ಕೊರೋನಾದಿಂದ ಜಗತ್ತಿಗೆ ಎದುರಾಗಿರೋ ಕಂಟಕಗಳು ಒಂದೆರಡಲ್ಲ. ನಿತ್ಯ ಭಯ,ಆತಂಕದಲ್ಲೇ ಬದುಕು ಕಳೆಯಬೇಕಾದ ಅನಿವಾರ್ಯತೆ.ಸ್ನೇಹಿತರು,ಬಂಧುಗಳ ಜೊತೆ ಬೆರೆಯಲು,ಹೊರಗೆ ಸುತ್ತಾಡಲೂ ಆಗದಂತಹ ಸ್ಥಿತಿ. ಕಳೆದ ಒಂದು ವರ್ಷದಿಂದ ಮನೆಯೇ ಮಂತ್ರಾಲಯ ಎಂಬ ಸ್ಥಿತಿ. ಈ ಮಧ್ಯೆ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡ್ರೆ,ಇನ್ನೊಂದಿಷ್ಟು ಜನರು ಬದುಕಿಗೆ ಆಧಾರವಾಗಿದ್ದಉದ್ಯೋಗ ಕಳೆದುಕೊಂಡರು.ಕೊರೋನಾದ ರೋಗಲಕ್ಷಣಗಳು,ಔಷಧದ ಬಗ್ಗೆ ಸಾಕಷ್ಟು ಅಧ್ಯಯನಗಳು ಜಗತ್ತಿನಾದ್ಯಂತ ನಡೆದಿವೆ.ಈ ಪೆಂಡಾಮಿಕ್‌ ಜನರ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬ ಬಗ್ಗೆ ಕೂಡ ಬೆರಳೆಣಿಕೆಯಷ್ಟು ಸಂಶೋಧನೆಗಳು ನಡೆದಿವೆ.ಜನರ ಆತಂಕ ಹಾಗೂ ಒತ್ತಡ ಮಟ್ಟದ ಮೇಲೆ ಕೊರೋನಾ ಪೆಂಡಾಮಿಕ್‌ ಬೀರಿರೋ ಪರಿಣಾಮದ ಬಗ್ಗೆ ಸಂಶೋಧನೆ ನಡೆದಿತ್ತು.ಇತ್ತೀಚಿನ ದಿನಗಳಲ್ಲಿ ಬಹುತೇಕರು ಸ್ವಲ್ಪ ಶೀತವಾದ್ರೂ, ಸೀನು ಬಂದ್ರೂ ಬೆಚ್ಚಿ ಬೀಳುತ್ತಾರೆ.ಕಫ,ಕೆಮ್ಮು ಅಥವಾ ಜ್ವರ ಕಾಣಿಸಿಕೊಂಡರಂತೂ ಕೊರೋನಾ ಬಂದುಬಿಟ್ಟಿದೆ ಎಂಬ ಭಯ ಶುರುವಾಗುತ್ತೆ.ಈ ಅನಗತ್ಯ ಆತಂಕಕ್ಕೆ ವಿಜ್ಞಾನಿಗಳು ʼಕೊರೋನಾಫೋಬಿಯಾʼ ಎಂಬ ಹೆಸರಿಟ್ಟಿದ್ದಾರೆ.ಇದು ಕೊರೋನಾ ಕಾರಣಕ್ಕೆ ಹುಟ್ಟಿಕೊಂಡಿರೋ ಆತಂಕ.

ಕುಡಿಯೊಡೆದ ಈರುಳ್ಳಿ, ಬೆಳ್ಳುಳ್ಳಿ ಎಸೆಯೋ ಮುನ್ನ ಪ್ಲೀಸ್ ಇಲ್ ಕೇಳಿ

ಏನಿದು ಕೊರೋನಾಫೋಬಿಯಾ?
ಫೋಬಿಯಾ ಅಂದ್ರೆ ಭಯ ಅನ್ನೋದು ಗೊತ್ತಿರೋ ಸಂಗತಿ. ಬದುಕಿನ ವಿವಿಧ ಮಜಲುಗಳು ಹಾಗೂ ಪರಿಸ್ಥಿತಿಯ ಬಗ್ಗೆ ಭಯ, ಹೆದರಿಕೆ ಇರೋದೇ ಫೋಬಿಯಾ. ಅದೇರೀತಿ ಕೊರೋನಾಫೋಬಿಯಾ ಅನ್ನೋದು ಕೊರೋನಾ ವೈರಸ್‌ಗೆ ಸಂಬಂಧಿಸಿದ ಭಯ. ಕೊರೋನಾ ಕುರಿತು ಸದ್ಯ ಎಲ್ಲರ ಮನಸ್ಸಿನಲ್ಲೂ ಇಂಥದೊಂದು ಭಯ ಇದ್ದೇಇದೆ. ಆದ್ರೆ ಈ ಬಗ್ಗೆ ಅತಿಯಾಗಿ ಯೋಚಿಸೋರು ಇತರರಿಗಿಂತ ಹೆಚ್ಚು ಭಯ, ಆತಂಕಕ್ಕೊಳಗಾಗುತ್ತಾರೆ. ಈ ಕುರಿತು ನಡೆದ ಅನೇಕ ಅಧ್ಯಯನಗಳನ್ನು ಆಧರಿಸಿ ವಿಜ್ಞಾನಿಗಳು ಕೊರೋನಾ ಫೋಬಿಯಾವನ್ನು ಹೀಗೆ ವಿವರಿಸಿದ್ದಾರೆ: ʼ ಕೋವಿಡ್‌-19ಗೆ ಕಾರಣವಾಗೋ ವೈರಸ್‌ ಸಂಪರ್ಕಕ್ಕೆ ಬರುತ್ತೇವೆ ಎಂಬ ಅತಿಯಾದ ಭಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಇದ್ರಿಂದ ವೈಯಕ್ತಿಕ ಹಾಗೂ ವೃತ್ತಿಬದುಕಿನಲ್ಲಿ ಏದುರಾದ ನಷ್ಟಗಳಿಂದ ಅತಿಯಾದ ಒತ್ತಡ ಸೃಷ್ಟಿಯಾಗುತ್ತೆ. ಸದಾ ಸುರಕ್ಷತೆಯ ಬಗ್ಗೆ ಯೋಚನೆ ಜೊತೆಗೆ ನಿತ್ಯದ ಬದುಕಿನ ಬಂಡಿ ಸಾಗಲು ಹೋಗಲೇಬೇಕಾದ ಸಾರ್ವಜನಿಕ ಸ್ಥಳಗಳು ಹಾಗೂ ಕಾರ್ಯಕ್ರಮಗಳನ್ನು ನಿರ್ಲಕ್ಷಿಸೋದು.ʼ 

ರೋಗಲಕ್ಷಣಗಳು
ಡಿಸೆಂಬರ್‌ 2020ರಲ್ಲಿ ಏಷಿಯನ್‌ ಜರ್ನಲ್‌ ಆಫ್‌ ಸೈಕ್ಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನವನ್ನು ಆಧರಿಸಿ ಕೋವಿಡ್‌ -19 ಪರಿಣಾಮವಾಗಿ ಹುಟ್ಟಿಕೊಳ್ಳುತ್ತಿರೋ ಆತಂಕದ ಮೂರು ಲಕ್ಷಣಗಳನ್ನು ಪತ್ತೆ ಹಚ್ಚಿದ್ದಾರೆ. ಅವು ಯಾವುವೆಂದರೆ
-ನಿರಂತರವಾದ ಚಿಂತೆ ಹೃದಯ ಬಡಿತದಲ್ಲಿ ಏರುಪೇರು, ಹಸಿವಿಲ್ಲದಿರೋದು ಹಾಗೂ ತಲೆ ಸುತ್ತೋದಕ್ಕೆ ಕಾರಣವಾಗಬಲ್ಲದು.
-ಅತಿಯಾದ ಯೋಚನೆ ಭಯ ಹಾಗೂ ಚಿಂತೆಯನ್ನು ಹೆಚ್ಚಿಸುತ್ತೆ.
-ಜನರು ಸೇರೋ ಸ್ಥಳಗಳು ಅಥವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಯ. ಒಂದು ರೀತಿ ಸಮಾಜದಿಂದ ವಿಮುಖವಾಗೋ ವರ್ತನೆ ಕಾಣಿಸಿಕೊಳ್ಳುತ್ತೆ. ಇದು ಮುಂದೆ ಆತಂಕ ಹಾಗೂ ಒಂಟಿತನದಂತಹ ಸಮಸ್ಯೆಗಳಿಗೆ ಮೂಲವಾಗಬಹುದು.

ಜಾತಕ ಬಿಡಿ, ಮದುವೆಗೂ ಮುನ್ನ ಈ 4 ಮೆಡಿಕಲ್ ಟೆಸ್ಟ್ ತಪ್ಪದೇ ಮಾಡಿಸಿ!

ಇವರಿಗೆ ಅಪಾಯ ಹೆಚ್ಚು
ಫ್ರಂಟಿಯರ್ಸ್‌ ಇನ್‌ ಗ್ಲೋಬಲ್‌ವಿಮೆನ್ಸ್‌ ಹೆಲ್ತ್‌ ಎಂಬ ಆನ್‌ಲೈನ್‌ ಜರ್ನಲ್‌ನಲ್ಲಿಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಇನ್ಸೋಮ್ನಿಯಾ, ಖಿನ್ನತೆ ಹಾಗೂ ಆತಂಕದ ರೋಗಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತೆ.  ಕುಟುಂಬ ಸದಸ್ಯರಿಗೆ ಕೊರೋನಾ ಬಂದ್ರೆ ಅಥವಾ ನನ್ನಿಂದಾಗಿ ಇತರರಿಗೆ ಹರಡಿದರೆ ಎಂಬ ಚಿಂತೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿರೋ ಕಾರಣ ಅವರು ಆತಂಕಕ್ಕೊಳಗಾಗೋ ಸಾಧ್ಯತೆ ಅಧಿಕ. ಇನ್ನು ಯುವಜನರು ಕೂಡ ಹೆಚ್ಚು ಆತಂಕಕ್ಕೊಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ವೈರಸ್‌ ಹಾಗೂ ಪೆಂಡಾಮಿಕ್‌ ಕಾರಣದಿಂದಾಗಿ ಸೃಷ್ಟಿಯಾಗಿರೋ ಪರಿಸ್ಥಿತಿ. ಮೊದಲಿನಂತೆ ಸ್ನೇಹಿತರ ಭೇಟಿ, ಪಾರ್ಟಿ, ಟ್ರಾವೆಲ್‌, ಶಾಪಿಂಗ್‌ ಮಾಡಲು ಸಾಧ್ಯವಾಗುತ್ತಿಲ್ಲ.ಇದು ಯುವಜನರನ್ನು ಸಾಕಷ್ಟು ಕಂಗೆಡಿಸಿದೆ. 

ಬೇಸಿಗೆಯಲ್ಲಿಪುರುಷರು ಈ ಹಣ್ಣನ್ನು ಮಿಸ್ ಮಾಡದೆ ತಿನ್ನಿ

ಕೊರೋನಾಫೋಬಿಯಾ ಬಂದ್ರೆ ಏನ್‌ ಮಾಡ್ಬೇಕು?
ಆತಂಕ ಹಾಗೂ ಒತ್ತಡದ ಸಮಸ್ಯೆಯನ್ನು ನಿರ್ವಹಿಸೋ ಬಗ್ಗೆ ಸೆಂಟರ್‌ ಫಾರ್‌ ಡಿಸಿಸ್‌ ಕಂಟ್ರೋಲ್‌ ಆಂಡ್‌ ಪ್ರಿವೆನ್ಷನ್‌ (ಸಿಡಿಸಿ) ಸಾಕಷ್ಟು ಸಲಹೆಗಳನ್ನು ನೀಡಿದೆ. ಪ್ರತಿಯೊಬ್ಬರೂ ತಮ್ಮ ದೈಹಿಕ ಆರೋಗ್ಯದ ಕಾಳಜಿ ವಹಿಸೋ ಜೊತೆ ಇತರರೊಂದಿಗೆ ಬೆರೆಯುವಂತೆ ಸಲಹೆ ನೀಡಿದೆ. ಅಲ್ಲದೆ, ಅಗತ್ಯವೆನಿಸಿದ್ರೆ ಆತಂಕಕ್ಕೆ ಸೂಕ್ತ ಚಿಕಿತ್ಸೆ ಪಡೆಯುವಂತೆಯೂ ತಿಳಿಸಿದೆ. ಕೊರೋನಾಕ್ಕೆ ಲಸಿಕೆಗಳನ್ನು ಕೂಡ ಸಿದ್ಧಕೊಂಡಿದ್ದು, ಕೆಲವು ರಾಷ್ಟ್ರಗಳಲ್ಲಿ ಜನರಿಗೆ ನೀಡಲಾಗುತ್ತಿದೆ. ಇದು ಆತಂಕವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿದೆ. ಆದ್ರೂ ಕೊರೋನಾ ಕುರಿತ ಭಯ ಇನ್ನೂ ಜನರನ್ನು ಬಿಟ್ಟು ಹೋಗಿಲ್ಲ. ಕೊರೋನಾ ಕುರಿತ ಭಯ, ಆತಂಕವನ್ನು ಸ್ವ ನಿಯಂತ್ರಣ ಹಾಗೂ ತಾಳ್ಮೆಯಿಂದ ಮಾತ್ರ ಗೆಲ್ಲಲು ಸಾಧ್ಯ. ಹೀಗಾಗಿ ನಮಗೆ ನಾವೇ ನಿಯಂತ್ರಣ ಹೇರಿಕೊಳ್ಳೋ ಜೊತೆ ಕೊರೋನಾಮುಕ್ತ ನಾಳೆಗೆ ತಾಳ್ಮೆಯಿಂದ ಕಾಯಬೇಕಿದೆ.