿಲ್ಲದೆ ಹಾಳು ಮಾಡುತ್ತೆ.
ಸ್ಮಾರ್ಟ್ಫೋನ್ ಗಳು ನಮ್ಮ ಜೀವನದ ಖುಷಿಯನ್ನು ಸಂಪೂರ್ಣ ಕಸಿದುಕೊಂಡಿವೆ. ನಾವು ಫೋನ್ ಗೆ ಎಷ್ಟು ಅಡಿಕ್ಟ್ ಆಗಿದ್ದೇವೆಂದ್ರೆ ಅದಿಲ್ಲದೆ ನಾವಿರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ನಮ್ಮವರನ್ನು ಬಿಟ್ಟು ನಾವು ಒಂದು ದಿನವಾದ್ರೂ ಇದ್ದುಬಿಟ್ಟೇವು ಆದ್ರೆ ಮೊಬೈಲ್ ಫೋನ್ ಇಲ್ಲದೆ ಒಂದು ನಿಮಿಷ ಇರಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸದಾ ನಮ್ಮ ಕೈನಲ್ಲಿ ಮೊಬೈಲ್ ಇರಬೇಕು. ಎಲ್ಲೋ ಮರೆತ್ರೆ ಜೀವಹೋದಂತೆ ಆಡ್ತೇವೆ. ಅರ್ಧ ಗಂಟೆಗೊಮ್ಮೆ, ಕಾಲು ಗಂಟೆಗೊಮ್ಮೆ ಸಾಮಾಜಿಕ ಜಾಲತಾಣಗಳನ್ನು ಚೆಕ್ ಮಾಡ್ಬೇಕು. ಇದು ನಮಗೆ ತಿಳಿಯದೇ ನಮ್ಮ ಹವ್ಯಾಸವಾಗಿ ಬಿಟ್ಟಿದೆ.
ಕೆಲಸದ ಮಧ್ಯೆ ಮೊಬೈಲ್ (Mobile) ನೋಡಲು ಸಮಯ ಸಿಗ್ತಿಲ್ಲ ಎನ್ನುವವರಿಗೆ ಊಟ, ಆಹಾರ ಸೇವನೆ ಸಮಯ ಇದಕ್ಕೆ ಫಿಕ್ಸ್ ಆಗಿದೆ. ಬೆಳಿಗ್ಗೆ ಉಪಹಾರ ಸೇವನೆ ಮಾಡುವಾಗ, ಮಧ್ಯಾಹ್ನ ಊಟದ ವೇಳೆ, ಸಂಜೆ ಊಟದ ವೇಳೆ ಒಂದು ಕೈನಲ್ಲಿ ಮೊಬೈಲ್ ಇರಲೇಬೇಕು. ಅನೇಕರಿಗೆ ಮೊಬೈಲ್ ಕೈನಲ್ಲಿ ಇಲ್ಲವೆಂದ್ರೆ ಊಟ ಸೇರೋದಿಲ್ಲ. ದೊಡ್ಡವರು ಮಾತ್ರವಲ್ಲ ಮಕ್ಕಳಿಗೂ ಮೊಬೈಲ್ ನೋಡ್ತಾ ಊಟ ಮಾಡೋದು ಅಭ್ಯಾಸವಾಗಿದೆ. ಮಕ್ಕಳು (Children) ಊಟ ಮಾಡಲ್ಲ ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಿ ಬಾಯಿಗೆ ಆಹಾರ ತುರುಕುತ್ತಾರೆ. ಆದ್ರೆ ಮಕ್ಕಳ ಆರೋಗ್ಯ (Health ) ಸುಧಾರಿಸಲು ನಾವು ನೀಡುವ ಈ ಆಹಾರವನ್ನು ಮಕ್ಕಳು ಮೊಬೈಲ್ ನೋಡ್ತಾ ಸೇವನೆ ಮಾಡಿದ್ರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುತ್ತಾರೆ ತಜ್ಞರು. ಮೊಬೈಲ್ ನೋಡ್ತಾ ಆಹಾರ ಸೇವನೆ ಮಾಡೋದ್ರಿಂದ ನಾನಾ ರೋಗಗಳು ನಮ್ಮನ್ನು ಅಂಟಿಕೊಳ್ಳುತ್ತವೆ.
ಕಿಡ್ನಿ ಸ್ಟೋನ್‌ನಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತಾ?
ಬೊಜ್ಜು (Obesity) : ಆಹಾರ ಸೇವನೆ ಮಾಡುವಾಗ ನಮ್ಮ ಗಮನವೆಲ್ಲ ಮೊಬೈಲ್ ಮೇಲಿರುತ್ತದೆ. ನಾವೆಷ್ಟು ಆಹಾರ ಸೇವನೆ ಮಾಡಿದ್ದೇವೆ, ನಮ್ಮ ಹೊಟ್ಟೆ ತುಂಬಿದ್ಯಾ ಎನ್ನುವುದನ್ನು ಕೂಡ ನಾವು ಗಮನಿಸಿರೋದಿಲ್ಲ. ಒಂದಾದ್ಮೇಲೆ ಒಂದರಂತೆ ಆಹಾರ ಹೊಟ್ಟೆಗೆ ಹೋಗುವ ಕಾರಣ ಹಸಿವುಗಿಂತ ಹೆಚ್ಚಿನ ಆಹಾರವನ್ನು ನಾವು ತಿಂದಿರುತ್ತೇವೆ. ಅತಿಯಾದ ಸೇವನೆ ಬೊಜ್ಜಿಗೆ ಕಾರಣವಾಗುತ್ತದೆ. ನೀವು ರಾತ್ರಿ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ತೆಗೆದುಕೊಂಡ್ರೆ ಸ್ಥೂಲಕಾಯದ ಅಪಾಯ ಎರಡುಪಟ್ಟು ಹೆಚ್ಚಿರುತ್ತದೆ. ಬೊಜ್ಜಿನಿಂದ ನಾನಾ ಖಾಯಿಲೆ ನಿಮ್ಮನ್ನು ಸುತ್ತಿಕೊಳ್ಳುತ್ತದೆ. ಮಕ್ಕಳಿಗೂ ಸ್ಥೂಲಕಾಯ ಕಾಡಲು ಇದು ಒಂದು ಕಾರಣ. ಮಕ್ಕಳು ಕೂಡ ಮೊಬೈಲ್ ನಲ್ಲಿ ಮುಳುಗಿ ಹೋಗಿರುವ ಕಾರಣ, ಪಾಲಕರು ಎಷ್ಟು ಊಟ ತಿನ್ನಿಸಿದ್ದಾರೆ ಎಂಬ ಲಕ್ಷ್ಯ ಅವರಿಗಿರೋದಿಲ್ಲ. ಮಕ್ಕಳು ತಿನ್ನುತ್ತಿದ್ದಾರಲ್ಲ ಎನ್ನುವ ಖುಷಿಯಲ್ಲಿ ಪಾಲಕರು ಬಾಯಿಗೆ ಹಾಕ್ತಿರುತ್ತಾರೆ. ಆದ್ರೆ ಅದ್ರ ಪರಿಣಾಮ ನಂತ್ರ ಗೋಚರಿಸುತ್ತದೆ.
ಭಾವನಾತ್ಮಕ ಪ್ರಬುದ್ಧತೆ ಹೆಚ್ಬೇಕಾ? ಕೊರಿಯನ್ ಪದ್ಧತಿ ನುಂಚಿ ಟಿಪ್ಸ್ ಫಾಲೋ ಮಾಡಿ
ಜೀರ್ಣಾಂಗ ವ್ಯವಸ್ಥೆ ಮೇಲೆ ಅಡ್ಡಪರಿಣಾಮ (Side Effect on Digestive System): ಮೊಬೈಲ್ ನೋಡ್ತಾ ನಾವು ಆಹಾರ ಸೇವನೆ ಮಾಡಿದಾಗ ಅದನ್ನು ಜಗಿದು ನುಂಗುವ ಪ್ರಯತ್ನಕ್ಕೆ ಹೋಗುವುದಿಲ್ಲ. ಅದನ್ನು ಹಾಗೆಯೇ ನುಂಗಿರ್ತೇವೆ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಸೇವನೆ ಮಾಡಿದ ಆಹಾರ ಸರಿಯಾಗಿ ಜೀರ್ಣವಾಗಿಲ್ಲವೆಂದ್ರೆ ಹೊಟ್ಟೆ ನೋವು, ಮಲಬದ್ಧತೆ ನಿಮ್ಮನ್ನು ಕಾಡುತ್ತದೆ. ಪ್ರತಿ ಬಾರಿ ಆಹಾರ ಸೇವನೆ ಮಾಡುವಾಗ್ಲೂ ನಾವು ಆಹಾರವನ್ನು ಜಗಿದು ನುಂಗುವುದು ಬಹಳ ಮುಖ್ಯ.
ಮಧುಮೇಹ ಸಮಸ್ಯೆ (Dieabetic Issues): ನಮ್ಮ ಗಮನವನ್ನು ಮೊಬೈಲ್ ಮೇಲಿಟ್ಟು ಆಹಾರ ಸೇವನೆ ಮಾಡಿದ್ರೆ ಮೇಲೆ ಹೇಳಿದಂತೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ಅದ್ರ ಜೊತೆ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇವೆರಡೂ ಮಧುಮೇಹಕ್ಕೆ ದಾರಿಮಾಡಿ ಕೊಡುತ್ತದೆ. ನೀವು ಮಧುಮೇಹದಂತಹ ಖಾಯಿಲೆಯಿಂದ ದೂರ ಇರಬೇಕೆಂದ್ರೆ ಯಾವುದೇ ಕಾರಣಕ್ಕೂ ಮೊಬೈಲ್ ನೋಡ್ತಾ ಆಹಾರ ಸೇವನೆ ಮಾಡುವ ಸಹವಾಸ ಮಾಡ್ಬೇಡಿ.
ಆಹಾರವನ್ನು ಯಾವಾಗ್ಲೂ ನೆಲದ ಮೇಲೆ ಕುಳಿತು, ಶಾಂತವಾಗಿ, ಆಹಾರದ ರುಚಿಯನ್ನು ಸವಿಯುತ್ತಾ ಸೇವನೆ ಮಾಡ್ಬೇಕು. ಇದ್ರಿಂದ ಸಾಕಷ್ಟು ಲಾಭವಿದೆ.