ಮಗುವಿಗೆ ಧೂಪದ ಹೊಗೆ ಕೊಡುವ ಬಗ್ಗೆ ಮಾತನಾಡಿದ ವೈದ್ಯೆಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು! ಮೇಕಪ್ ಬಗ್ಗೆ ಪ್ರತಿಕ್ರಿಯಿಸಿದ್ದು ಏನು?
ವೈದ್ಯರು, ಆಸ್ಪತ್ರೆ ಎಂಬೆಲ್ಲಾ ಪರಿಕಲ್ಪನೆಗಳು ಈಗಿನಷ್ಟು ಇಲ್ಲದ ಕಾಲದಲ್ಲಿಯೇ ಮನೆಯಲ್ಲಿಯೇ ಮಕ್ಕಳನ್ನು ಆರೋಗ್ಯಕರವಾಗಿ ನೋಡಿಕೊಳ್ಳಲು ಕೆಲವೊಂದು ವಿಧಾನಗಳನ್ನು ಅನುಸರಿಸಲಾಗುತ್ತಿತ್ತು. ಈ ವಿಧಾನಗಳ ಪೈಕಿ ಕೆಲವೊಂದನ್ನು ಈಗಲೂ ಕೆಲವು ಮನೆಗಳಲ್ಲಿ ಅನುಸರಿಸುವುದು ಇದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿದ ಮಗುವಿಗೆ ಹಿರಿಯರು ಮಾಡುವಷ್ಟು ಸಂಪ್ರದಾಯಬದ್ಧ ಆರೈಕೆಗಳು ಯಾವ ಆಸ್ಪತ್ರೆಗಳಲ್ಲಿಯೂ ಔಷಧ ತಿಂದು ಆಗುವುದಿಲ್ಲ. ಹೀಗೆ ಆರೈಕೆ ಮಾಡುವುದು ಸಂಪ್ರದಾಯ ಎಂದು ಎನ್ನಿಸಿಕೊಂಡಿದ್ದರೂ, ಅವುಗಳಲ್ಲಿ ವೈಜ್ಞಾನಿಕ ಕಾರಣಗಳೂ ಇದ್ದವು. ಅವುಗಳಲ್ಲಿ ಒಂದು ಧೂಪ. ಹುಟ್ಟಿದ ಶಿಶು ಸೇರಿದಂತೆ ಗರ್ಭಿಣಿಯರಿಗೂ ಧೂಪದಿಂದ ಹಲವಾರು ಪ್ರಯೋಜನಗಳ ಇವೆ ಎನ್ನುವುದು ಇದಾಗಲೇ ವೈಜ್ಞಾನಿಕ ಆಗಿಯೂ ಸಾಬೀತಾಗಿದೆ. ಅದರಲ್ಲಿಯೂ ಮಗುವಿಗೆ ಸ್ನಾನ ಮಾಡಿಸಿದ ನಂತರ ಧೂಪದ ಮೇಲೆ ಮಗುವನ್ನು ಎತ್ತಿ ಹಿಡಿಯುವುದು ಮಾಮೂಲು. ಧೂಪದಿಂದ ಅಷ್ಟೆಲ್ಲಾ ಪ್ರಯೋಜನಗಳು ಇರುವ ಕಾರಣ ಹೀಗೆ ಮಾಡಲಾಗುತ್ತದೆ. ಮನೆಯಲ್ಲಿಯೇ ಇದನ್ನು ತಯಾರಿಸುವ ಪರಿಪಾಠ ಕೆಲವೆಡೆ ಇಂದಿಗೂ ಇದೆ. ಇದರಿಂದ ಏನೂ ಅಪಾಯವಿಲ್ಲ . ಅದೂ ಅಲ್ಲದೇ ಇದೇ ಪದ್ಧತಿಯನ್ನು ಬಹಳ ಹಿಂದಿನಿಂದಲೂ ಅನುಸರಿಸುತ್ತಲೇ ಬಂದಿದ್ದಾರೆ.
ಆದರೆ ಈ ರೀತಿ ಮಾಡಬೇಡಿ ಎಂದು ವೈದ್ಯೆಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದು, ಇದು ಬಹುಪಾಲು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಡಾ.ಟೈನಿಟಾಟ್ಸ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈದ್ಯೆಯೊಬ್ಬರು, ಹೊಗೆಯ ಮೇಲೆ ಮಗುವನ್ನು ಇಡುವುದರಿಂದ ಆಗುವ ಅನಾಹುತಗಳ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಅವರ ಉದ್ದೇಶ ಟ್ರೆಡಿಷನಲ್ ಆಗಿ ಬಂದಿರುವ ಈ ಪದ್ಧತಿಯ ಬಗ್ಗೆಯಲ್ಲ. ಬದಲಿಗೆ, ಧೂಪದ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ರಾಸಾಯನಿಕಗಳದ್ದೇ ಕಾರುಬಾರು ಶುರುವಾಗಿದೆ. ಇಂಥ ರಾಸಾಯನಿಕವನ್ನು ತಂದು ಅದರ ಹೊಗೆಯನ್ನು ಮಗು ಉಸಿರಾಡುವಂತೆ ಮಾಡಿದರೆ, ಅದಕ್ಕೆ ಆಸ್ತಮಾದಂಥ ಸಮಸ್ಯೆ ಶುರುವಾಗಬಹುದು ಎನ್ನುವ ಕಳಕಳಿ ಈ ವೈದ್ಯೆಯದ್ದು. ಅಷ್ಟಕ್ಕೂ ಅವರು ಅದರಲ್ಲಿ ಯಾವುದೇ ವೈದ್ಯರು ಸಂಪ್ರದಾಯವನ್ನು ಫಾಲೋಮಾಡಬೇಡಿ ಎಂದು ಹೇಳುವುದಿಲ್ಲ. ಆದರೆ ಆ ಸಂಪ್ರದಾಯದ ಹೆಸರಿನಲ್ಲಿ ಮಗುವಿಗೆ ಅಪಾಯ ಆಗುವುದನ್ನು ಮಾಡಬೇಡಿ ಎಂದು ಹೇಳುತ್ತಾರೆ ಎಂದಷ್ಟೇ ಹೇಳಿದ್ದಾರೆ. ಅಷ್ಟಕ್ಕೂ, ಮಾರುಕಟ್ಟೆಯಲ್ಲಿ ಸಿಗುವ ಧೂಪದಲ್ಲಿ ರಾಸಾಯನಿಕಗಳು ಇರೋ ಸಾಧ್ಯತೆ ಇರುತ್ತದೆ ಎನ್ನುವುದು ಅವರ ಮಾತು.
ಆದರೆ ವೈದ್ಯೆಯ ಕಳಕಳಿಯನ್ನು ಅರ್ಥ ಮಾಡಿಕೊಳ್ಳದ ನೆಟ್ಟಿಗರು, ಅಲ್ಲಿರುವ ವಿಡಿಯೋ ನೋಡುವ ಮೂಲಕ ವೈದ್ಯೆಗೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಧೂಪದ ಮಹಿಮೆಯನ್ನು ನೀವೂ ಅರ್ಥಮಾಡಿಕೊಂಡರೆ ಒಳ್ಳೆಯದು ಎಂದು ಕೆಲವರು ಹೇಳಿದರೆ, ನಮ್ಮ ಅಜ್ಜಿ-ಮುತ್ತಜ್ಜಿಯರಿಗೆ ಈಗಿನ ವೈದ್ಯರಿಗಿಂತ ನೂರು ಪಾಲು ಹೆಚ್ಚಿನದ್ದೇ ಗೊತ್ತಿದೆ. ಈಗೇನಿದ್ದರೂ ಔಷಧಿ ತಿನ್ನಿ ನೀವೂ ತಿನ್ನಿ, ಮಗುವಿಗೂ ತಿನ್ನಿಸಿ ಎನ್ನುವುದೇ ಆಗಿದೆ. ಆದರೆ ಹಿಂದಿನ ಕಾಲದಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಚೆನ್ನಾಗಿ ಗೊತ್ತಿತ್ತು, ಈಗಲೂ ಅದನ್ನೇ ಫಾಲೋ ಮಾಡುತ್ತಿದ್ದಾರೆ. ನಿಮ್ಮ ಬುದ್ಧಿಮಾತು ಬೇಕಿಲ್ಲ ಎಂದು ಹೇಳುತ್ತಿದ್ದಾರೆ.
ಅಷ್ಟೇ ಸಾಲದು ಎನ್ನುವಂತೆ ಕೆಮಿಕಲ್ಸ್ ಬಗ್ಗೆ ಮಾತನಾಡುವವರು ಮೇಕಪ್ ತೆಗೆದು ಮಾತನಾಡಿದರೆ ಚೆನ್ನ ಎಂದು ಕೆಲವು ಕಮೆಂಟಿಗರು ಭಾರಿ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಲಿಪ್ಸ್ಟಿಕ್ನಲ್ಲಿ ಹಂದಿಮಾಂಸ ಇರುತ್ತದೆ, ಮೇಕಪ್ನಲ್ಲಿ ಇನ್ನಿಲ್ಲದ ಕೆಮಿಕಲ್ಸ್ ಇರುತ್ತದೆ. ಅದನ್ನೆಲ್ಲಾ ಮಹಿಳೆಯರು ಯಾಕೆ ಬಳಸಬಾರದು, ಅದರಿಂದ ಎಷ್ಟು ಅಪಾಯ ಇದೆ ಎನ್ನುವ ಬಗ್ಗೆ ವಿಡಿಯೋ ಮಾಡಿದರೆ ಒಳಿತು, ಅದರಿಂದ ಪ್ರಯೋಜನ ಆದೀತು ಎನ್ನುತ್ತಿದ್ದಾರೆ!
