ಮನೆ ಹೇಗೆಯೇ ಇರಲಿ, ಎಷ್ಟೇ ಶುಚಿಯಾಗಿಯೇ ಇರಲಿ. ಹೇಳದೇ ಕೇಳದೇ ಬರುವ ಅತಿಥಿ ಎಂದರೆ ಅದು ಜಿರಳೆ ಮಾತ್ರ. ರಾಸಾಯನಿಕ ಸಿಂಪಡಣೆ ಮಾಡಿ ಆರೋಗ್ಯ ಹದಗೆಡಿಸಿಕೊಳ್ಳುವ ಬದಲು ಮನೆಯಲ್ಲೇ ಸಿಗುವ ಪದಾರ್ಥಗಳ ಈ ಟಿಪ್ಸ್ ಫಾಲೋ ಮಾಡಿದ್ರೆ ಜಿರಳೆ ಮಾಯ!
ಜಿರಳೆ ಎಂದ್ರೆ ಸಾಕು ಹಲವರಿಗೆ ಮೈಯೆಲ್ಲಾ ಝುಂ ಎನ್ನುತ್ತದೆ. ಹೊಸ ಮನೆ ಮಾಡಿದ್ರೂ ಕೆಲವೇ ದಿನಗಳಲ್ಲಿ ಜಿರಳೆಗಳು ಹೇಳದೇ ಕೇಳದೆ ನಿಮ್ಮ ಮನೆಯ ಅತಿಥಿಯಾಗಿ ಬಿಡುತ್ತವೆ. ಎಷ್ಟೋ ಬಾರಿ ಜಿರಳೆಗಳು ಓಡಾಡಿದ ಆಹಾರ ತಿಂದು ಫುಡ್ ಪಾಯ್ಸನಿಂಗ್ ಆಗುವುದೂ ಇದೆ. ಅದಕ್ಕಾಘಿಯೇ ಮನೆಯಲ್ಲಿ ಜಿರಲೆಗಳು ಇದ್ದರೆ ಅನಾರೋಗ್ಯ ಸಮಸ್ಯೆ ತಪ್ಪಿದ್ದಲ್ಲ. ಸುಮಾರು 70 ದಶಲಕ್ಷ ವರ್ಷಗಳ ಹಿಂದೆ ಜಿರಳೆಗಳು ಪರಮಾಣು ಸ್ಫೋಟದಿಂದ ಬದುಕುಳಿದ ಏಕೈಕ ಜೀವಿಗಳು ಎಂದು ನಂಬಲಾಗಿದೆ. ಅದು ಪವರ್ಫುಲ್ ಈ ಕೀಟ. ಜಿರಳೆಯನ್ನು ಓಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಗಳು ಸಿಗುತ್ತವೆ. ಚಾಕ್ಪೀಸ್ಗಳೂ ಲಭ್ಯ. ಆದರೆ ಇವೆಲ್ಲವೂ ಜಿರಳೆಗಿಂತಲೂ ಹೆಚ್ಚು ಮನುಷ್ಯರಿಗೆ ಹಾನಿಕಾರಕ ಎನ್ನುವುದೂ ಅಷ್ಟೇ ಸತ್ಯ. ಇವುಗಳಲ್ಲಿ ಬಳಸುವ ರಾಸಾಯನಿಕದಿಂದಾಗಿಯೇ ಇಂದು ಇನ್ನಿಲ್ಲದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ಹಾಗಿದ್ದರೆ ಸುಲಭದಲ್ಲಿ ಜಿರಳೆಗಳನ್ನು ಓಡಿಸುವುದು ಹೇಗೆ? ಅದರಲ್ಲಿಯೂ ಕೆಲವೊಮ್ಮೆ ಚಿಕ್ಕ ಚಿಕ್ಕ ಜಾತಿಯ ಜಿರಳೆಗಳು ಕಾಡುವುದು ಉಂಟು. ಅವುಗಳನ್ನೂ ಓಡಿಸುವ ಸುಲಭದ ಉಪಾಯವನ್ನು ಇಲ್ಲಿ ಹೇಳಲಾಗಿದೆ. ವಾರ್ಡ್ರೋಬ್ಗಳಲ್ಲಿ, ಬಟ್ಟೆ ಸಂದಿಗಳಲ್ಲಿ ಜಿರಳೆ ಬರದಂತೆ ತಡೆಯಲು ಗುಳಿಗೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದನ್ನು ತಂದು ಬಟ್ಟೆಯ ಒಳಗೆ ಇಟ್ಟರೆ, ಜಿರಳೆಯಿಂದ ಮುಕ್ತಿ ಪಡೆಯಬಹುದು, ಜೊತೆಗೆ ಬಟ್ಟೆಯ ಪರಿಮಳವೂ ಚೆನ್ನಾಗಿರುತ್ತದೆ. ಇದು ಬಟ್ಟೆಯ ಮಾತಾದರೆ, ಅಡುಗೆ ಮನೆ, ಬಾತ್ರೂಮ್ ಇತ್ಯಾದಿಗಳಲ್ಲಿ ಕಾಡುವ ಜಿರಳೆಗೆ ಮನೆ ಮದ್ದು ಇಲ್ಲಿದೆ ನೋಡಿ..
ಇದಕ್ಕೆ ಬೇಕಿರುವುದು ನೀರು, ಲವಂಗ, ಉಪ್ಪು, ಮೊಸರು, ಮತ್ತು ಸಕ್ಕರೆ. ಎರಡು ವಿಧಾನಗಳಲ್ಲಿ ಜಿರಲೆ ಓಡಿಸುವ ಉಪಾಯ ಇಲ್ಲಿ ಹೇಳಲಾಗಿದೆ ನೋಡಿ. ಮೊದಲಿಗೆ ನೀರು ಮತ್ತು ಲವಂಗ ಬಳಸುವುದು. ಅದು ಹೇಗೆಂದರೆ, ಒಂದು ಗ್ಲಾಸ್ ನೀರಿಗೆ ಮೂರು ಲವಂಗವನ್ನು ಕುಟ್ಟಿ ಪುಡಿ ಮಾಡಿ ಹಾಕಿಕೊಳ್ಳಬೇಕು. ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ಅರ್ಧ ಸ್ಪೂನ್ ಉಪ್ಪನ್ನು ಮಿಕ್ಸ್ ಮಾಡಿ ಕರಡಿಕೊಳ್ಳಬೇಕು. ಇಷ್ಟೇ ಮುಗಿಯಿತು. ಈ ನೀರನ್ನು ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಜಿರಳೆ ಬರುತ್ತವೆಯೋ ಅಲ್ಲಲ್ಲಿ ಚಿಮುಕಿಸಬೇಕು. ಅಂದರೆ ಗ್ಯಾಸ್ ಸ್ಟೋವ್, ಸಿಂಕ್ ಮೇಲೆ, ಸಿಂಕ್ ಕೆಳಗೆ, ಪಾತ್ರೆಗಳ ಸಂದಿ ಇತ್ಯಾದಿ ಕಡೆಗಳಲ್ಲಿ. ನೀರು, ಉಪ್ಪು, ಲವಂಗ ಯಾವುದೇ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದ ಕಾರಣ, ಇದರ ಸೇವೆಯಿಂದಲೂ ಏನೂ ಆಗುವುದಿಲ್ಲ. ಆದರೆ ಜಿರಳೆ ಮಾತ್ರ ಸಾಯುತ್ತವೆ.
ಇನ್ನು ಬಹುತೇಕ ಕಡೆಗಳಲ್ಲಿ ನೀರು ಚಿಮುಕಿಸಲು ಸಾಧ್ಯವಾಗದೇ ಇರಬಹುದು. ಅಂಥ ಕಡೆಗಳಲ್ಲಿ ಏನು ಮಾಡಬೇಕು ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ಇದಕ್ಕೆ ಬೇಕಿರುವುದು ಮೊಸರು. ಮೊಸರು ಎಂದರೆ ಹುಳಿಯಾಗಿರುವಂಥ ಮೊಸರು. 2-3 ಸ್ಪೂನ್ ಸಾಕು. ಇದಕ್ಕೆ ಸ್ವಲ್ಪ ನೀರು ಮತ್ತು ಎರಡು ಚಮಚ ಸಕ್ಕರೆ ಮಿಕ್ಸ್ ಮಾಡಬೇಕು. ಅದನ್ನು ಪ್ಲಾಸ್ಟಿಕ್ ಬೌಲ್ನಲ್ಲಿ ಹಾಕಿ. ನಿಮಗೆ ಬೇಡದ ಬೌಲ್ಗಳನ್ನು ಬಳಸಿದರೆ ಉತ್ತಮ. ಎಲ್ಲಿಲ್ಲಿ ನೀವು ಇದನ್ನು ಇಡಬೇಕು ಎಂದುಕೊಳ್ಳುತ್ತಿರೋ ಅಷ್ಟು ಬೌಲ್ ಬಳಸಿ, ಅದನ್ನು ಸಿಂಕ್, ಬಾತ್ರೂಮ್, ಗ್ಯಾಸ್ಸೌಟ್ ಸೇರಿದಂತೆ ಜಿರಳೆ ಹೆಚ್ಚು ಬರುವ ಜಾಗದಲ್ಲಿ ಈ ಬೌಲ್ ಇಡಿ. ಈ ನೀರಿಗೆ ಅಟ್ರಾಕ್ಟ್ ಆಗಿ ಜಿರಳೆ ಬರುತ್ತವೆ. ಮಾರನೆಯ ದಿನ ಚಿಕ್ಕ ಚಿಕ್ಕ ಜಿರಳೆಗಳೂ ಸತ್ತು ಬೀಳುವುದನ್ನು ನೀವು ನೋಡಬಹುದು.
