Asianet Suvarna News

ಹದಿಹರೆಯದಲ್ಲಿ ಖಿನ್ನತೆಗೆ ಶಿಕಾರಿಯಾದ್ರೆ ಭವಿಷ್ಯದಲ್ಲಿ ಕಾಡುತ್ತೆ ಹೃದ್ರೋಗ!

ಹದಿಹರೆಯದ ವಯಸ್ಸಿನಲ್ಲಿ ಮನಸ್ಸು ಲಗಾಮು ಇಲ್ಲದ ಕುದುರೆಯಂತೆ ಆಡೋದು ಸಹಜ. ಆದ್ರೆ ಕನಸುಗಳ ಲೋಕದಲ್ಲಿ ಸಾಗುತ್ತಿರೋವಾಗ ಆಚಾನಕಾಗಿ ಎದುರಾಗೋ ಆಘಾತಗಳನ್ನು ತಡೆದುಕೊಳ್ಳೋ ಶಕ್ತಿಯಿಲ್ಲದೆ ಅನೇಕರು ಈ ಸಮಯದಲ್ಲಿ ಖಿನ್ನತೆಗೊಳಗಾಗುತ್ತಾರೆ. ಇದು ಭವಿಷ್ಯದಲ್ಲಿ ಹೃದ್ರೋಗಗಳಿಗೂ ಮೂಲವಾಗಬಹುದೆಂದು ಅಧ್ಯಯನವೊಂದು ಎಚ್ಚರಿಸಿದೆ.

Depression in teenage may lead to heart attacks in middle age
Author
Bangalore, First Published Sep 5, 2020, 2:32 PM IST
  • Facebook
  • Twitter
  • Whatsapp

ಇತ್ತೀಚಿನ ದಿನಗಳಲ್ಲಿ ಖಿನ್ನತೆ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಖಿನ್ನತೆ ಎನ್ನೋದು ಸ್ಲೋ ಪಾಯಿಸ್ನಿಂಗ್. ನೋಡಲು ಹ್ಯಾಂಡ್‍ಸಮ್, ಗಟ್ಟಿಮುಟ್ಟಾದ ದೇಹ, ಶ್ರೀಮಂತಿಕೆ, ಉತ್ತಮ ಉದ್ಯೋಗ, ಹೆಸರು ಎಲ್ಲವೂ ಇರುತ್ತೆ. ಇಂಥ ವ್ಯಕ್ತಿಯನ್ನು ಕೂಡ ಖಿನ್ನತೆ ಕೆಲವೇ ದಿನಗಳಲ್ಲಿ ಯಾರಿಗೂ ತಿಳಿಯದಂತೆ ಮುಗಿಸಿಬಿಡಬಲ್ಲದು. ಹೌದು, ನಮಗೇ ಅರಿವಿಲ್ಲದಂತೆ ನಮ್ಮೊಳಗಿನ ಜೀವನೋತ್ಸಾಹವನ್ನು ಕೊಂದು ಬದುಕಿಗೆ ಇತಿಶ್ರೀ ಹಾಡಲು ಪ್ರಚೋದಿಸಿ ಬಿಡುವ ಶಕ್ತಿ ಇದಕ್ಕಿದೆ. ಖಿನ್ನತೆ ಕೇವಲ ಮನಸ್ಸಿನ ಮೇಲಷ್ಟೇ ಪರಿಣಾಮ ಬೀರೋದಿಲ್ಲ ಬದಲಿಗೆ ನಮ್ಮ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮವನ್ನುಂಟು ಮಾಡಬಲ್ಲದು ಎಂಬುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಹದಿಹರೆಯದ ವಯಸ್ಸಿನಲ್ಲಿ ಖಿನ್ನತೆ ಅಥವಾ ಉದ್ವೇಗಕ್ಕೊಳಗಾದವರು ಮಧ್ಯವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗೋ ಸಾಧ್ಯತೆ ಇತರರಿಗಿಂತ ಶೇ.20ರಷ್ಟು ಹೆಚ್ಚಿದೆ ಎಂಬ ಎಚ್ಚರಿಕೆಯನ್ನು ಸಂಶೋಧಕರು ನೀಡಿದ್ದಾರೆ. ಹೀಗಾಗಿ ಹದಿಹರೆಯದ ಮಕ್ಕಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಪೋಷಕರು ಎಚ್ಚರ ವಹಿಸೋ ಅಗತ್ಯ ಇಂದು ಹಿಂದಿಗಿಂತ ಹೆಚ್ಚಿದೆ. 

ಉತ್ತಮ ಆರೋಗ್ಯಕ್ಕೆ ನ್ಯೂಟ್ರಿಶನಿಸ್ಟ್ ನೀಡಿದ ಸರಳ ಸಲಹೆಗಳು

ಹುಚ್ಚು ಕುದುರೆ ಮನಸ್ಸು
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಮನಸ್ಸಿಗೆ ತೋಚಿದಂತೆ ಆಡುತ್ತಾರೆ. ವಾಸ್ತವಿಕ ಸ್ಥಿತಿಗೂ ಕಲ್ಪನೆಗಳಿಗೂ ನಡುವೆ ಇರುವ ಅಂತರವನ್ನು ಅರಿಯಲು ಸೋಲುತ್ತಾರೆ. ಅತಿಯಾದ ಭಾವನಾತ್ಮಕ ಸ್ಪಂದನೆ, ಬಣ್ಣ ಬಣ್ಣದ ಕನಸುಗಳ ಬೆನ್ನೇರಿ ಸಾಗುತ್ತಿರೋವಾಗ ಅನಿರೀಕ್ಷಿತವಾಗಿ ಆಘಾತ ಎದುರಾದಾಗ ತಡೆದುಕೊಳ್ಳೋ ಶಕ್ತಿ ಇರೋದಿಲ್ಲ. ಪರಿಣಾಮ ಬಹುಬೇಗ ಖಿನ್ನತೆಗೊಳಗಾಗುತ್ತಾರೆ. ಇನ್ನೊಂದೆಡೆ ಅಂಕಗಳ ಬೆನ್ನು ಹತ್ತಿರೋ ಇತ್ತೀಚಿನ ಶೈಕ್ಷಣಿಕ ವ್ಯವಸ್ಥೆ ಹದಿಹರೆಯದವರಲ್ಲಿ ಒತ್ತಡ, ಭವಿಷ್ಯದ ಕುರಿತು ಅಭದ್ರತೆಯನ್ನು ಕೂಡ ಹುಟ್ಟು ಹಾಕಿರುತ್ತದೆ. ಅತಿಯಾದ ಒತ್ತಡ ಕೂಡ ಅವರನ್ನು ಖಿನ್ನತೆಗೆ ಶಿಕಾರಿಯಾಗಿಸುತ್ತದೆ. ಇನ್ನು ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಬದಲಾವಣೆಗಳ ಕಾರಣಕ್ಕೆ ಕ್ರಷ್, ಲವ್ ಆಗೋದು ಕಾಮನ್. ಬಾಯ್‍ಫ್ರೆಂಡ್, ಗರ್ಲ್‍ಫ್ರೆಂಡ್ ಜೊತೆ ಸುತ್ತಾಟ, ಪ್ರೀತಿಯ ನಶೆಯಲ್ಲಿ ತೇಲುತ್ತ ಜಗತ್ತನ್ನೇ ಮರೆಯುವ ಯುವಜನತೆ ಅದೇ ಪ್ರೀತಿ ವೈಫಲ್ಯವಾದಾಗ ಅಥವಾ ತಿರಸ್ಕøತಗೊಂಡಾಗ ಪರಿಸ್ಥಿತಿಯನ್ನು ಎದುರಿಸೋ, ಸ್ವೀಕರಿಸೋ ಧೈರ್ಯ ಹೊಂದಿರೋದಿಲ್ಲ. ವಾಸ್ತವ ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಾಗ ಮನಸ್ಸು ಖಿನ್ನತೆಗೆ ಜಾರುತ್ತದೆ.

ಪಿಸಿಒಎಸ್‌ ಬಂದದ್ದೇ ಹೆಲ್ದೀ ಹುಡ್ಗಿಯಾದೆ

ಖಿನ್ನತೆಗೂ ಹೃದ್ರೋಗಕ್ಕೂ ಸಂಬಂಧ
ಹದಿಹರೆಯದಲ್ಲಿ ಖಿನ್ನತೆ ಅಥವಾ ಉದ್ವೇಗಕ್ಕೊಳಗಾಗೋ ವ್ಯಕ್ತಿಗಳು ಮಧ್ಯವಯಸ್ಸಿನಲ್ಲಿ ಹೃದ್ರೋಗಕ್ಕೆ ತುತ್ತಾಗೋ ಸಾಧ್ಯತೆ ಅಧಿಕ ಎಂದು ಸ್ವೀಡನ್‍ನ ಒರೆಬ್ರೋ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ಹದಿಹರೆಯದಲ್ಲಿ (18 ಅಥವಾ 19ನೇ ವಯಸ್ಸಿನಲ್ಲಿ) ಖಿನ್ನತೆಗೊಳಗಾದ ವ್ಯಕ್ತಿ ಮಧ್ಯವಯಸ್ಸಿನಲ್ಲಿ ಹೃದ್ರೋಗಕ್ಕೆ ತುತ್ತಾಗೋ ಸಾಧ್ಯತೆ ಹೆಚ್ಚಿದೆಯೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಅಧ್ಯಯನ ಕೈಗೊಳ್ಳಲಾಗಿತ್ತು. ಈ ಅಧ್ಯಯನದ ಪ್ರಕಾರ ಹದಿಹರೆಯದಲ್ಲಿ ಖಿನ್ನತೆ ಅಥವಾ ಉದ್ವೇಗಕ್ಕೊಳಗಾದವರು ಮಧ್ಯವಯಸ್ಸಿನಲ್ಲಿ ಹೃದಯಾಘಾತಕ್ಕೆ ತುತ್ತಾಗೋ ಸಾಧ್ಯತೆ ಇತರರಿಗಿಂತ ಶೇ.20ರಷ್ಟು ಹೆಚ್ಚಿರೋದು ಪತ್ತೆಯಾಗಿದೆ. ಹದಿಹರೆಯದವರ ಮಾನಸಿಕ ಸ್ವಾಸ್ಥ್ಯ ಕುಗ್ಗುತ್ತಿದ್ದು, ಈ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 

ಮುಂಜಾನೆ ಎದ್ದು ಹೀಗೆ ಮಾಡಿದ್ರೆ ದಿನವಿಡೀ ಫ್ರೆಶ್ ಇರುತ್ತೆ ಮನಸ್ಸು‌!

ಅಧ್ಯಯನ ಹೇಗೆ ನಡೆಯಿತು?
1952 ಹಾಗೂ 1956ರ ನಡುವೆ ಜನಿಸಿದ 2,38,013 ಪುರುಷರನ್ನು ಈ ಅಧ್ಯಯನಕ್ಕೊಳಪಡಿಸಲಾಗಿತ್ತು. ಇವರನ್ನು 18 ಅಥವಾ 19ನೇ ವಯಸ್ಸಿನಲ್ಲಿ ವಿವಿಧ ದೈಹಿಕ ಹಾಗೂ ಮಾನಸಿಕ ಪರೀಕ್ಷೆಗಳಿಗೊಳಪಡಿಸಲಾಯಿತು. ಮನೋವೈದ್ಯರೊಂದಿಗೆ ಸಂದರ್ಶನ ಹಾಗೂ ಪ್ರಶ್ನಾವಳಿಗಳ ಮೂಲಕ ಇವರಲ್ಲಿ ಒತ್ತಡ ಸಹಿಸಿಕೊಳ್ಳೋ ಸಾಮಥ್ರ್ಯ ಎಷ್ಟಿದೆ ಎಂಬುದನ್ನು ಪರೀಕ್ಷಿಸಲಾಯಿತು. ಆ ಬಳಿಕ ಇವರನ್ನು ಮಧ್ಯವಯಸ್ಸಿನಲ್ಲಿ (58ನೇ ವಯಸ್ಸಿನಲ್ಲಿ) ಮತ್ತೆ ಸಮಗ್ರ ತಪಾಸಣೆಗೊಳಪಡಿಸಲಾಯಿತು. ಇವರಲ್ಲಿ 34,503 ಮಂದಿ ಹದಿಹರೆಯದಲ್ಲಿ ಖಿನ್ನತೆ ಅಥವಾ ಉದ್ವೇಗಕ್ಕೊಳಗಾಗಿದ್ದು, ಮಧ್ಯವಯಸ್ಸಿನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರೋದು ಪತ್ತೆಯಾಗಿದೆ. 

ಫಿಟ್ ಆಗಿದ್ರೆ ಕಾಡದು ಹೃದ್ರೋಗ
ಮಧ್ಯವಯಸ್ಸಿನಲ್ಲಿ ಅಥವಾ ಇಳಿ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಡಬಾರದೆಂದ್ರೆ ಹದಿಹರೆಯದಲ್ಲಿ ಶರೀರವನ್ನು ಫಿಟ್ ಆಗಿಟ್ಟುಕೊಳ್ಳೋದು ಅವಶ್ಯ. ವ್ಯಾಯಾಮ, ಜಾಗಿಂಗ್, ಸೈಕ್ಲಿಂಗ್, ಯೋಗ ಮುಂತಾದ ಚಟುವಟಿಕೆಗಳ ಮೂಲಕ ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು. ದೇಹ ಫಿಟ್ ಆಗಿದ್ರೆ ಮನಸ್ಸು ಕೂಡ ಆರೋಗ್ಯವಾಗಿರುತ್ತೆ. ಉತ್ತಮ ಆಹಾರ ಕ್ರಮ, ಸಾಕಷ್ಟು ನೀರು ಕುಡಿಯೋದು, ನಿಯಮಿತ ವ್ಯಾಯಾಮಗಳಿಂದ ಶರೀರದ ಆರೋಗ್ಯವನ್ನು ಕಾಪಾಡಿಕೊಂಡ್ರೆ ವಯಸ್ಸಾದ ಮೇಲೆ ಅನಾರೋಗ್ಯಗಳಿಂದ ದೂರವಿರಲು ಸಾಧ್ಯವಾಗುತ್ತೆ. ಸದೃಢ ಶರೀರದಲ್ಲಿ ಮಾತ್ರ ಆರೋಗ್ಯಯುತ ಮನಸ್ಸಿರಲು ಸಾಧ್ಯ. 

Follow Us:
Download App:
  • android
  • ios