ಬೆಂಗಳೂರಿಗೂ ವಕ್ಕರಿಸಿತೇ ಮಂಕಿಪಾಕ್ಸ್ ? ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಲಕ್ಷಣ
ಭಾರತವೂ ಸೇರಿದಂತೆ ಜಗತ್ತಿನ 65ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿರುವ ಮಂಕಿಪಾಕ್ಸ್ ಸೋಂಕು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿತೇ ಎಂಬ ಭೀತಿ ಶುರುವಾಗಿದ್ದು, ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಶಂಕಿತ ಲಕ್ಷಣ ಕಂಡಬಂದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಕೊರೋನಾ ಸೋಂಕು ಬಳಿಕ ಇದೀಗ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಈಗಾಗ್ಲೇ ನಾಲ್ಕು ಮಂಕಿಪಾಕ್ಸ್ ಪ್ರಕರಣ ದಾಖಲಾಗಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ಮಧ್ಯೆ ಭಾರತವೂ ಸೇರಿದಂತೆ ಜಗತ್ತಿನ 65ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿರುವ ಮಂಕಿಪಾಕ್ಸ್ ಸೋಂಕು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿತೇ ಎಂಬ ಭೀತಿ ಶುರುವಾಗಿದ್ದು, ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಶಂಕಿತ ಲಕ್ಷಣ ಕಂಡಬಂದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮಂಗನ ಕಾಯಿಲೆ ಅಥವಾ ಮಂಕಿಪಾಕ್ಸ್ ಗೆ ತುತ್ತಾಗಿರುವ ಶಂಕಿತ ಆಫ್ರಿಕನ್ ಪ್ರಜೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕಿಸಲಾಗಿದ್ದು, ಅವರ ಮಾದರಿಗಳನ್ನು ಸಂಜೆ ಪುಣೆಯ ಎನ್‌ಐವಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ.
ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಲಕ್ಷಣ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಆಫ್ರಿಕನ್ ಪ್ರಜೆ ಜುಲೈ 4ರಂದು ಇಥಿಯೋಪಿಯಾದಿಂದ ಬಂದಿದ್ದರು. ಅವರು ಡಯಾಲಿಸಿಸ್ ಮತ್ತು ಪೂರ್ವ-ಕಸಿ ಮೌಲ್ಯಮಾಪನಕ್ಕೆ ಒಳಗಾಗುತ್ತಿದ್ದರು. ಇವರ ಚರ್ಮದ ಮೇಲೆ ದದ್ದುಗಳು ಸೇರಿದಂತೆ ಮಂಕಿಪಾಕ್ಸ್‌ನ ಲಕ್ಷಣಗಳು (Symptoms) ಕಂಡುಬಂದ ಹಿನ್ನಲೆಯಲ್ಲಿ ಅವರ ರಕ್ತ ಮತ್ತು ಚರ್ಮದ ಗಾಯಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಕಿಪಾಕ್ಸ್ ಪ್ರಕರಣ ದಿಢೀರ್ ಏರಿಕೆ, WHOನಿಂದ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ!
ವ್ಯಕ್ತಿಯ ರಕ್ತದ ಮಾದರಿ ಪರೀಕ್ಷೆಗೆ ರವಾನೆ
ಶಂಕಿತ ಆಫ್ರಿಕಾ ಪ್ರಜೆ ಇಥಿಯೋಪಿಯಾದಿಂದ ಬಂದವರಾಗಿರುವುದರಿಂದ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತೆಯೇ ಆತನ ಮಾದರಿಯನ್ನು ಪರೀಕ್ಷೆ ರವಾನಿಸಲಾಗಿದ್ದು, ಇಲ್ಲಿಯವರೆಗೆ, ಇದು ಕರ್ನಾಟಕದಿಂದ ಪರೀಕ್ಷೆಗೆ ಕಳುಹಿಸಲಾದ ಮಂಗನ ಕಾಯಿಲೆಯ ಎರಡನೇ ಶಂಕಿತ ಮಾದರಿಯಾಗಿದೆ. ಮೊದಲ ಮಾದರಿಯು ಬ್ರಿಟನ್ ಗೆ ಪ್ರಯಾಣದ ಇತಿಹಾಸ ಹೊಂದಿರುವ ಬೆಂಗಳೂರಿನ ವ್ಯಕ್ತಿಯದ್ದಾಗಿತ್ತು. ಕಳೆದ ವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಪುಣೆಯ ಎನ್‌ಐವಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ನೆಗೆಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMRCI) ನಲ್ಲಿರುವ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ (VRDL) ಈಗಾಗಲೇ NIV ICMR ನಿಂದ ಮಂಗನ ಕಾಯಿಲೆಯ ಕಣ್ಗಾವಲುಗಾಗಿ ದೇಶದ 15 ಗೊತ್ತುಪಡಿಸಿದ ಲ್ಯಾಬ್‌ಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಶಂಕಿತ ಪ್ರಕರಣಗಳ ಮಾದರಿಗಳನ್ನು VRDL ಸ್ವೀಕರಿಸಿದೆ ಮತ್ತು ಪುಣೆಯ NIV ಗೆ ಕಳುಹಿಸಲಾಗಿದೆ. ಪ್ರಯೋಗಾಲಯವನ್ನು ಗುರುವಾರದಿಂದ ಪರೀಕ್ಷೆಗೆ ಗುರುತಿಸಲಾಗಿದೆ, ಆದರೆ ಪರೀಕ್ಷಾ ಕಿಟ್‌ಗಳಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಅಧಿಕಾರಿಗಳು ನಾವು ಹೆಚ್ಚು ಜಾಗರೂಕರಾಗಿದ್ದೇವೆ. ಶಂಕಿತ ಪ್ರಕರಣಗಳು ಕಂಡುಬಂದಾಗ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡುವಂತೆ ನಾವು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮಂಕಿಪಾಕ್ಸ್ ಅಲರ್ಟ್; ಪುರುಷ ಸಲಿಂಗಕಾಮಿಗಳು ಲೈಂಗಿಕ ಸಂಬಂಧ ಮಿತಿಗೊಳಿಸಿ, WHO ವಾರ್ನಿಂಗ್
ಮಂಕಿಪಾಕ್ಸ್ ಎಂದರೇನು ?
ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ಸಿಡುಬು ರೋಗದ ಲಕ್ಷಣಗಳನ್ನೇ ಹೊಂದಿದ್ದು, ಅದರ ತೀವ್ರತೆ ಕಡಿಮೆ. ವ್ಯಾಕ್ಸಿನೇಷನ್ ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.
ಮಂಕಿಪಾಕ್ಸ್ ರೋಗಲಕ್ಷಣಗಳು
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ರೋಗದ ಆರಂಭಿಕ ಲಕ್ಷಣಗಳು (symptoms) ಜ್ವರ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ನಡುಕ ಮತ್ತು ಆಯಾಸವೂ ಇರಬಹುದು. ದೇಹದ ಮೇಲೆ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ದಡಾರ, ಸ್ಕರ್ವಿ ಮತ್ತು ಸಿಫಿಲಿನ್ ಕೆಲವು ರೋಗಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ. ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವಲ್ಲಿ ಅನೇಕ ಜನರು ತಪ್ಪು ಮಾಡುತ್ತಾರೆ.