ಮನೆಯಲ್ಲಿ ಎಲ್ಲರೂ ವೈದ್ಯರು. ಈಕೆ ಖುದ್ದು ವೈದ್ಯೆ, ನರರೋಗ ಶಾಸ್ತ್ರದಲ್ಲಿ ಚಿನ್ನದ ಪದಕ ವಿಜೇತೆ. ಆದರೂ ಆಟೋಇಮ್ಯೂನ್ ನರಗಳ ಕಾಯಿಲೆ ಯುವ ವೈದ್ಯೆ ಡಾ.ಲಾವಣ್ಯ ಜೀವ ಕಸಿದುಕೊಂಡಿದೆ. ಆದರೆ ಚಿಕಿತ್ಸೆ ಪಡೆಯುವಷ್ಟರಲ್ಲಿ ಹೃದಯಾಘಾತ ಸಂಭವಿಸಿ ಅವರ ಬದುಕಿನ ಪಯಣ ದುರಂತ ಅಂತ್ಯ ಕಂಡಿದೆ ಎನ್ನಲಾಗಿದೆ.
ನೆಲ್ಲೂರು: ಸಾವು ಎನ್ನುವುದು ಎಲ್ಲರಿಗೂ ಕಟ್ಟಿಟ್ಟದ್ದೇ. ಒಬ್ಬರಿಗೆ ಇಂದು, ಇನ್ನೊಬ್ಬರಿಗೆ ನಾಳೆ, ಮತ್ತೊಬ್ಬರಿಗೆ ಇನ್ನೊಂದು ದಿನ ಅಷ್ಟೇ. ಆದರೆ ಮೊದಲೆಲ್ಲಾ ವಯಸ್ಸಾದ ಮೇಲೆ ಸಾವಿನ ಬಾಗಿಲು ತಟ್ಟುತ್ತಿದ್ದರು ಜನ. ಆದರೆ ಇಂದು ಹಾಗಲ್ಲ, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ, ಎಳವೆಯಲ್ಲಿಯೇ, ಏನೂ ಸಮಸ್ಯೆಯೇ ಇಲ್ಲ ಎಂದುಕೊಂಡವರೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೆಲವರಿಗೆ ಹೃದಯಾಘಾತದ ಸೂಚನೆ ಮೊದಲಿಗೆ ಒಂದೆರಡು ಬಾರಿ ಸಿಕ್ಕಿದ್ದರೂ, ಮತ್ತೆ ಕೆಲವರು ಮೊದಲ ಆಘಾತದಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇನ್ನೇನೋ ಕಾರಣದಿಂದ ಸಾಯುತ್ತಿದ್ದಾರೆ. ಒತ್ತಡದ ಬದುಕು, ಕಲುಷಿತ ಆಹಾರ, ವಾತಾವರಣ... ಹೀಗೆ ಕಾರಣಗಳೆಲ್ಲವೂ ನೆಪಕ್ಕೆ ಮಾತ್ರವೇ ಎನ್ನುವಂತೆ ಕೆಲವರ ಸಾವು ಆಗುವುದು ಇದೆ. ಇದ್ದ-ಬಿದ್ದ ಚಟಗಳಿಗೆ ದಾಸರಾದವರು ನೂರಾರು ವರ್ಷ ಬದುಕಿದ್ದರೆ, ಏನೂ ಚಟವನ್ನೇ ಇಟ್ಟುಕೊಳ್ಳದೇ ಉತ್ತಮ ಆರೋಗ್ಯಕರ ಎನ್ನುವ ಜೀವನಶೈಲಿ ಅಳವಡಿಸಿಕೊಳ್ಳುತ್ತಿರುವವರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಸಾವಿಗೆ ಒಂದು ಚಿಕ್ಕ ಕಾರಣ ಬೇಕಷ್ಟೇ.
ಸಾವು ಬಂದರೆ, ಅದು ಯಾರನ್ನೂ ಕಾಯುವುದಿಲ್ಲ. ಅದೇ ರೀತಿ, ಇದೀಗ ಮನೆಯಲ್ಲಿ ಎಲ್ಲರೂ ವೈದ್ಯರು ಇದ್ದರೂ, ಖುದ್ದು ವೈದ್ಯೆಯಾಗಿ, ಚಿನ್ನದ ಪದಕವನ್ನು ಪಡೆದುಕೊಂಡಿದ್ದರೂ ಆಂಧ್ರಪ್ರದೇಶದ ನೆಲ್ಲೂರಿನ ಯುವ ವೈದ್ಯೆ ಡಾ. ಲಾವಣ್ಯ ಹೃದಯಾಘಾತಕ್ಕೆ ಬಲಿಯಾಗಿದ್ದು, ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ವಿಚಿತ್ರ ಎಂದರೆ ಡಾ.ಲಾವಣ್ಯ ಅವರು ನ್ಯೂರಾಲಜಿಸ್ಟ್ ಆಗಿದ್ದರು. ಅರ್ಥಾತ್ ನರರೋಗ ಶಾಸ್ತ್ರಜ್ಞರು. ಇದೇ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದರು. ಆದರೆ, ಅವರು ಮಾರಕ ಆಟೋಇಮ್ಯೂನ್ ನರಗಳ ಕಾಯಿಲೆಯಿಂದಲೂ ಬಳಲುತ್ತಿದ್ದರು! ಈಕೆಯ ಪತಿ, ಅಪ್ಪ ಎಲ್ಲವೂ ವೈದ್ಯರು. ಆದರೆ ಚಿಕಿತ್ಸೆ ಪಡೆಯುವಷ್ಟರಲ್ಲಿ ಹೃದಯಾಘಾತ ಸಂಭವಿಸಿ ಅವರ ಬದುಕಿನ ಪಯಣ ದುರಂತ ಅಂತ್ಯ ಕಂಡಿದೆ ಎನ್ನಲಾಗಿದೆ.
ಉಪನ್ಯಾಸಕರಿಂದ ಭಾವುಕ ಸಂದೇಶ
ಡಾ.ಲಾವಣ್ಯ ಅವರು ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡಿದ್ದೇ ಬೇರೆಯವರ ಜೀವವನ್ನು ಉಳಿಸುವುದಕ್ಕಾಗಿ ಎಂದು ಹೇಳುತ್ತಿದ್ದರಂತೆ. ಆದರೆ, ಅವರ ಕುಟುಂಬದವರು ಕೂಡ ಮನೆಮಗಳ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಡಾ.ಲಾವಣ್ಯ ಅವರ ಶಿಕ್ಷಕರಾಗಿದ್ದ ರೋಹಿತ್ ಕಾರನಟಿ ಅವರು ತಮ್ಮ ಫೇಸ್ಬುಕ್ನಲ್ಲಿ ಈ ನೋವಿನ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನೆಲ್ಲೂರಿನ ಎನೆಲ್ ಆಸ್ಪತ್ರೆಯಲ್ಲಿ ನರವಿಜ್ಞಾನಿಯಾಗಿದ್ದ ಡಾ. ಲಾವಣ್ಯ ಅವರು ತಮ್ಮ ಪದವಿಪೂರ್ವ ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ನನ್ನ ವಿದ್ಯಾರ್ಥಿಯಾಗಿದ್ದರು. ಅವರು ಅಸಾಧಾರಣವಾಗಿ ಚುರುಕಾದ, ಪ್ರತಿಭಾನ್ವಿತ ಮತ್ತು ಸಮರ್ಪಿತ ವಿದ್ಯಾರ್ಥಿನಿ, ಯಾವಾಗಲೂ ಅಧ್ಯಯನಶೀಲರು ಮತ್ತು ಶೈಕ್ಷಣಿಕ ವಿಷಯಗಳಿಗೆ ಆಳವಾಗಿ ಬದ್ಧರಾಗಿದ್ದರು ಎಂದು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಡಾ. ಲಾವಣ್ಯ ಅವರ ಹಠಾತ್ ನಿಧನದ ಬಗ್ಗೆ ಕೇಳಲು ತುಂಬಾ ನೋವಿನ ಸಂಗತಿ. ಸಾಮಾನ್ಯ ರಾತ್ರಿಯ ನಂತರ, ಅವರು ಬೆಳಿಗ್ಗೆ ಎಚ್ಚರಗೊಳ್ಳಲಿಲ್ಲ ಎಂದು ವರದಿಯಾಗಿದೆ. ಅವರ ಅಕಾಲಿಕ ಮರಣದ ಸುದ್ದಿ ಎಲ್ಲರನ್ನೂ ತೀವ್ರ ಆಘಾತ ಮತ್ತು ಅಪನಂಬಿಕೆಗೆ ಒಳಪಡಿಸಿದೆ. ಅವರು ಬಹಳ ಸಮಯದಿಂದ ಮೈಸ್ತೇನಿಯಾ ಗ್ರ್ಯಾವಿಸ್ ವಿರುದ್ಧ ಹೋರಾಡುತ್ತಿದ್ದರು, ವಿದೇಶದಲ್ಲಿ ಚಿಕಿತ್ಸೆ ಮತ್ತು ಥೈಮೆಕ್ಟಮಿಗೆ ಒಳಗಾಗಿದ್ದರು. ಈ ಕಷ್ಟಕರ ಪ್ರಯಾಣದ ಉದ್ದಕ್ಕೂ ಅವರು ತುಂಬಾ ದೈಹಿಕ ನೋವನ್ನು ಸಹಿಸಿಕೊಂಡರು. ಈ ಎಲ್ಲಾ ಸವಾಲುಗಳ ಹೊರತಾಗಿಯೂ, ಅವರು ಧೈರ್ಯದಿಂದ ಹೋರಾಡಿದರು, ಮತ್ತು ಇತ್ತೀಚಿನ ದಿನಗಳಲ್ಲಿ, ಅವರು ಚೆನ್ನಾಗಿ ಚೇತರಿಸಿಕೊಂಡು ಸಾಮಾನ್ಯ ಜೀವನವನ್ನು ನಡೆಸುತ್ತಿರುವಂತೆ ಕಂಡುಬಂದರು. ಇಂತಹ ಹಠಾತ್ ದುರಂತ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ.ದು ಕಾಲದಲ್ಲಿ ನಿಮ್ಮ ತರಗತಿಯಲ್ಲಿ ವಿದ್ಯಾರ್ಥಿಯಾಗಿ ಕುಳಿತು, ತನ್ನ ಕನಸುಗಳನ್ನು ಸಮರ್ಪಣಾಭಾವದಿಂದ ಅನುಸರಿಸಿಕೊಂಡು, ನಂತರ ತನ್ನದೇ ಆದ ಕ್ಷೇತ್ರದಲ್ಲಿ ಪರಿಣಿತಳಾದ ಒಬ್ಬ ವ್ಯಕ್ತಿ ಅನಿರೀಕ್ಷಿತವಾಗಿ ಇಹಲೋಕ ತ್ಯಜಿಸಿದಾಗ ಅದು ತುಂಬಾ ನೋವಿನ ಸಂಗತಿ ಎಂದಿದ್ದಾರೆ.














