ವಿದೇಶಿ ಹಣ್ಣುಗಳ ಮೊರೆ ಹೋಗದೆ ಕಡಿಮೆ ರೇಟ್​ನಲ್ಲಿ ಸಿಗುವ ಪಪ್ಪಾಯದಿಂದ ಇರುವ ಅದ್ಭುತ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ ಶಿಕ್ಷಣ ತಜ್ಞ ಡಾ.ನಾ.ಸೋಮೇಶ್ವರ 

ದೇಹವನ್ನು ಆರೋಗ್ಯವಾಗಿರಿಸುವಲ್ಲಿ ಹಣ್ಣು-ತರಕಾರಿಗಳ ಕೊಡುಗೆ ಅಪಾರ ಆಗಿರೋದು ಎಲ್ಲರಿಗೂ ತಿಳಿದಿರುವ ವಿಷಯವೇ. ದೇಹಕ್ಕೆ ಮಾತ್ರವಲ್ಲದೇ ಹಲವು ಹಣ್ಣು-ತರಕಾರಿಗಳು ನೈಸರ್ಗಿಕವಾಗಿ ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದೆ. ರಾಸಾಯನಿಕಯುಕ್ತ ಬಣ್ಣಗಳನ್ನು ಲೇಪಿಸಿಕೊಂಡು ಮುಖವನ್ನು ಇನ್ನಷ್ಟು ಹಾಳುಮಾಡಿಕೊಳ್ಳುವ ಬದಲು, ಹಣ್ಣು-ತರಕಾರಿಗಳಿಂದಲೇ ಚರ್ಮದ ಆರೋಗ್ಯವನ್ನೂ ಕಾಪಿಟ್ಟುಕೊಳ್ಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ತಿನ್ನಬಹುದಾದ ಹಾಗೂ ಹಲವು ಕಾಯಿಲೆಗಳನ್ನು ವಾಸಿ ಮಾಡುವ ಜೊತೆಗೆ ಸೌಂದರ್ಯಕ್ಕೂ ಹೇಳಿಮಾಡಿಸಿದ ಕೆಲವು ಹಣ್ಣುಗಳಲ್ಲಿ ಒಂದು ಪಪ್ಪಾಯ. ಕಡಿಮೆ ರೇಟ್​ನಲ್ಲಿ ಹೆಚ್ಚು ಆರೋಗ್ಯ, ಸೌಂದರ್ಯ ಬೇಕೆಂದರೆ ಇದರ ಪೀಸ್​ ಅನ್ನು ದಿನವೂ ತಿನ್ನಿ ಎನ್ನುವ ಟಿಪ್ಸ್​ ಕೊಟ್ಟಿದ್ದಾರೆ ಶಿಕ್ಷಣ ತಜ್ಞ, ಲೇಖಕ ಡಾ. ನಾ.ಸೋಮೇಶ್ವರ ಅವರು.

ದೂರದರ್ಶನದ ಚಂದನದ ಥಟ್​ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ದಶಕಗಳಿಂದ ಮನೆಮಾತಾಗಿರುವ ಡಾ.ನಾ.ಸೋಮೇಶ್ವರ ಅವರು ರ್ಯಾಪಿಡ್​ ರಶ್ಮಿ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಹಲವು ಕ್ಷೇತ್ರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಆರೋಗ್ಯದ ಬಗ್ಗೆಯೂ ಅವರು ಉಲ್ಲೇಖಿಸುತ್ತಾ ಹಣ್ಣಿನ ಮಹಿಮೆಗಳನ್ನು ತಿಳಿಸಿದ್ದಾರೆ. ದಿನಕ್ಕೆ ಐದು ಹಣ್ಣು ತಿನ್ನಿ ಎನ್ನುವ ಸಲಹೆ ಅವರು ಕೊಟ್ಟಿದ್ದಾರೆ. ಐದು ಹಣ್ಣು ಎಂದರೆ ಇಡಿಯ ಹಣ್ಣು ತಿನ್ನುವುದು ಎಂದರ್ಥವಲ್ಲ, ಒಂದು ಹಣ್ಣು ತಂದು ಅದನ್ನು ಪೀಸ್​ ಮಾಡಿ ಮನೆಮಂದಿಯೆಲ್ಲಾ ತಿನ್ನಬಹುದು ಎಂದಿರುವ ಸೋಮೇಶ್ವರ ಅವರು, ಇದೇ ವೇಳೆ ವಿದೇಶಿ ಹಣ್ಣುಗಳ ವ್ಯಾಮೋಹಕ್ಕೆ ಒಳಗಾಗಬೇಡಿ ಎನ್ನುವ ಮಾತನ್ನೂ ಹೇಳಿದ್ದಾರೆ.

ಭಾರತದಲ್ಲಿಯೇ ಬೆಳೆಯುವ ಹಣ್ಣುಗಳಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ವಿದೇಶದ ಹಣ್ಣುಗಳಿಗೆ ಹೋಲಿಸಿದರೆ ನಮ್ಮಲ್ಲಿಯೇ ಸಿಗುವ ಅದರಲ್ಲಿಯೂ ಕಡಿಮೆ ಬೆಲೆಗೆ ಸಿಗುವ ಹಣ್ಣುಗಳಲ್ಲಿ ಹಲವು ಪ್ರಯೋಜನಗಳಿವೆ ಎಂದಿರುವ ಅವರು, ಎಲ್ಲಕ್ಕಿಂತಲೂ ಮುಖ್ಯವಾಗಿ ಪಪ್ಪಾಯದ ಮಹಿಮೆಯನ್ನು ತಿಳಿಸಿದ್ದಾರೆ. ಬೊಜ್ಜು ಕರಗಲು, ಡಯಾಬಿಟೀಸ್​ ನಿಯಂತ್ರಣಕ್ಕೆ... ಹೀಗೆ ಪಪ್ಪಾಯದಿಂದ ಹಲವಾರು ಪ್ರಯೋಜನಗಳಿವೆ. ಇದನ್ನು ಯಾವ ವಯಸ್ಸಿನವರು ಬೇಕಾದರೂ ತಿನ್ನಬಹುದು. ಇಡೀ ಹಣ್ಣನ್ನು ತಿನ್ನಬೇಕೆಂದೇನಿಲ್ಲ. ಒಂದು ಹಣ್ಣನ್ನು ತಂದು ಮನೆಯವರೆಲ್ಲಾ ತಿನ್ನಬಹುದು ಎಂದಿರುವ ಅವರು, ಇದರಲ್ಲಿ ಇರುವ ವಿಟಮಿನ್​ ಇ ಬಗ್ಗೆ ವಿವರಣೆ ನೀಡಿದ್ದಾರೆ. ತ್ವಚೆಯ ಆರೋಗ್ಯ ಮತ್ತು ರಕ್ಷಣೆಗೆ ವಿಟಮಿನ್​ ಇ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕಾಗಿಯೇ ಹಲವರು ವಿಟಮಿನ್​ ಇ ಮಾತ್ರೆ ತಂದು ದಿನವೂ ಸೇವನೆ ಮಾಡುತ್ತಾರೆ,, ಇಲ್ಲವೇ ಮುಖಕ್ಕೆ ಲೇಪಿಸಿಕೊಳ್ಳುತ್ತಾರೆ. ಆದರೆ ಪ್ರತಿದಿನ ಪಪ್ಪಾಯ ತಿನ್ನುವುದರಿಂದ ಸಹಜವಾಗಿ ಆರೋಗ್ಯದ ವೃದ್ಧಿಯಾಗುತ್ತದೆ, ವಿಟಮಿನ್​ ಇ ಹೇರಳವಾಗಿ ಇದರಲ್ಲಿ ಇದೆ ಎಂದಿದ್ದಾರೆ ನಾ.ಸೋಮೇಶ್ವರ.

ಪಪ್ಪಾಯ ಬಿಟ್ಟರೆ ಎರಡನೆಯ ದಿವ್ಯ ಹಣ್ಣು ಸೀಬೆ ಹಣ್ಣು. ಅದನ್ನು ಬಿಟ್ಟರೆ ಬಾಳೆಹಣ್ಣು ಹಾಗೂ ನಂತರದ್ದು ದ್ರಾಕ್ಷಿ ಹಣ್ಣು ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ. ಪಪ್ಪಾಯಿಯ ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿಯ ಹೆಚ್ಚಿನ ಫೈಬರ್ ಅಂಶವು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಜೀರ್ಣಾಂಗವನ್ನು ಬೆಂಬಲಿಸುತ್ತದೆ ಎನ್ನುವ ಮಾಹಿತಿಯನ್ನೂ ಇದಾಗಲೇ ಕೆಲವು ವೈದ್ಯರು ಹೇಳಿದ್ದಾರೆ.

View post on Instagram