Health Tips: ಜೀವನದಲ್ಲಿ ಎಂದಿಗೂ ಇವುಗಳನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಲೇಬೇಡಿ
ನಮಗೆ ಆರೋಗ್ಯವಂತ ದೇಹ ಅನಾಯಾಸವಾಗಿ ದೊರೆತಿದೆ. ಸೌಂದರ್ಯವೂ ಜೀನ್ ನಿಂದ ಬಂದಿದೆ. ಸಂಬಂಧಗಳು ಸಾಕೆನಿಸುವಷ್ಟಿವೆ. ಹೀಗಾಗಿ, ಎಲ್ಲದರ ಬಗೆಗೂ ಒಂದಿಷ್ಟು ಟೇಕನ್ ಫಾರ್ ಗ್ರ್ಯಾಂಟೆಡ್ ಧೋರಣೆ. ಆದರೆ, ಕೆಲವು ವಿಚಾರಗಳ ಕುರಿತು ಎಂದಿಗೂ ಅಲಕ್ಷ್ಯ ಸಲ್ಲದು.
ಅನಾಯಾಸವಾಗಿ ದೊರಕಿದ್ದೆಲ್ಲವನ್ನೂ ಟೇಕನ್ ಫಾರ್ ಗ್ರ್ಯಾಂಟೆಡ್ ನಂತೆ ಪರಿಗಣಿಸುವುದು ಮನುಷ್ಯನ ಸ್ವಭಾವ. ಆದರೆ, ಕೆಲವರು ಅರಿವನ್ನು ಬೆಳೆಸಿಕೊಂಡು ಈ ಮನೋಧರ್ಮದಿಂದ ಹೊರಗೆ ಬರುತ್ತಾರೆ. ಆದರೆ, ಬಹಳಷ್ಟು ಜನ ಮನಬಂದಂತೆ ನಡೆದುಕೊಂಡು ನಮ್ಮ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಅದೆಷ್ಟೋ ಮಹತ್ವದ ವಿಚಾರಗಳ ಬಗ್ಗೆ ಅತ್ಯಂತ ನಿರ್ಲಕ್ಷ್ಯ ತೋರುತ್ತಾರೆ. ಉದಾಹರಣೆಗೆ, ನಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಕೇಳಿದ್ದೇವೆ, ಅದರ ಅನುಭವವೂ ಆಗಿರುತ್ತದೆ. ಆದರೆ, ಕೆಲವು ಜನರಷ್ಟೇ ಮನಃಪೂರ್ವಕವಾಗಿ ನಗಬಲ್ಲರು. ನಗುವುದಕ್ಕೂ ಒಂದು ಒಳ್ಳೆಯ ಮನಸ್ಥಿತಿ ಬೇಕಲ್ಲ, ಅದನ್ನು ನಿಭಾಯಿಸಲಿಕ್ಕೇ ಬಹಳ ಜನ ಕಷ್ಟಪಡುತ್ತಾರೆ. ಹೊಟ್ಟೆ ಹುಣ್ಣಾಗುವಂತೆ ನಕ್ಕು ಅದೆಷ್ಟು ದಿನಗಳಾದವು ಎನ್ನುವುದನ್ನು ನೆನಪಿಸಿಕೊಳ್ಳಿ. ಅತಿಯಾಗಿ ನಕ್ಕಾಗ ಹೊಟ್ಟೆಯ ಅಕ್ಕಪಕ್ಕ ನೋವು ಬರುವಂತಾಗುತ್ತದೆ. ಕಣ್ಣಲ್ಲಿ ನೀರು ಹರಿಯುತ್ತದೆ. ಇಂತಹ ಆನಂದದ ಸ್ಥಿತಿಯಲ್ಲಿ ದೇಹ ಹಗುರವಾಗುತ್ತದೆ. ಸಂತೋಷದ ಹಾರ್ಮೋನ್ ನಿಂದ ಒತ್ತಡ ಕಡಿಮೆಯಾಗಿ ಆರೋಗ್ಯ ಸುಧಾರಿಸುತ್ತದೆ. ನಗುವಿಗೆ ಇರುವ ಶಕ್ತಿಯನ್ನು ಖಂಡಿತವಾಗಿ ಕಡೆಗಣಿಸಬಾರದು. ಹಾಗೆಯೇ, ನಾವು ಜೀವನದಲ್ಲಿ ಕಡೆಗಣಿಸಬಾರದ ಕೆಲವು ಸಂಗತಿಗಳಿವೆ.
• ಆರೋಗ್ಯ (Health)
ಆರೋಗ್ಯವೇ ಭಾಗ್ಯ ಎನ್ನುವ ಮಾತು ಸತ್ಯವಾದದ್ದು. ನೀವು ನೋವಿಲ್ಲದೆ (Pain) ನಡೆಯಬಲ್ಲಿರಿ. ಕಷ್ಟವಿಲ್ಲದೆ ಉಸಿರಾಡಿಸಬಲ್ಲಿರಿ (Breathe), ಪ್ರತಿದಿನವೂ ಎದ್ದು ಓಡಾಡಬಲ್ಲಿರಿ, ಆರೋಗ್ಯದಿಂದ ಇದ್ದೀರಿ ಎಂದಾದರೆ ಅದಕ್ಕಿಂತ ಆಶೀರ್ವಾದ (Bless) ಬೇರೊಂದಿಲ್ಲ.
ಬೆಳಗ್ಗೆದ್ದು ಈ ಆಕ್ಟಿವಿಟೀಸ್ ಮಾಡಿದ್ರೆ ದಿನವಿಡೀ ಸ್ಟ್ರೆಸ್ ಮಾಡೋದು ತಪ್ಪುತ್ತೆ
• ಪ್ರೀತಿಯ ಸಂಬಂಧಗಳು (Loving Relations)
ಜೀವನಕ್ಕೆ ಅರ್ಥ ತುಂಬಿದ ಸ್ನೇಹಿತರು, ಅವರ ಕಾಳಜಿ (Care), ಕುಟುಂಬಸ್ಥರ ಅಕ್ಕರೆ, ಎಲ್ಲ ಕಿರಿಕಿರಿಗಳ ನಡುವೆಯೂ ಇರುವ ಬಾಂಧವ್ಯಗಳನ್ನು ನೆನಪಿಸಿಕೊಳ್ಳಿ. ಇವು ನಮ್ಮ ಜೀವನದ ಚಿನ್ನದ ಎಳೆಗಳು. ಸಂಬಂಧಗಳನ್ನು ಕಳೆದುಕೊಂಡರೆ ಮನಸ್ಸಿಗೆ ಹಿತವೆನಿಸುವುದಿಲ್ಲ. ಹೀಗಾಗಿ, ಅವುಗಳನ್ನು ಎಂದಿಗೂ ಕೇರ್ ಲೆಸ್ (Careless) ಆಗಿ ನೋಡುವುದು, ಕೀಳಾಗಿ ಕಾಣುವುದನ್ನು ಮಾಡಬಾರದು.
• ಸಮಯದ ಕೊಡುಗೆ (Gift of Time)
ಕಳೆದುಹೋದ ಸಮಯ ಮತ್ತೆ ದೊರೆಯುವುದೇ ಇಲ್ಲ. ನೀವು ಎಷ್ಟೇ ಪರಿತಪಿಸಿದರೂ ಅದು ಮರಳುವುದಿಲ್ಲ. ಹೀಗಾಗಿ, ಅದು ಅಮೂಲ್ಯ. ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು, ಈ ಸಮಯವನ್ನು ಸಂತಸದಿಂದ ಕಳೆಯುವುದು ಭಾರೀ ಮುಖ್ಯ. ಇಂದು ಆರಂಭಿಸಬಹುದಾದ ಯಾವುದಾದರೂ ಕೆಲಸವನ್ನು (Work) “ನಾಳೆ ಮಾಡೋಣ’ ಎನ್ನುವ ಮನಸ್ಥಿತಿ (Mentality) ಬೇಡ.
• ಸೋಲುಗಳು (Failures) ಮತ್ತು ಹಿನ್ನಡೆ
ಸೋಲುಗಳನ್ನು ಅವಾಯ್ಡ್ ಮಾಡುತ್ತಲೇ ಇರುತ್ತೇವೆ. ಆದರೂ ಅವು ಒಮ್ಮೊಮ್ಮೆ ಬೆನ್ನಟ್ಟುತ್ತವೆ. ಅವು ನಮಗೆ ನೀಡುವ ಅವಮಾನ, ಅತಂತ್ರ ಪರಿಸ್ಥಿತಿಗಳು ಪಾಠವಾಗಬೇಕು. ಸೋಲುಗಳನ್ನು ಕಡೆಗಣಿಸುತ್ತ ಸಾಗಿದರೆ ಅದೇ ಅಭ್ಯಾಸವಾಗಿಬಿಡುತ್ತದೆ. ಸೋಲುಗಳಿಂದ ಕಲಿತ ಪಾಠಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು.
• ಪ್ರಕೃತಿಯ ಸೌಂದರ್ಯ (Beauty of Nature)
ಇಂದಿನ ತಂತ್ರಜ್ಞಾನ ಆಧರಿಸಿದ ಪ್ರಪಂಚದಲ್ಲಿ ನಿಸರ್ಗದಿಂದ ಭಾರೀ ದೂರ ಬಂದಿದ್ದೇವೆ. ಆದರೆ, ಪ್ರಾಕೃತಿಕ ಸಂಪತ್ತು ಕಡೆಗಣಿಸುವಂಥದ್ದಲ್ಲ. ಪ್ರಕೃತಿ ನಮ್ಮನ್ನು ಅಚ್ಚರಿಗೆ ದೂಡುತ್ತಲೇ ಇರುತ್ತದೆ. ಹೂವುಗಳ ನಡುವೆ, ಹಸಿರು ಪರಿಸರದಲ್ಲಿ ಓಡಾಡುವುದರಿಂದ ಮನಸ್ಸು ಮುದಗೊಳ್ಳುತ್ತದೆ ಎಂದಾದರೆ ಅದಕ್ಕೆ ಎಷ್ಟು ಶಕ್ತಿ ಇರಬೇಡ? ಹೊರಗೆ ನಡೆಯಿರಿ, ಪ್ರಕೃತಿ ಸೌಂದರ್ಯ ನಿಮ್ಮನ್ನು ಆವರಿಸಿಕೊಳ್ಳಲು ಅವಕಾಶ ನೀಡಿ.
ಮನೆಯಲ್ಲಿರೋ ಕೆಟ್ಟ ವಾತಾವರಣ ಮನಸ್ಸಿನ ಮೇಲೂ ಪರಿಣಾಮ ಬೀರುತ್ತಿದ್ಯಾ?
• ಕನಸು-ಕಲ್ಪನೆ (Dreams)
ಎಲ್ಲದರಲ್ಲೂ ತರ್ಕ ಹುಡುಕುವ ಇಂದಿನ ದಿನಗಳಲ್ಲೂ ಮಕ್ಕಳಂತೆ ಸುಮ್ಮನೆ ಹಗಲು ಕನಸು ಕಂಡುನೋಡಿ, ಸಂತಸವೆನಿಸುತ್ತದೆ. ಮನಸ್ಸಿಗೆ ಬೇಲಿ ಹಾಕಿಕೊಳ್ಳದೇ ಖುಷಿಯಾಗಿ ಕನಸುಗಳ ಲೋಕದಲ್ಲಿ ವಿಹರಿಸಿ, ಪ್ರೇರಣೆ ನೀಡುತ್ತವೆ. ಇನ್ನು, ಕನಸುಗಳನ್ನು ಅದುಮಿಟ್ಟ ಬದುಕಿನಲ್ಲಿ (Life) ರಸ ಇರುವುದಿಲ್ಲ. ಕನಸುಗಳನ್ನು ಎಂದಿಗೂ ಕಡೆಗಣಿಸಬಾರದು.
• ಕರುಣೆ (Kindness)
ಕರುಣೆ, ದಯೆ ಇಲ್ಲದ ಮನಸ್ಸಿನಲ್ಲಿ ಸೌಂದರ್ಯ ಇರುವುದಿಲ್ಲ. ಸಾಕಷ್ಟು ಕ್ಷಣಗಳನ್ನು ನಾವು ಕಳೆದಿದ್ದರೂ ಒಂದೇ ಒಂದು ಕರುಣೆ, ದಯೆಭರಿತ ಕ್ಷಣ ಜೀವನದಲ್ಲಿ ಸಾಕಷ್ಟು ಬದಲಾವಣೆ (Change) ತರುತ್ತದೆ. ಅನುಸರಿಸಿ ನೋಡಿ.