Aati Amavasya 2023: ತುಳುನಾಡಿನಲ್ಲಿ ಆಟಿ ಕಷಾಯ ಕುಡಿಯುವ ದಿನ, ಏನಿದು ಪಾಲೆದ ಕಷಾಯ?
ಆಷಾಢ ಅಮವಾಸ್ಯೆಯಲ್ಲಿ ಕಹಿ ಕುಡಿಯುವ ಪದ್ಧತಿಯೊಂದು ಇಂದಿಗೂ ಚಾಲ್ತಿಯಲ್ಲಿದೆ. ಜೊತೆಗೆ ಇದೇ ದಿನ ಕರಾವಳಿಯ ಮೊದಲ ಜಾತ್ರೆ ನಡೆಯೋದು ವಿಶೇಷ.
ಉಡುಪಿ (ಜು.17): ಈಗ ಮಳೆಗಾಲ, ಕರಾವಳಿಯ ಜಡಿಮಳೆಗೆ ನಾನಾ ಬಗೆಯ ಸೋಂಕುಗಳು ಬಾಧಿಸುವ ಅಪಾಯ ಹೆಚ್ಚು. ಇದನ್ನು ಮನಗಂಡ ನಮ್ಮ ಪೂರ್ವಿಕರು ವಿಶಿಷ್ಟ ಆಚರಣೆಯೊಂದನ್ನು ಚಾಲ್ತಿಗೆ ತಂದಿದ್ದರು. ಆಷಾಢ ಅಮವಾಸ್ಯೆಯಲ್ಲಿ ಕಹಿ ಕುಡಿಯುವ ಪದ್ಧತಿಯೊಂದು ಇಂದಿಗೂ ಚಾಲ್ತಿಯಲ್ಲಿದೆ. ಜೊತೆಗೆ ಇದೇ ದಿನ ಕರಾವಳಿಯ ಮೊದಲ ಜಾತ್ರೆ ನಡೆಯೋದು ವಿಶೇಷ.
ತುಳುನಾಡಿನಲ್ಲಿ ಪಾಲೆಯ ಮರವನ್ನು ಕೆತ್ತಿ ಕಷಾಯ ಮಾಡಿ ಕುಡಿಯುವ ಆಚರಣೆ ಚಾಲ್ತಿಯಲ್ಲಿದೆ. ಆಷಾಢದ ಮಳೆಗೆ ಕರಾವಳಿಯ ಜನ ಹೈರಾಣಾಗಿ ಬಿಡ್ತಾರೆ. ಸಾಂಕ್ರಾಮಿಕ ಖಾಯಿಲೆಗಳ ಬಾಧೆಯೂ ಹೆಚ್ಚು .ಯಾವುದೇ ಸೋಂಕುಗಳು ಬಾಧಿಸದಂತೆ ದೇಹವನ್ನು ರೋಗ ನಿರೋಧಕವಾಗಿಸಲು ಆಟಿಯ ಅಮವಾಸ್ಯೆ ಸೂಕ್ತ ದಿನ ಎಂದು ನಮ್ಮ ಪೂರ್ವಿಕರು ನಿರ್ಧರಿಸಿದ್ದರು. ಹಾಗಂತಲೇ ಆಚರಣೆಯೊಂದನ್ನು ಚಾಲ್ತಿಗೆ ತಂದಿದ್ದರು.
Ginger Price Hike: ಶುಂಠಿ ಬೆಳೆದ ರೈತ ರಾತ್ರೋ ರಾತ್ರಿ ಕುಬೇರ!
ಈ ದಿನ ಸೂರ್ಯೋದಯಕ್ಕೂ ಮುನ್ನ ಮನೆಯ ಪುರುಷರು ಎದ್ದೇಳಬೇಕು. ಮೊದಲೇ ಗುರುತಿಸಿಟ್ಟ ಪಾಲೆ ಮರದ ತೊಗಟೆಯನ್ನು ಕೆತ್ತಿ ತೆಗೆಯಬೇಕು. ಅದೂ ಕೂಡ ಯಾವುದೇ ಲೋಹ ಸ್ಪರ್ಶ ಮಾಡದೆ ಕಲ್ಲಿನಿಂದಲೇ ಜಜ್ಜಿ ತೊಗಟೆ ತೆಗೆಯೋದು ಪದ್ಧತಿ. ಆಟಿ ಅಮವಾಸ್ಯೆಯಂದು ಪಾಲೆಕೆತ್ತೆಯಲ್ಲಿ (ಪಾಲೆದ ಕಷಾಯ) ಔಷಧೀಯ ಗುಣಗಳು ಸನ್ನಿಹಿತವಾಗಿರುತ್ತೆ ಅನ್ನೋದು ನಂಬಿಕೆ.
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಗೊತ್ತಾ? ಬೆಳಕು ಹರಿಯುವ ಮುನ್ನ ತೊಗಟೆ ತೆಗೆಯಲು ಪುರುಷರು ಬೆತ್ತಲೆಯಾಗಿ ಹೋಗುವ ಕ್ರಮವಿತ್ತಂತೆ. ಯಾಕಂದ್ರೆ ಬೆತ್ತಲೆ ದೇಹದ ಮುಂದೆ ಯಾವುದೇ ಪ್ರೇತಪಿಶಾಚಿಗಳು ನಿಲ್ಲಲ್ಲ ಅನ್ನೋದು ತುಳುವರ ವಿಶ್ವಾಸ. ಈಗೆಲ್ಲಾ ಬಟ್ಟೆ ಧರಿಸಯೇ ಹೋಗುತ್ತಾರೆ. ಆದರೆ ಮೂಲ ಸಂಪ್ರದಾಯಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಕಿತ್ತು ತಂದ ತೊಗಟೆಯನ್ನು ಜಜ್ಜಿ, ಅದಕ್ಕೆ ಓಮ, ಮಜ್ಜಿಗೆ, ಬೆಳ್ಳುಳ್ಳಿ ಹಾಕಿ ಕಷಾಯವನ್ನು ತಯಾರಿಸುತ್ತಾರೆ. ಈ ಕಷಾಯಕ್ಕೆ ಬೆಣಚುಕಲ್ಲಿನ ಮೂಲಕ ಒಗ್ಗರಣೆ ಕೊಟ್ಟು ಕುಡಿಯೋದು ಕ್ರಮ.
ಇನ್ಫೋಸಿಸ್ ಬಳಿಕ ಉದ್ಯೋಗಿಗಳಿಗೆ ವೇತನ ಹೆಚ್ಚಿಸದೆ ಸೈಲೆಂಟಾದ ಟೆಕ್ ದೈತ್ಯ ವಿಪ್ರೋ
ಪಾಲೆ ಕೆತ್ತೆಯ ಕಷಾಯ ಉಷ್ಣ ಕಾರಕ, ಹಾಗಾಗಿ ದೇಹ ತಂಪಾಗಿಡಲು ಕಷಾಯ ಕುಡಿದ ಬಳಿಕ ಮೆಂತ್ಯೆಯ ಸಿಹಿ ಗಂಜಿ ಉಣ್ಣಲಾಗುತ್ತೆ, ಇದರಿಂದ ನಾಲಿಗೆಗೂ ರುಚಿ, ದೇಹಕ್ಕೂ ಸೌಖ್ಯ.
ಆಷಾಡ ಅಮವಾಸ್ಯೆಯ ದಿನವೇ ಕರಾವಳಿಯ ಮೊದಲ ಜಾತ್ರೆ ನಡೆಯುತ್ತೆ. ಕುಂದಾಪುರ ತಾಲೂಕಿನ ಮರವಂತೆಯಲ್ಲಿರುವ ವರಾಹಮೂರ್ತಿ ದೇವಸ್ಥಾನದಲ್ಲಿ ಪುಣ್ಯಸ್ನಾನ ಕೈಗೊಳ್ಳಲು ಜನ ಮುಗಿಬೀಳುತ್ತಾರೆ. ಸೌಪರ್ಣಿಕಾ ನದಿ ಮತ್ತು ಅರಬ್ಬೀ ಸಮುದ್ರ ಎರಡೂ ಈ ಕ್ಷೇತ್ರದಲ್ಲಿ ಸನ್ನಿಹಿತವಾಗಿದೆ. ಸಮುದ್ರ ಮತ್ತು ನದಿಯಲ್ಲಿ ಜನರು ಆಷಾಢದ ಪುಣ್ಯಸ್ನಾನ ಕೈಗೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಸಿದ ನಂತರ ಮೀನುಗಾರರು ಈ ಋತುವಿನ ಮೊದಲ ಮೀನು ಭೇಟೆಗೆ ಕಡಲಿಗಿಳಿಯೋದು ಪದ್ಧತಿ.