Asianet Suvarna News Asianet Suvarna News

Winter Heart Attacks: ಚಳಿಗಾಲದಲ್ಲಿ ಹೃದಯಾಘಾತ ತಪ್ಪಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack)ದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಚಳಿಗಾಲ (Winter)ದಲ್ಲಿ ಹಠಾತ್ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಹಾಗಿದ್ರೆ ಚಳಿಗಾಲದಲ್ಲಿ ಹೃದಯಾಘಾತವನ್ನು ತಡೆಯಲು ದಿನನಿತ್ಯದ ಅಭ್ಯಾಸಗಳು ಹೇಗಿರಬೇಕು ?

Everyday Habits To Prevent Heart Attack In Winters
Author
Bengaluru, First Published Jan 19, 2022, 5:04 PM IST

ಹೃದಯಾಘಾತ (Heart Attack)ಕ್ಕೆ ಒತ್ತಡ ಮಾತ್ರವಲ್ಲದೆ ಋತುಮಾನದ ಬದಲಾವಣೆಗಳು ಸಹ ಕಾರಣವಾಗಬಹುದು. ಹಲವಾರು ಅಧ್ಯಯನಗಳ ಪ್ರಕಾರ, ಚಳಿಗಾಲ (Winter)ದಲ್ಲಿ ಹಠಾತ್ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ತಣ್ಣಗಿನ ವಾತಾವರಣದಲ್ಲಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ನಮ್ಮ ದೇಹವು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರಿಂದ ಚಳಿಗಾಲದಲ್ಲಿ ನರಮಂಡಲದ ಕ್ರಿಯಾಶೀಲತೆಯು ಹೆಚ್ಚಾಗುತ್ತದೆ. ಇದರಿಂದ ರಕ್ತನಾಳಗಳು ಕಿರಿದಾಗುತ್ತವೆ. ಇದು ನಮ್ಮ ಹೃದಯ ಬಡಿತ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತ (Blood) ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯನ್ನು ಉಲ್ಬಣಗೊಳಿಸುತ್ತದೆ. ಈ ಎಲ್ಲಾ ಅಂಶಗಳು ಅಂತಿಮವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಎಂದು ತಿಳಿದುಬಂದಿದೆ. 

ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ, ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ ಡಾ.ಝಕಿಯಾ ಖಾನ್ ಹೇಳಿರುವ ಪ್ರಕಾರ, ಜೀವನಶೈಲಿ ಬದಲಾವಣೆಗಳು, ಒಳಾಂಗಣ ವ್ಯಾಯಾಮ, ಉತ್ತಮ ನಿದ್ರೆ (Sleep) ಸೇರಿ ಹಲವು ಚಟುವಟಿಕೆಗಳನ್ನು ಮಾಡುವುದರಿಂದ ಚಳಿಗಾಲದಲ್ಲಿ ಹೃದಯಾಘಾತ ಆಗದಂತೆ ತಡೆಯಬಹುದು. ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ತಗ್ಗಿಸಲು ಇಲ್ಲಿವೆ ಕೆಲವು ಸಲಹೆಗಳು.

Curd For Health: ಪ್ರತಿದಿನ ಮೊಸರು ಸೇವಿಸಿ, ಹೃದಯಾಘಾತ ಅಪಾಯದಿಂದ ದೂರವಿರಿ..

ಒತ್ತಡವನ್ನು ನಿರ್ವಹಿಸಿ
ಹೃದ್ರೋಗಕ್ಕೆ ಒತ್ತಡವು ಒಂದು ಪ್ರಮುಖ ಕಾರಣವಾಗಿದೆ. ತೀವ್ರವಾದ ಒತ್ತಡವು ಹೃದಯಾಘಾತಕ್ಕೆ ಕಾರಣವಾಗಬಹುದು ಮತ್ತು ದೀರ್ಘಕಾಲದ ಒತ್ತಡವು ಹೃದಯದ ಅಪಧಮನಿಗಳ ಒಳಪದರದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ, ಇದು ಉರಿಯೂತವನ್ನು ಉಂಟುಮಾಡುತ್ತದೆ. ಮಾತ್ರವಲ್ಲ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು.

ಹವ್ಯಾಸಗಳು ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ಚಳಿಗಾಲದಲ್ಲಿ ಹೆಚ್ಚೆಚ್ಚು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ತೋಟಗಾರಿಕೆ, ಚಿತ್ರಕಲೆ, ಓದುವಿಕೆ, ಸಂಗೀತವನ್ನು ಆಲಿಸುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸಹ ಒಳ್ಳೆಯದು. ಮನೆಯಲ್ಲೇ ಯೋಗ ಮತ್ತು ಧ್ಯಾನವನ್ನು ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. 

ಹೆಚ್ಚು ನಿದ್ದೆ ಮಾಡಿ
ಸಮರ್ಪಕವಾಗಿ ನಿದ್ದೆ ಮಾಡುವುದು ಮುಖ್ಯ. ರಾತ್ರಿಯಲ್ಲಿ ದೇಹಕ್ಕೆ ಅಗತ್ಯವಾದಷ್ಟು ನಿದ್ದೆ ಮಾಡಿ. ದಿನವೊಂದಕ್ಕೆ 8ರಿಂದ 9 ಗಂಟೆಗಳ ಕಾಲ ನಿದ್ದೆ ಆಗುವಂತೆ ನೋಡಿಕೊಳ್ಳಿ. ಕೆಲಸದಿಂದ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಿ. ಸತತವಾಗಿ ಕೆಲಸ ಮಾಡುವುದರಿಂದ ಮನಸ್ಸಿಗೆ ಒತ್ತಡ ಬೀಳುತ್ತದೆ.

Health Tips: ಚಳಿಗಾಲದ ಕಿರಿಕಿರಿ ಬೇಡವಾದ್ರೆ ಹೀಗ್ಮಾಡಿ

ದೈನಂದಿನ ವ್ಯಾಯಾಮ
ದಿನಕ್ಕೆ ಕನಿಷ್ಠ 30 ನಿಮಿಷಗಳಷ್ಟು ಕಾಲ ದೈನಂದಿನ ವ್ಯಾಯಾಮ (Excersice) ಮಾಡಿ. ತಂಪಾದ ತಾಪಮಾನದಲ್ಲಿ ಮುಂಜಾನೆ ಹೊರಗೆ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಸ್ಟ್ಯಾಡಿಂಗ್ ಸೈಕ್ಲಿಂಗ್, ಟ್ರೆಡ್ ಮಿಲ್, ಯೋಗ ಇತ್ಯಾದಿ ಒಳಾಂಗಣ ವ್ಯಾಯಾಮಗಳನ್ನು ಆಯ್ಕೆಮಾಡಿ.

ಆಹಾರದಲ್ಲಿ ಅತಿಯಾದ ಉಪ್ಪು ಮತ್ತು ಸಿಹಿತಿಂಡಿಗಳನ್ನು ತಪ್ಪಿಸಿ
ಚಳಿಗಾಲದಲ್ಲಿ ಅತಿಯಾಗಿ ಉಪ್ಪು (Salt) ಮತ್ತು ಸಿಹಿ ತಿಂಡಿಗಳನ್ನು ಸೇವಿಸಬೇಡಿ. ದೈನಂದಿನ ಆಹಾರದಲ್ಲಿ ಸಲಾಡ್ ಮತ್ತು ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಿ. ನಿಮ್ಮ ರಕ್ತದ ಸಕ್ಕರೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಿ: ನಿಯಮಿತವಾಗಿ ಇದನ್ನು ಪರಿಶೀಲಿಸುವುದು ಮುಖ್ಯವಾಗಿದೆ.

ಸಾಕಷ್ಟು ನೀರು ಕುಡಿಯಿರಿ
ಚಳಿಗಾಲದಲ್ಲಿ ಬೆವರುವುದು ಕಡಿಮೆಯಾಗುತ್ತದೆ. ಇದರಿಂದ ಹೃದಯ ವೈಫಲ್ಯಗಳು ಹೆಚ್ಚಾಗುವ ಸಾಧ್ಯತೆಯಿದೆ. ವಿಶೇಷವಾಗಿ ಹೆಚ್ಚು ನೀರು ಕುಡಿದರೆ ಶ್ವಾಸಕೋಶಕ್ಕೆ ಒತ್ತಡ ಬಿದ್ದಂತಾಗುತ್ತದೆ. ಹೀಗಾಗಿ ತೆಗೆದುಕೊಳ್ಳಬೇಕಾದ ನೀರಿನ ಪ್ರಮಾಣದ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ನಿಮ್ಮ ದೇಹದಲ್ಲಿ ಏನಾದರೂ ಕಿರಿಕಿರಿ ಅಥವಾ ಅಸಾಮಾನ್ಯ ಅನಿಸಿದರೆ, ವೈದ್ಯರನ್ನು ಭೇಟಿ ಮಾಡಿ.

ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ತಗ್ಗಿಸಲು ಹಾಗೂ ಹಠಾತ್ ಹೃದಯಾಘಾತ ತಡೆಯಲು ನಿಯಮಿತ ತಪಾಸಣೆಗೆ ಒಳಪಡಬೇಕು. ದೇಹದಲ್ಲಿ ಕಂಡು ಬರುವ ಲಕ್ಷಣಗಳನ್ನು ಗಮನಿಸಿ ವೈದ್ಯರನ್ನು ಸಂಪರ್ಕಿಸಬೇಕು. ಹೃದಯಾಘಾತದ ಸಂದರ್ಭದಲ್ಲಿ ತುರ್ತು ಆರೈಕೆಯ ಅಗತ್ಯವಿರುತ್ತದೆ. ಹೀಗಾಗಿ ಬೆವರುವುದು, ಭುಜ ನೋವು, ದವಡೆ ನೋವು, ಎದೆಯಲ್ಲಿ ನೋವು, ತಲೆ ತಿರುಗುವುದು, ವಾಕರಿಕೆ ಮೊದಲಾದ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಆದಷ್ಟು ಬೇಗ ವೈದ್ಯಕೀಯ ನೆರವನ್ನು ಪಡೆದುಕೊಳ್ಳಬೇಕು.

Follow Us:
Download App:
  • android
  • ios