Asianet Suvarna News Asianet Suvarna News

Health Care: ತೂಕ ಇಳಿಬೇಕಂತ ಸಿಕ್ಕಾಪಟ್ಟೆ ಗ್ರೀನ್ ಟೀ ಕುಡಿಬೇಡಿ

ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಒಳ್ಳೆದು ಅಂತಾ ಬೇಕಾಬಿಟ್ಟಿ ಸೇವನೆ ಮಾಡಿದ್ರೆ ಆರೋಗ್ಯ ಹದಗೆಡುತ್ತೆ. ಗ್ರೀನ್ ಟೀ ವಿಷ್ಯದಲ್ಲೂ ಇದು ಸತ್ಯ. ದಿನಕ್ಕೆ ಎಷ್ಟು ಕಪ್ ಗ್ರೀನ್ ಟೀ ಒಳ್ಳೆದು ಅಂತಾ ಕುಡಿಯೋ ಮೊದಲು ತಿಳಿದ್ಕೊಳ್ಳಿ.
 

Green Tea Disadvantages
Author
First Published Oct 19, 2022, 4:57 PM IST

ಫಿಟ್ ಆಗಿರಬೇಕು.. ಇದು ಎಲ್ಲರ ಕನಸು. ಫಿಟ್ನೆಸ್ ಮೆಂಟೇನ್ ಮಾಡೋಕೆ ಏನೆಲ್ಲ ಕಸರತ್ತು ಮಾಡ್ತಾರೆ. ಆಹಾರದಲ್ಲಿ ಬದಲಾವಣೆ, ಜೀವನ ಶೈಲಿಯಲ್ಲಿ ಬದಲಾವಣೆ, ಜಿಮ್, ವ್ಯಾಯಾಮ ಹೀಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಿ, ಫಿಟ್ನೆಸ್ ಕಾಪಾಡಿಕೊಳ್ತಾರೆ. ಈ ಫಿಟ್ನೆಸ್ ವಿಷ್ಯ ಬಂದಾಗ ಮೊದಲು ನೆನಪಾಗೋದು ಗ್ರೀನ್ ಟೀ. ಕೋಲ್ಡ್ ಡ್ರಿಂಕ್ಸ್, ಟೀ, ಕಾಫಿ ಬಿಟ್ಟು ಜನರು ಗ್ರೀನ್ ಟೀ ಸೇವನೆ ಮಾಡ್ತಾರೆ. ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಬೆಸ್ಟ್. ಗ್ರೀನ್ ಟೀನಿಂದ ಸಾಕಷ್ಟು ಪ್ರಯೋಜನವಿದೆ. ಇದು ಬೊಜ್ಜು ಕಡಿಮೆ ಮಾಡುವುದು ಮಾತ್ರವಲ್ಲ ನಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. 

ಗ್ರೀನ್ ಟೀ (Green Tea) ಸೇವನೆ ಮಾಡೋದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೀರ್ಣಕ್ರಿಯೆ (Digestion) ಸುಧಾರಿಸುತ್ತದೆ. ಗ್ರೀನ್ ಟೀನಿಂದ ಪ್ರಯೋಜನವಿದೆ ಎಂಬುದು ತಿಳಿಯುತ್ತಿದ್ದಂತೆ ಜನರು ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲು ಶುರು ಮಾಡಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ, ಕಚೇರಿಗೆ ಹೋಗುವ ಸಮಯದಲ್ಲಿ ಒಮ್ಮೆ, ಕಚೇರಿಯಲ್ಲಿ ರಿಲ್ಯಾಕ್ಸ್ (Relax) ಆಗ್ಬೇಕು ಎಂದಾಗೆಲ್ಲ ಒಂದು ಕಪ್ ಗ್ರೀನ್ ಟೀ ಕುಡಿಯೋದು ಅನೇಕರಿಗೆ ಚಟವಾಗಿದೆ. ಕೆಲವರು ಊಟ ಮಾಡಿದ ತಕ್ಷಣ ಗ್ರೀನ್ ಟೀ ಕುಡಿಯುತ್ತಾರೆ. ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದ್ರೆ ಯಾವುದು ಅತಿಯಾದ್ರೂ ಅಪಾಯ ನಿಶ್ಚಿತ. ಗ್ರೀನ್ ಟೀಯನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯೋದ್ರಿಂದಲೂ ನಮ್ಮ ದೇಹಕ್ಕೆ ಹಾನಿಯಾಗುತ್ತದೆ. ಗ್ರೀನ್ ಟೀ ಸೇವನೆ ಹೇಗೆ ಮಾಡ್ಬೇಕು ಹಾಗೆ ಹೆಚ್ಚು ಗ್ರೀನ್ ಟೀ ಸೇವನೆ ಮಾಡಿದ್ರೆ ಏನೆಲ್ಲ ನಷ್ಟವಿದೆ ಎಂಬುದು ಇಲ್ಲಿದೆ.

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಬೇಡ : ಅನೇಕರ ದಿನ ಆರಂಭವಾಗುವುದು ಗ್ರೀನ್ ಟೀ ನಿಂದ. ಯಸ್, ಬೆಡ್ ಟೀ ಅಥವಾ ಬೆಡ್  ಕಾಫಿಯಂತೆ ಕೆಲವರು ಬೆಡ್ ಗ್ರೀನ್ ಟೀ ಕುಡಿತಾರೆ. ಆದ್ರೆ  ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಬೆಳಿಗ್ಗೆ ಇರಲಿ ಇಲ್ಲ ಬೇರೆ ಯಾವುದೇ ಸಮಯವಿರಲಿ, ಮೊದಲು ಆಹಾರ ಸೇವನೆ ಮಾಡಿ, ಆಹಾರ ತಿಂದ 1 ಗಂಟೆಯ ನಂತರ ಮಾತ್ರ ಗ್ರೀನ್ ಟೀ ಕುಡಿಯಿರಿ.

ದಿನಕ್ಕೊಂದು ಕಪ್ ಗ್ರೀನ್ ಟೀ ಸಾಕು : ಗ್ರೀನ್ ಟೀ ಸೇವನೆ ಮಾಡಿದ್ರೆ ತೂಕ ಇಳಿಯುತ್ತೆ ಅಂತಾ ದಿನಕ್ಕೆ ನಾಲ್ಕೈದು ಕಪ್ ಗ್ರೀನ್ ಟೀ ಸೇವನೆ ಒಳ್ಳೆಯದಲ್ಲ. ಒಂದು ಕಪ್ ಗ್ರೀನ್ ಟೀನಲ್ಲಿ 24-25 ಮಿಗ್ರಾಂ ಕೆಫೀನ್ ಇರುತ್ತದೆ. ದಿನಕ್ಕೆ 4-5 ಕಪ್ ಗ್ರೀನ್ ಟೀ ಕುಡಿಯುತ್ತಿದ್ದರೆ ಅದು ದೇಹದಲ್ಲಿ ಕೆಫೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕೆಫೀನ್ ಸೇವನೆ  ಭಯ,ಎದೆಯುರಿ, ತಲೆಸುತ್ತ, ಮಧುಮೇಹ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು.

ಊಟದ ಜೊತೆ ಗ್ರೀನ್ ಟೀ  ಬೇಡ :  ಗ್ರೀನ್ ಟೀಯನ್ನು ಟೀ ಯಂತೆ ಅನೇಕರು ಆಹಾರದ ಜೊತೆ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಊಟದ ಜೊತೆಯಲ್ಲೇ ಗ್ರೀನ್ ಟೀ ಕುಡಿಯುತ್ತಾರೆ. ಇವೆರಡೂ ತಪ್ಪು. ಎರಡು ಊಟದ ಮಧ್ಯೆ ನೀವು ಗ್ರೀನ್ ಟೀ ಸೇವನೆ ಮಾಡಬಹುದು. ಗ್ರೀನ್ ಟೀನಲ್ಲಿ ಕ್ಯಾಟೆಚಿನ್‌ ಇರುತ್ತದೆ. ಇದು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿ ಮಾಡುತ್ತದೆ. ಹೆಚ್ಚು ಗ್ರೀನ್ ಟೀ ಸೇವನೆ ಮಾಡುವುದ್ರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.  

ಹೆಪ್ಪುಗಟ್ಟಿಸಿದ Breast Milkಗೆ ಹೆಚ್ಚಿದೆ ಡಿಮ್ಯಾಂಡ್

ಗ್ರೀನ್ ಟೀನಿಂದ ಗರ್ಭಿಣಿಯರು ದೂರವಿರಿ : ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ. ಹಾಗೆಯೇ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಗರ್ಭಿಣಿಯರು ಯಾವುದೇ ಕಾರಣಕ್ಕೂ ಗ್ರೀನ್ ಟೀ ಸೇವನೆ ಮಾಡಬಾರದು. ಹೆಚ್ಚು ಗ್ರೀನ್ ಟೀ ಕುಡಿಯುವುದರಿಂದ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ. ಹೆರಿಗೆ ನಂತ್ರ ಗ್ರೀನ್ ಟೀ ಸೇವನೆ ಮಾಡಿದ್ರೆ ಕೆಫೀನ್, ಹಾಲಿನ ಮೂಲಕ ಮಗುವಿನ ದೇಹ ಸೇರುತ್ತದೆ. ಇದ್ರಿಂದ ಮಗುವಿನ ಆರೋಗ್ಯ, ಬೆಳವಣಿಗೆಯಲ್ಲಿ ಏರುಪೇರಾಗುತ್ತದೆ. 

Protein Food: ಪ್ರೊಟೀನ್ ಭರಿತ ಸಪ್ಲಿಮೆಂಟ್ಸ್ ನಲ್ಲಿ ನಿಜಕ್ಕೂ ಪ್ರೊಟೀನ್ ಎಷ್ಟಿದೆ?

ಗ್ರೀನ್ ಯಾವಾಗ ಕುಡಿಯಬೇಕು ? : ದಿನಕ್ಕೆ ಮೂರ್ನಾಲ್ಕು ಬಾರಿ ಗ್ರೀನ್ ಟೀ ಸೇವನೆ ಒಳ್ಳೆಯದಲ್ಲ. ದಿನಕ್ಕೆ ಒಂದೇ ಬಾರಿ ಗ್ರೀನ್ ಟೀ ಅಭ್ಯಾಸ ಮಾಡಿಕೊಳ್ಳಿ. ನೀವು ಬೆಳಿಗ್ಗೆ ಆಹಾರ ಸೇವನೆ ಮಾಡಿದ ನಂತ್ರ ಸುಮಾರು 10ರಿಂದ 11 ಗಂಟೆ ಸಮಯದಲ್ಲಿ ಗ್ರೀನ್ ಟೀ ಕುಡಿಯಬಹುದು. ಇಲ್ಲವೆ ಸಂಜೆ 5 – 6 ಗಂಟೆಯ ಸಮಯದಲ್ಲಿ ಕುಡಿಯಬಹುದು. ರಾತ್ರಿ ಮಲಗುವಾಗ ಅಥವಾ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಬೇಡ.
 

Follow Us:
Download App:
  • android
  • ios