ಹಲ್ಲುಜ್ಜುವುದು, ಅದರ ಬ್ರಷ್​ ಬಗ್ಗೆ ಗಮನ ಕೊಡುವುದು ಕೂಡ ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಅತಿದೊಡ್ಡ ಪಾತ್ರ ವಹಿಸುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರೂ ಮಾಡುವ ಬಹುದೊಡ್ಡ ತಪ್ಪಿನ ಕುರಿತು ಡಾ.ನಾ.ಸೋಮೇಶ್ವರ ಹೇಳಿದ್ದಾರೆ ನೋಡಿ... 

ಸಾಮಾನ್ಯವಾಗಿ ಎಲ್ಲರ ದಿನವೂ ಶುರುವಾಗುವುದು ಹಲ್ಲನ್ನು ಬ್ರಷ್​ ಮಾಡುವ ಮೂಲಕ. ಪುಟಾಣಿ ಕಂದಮ್ಮಗಳಿಗೂ ಮೊದಲು ಹೇಳಿಕೊಡುವ ಶುಚಿತ್ವದ ಪಾಠ ಹಲ್ಲುಜ್ಜುವುದೇ. ಆದರೆ ನಿಮಗೆ ಬ್ರಷ್​ಗೆ ಟೂಥ್​ಪೇಸ್ಟ್​ ಹೇಗೆ ಹಾಕಿಕೊಳ್ಳಬೇಕು ಎನ್ನುವುದು ಗೊತ್ತಾ? ಇದೇನಿದು ಅಸಂಬಂಧ ಪ್ರಶ್ನೆ ಎಂದು ಕೇಳಬಹುದು. ಚಿಕ್ಕಮಕ್ಕಳಿಗೂ ಗೊತ್ತಿರೋ ಈ ವಿಷ್ಯವನ್ನು ದೊಡ್ಡವರಿಗೆ ಕೇಳ್ತಿರೋದು ಎಂಥ ವಿಚಿತ್ರನಪ್ಪಾ ಎಂದುಕೊಳ್ಳಲೂಬಹುದು. ಇನ್ನು ಹಲ್ಲುಜ್ಜುವುದು ಹೇಗೆ ಎನ್ನುವುದು ಗೊತ್ತಾ ಎಂಬ ಪ್ರಶ್ನೆ ಕೇಳಿದರಂತೂ ಪ್ರಶ್ನೆ ಕೇಳಿದವರೇ ಹುಚ್ಚರು ಎಂದುಕೊಳ್ಳಬಹುದು. ಆದರೆ ಖ್ಯಾತ ದಂತವೈದ್ಯರ ಪ್ರಕಾರ, ಎಷ್ಟೋ ಮಂದಿ ಸರಿಯಾದ ರೀತಿಯಲ್ಲಿ ಹಲ್ಲನ್ನು ಉಜ್ಜಿಕೊಳ್ಳುವುದಿಲ್ಲ, ಅಷ್ಟೇ ಅಲ್ಲದೇ ಟೂಥ್​ಪೇಸ್ಟ್​ ಅನ್ನು ಬ್ರಷ್​ಗೆ ಹೇಗೆ ಹಾಕಿಕೊಳ್ಳಬೇಕು ಎನ್ನುವುದೂ ತಿಳಿದಿರುವುದಿಲ್ಲ! ಇನ್ನು ಎಲ್ಲರೂ ಸಾಮಾನ್ಯವಾಗಿ ಬ್ರಷ್​ ಅನ್ನು ತೊಳೆದ ಬಳಿಕ ಅದನ್ನು ಹಾಗೆಯೇ ಇಡುತ್ತಾರೆ, ಅಥವಾ ಅದಕ್ಕೆ ಇರುವ ಕವರ್​ನಲ್ಲಿ ಹಾಕಿ ಇಡುತ್ತಾರೆ. ಆದರೆ, ಅದು ದೊಡ್ಡ ತಪ್ಪು ಎನ್ನುತ್ತಾರೆ ಡಾ.ನಾ.ಸೋಮೇಶ್ವರ ಅವರು.

ದೂರದರ್ಶನದ ಚಂದನ ಟಿ.ವಿಯಲ್ಲಿ ಥಟ್​ ಅಂತ ಹೇಳಿ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿರುವ, ಖ್ಯಾತ ವೈದ್ಯರೂ ಆಗಿರುವ ಶಿಕ್ಷಣ ತಜ್ಞ ಡಾ.ನಾ.ಸೋಮೇಶ್ವರ ಅವರು ಈ ವಿಷಯವಾಗಿ ಮಾತನಾಡಿದ್ದಾರೆ. Rapid Rashmi ಷೋನಲ್ಲಿ ಅವರು, ಆರೋಗ್ಯದ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಜನರು ಸಾಮಾನ್ಯವಾಗಿ ಮಾಡುವ ಹಲ್ಲುಜ್ಜುವ ಬ್ರಷ್​ ಬಗೆಗಿನ ತಪ್ಪನ್ನು ಹೇಳಿದ್ದಾರೆ. ಬಹುತೇಕ ಎಲ್ಲರೂ ಬ್ರಷ್​ ಅನ್ನು ಹಲ್ಲುಜ್ಜಿದ ಬಳಿಕ ಅದನ್ನು ಹಾಗೆಯೇ ಇಡುತ್ತೇವೆ. ಆದರೆ ಆ ಬ್ರಷ್​ನಲ್ಲಿ ನಮ್ಮ ಹಲ್ಲಿನ ಕಿಟಾಣುಗಳು ಜೀವಂತವಾಗಿ ಇರುತ್ತವೆ. ಅದನ್ನು ಹಾಗೆಯೇ ಇಟ್ಟು, ಮಾರನೆಯ ದಿನ ಅದನ್ನೇ ಬ್ರಷ್​ ಮಾಡಿದಾಗ, ಅಲ್ಲಿರುವ ಕಿಟಾಣು ಪುನಃ ನಮ್ಮ ಹಲ್ಲಿಗೆ ಸೇರಿಕೊಳ್ಳುತ್ತದೆ ಎಂಬ ವಿಚಾರವನ್ನು ಡಾ.ಸೋಮೇಶ್ವರ ಅವರು ತಿಳಿಸಿದ್ದಾರೆ. ಆದ್ದರಿಂದ ಬ್ರಷ್​​ ಆದ ಬಳಿಕ ಬ್ರಷ್​ ಅನ್ನು ಉಪ್ಪಿನ ನೀರಿನಲ್ಲಿ ಇಡಬೇಕು ಎನ್ನುವುದು ಅವರ ಸಲಹೆ.

ಇದೇ ಪಾಡ್​ಕಾಸ್ಟ್​ನಲ್ಲಿ ಡಾ.ಸೋಮೇಶ್ವರ ಅವರು, ಹಲ್ಲುಜ್ಜುವ ಬ್ರಷ್​ ಖರೀದಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆಯೂ ಹೇಳಿದ್ದಾರೆ. ಬ್ರಷ್​ ಡಿಸೈನ್​ ಯಾವುದೇ ರೀತಿ ಇರಲಿ, ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ. ಅದರೆ ಮೇಲಿನ ಬ್ರಷ್​ನಲ್ಲಿ ಇರುವ ಕೂದಲನ್ನು ಆಯ್ಕೆ ಮಾಡುವಾಗ ನಮ್ಮ ಹಲ್ಲಿಗೆ ಯಾವುದು ಯೋಗ್ಯ ಎನ್ನುವುದನ್ನು ನೋಡಬೇಕು. ಕೆಲವೊಮ್ಮೆ ಅದು ಚಿಕ್ಕದಾಗಿ ಇರುತ್ತದೆ, ಕೆಲವು ಬ್ರಷ್​ಗಳಲ್ಲಿ ದೊಡ್ಡದಾಗಿ ಇರುತ್ತದೆ. ನಿಮ್ಮ ಹಲ್ಲುಗಳಿಗೆ ತಕ್ಕಂತ ಬ್ರಷ್​ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದೇ ವೇಳೆ ತುಂಬಾ ಗಟ್ಟಿಯಾಗಿರುವ ಬ್ರಷ್​ ಅರ್ಥಾತ್​ ಅದರ ಕೂದಲು ತುಂಬಾ ಗಡುಸಾಗಿದ್ದರೆ ಖರೀದಿ ಬೇಡ, ಸಾಫ್ಟ್​ ಆಗಿರುವ ಕೂದಲು ತೆಗೆದುಕೊಂಡರೆ ಒಳ್ಳೆಯದು ಎಂದಿದ್ದಾರೆ. ಅದೇ ವೇಳೆ, ತಿಂಗಳಿಗೆ ಒಮ್ಮೆ ಬ್ರಷ್​ ಬದಲಾಯಿಸಿದರೆ ಹಲ್ಲಿನ ಆರೋಗ್ಯಕ್ಕೆ ಉತ್ತಮ ಎನ್ನುವುದು ಅವರ ಸಲಹೆ.

ಈ ಹಿಂದೆ ದಂತವೈದ್ಯರೊಬ್ಬರು ಬ್ರಷ್​ ಮೇಲೆ ಟೂಥ್​ಪೇಸ್ಟ್​ ಹೇಗೆ ಹಾಕಿಕೊಳ್ಳಬೇಕು ಎನ್ನುವುದನ್ನು ಹೇಳಿದ್ದರು. ಸಾಮಾನ್ಯವಾಗಿ ಎಲ್ಲರಿಗೂ ಬೆಳಿಗ್ಗೆ ಗಡಿಬಿಡಿ. ಬ್ರಷ್​ ತೆಗೆದುಕೊಂಡು ಅದರ ಮೇಲೆ ಪೇಸ್ಟ್​ ಹಾಕುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅರ್ಧಕ್ಕರ್ಧ ಪೇಸ್ಟ್​ ಬಾಯಿಯೊಳಗೆ ಹೋಗುವ ಬದಲು ಕೆಳಗೆ ಬೀಳುತ್ತದೆ. ಇದೇ ಕಾರಣಕ್ಕೆ ವೈದ್ಯರು ಹೇಳುವುದು ಏನೆಂದರೆ, ಬ್ರಷ್​ಗೆ ಅಂಟಿಸಿ ಪೇಸ್ಟ್​ ಹಾಕಬೇಕು. ಅಂದರೆ ಪೇಸ್ಟ್​ ಅನ್ನು ಬ್ರಷ್​ ಮೇಲೆ ತಿಕ್ಕಿ ಹಾಕಬೇಕು. ಇದರಿಂದ ಪೇಸ್ಟ್​ ಬ್ರಷ್​ನ ಒಳಗಡೆ ಸರಿಯಾಗಿ ಕುಳಿತು ಹಲ್ಲು ತಿಕ್ಕಲು ಸಹಕಾರಿಯಾಗುತ್ತದೆ. ಆದ್ದರಿಂದ ಹಲ್ಲಿನ ಶುಚಿತ್ವದ ಬಗ್ಗೆ ವಿಶೇಷ ಗಮನ ಕೊಡಬೇಕು ಎಂದಿದ್ದರು. (ಅದರ ಫುಲ್​ ಡಿಟೇಲ್ಸ್​ ಹಾಗೂ ವಿಡಿಯೋ ಈ ಮೇಲಿನ Related Articles ಲಿಂಕ್​ನಲ್ಲಿದೆ)

View post on Instagram