ಮೂತ್ರವನ್ನು ದೀರ್ಘಕಾಲ ತಡೆಹಿಡಿಯುವುದು ಕಿಡ್ನಿಗಳ ಮೇಲೆ ಒತ್ತಡ ಹೇರಿ, ವಿಷಕಾರಿ ಅಂಶಗಳು ದೇಹದಲ್ಲೇ ಉಳಿಯುವಂತೆ ಮಾಡುತ್ತದೆ. ಇದು ಮೂತ್ರನಾಳದ ಸೋಂಕು (UTI), ಕಿಡ್ನಿ ಸ್ಟೋನ್ಸ್ ಮತ್ತು ಮೂತ್ರಕೋಶದ ಸ್ನಾಯುಗಳ ದುರ್ಬಲತೆಗೆ ಕಾರಣವಾಗಬಹುದು, ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ಇಂದಿನ ಬಿಡುವಿಲ್ಲದ ಬದುಕಿನಲ್ಲಿ ನಮಗೆ ಆಫೀಸ್ ಮೀಟಿಂಗ್, ಕಾಲೇಜು ಕ್ಲಾಸ್ ಅಥವಾ ಲಾಂಗ್ ಡ್ರೈವ್ ಅಂತಾ ಬ್ಯುಸಿ ಇರ್ತೇವೆ! ಆದರೆ, ಈ ಗದ್ದಲದಲ್ಲಿ ದೇಹ ನೀಡುವ 'ಅರ್ಜೆಂಟ್' ಕರೆಗೆ ಓಗೊಡುವುದನ್ನು ಮಾತ್ರ ಮರೆತುಬಿಡುತ್ತೇವೆ. ಇನ್ನೊಂದು ಐದು ನಿಮಿಷ ತಡೆಯೋಣ ಅಂತಲೋ, ಸರಿಯಾದ ಸಮಯಕ್ಕೆ ಶೌಚಾಲಯ ಸಿಗದ ಕಾರಣವೋ ನೀವು ಮಾಡುವ ಸಣ್ಣ ನಿರ್ಲಕ್ಷ್ಯ, ನಿಮ್ಮ ಕಿಡ್ನಿಗಳ ಪಾಲಿಗೆ ಮೃತ್ಯುಗಂಟೆಯಾಗಬಹುದು. ಸುಮ್ಮನೆ ಹಠ ಹಿಡಿದು ಮೂತ್ರ ನಿಲ್ಲಿಸುವುದು ಬರೀ ಶಿಸ್ತಿನ ಪ್ರಶ್ನೆಯಲ್ಲ, ಅದು ನಿಮ್ಮ ಆರೋಗ್ಯದ ಮೇಲಿನ ಸರ್ಜಿಕಲ್ ಸ್ಟ್ರೈಕ್!
ಕಿಡ್ನಿಗಳ ಮೇಲಿನ 'ರಿವರ್ಸ್ ಗೇರ್' ಒತ್ತಡ
ನಮ್ಮ ಕಿಡ್ನಿಗಳು ಹಗಲಿರುಳು ರಕ್ತವನ್ನು ಫಿಲ್ಟರ್ ಮಾಡಿ ಮೂತ್ರ ಉತ್ಪಾದಿಸುತ್ತವೆ. ನೀವು ಮೂತ್ರ ವಿಸರ್ಜನೆ ಮಾಡದೆ ಮೊಂಡುತನ ಪ್ರದರ್ಶಿಸಿದರೆ, ಆ ಮೂತ್ರವು ವಾಪಸ್ ಕಿಡ್ನಿಗಳತ್ತಲೇ ಹರಿಯಲು (Reverse Flow) ಆರಂಭಿಸುತ್ತದೆ. ಈ ಒತ್ತಡದಿಂದಾಗಿ ಕಿಡ್ನಿಗಳು ಹೈರಾಣಾಗುತ್ತವೆ. ದೇಹದಿಂದ ಹೊರಹೋಗಬೇಕಿದ್ದ ವಿಷಕಾರಿ ಬ್ಯಾಕ್ಟೀರಿಯಾ ಮತ್ತು ಉಪ್ಪಿನ ಅಂಶಗಳು ಒಳಗೆ ಉಳಿದು, ಕಿಡ್ನಿಯ ಜೀವಕೋಶಗಳನ್ನು ಸ್ಲೋ ಪಾಯ್ಸನ್‌ನಂತೆ ಕೊಲ್ಲಲು ಶುರುಮಾಡುತ್ತವೆ.
UTI ಎಂಬ ಉರಿಯುವ ಕಿರಿಕಿರಿ
ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಎಂದರೆ ಬ್ಯಾಕ್ಟೀರಿಯಾಗಳಿಗೆ ಪಾರ್ಟಿ ಮಾಡಲು ಆಹ್ವಾನ ನೀಡಿದಂತೆ! ಇವು ಮೂತ್ರನಾಳದಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡಿದರೆ, ನಿಮಗೆ UTI (ಮೂತ್ರನಾಳದ ಸೋಂಕು) ಗ್ಯಾರಂಟಿ. ಮೂತ್ರ ಮಾಡುವಾಗ ಉರಿ, ಕೆಳಹೊಟ್ಟೆ ನೋವು ಮತ್ತು ವಿಪರೀತ ದುರ್ವಾಸನೆಯಿಂದ ಕೂಡಿದ ಮೂತ್ರ ನಿಮ್ಮನ್ನು ಹೈರಾಣು ಮಾಡುತ್ತದೆ. ನೆನಪಿರಲಿ, ಇದು ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ದೊಡ್ಡ ತಲೆನೋವು!
ಕಲ್ಲಿನಂತಹ ಕಾಯಿಲೆ: ಕಿಡ್ನಿ ಸ್ಟೋನ್ಸ್
ಕಡಿಮೆ ನೀರು ಕುಡಿದು, ಬಂದ ಮೂತ್ರವನ್ನೂ ಹೊರಹಾಕದಿದ್ದರೆ ಅದು ಗಟ್ಟಿಯಾಗಿ ಕೇಂದ್ರೀಕೃತವಾಗುತ್ತದೆ. ಆಗ ಅಲ್ಲಿ 'ಕಿಡ್ನಿ ಸ್ಟೋನ್' ಅಲಿಯಾಸ್ ಮೂತ್ರಪಿಂಡದ ಕಲ್ಲುಗಳಾಗಿ ರೂಪಾಂತರಗೊಳ್ಳುತ್ತವೆ. ಒಮ್ಮೆ ಈ ಕಲ್ಲುಗಳು ನೋವು ಕೊಡಲು ಶುರುಮಾಡಿದರೆ, ವಾಂತಿ ಮತ್ತು ರಕ್ತದ ಮೂತ್ರದ ಜೊತೆಗೆ ಆಸ್ಪತ್ರೆಗೆ ಅಲೆಯುವುದು ಅನಿವಾರ್ಯವಾಗುತ್ತದೆ. ಕೊನೆಗೆ ಸರ್ಜರಿ ಒಂದೇ ದಾರಿಯಾಗಬಹುದು!
ಸ್ನಾಯುಗಳ ಸಡಿಲಿಕೆ ಮತ್ತು ಇತರ ಅಪಾಯಗಳು
ಪದೇ ಪದೇ ಮೂತ್ರ ತಡೆಹಿಡಿಯುವುದರಿಂದ ನಿಮ್ಮ ಮೂತ್ರಕೋಶದ ಸ್ನಾಯುಗಳು ಎಲಾಸ್ಟಿಕ್ ತರಹ ಸಡಿಲವಾಗುತ್ತವೆ. ಮುಂದೆ ನಿಮಗೆ ಗೊತ್ತಿಲ್ಲದಂತೆಯೇ ಮೂತ್ರ ಸೋರಿಕೆ ಆಗುವ ಅಪಾಯವಿರುತ್ತದೆ. ಅದರಲ್ಲೂ ಡಯಾಬಿಟಿಸ್ ಇರುವವರು, ಪ್ರಾಸ್ಟೇಟ್ ಸಮಸ್ಯೆ ಇರುವ ಪುರುಷರು ಮತ್ತು ಕಿಡ್ನಿ ಸಮಸ್ಯೆ ಮೊದಲೇ ಇರುವವರು ಈ ಸಾಹಸಕ್ಕೆ ಕೈಹಾಕಲೇಬಾರದು.


