Asianet Suvarna News Asianet Suvarna News

ಶ್‌! ಇದು ‘ಸೃಷ್ಟಿ’ಯ ಸಮಯ: ಡಾ ಕೆ.ಎಸ್‌ ಪವಿತ್ರ ಮಾತು

ಜೈವಿಕ ಸೃಷ್ಟಿಕ್ರಿಯೆಯ ಪ್ರಕ್ರಿಯೆ ನಮಗೆಲ್ಲ ಗೊತ್ತು. ಮೂರ್ತರೂಪದ ಯಾವುದನ್ನೂ ಅರ್ಥ ಮಾಡಿಕೊಳ್ಳುವುದು ನಮಗೆ ಸುಲಭ. ಮಗು ಗರ್ಭದಲ್ಲಿ ರೂಪು ತಳೆದು, ಹುದುಗಿದ್ದು, 9 ತಿಂಗಳುಗಳ ನಂತರ ಸ್ವತಂತ್ರ ಜೀವಿಯೊಂದು ಹೊರಬರುತ್ತದೆ. 

Shivamogga psychiatrist KS Pavitra writes about creation power of women vcs
Author
Bangalore, First Published Mar 6, 2022, 11:45 AM IST

ಡಾ. ಕೆ.ಎಸ್‌. ಪವಿತ್ರ

ಮಗು ಒಳಗಿರುವಾಗ ಅದೆಷ್ಟುಭಾರ! ಹೊರಬರುವಾಗ ಎಷ್ಟುನೋವು! ಹೊರಬಂದ ಮೇಲೆ ನಿರಾಳ! ಮಿದುಳು ಮನಸ್ಸುಗಳಲ್ಲಿ ಹುಟ್ಟುವ ಕಥೆ- ಕವಿತೆಗಳದ್ದೂ ಇದೇ ಕಥೆ. ತಾಯ್ತನ-ಸೃಜನಶೀಲತೆಗಳ ಮಧ್ಯೆ ಸಾಮ್ಯವಿದೆ.

ವಾಟ್ಸ್‌ ಆ್ಯಪ್‌ - ಫೇಸ್‌ಬುಕ್‌ಗಳ ತುಂಬಾ ಕವಿತೆ-ಕಥೆ-ಬರೆಹಗಳದ್ದೇ ಲೋಕ. ‘ಸೃಷ್ಟಿಸಲು’ ಇನ್ನೆಷ್ಟುಸಮಯ ಬೇಕು ಎಂದು ಬಹು ಜನರೆನ್ನಬಹುದು. ಆದರೆ ಬಹುಕಾಲ ಉಳಿಯಬಲ್ಲ, ಸಾಹಿತ್ಯ ಸೃಷ್ಟಿಯಾಗಬೇಕು ಎಂದಾಕ್ಷಣ ಇದೇ ಜನ ‘ಅಯ್ಯೋ ಟೈಮೇ ಇಲ್ಲ’ ಎನ್ನುವುದು ಸಾಮಾನ್ಯ. ಬರಹಗಾರ್ತಿಯರನ್ನು ಮಾತನಾಡಿಸಿದರೆ ಇಷ್ಟೆಲ್ಲದರ ಮಧ್ಯೆ ಕಥೆ-ಕವನ ಬರೆಯಬೇಕೆಂದಿದ್ದರೂ ಸಮಯ ಹೊಂದಿಸಿಕೊಳ್ಳುವುದೇ ದೊಡ್ಡ ಸವಾಲು ಎನ್ನುತ್ತಾರೆ. ಮಕ್ಕಳು-ಸಂಸಾರದ ಕರಕರೆಗಳು-ವೃತ್ತಿ ‘ಸೃಜನಶೀಲತೆ’ಗೆ ಅಡ್ಡಿ ಎಂಬ ತೊಂದರೆಯನ್ನು ಎತ್ತಿ ತೋರಿಸಿಬಿಡುತ್ತಾರೆ.

ಹುಡುಗರಿಗೂ ಇರಬೇಕು ಅಳುವ ಸುಖ!

ಇದು ಸುಳ್ಳಲ್ಲ. ಅಡುಗೆ- ಮನೆಕೆಲಸ-ಹೊರಕೆಲಸ-ವೃತ್ತಿಜೀವನ-ಹಬ್ಬ- ಸಮಾರಂಭ-ದೇವರು-ಧರ್ಮ- ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳು ಹಾಗೂ ಮಕ್ಕಳಂತೆಯೇ ಆರೈಕೆ ಬೇಕಾಗುವ ಹಿರಿಯರ ಜವಾಬ್ದಾರಿ. ಯಾರಿಗೂ ಇದು ತಪ್ಪಿದ್ದಲ್ಲ. ಡಾ. ಅನುಪಮಾ ನಿರಂಜನ ತಮ್ಮ ಆತ್ಮಕಥನ ‘ನೆನಪು ಸಿಹಿ-ಕಹಿ’ಯಲ್ಲಿ ಹೇಳುತ್ತಾರೆ, ‘ವೈದ್ಯಕೀಯ ವೃತ್ತಿ ದಿನಕ್ಕೆ ಏಳೆಂಟು ಗಂಟೆಗಳನ್ನು ನುಂಗಿ ಹಾಕುತ್ತಿತ್ತು. ಮನೆ ಕೆಲಸ, ಮಕ್ಕಳ ಆರೈಕೆ ಇವುಗಳ ಕಡೆಗೂ ನಾನು ಗಮನ ಕೊಡಬೇಕಾಗಿತ್ತು. ಆಗ ನನಗೆ ಮೊದಲ ಬಾರಿ ಗೊತ್ತಾಯಿತು. ಒಬ್ಬ ಲೇಖಕನ ಬರವಣಿಗೆಗೆ ಎಷ್ಟೊಂದು ಅನುಕೂಲಗಳಿವೆ. ಅದೇ ಲೇಖಕಿಗಾದರೋ ಇವ್ಯಾವುದೂ ಇಲ್ಲ. ಆಕೆಗಿರುವುದು ಅನುಭವ ದಾರಿದ್ರ್ಯ, ವಿಚಾರ ವಿನಿಮಯದ -ಚರ್ಚೆಗಳ ಅಭಾವ, ತನ್ನ ಜ್ಞಾನದಾಹ ಇಂಗಿಸಿಕೊಳ್ಳಲು ಪುಸ್ತಕಗಳ ಕೊರತೆ, ಎಲ್ಲಕ್ಕೂ ಹೆಚ್ಚಾಗಿ ಪ್ರೋತ್ಸಾಹವೇ ಇಲ್ಲ. ಈ ತೊಂದರೆಗಳನ್ನೆಲ್ಲಾ ದಾಟಿ ಆಕೆ ಬೆಳೆಯಬೇಕಾದರೆ ಅವಳಿಗೆ ಭೀಮಶಕ್ತಿಯೇ ಬೇಕು ಎಂಬುದು ನನಗೆ ಅರಿವಾಯಿತು’.

ಈ ಪರಿಸ್ಥಿತಿ ಈಗ ಕೆಲಮಟ್ಟಿಗೆ ಬದಲಾಗಿದ್ದಿರಬಹುದು. ಆದರೆ ಮನೆಮಂದಿ ಲೇಖಕಿಯರ ಸಾಹಿತ್ಯವನ್ನು ಗಮನಿಸದಿರುವುದು, ಅವರ ಬರಹಗಳಿಗೆ ಬರಬಹುದಾದ ಮನ್ನಣೆಗಳನ್ನು ‘ಯಕಶ್ಚಿತ್‌’ ಎಂಬಂತೆ ನೋಡುವುದು, ಬರೆಯುವುದು-ಅಧ್ಯಯನಗಳು ಎರಡೂ ಸಮಯವನ್ನು ಹಾಳು ಮಾಡುತ್ತವೆ ಎಂಬಂತೆ ನೋಡುವುದು, ‘ಬರೆದು ಏನು ಕಡಿದು ಗುಡ್ಡೆ ಹಾಕ್ತೀಯಾ?’, ಲೇಖಕಿಯರ ಗುಂಪು-ಜೊತೆಗಾರ ಬರಹಗಾರರನ್ನು ‘ನಿಷ್ೊ್ರಯೋಜನ’ ಎಂಬಂತೆ ಮೂದಲಿಸುವುದು ಇವೆಲ್ಲ ಇಂದೂ ಸಮಾಜದಲ್ಲಿ ವ್ಯಾಪಕವಾಗಿದೆ. ಇವೆಲ್ಲದರಿಂದ ಉಂಟಾಗುವ ನೋವು-ಕೊರಗುಗಳಿಗೆ ಮಹಿಳೆಯರು ಅಪಾರ ಸಮಯ -ಶಕ್ತಿಯನ್ನು ವ್ಯಯಿಸುವುದು. ಮತ್ತೆ ಕೆಲವರು ತಮ್ಮ ಅಧ್ಯಯನ-ಅನುಭವಗಳನ್ನು ಸೃಜನಾತ್ಮಕವಾಗಿ ಪರಿವರ್ತಿಸುವುದರ ಬದಲು ಆ ಪ್ರತಿಭೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ, ಆ ತಕ್ಷಣಕ್ಕೆ ಒಂದಿಷ್ಟು‘ಲೈಕ್‌’ಗಳನ್ನಷ್ಟೇ ಸಂಪಾದಿಸುವ, ಯಾವ ಗುಣಮಟ್ಟದ ಪರೀಕ್ಷೆಗೂ ಒಳಪಡದ, ತಾತ್ಕಾಲಿಕತೆಗೆ ಸೀಮಿತವಾಗಿಸುವುದು. ಇತರರಿಗೆ ನೋವನ್ನೂ ಉಂಟು ಮಾಡಬಹುದಾದ ಇಂತಹ ತಾತ್ಕಾಲಿಕ ಪ್ರತಿಭಾ ಪ್ರದರ್ಶನದಿಂದ ಸಮಯ ಮತ್ತಷ್ಟುಇಲ್ಲದಂತಾಗುತ್ತದೆ!

ಪ್ರವಾಸ ಹೋಗದಿದ್ದರೇನಂತೆ ಮನೆಯಲ್ಲಿದ್ದೇ ಜಗತ್ತು ಸುತ್ತಿ ಬನ್ನಿ!

ಸೃಜನಶೀಲತೆಯ ಹಂತಗಳನ್ನು ಗಮನಿಸೋಣ. ಸಿದ್ಧತೆಯ ಹಂತದಲ್ಲಿ ಅನುಭವ ಮನಸ್ಸಿಗೆ ದಕ್ಕುತ್ತದೆ. ಇದಕ್ಕೆ ಸಮಯ ಬೇಡ. ನಮ್ಮ ಸುತ್ತಮುತ್ತಲೂ ನಡೆಯುವ ಘಟನೆಗಳಿಗೆ ನಾವು ಸಂವೇದನಾಶೀಲರಾಗಿ ಗ್ರಹಿಸಬೇಕು, ತೆರೆದುಕೊಳ್ಳಬೇಕು. ಹಾಗಾಗಿ ನಿಮ್ಮ ಬದುಕು ‘ಬಿಡುವಿಲ್ಲದಾದಷ್ಟೂ’, ನಿಮಗೆ ಅನುಭವ ಹೆಚ್ಚುತ್ತದೆ. ನಂತರದ ‘ಇನ್‌ಕ್ಯೂಬೇಷನ್‌’- ಗರ್ಭಾವಸ್ಥೆಯ ಹಂತ. ಸುಪ್ತ ಮನಸ್ಸಿನಲ್ಲಿ ‘ಐಡಿಯಾ’ ಹುದುಗಿರುತ್ತದೆ. ಅಲ್ಲಿಯೇ ಐನ್‌ಸ್ಟೀನ್‌ ಹೇಳುವ ‘ಕಾಂಬಿನೇಟರಿ ಆಟ’ ನಡೆಯುತ್ತಲೇ ಇರುತ್ತದೆ. ಇದಕ್ಕೂ ಸಮಯ ಬೇಡ! ಮೂರನೆಯದು ‘ಹೊಳೆಯುವ ಯುರೇಕಾ ಹಂತ’. ನೀವು ಸ್ನಾನ ಮಾಡುತ್ತಿರುತ್ತೀರಿ, ಇದ್ದಕ್ಕಿದ್ದಂತೆ ಅಲ್ಲಿಯವರೆಗೆ ಮನಸ್ಸಿನಲ್ಲೇ ನಡೆಯುತ್ತಿದ್ದ ಮಂಥನ ಸ್ಪಷ್ಟವಾಗಿ ಕಥೆ/ಕವಿತೆ ಹೇಗೆ ಬರಬೇಕು ಎಂಬ ಸಂಗತಿ ಹೊಳೆದುಬಿಡುತ್ತದೆ! ಕೊನೆಯದು ಅದನ್ನು ಸರಿಪಡಿಸಿ ಬರೆಯುವುದು. ಇದಕ್ಕೆ ಮಾತ್ರ ಸಮಯ ಬೇಕು!

ಯೂಂಗ್‌ ಎಂಬ ಮನೋವಿಜ್ಞಾನಿ ಹೇಳುವ ಮಾತು, ‘ಸೃಷ್ಟಿಸುವುದು ಹೆಣ್ಣು ಗುಣ. ಕಥೆ-ಕವಿತೆ ಸುಪ್ತ ಮನಸ್ಸು ಅಂದರೆ ತಾಯಿಯ ಸಾಮ್ರಾಜ್ಯದಿಂದಲೇ ಹೊರ ಹೊಮ್ಮುತ್ತದೆ’. ಮಕ್ಕಳನ್ನು ಹೊರುವುದು, ಹೆರುವುದು ಸೃಜನಶೀಲತೆಯನ್ನು ಬೆಳೆಸುತ್ತದೆ. ಅವು ಸಮಯವನ್ನು ಸೀಮಿತವಾಗಿಸುವುದರ ಬದಲು ಇರುವ ಸಮಯವನ್ನು ಅಗಾಧವಾಗಿ ಹಿಗ್ಗಿಸಲು ಸಾಧ್ಯವಿದೆ.

ಬರಹದ ಮೇಲಿನ ಅದಮ್ಯ ಪ್ರೀತಿ, ದಿಟ್ಟತನ, ಅಸೂಯೆ-ಅತೃಪ್ತಿಗಳನ್ನು ಕ್ಷಮಿಸುವ-ಅರ್ಥಮಾಡಿಕೊಳ್ಳುವ ಉದಾರ ಮನಸ್ಸು, ಮಹಿಳೆಯರು ಮಹಿಳೆಯರನ್ನು ಬೆಂಬಲಿಸುವ ಮನೋಭಾವ ಇವು ಸಮಯವನ್ನು ಸೃಜನಶೀಲತೆಗಾಗಿ ಕಾದಿಡುವುದನ್ನು, ಉಳಿಸಿಕೊಳ್ಳುವುದನ್ನು, ಒಂದಷ್ಟುಸಮಯದಲ್ಲೇ ಸಂತೋಷವಾಗಿ ಸೃಷ್ಟಿಸುವುದನ್ನು ಸಾಧ್ಯ ಮಾಡಬಲ್ಲವು.

Follow Us:
Download App:
  • android
  • ios