ಪ್ರತಿಯೊಬ್ಬ ತಂದೆಯೂ ತನ್ನ ಆರೋಗ್ಯಕ್ಕಿಂತ ಕುಟುಂಬದ ಅಗತ್ಯ ಪೂರೈಸುವುದಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಅವರ ಹೃದಯದ ಮಾತು ಅವರು ಕೇಳುವುದಿಲ್ಲ. ಆದರೆ ಮಕ್ಕಳು ಕೇಳಬೇಕು.

ಇಂದು ಅಪ್ಪಂದಿರ ದಿನ. ಈ ದಿನ ಬಹಳಷ್ಟು ಮಂದಿ ತಮ್ಮ ಅಪ್ಪನಿಗೆ ಏನು ಉಡುಗೊರೆ ಕೊಡಬಹುದು ಎಂದು ಯೋಚಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಅವರ ಆರೋಗ್ಯವನ್ನು ನೋಡಿಕೊಳ್ಳುವುದೇ ಯಾವುದೇ ಮಕ್ಕಳು ಕೊಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ಅವರು ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ.

ಅದರಲ್ಲೂ ಮುಖ್ಯವಾಗಿ ಅಪ್ಪನ ಹೃದಯವನ್ನು ಜೋಪಾನವಾಗಿ ನೋಡಿಕೊಳ್ಳಬೇಕಿದೆ. ಈ ಕಾಲದಲ್ಲಿ ಕೆಲಸದ ಒತ್ತಡ, ಇತರ ಒತ್ತಡಗಳು ಮತ್ತು ಜೀವನಶೈಲಿ ಹೃದಯದ ಮೇಲೆ ಪರಿಣಾಮ ಬೀರುವುದು ಜಾಸ್ತಿಯಾಗುತ್ತಿದೆ. ಹೇಳಿಕೇಳಿ ಪ್ರತಿಯೊಬ್ಬ ತಂದೆಯೂ ತನ್ನ ಆರೋಗ್ಯಕ್ಕಿಂತ ಕುಟುಂಬದ ಅಗತ್ಯ ಪೂರೈಸುವುದಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಅವರ ಹೃದಯದ ಮಾತು ಅವರು ಕೇಳುವುದಿಲ್ಲ. ಆದರೆ ಮಕ್ಕಳು ಕೇಳಬೇಕು. ಅಪ್ಪನ ಹೃದಯವನ್ನು ಜೋಪಾನವಾಗಿ ನೋಡಿಕೊಳ್ಳಬೇಕು.

ಒತ್ತಡ ತಂದೊಡ್ಡುವ ಕಷ್ಟಗಳು
ತಂದೆಯರು ನೋಡಲು ಶಾಂತವಾಗಿದ್ದರೂ ಅವರ ಮೇಲೆ ಅಗಾಧ ಪ್ರಮಾಣದ ಒತ್ತಡ ಇರುತ್ತದೆ. ಕೆಲಸದ ಗಡುವು, ಆರ್ಥಿಕ ಜವಾಬ್ದಾರಿಗಳು, ಕುಟುಂಬದ ಕಾಳಜಿ ಜೊತೆಗೆ ದಿನನಿತ್ಯದ ಒತ್ತಡ ಅವರ ಹೃದಯಕ್ಕೆ ಸೈಲೆಂಟಾಗಿ ತೊಂದರೆ ಉಂಟು ಮಾಡಬಹುದಾಗಿದೆ. ವೈಜ್ಞಾನಿಕ ಅಧ್ಯಯನಗಳು ಹೇಳುವ ಪ್ರಕಾರ ದೀರ್ಘಕಾಲ ಒತ್ತಡವನ್ನು ಅನುಭವಿಸುತ್ತಿದ್ದರೆ ಆಡ್ರಿನಾಲಿನ್ ಮತ್ತು ಕಾರ್ಟಿಸೋಲ್‌ನಂತಹ ಹಾರ್ಮೋನ್‌ಗಳು ಬಿಡುಗಡೆಗೆಯಾಗುತ್ತವೆ. ಅದರಿಂದ ರಕ್ತದೊತ್ತಡ ಏರುವುದು, ಹೃದಯ ಬಡಿತ ಜಾಸ್ತಿಯಾಗುವುದು, ರಕ್ತನಾಳಗಳು ಕಿರಿದಾಗುವುದು ಇತ್ಯಾದಿ ಉಂಟಾಗುತ್ತದೆ. ಕಾಲಾಂತರದಲ್ಲಿ ಇದರಿಂದ ಧಮನಿಗಳಲ್ಲಿ ಕೊಲೆಸ್ಟರಾಲ್‌ನ ಸಂಗ್ರಹ ಆಗಬಹುದಾಗಿದ್ದು, ಅದರಿಂದ ಹೃದಯಾಘಾತ ಅಥವಾ ಸ್ಟ್ರೋಕ್‌ ಉಂಟಾಗುವ ಸಾಧ್ಯತೆ ಜಾಸ್ತಿಯಾಗುತ್ತದೆ. ಹಾಗಾಗಿ ಒತ್ತಡ ತಂದೆಯಂದಿರು ಕುಟುಂಬದ ಭಾರವನ್ನು ಹೊತ್ತಿರುವವರು. ಅವರಿಗೆ ದಿನನಿತ್ಯದ ಭಾವನಾತ್ಮಕ ಒತ್ತಡಗಳು ಕೇವಲ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ಪರಿಣಾಮ ಬೀರುತ್ತವೆ. ಹಾಗಾಗಿ ಒತ್ತಡವನ್ನು ನಿರ್ಲಕ್ಷಿಸಬಾರದು. ದೈನಂದಿನ ಒತ್ತಡಗಳ ಕುರಿತು ಗಮನ ನೀಡಬೇಕು. ಅಪ್ಪನ ಒತ್ತಡ ಕಡಿಮೆ ಮಾಡಲು ಏನೇನು ಮಾಡಬಹುದೋ ಅದನ್ನು ಮಾಡಬೇಕು.

ಗಮನಿಸಬೇಕಾದ ಲಕ್ಷಣಗಳು
ಹೃದಯಾಘಾತ ಎಂದರೆ ಬಹಳಷ್ಟು ಮಂದಿ ತೀವ್ರ ಎದೆನೋವು ಎಂದೇ ಕಲ್ಪಿಸಿಕೊಳ್ಳುತ್ತಾರೆ. ಆದರೆ ತೀವ್ರವಾದ ಎದೆನೋವು, ತೋಳು, ಕತ್ತು ಅಥವಾ ದವಡೆಯ ನೋವು ಇತ್ಯಾದಿಗಳಷ್ಟೇ ಹೃದಯಾಘಾತದ ಲಕ್ಷಣಗಳಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಈ ಲಕ್ಷಣಗಳು ಸೂಕ್ಷ್ಮವಾಗಿರುತ್ತವೆ ಮತ್ತು ಸುಲಭವಾಗಿ ನಿರ್ಲಕ್ಷಿಸುವಂಥದ್ದಾಗಿರುತ್ತವೆ. ಹಾಗಾಗಿ ಈ ಕೆಳಗಿನ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

ದೀರ್ಘ ಕಾಲದ ಎದೆ ನೋವು, ಒತ್ತಡ ಅಥವಾ ಎದೆಯ ಎಲುಬಿನಲ್ಲಿ ಒತ್ತಡ ಬೀಳುತ್ತಿರುವ ಭಾವನೆ ಉಂಟಾದರೆ ಅದನ್ನು ನಿರ್ಲಕ್ಷಿಸಬಾರದು. ಲಘು ಊಟದ ಬಳಿಕವೂ ಹೊಟ್ಟೆ ತುಂಬಿರುವ ಭಾವನೆ, ನಿರಂತರ ಆಸಿಡಿಟಿ, ಸುಖಾಸುಮ್ಮನೆ ವಾಕರಿಕೆ, ಅಥವಾ ಸಣ್ಣ ನಡಿಗೆ ಮತ್ತಿತ್ಯಾದಿ ಸರಳ ಚಟುವಟಿಕೆಗಳ ಸಮಯದಲ್ಲಿಯೂ ಹೆಚ್ಚು ಆಯಾಸ ಉಂಟಾಗುವುದು ಇವೆಲ್ಲವೂ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗಿರುವುದರ ಸಂಕೇತವಾಗಿರಬಹುದು.

ಪುರುಷರು ಸಾಮಾನ್ಯವಾಗಿ ಇಂತಹ ಚಿಹ್ನೆಗಳನ್ನು ಗ್ಯಾಸ್, ನಿದ್ರೆ ಸರಿಯಾಗಿಲ್ಲ, ಅಜೀರ್ಣ ಅಥವಾ ವಯಸ್ಸಿನ ಕಾರಣಕ್ಕೆ ಉಂಟಾದ ಆಯಾಸ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಈ ಲಕ್ಷಣಗಳನ್ನು ಬೇಗ ಗುರುತಿಸಿದರೆ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ. ಈ ತರದ ಲಕ್ಷಣಗಳನ್ನು ಗಮನಿಸಿದಾಗ ತಕ್ಷಣ ಕುಟುಂಬದವರೊಂದಿಗೆ ಮಾತನಾಡಿ ಮತ್ತು ವೈದ್ಯರನ್ನು ಭೇಟಿಯಾಗಿ.

ಹೃದಯದ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಕೆಲವು ಸಲಹೆಗಳು
1. ಪ್ರತಿದಿನ ವ್ಯಾಯಾಮ ಮಾಡಿ
ವಾರಕ್ಕೆ ಕನಿಷ್ಠ 150 ನಿಮಿಷಗಳಷ್ಟು ಜಾಸ್ತಿ ತೀವ್ರವಲ್ಲದ ವ್ಯಾಯಾಮಗಳನ್ನು ಮಾಡಿ. ವೇಗವಾಗಿ ನಡೆಯುವುದು, ಸೈಕ್ಲಿಂಗ್, ಈಜು, ಅಥವಾ ಮಕ್ಕಳೊಂದಿಗೆ ಆಟ ಮುಂತಾದ ಚಟುವಟಿಕೆಗಳು ಮಾಡುತ್ತಾ ಹೃದಯವನ್ನು ಬಲಪಡಿಸಿಕೊಳ್ಳಬಹುದು. ವ್ಯಾಯಾಮವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆಗೊಳಿಸುತ್ತವೆ. ದಿನವಿಡೀ ಮಾಡುವ ಸಣ್ಣ ಸಣ್ಣ ಚಟುವಟಿಕೆಗಳೂ ಸಹ ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ.

2. ಹೃದಯಕ್ಕೆ ಪ್ರಯೋಜನಕಾರಿಯಾದ ಆಹಾರ ಸೇವಿಸಿ
ಧಾನ್ಯಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಬೀಜಗಳು, ಕಾಳುಗಳು, ಆಲಿವ್ ಎಣ್ಣೆ ಮತ್ತು ಮೀನು ಮುಂತಾದ ಆಹಾರವನ್ನು ಸೇವಿಸಿ. ಸಂಸ್ಕರಿತ ಆಹಾರಗಳು, ಅತಿಯಾದ ಉಪ್ಪು ಮತ್ತು ಸಿಹಿತಿಂಡಿಗಳನ್ನು ಮಿತವಾಗಿ ಸೇವಿಸಿ. ಕರಿದ ತಿಂಡಿಗಳ ಬದಲಿಗೆ ಬೀಜಗಳನ್ನು ಆಯ್ಕೆಮಾಡುವುದು ಅಥವಾ ಊಟದಲ್ಲಿ ಹೆಚ್ಚು ಸೊಪ್ಪು ಬಳಸುವುದು ಮುಂತಾದ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ದೊಡ್ಡ ವ್ಯತ್ಯಾಸ ಮಾಡಬಹುದು.

3. ಒತ್ತಡವನ್ನು ನಿರ್ವಹಿಸಿ
ಧ್ಯಾನ, ದೀರ್ಘ ಉಸಿರಾಟದ ವ್ಯಾಯಾಮ, ಯೋಗ ಅಥವಾ ಸೂಕ್ತ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ದೈಹಿಕ ಚಟುವಟಿಕೆಗಳು ಒತ್ತಡದ ಹಾರ್ಮೋನ್‌ಗಳನ್ನು ಸ್ವಾಭಾವಿಕವಾಗಿ ಕಡಿಮೆಗೊಳಿಸುತ್ತದೆ. ಅದನ್ನು ಗಮನದಲ್ಲಿಡಿ. ಜೊತೆಗೆ ಜೀವನ ಭಾರ ಅನ್ನಿಸಿದಾಗ ಪ್ರೀತಿಪಾತ್ರರಿಂದ ಅಥವಾ ವೃತ್ತಿಪರರಿಂದ ನೆರವು ಪಡೆಯಲು ಹಿಂಜರಿಯಬೇಡಿ.

4. ನಿದ್ರೆ ಮತ್ತು ವಿಶ್ರಾಂತಿಗೆ ಆದ್ಯತೆ ನೀಡಿ
ಹೃದಯದ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ಉತ್ತಮವಾಗಿ ನಿದ್ರೆ ಮಾಡುವುದು ಅತ್ಯಗತ್ಯ. ಪ್ರತೀ ರಾತ್ರಿ ಕನಿಷ್ಠ ಏಳು ಗಂಟೆಗಳ ನಿದ್ರೆ ಮಾಡಿ. ಇದರಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ.

5. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿ
ರಕ್ತದೊತ್ತಡ, ಕೊಲೆಸ್ಟರಾಲ್ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ವೈದ್ಯಕೀಯ ತಪಾಸಣೆಯ ಮೂಲಕ ಚೆಕ್ ಮಾಡುತ್ತಿರಿ. ಅಪಾಯಕಾರಿ ಅಂಶಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತವಾಗಿ ನಿರ್ವಹಿಸುವುದರಿಂದ ಗಂಭೀರ ಸಮಸ್ಯೆಗಳನ್ನು ತಡೆಯಬಹುದು.

ಕೌಟುಂಬಿಕ ನೆರವು
ಈಗೀಗ ಹೃದಯವನ್ನು ಜೋಪಾನವಾಗಿ ನೋಡಿಕೊಳ್ಳುವುದು ಮೊದಲಿಗಿಂತ ಹೆಚ್ಚು ಅಗತ್ಯವಾಗಿದೆ. ಹಾಗಾಗಿ ಎಲ್ಲರೂ ಎಲ್ಲರ ಹೃದಯದ ಆರೋಗ್ಯವನ್ನು ನೋಡಿಕೊಳ್ಳಬೇಕಿದೆ. ಅದರಲ್ಲೂ ಮುಖ್ಯವಾಗಿ ತಂದೆಯ ಹೃದಯದ ಆರೋಗ್ಯವನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಿದೆ. ಅದರಿಂದ ಇಡೀ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಸಲದ ಅಪ್ಪನ ದಿನದಂದು ಅಪ್ಪನ ಹೃದಯ ಆರೋಗ್ಯ ನೋಡಿಕೊಳ್ಳುವುದು ಎಲ್ಲಾ ಮಕ್ಕಳ ಆದ್ಯತೆಯಾಗಿರಲಿ.

- ಡಾ. ಜೆ. ಕಣ್ಣನ್, ಸೀನಿಯರ್ ಕನ್ಸಲ್ಟೆಂಟ್, ಅಡಲ್ಟ್ ಕಾರ್ಡಿಯಾಲಜಿ, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು