Dengue cases: ಬೆಂಗ್ಳೂರಲ್ಲಿ ಡೆಂಘೀ ಹಾವಳಿ; ದಕ್ಷಿಣ ಕನ್ನಡಕ್ಕೂ ಆತಂಕ!
ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ದ.ಕ. ಜಿಲ್ಲೆಯಲ್ಲಿ ಡೆಂಘೀ, ಮಲೇರಿಯಾ ಸೋಂಕಿನ ಪ್ರಕರಣಗಳು ಅತ್ಯಂತ ಕನಿಷ್ಠ ದಾಖಲಾಗಿದ್ದರೂ, ಬೆಂಗಳೂರು ಮತ್ತು ಮೈಸೂರಿನಲ್ಲಿ ಡೆಂಘೀ ಪ್ರಕರಣಗಳು ಏರಿಕೆಗತಿಯಲ್ಲಿ ಇರುವುದರಿಂದ ದ.ಕ. ಜಿಲ್ಲೆಯಲ್ಲೂ ಜನರು ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
ಸಂದೀಪ್ ವಾಗ್ಲೆ
ಮಂಗಳೂರು (ಆ.27) : ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ದ.ಕ. ಜಿಲ್ಲೆಯಲ್ಲಿ ಡೆಂಘೀ, ಮಲೇರಿಯಾ ಸೋಂಕಿನ ಪ್ರಕರಣಗಳು ಅತ್ಯಂತ ಕನಿಷ್ಠ ದಾಖಲಾಗಿದ್ದರೂ, ಬೆಂಗಳೂರು ಮತ್ತು ಮೈಸೂರಿನಲ್ಲಿ ಡೆಂಘೀ ಪ್ರಕರಣಗಳು ಏರಿಕೆಗತಿಯಲ್ಲಿ ಇರುವುದರಿಂದ ದ.ಕ. ಜಿಲ್ಲೆಯಲ್ಲೂ ಜನರು ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ 1000ಕ್ಕೂ ಹೆಚ್ಚು ಹಾಗೂ ಮೈಸೂರಿನಲ್ಲಿ 300ಕ್ಕೂ ಅಧಿಕ ಡೆಂಘೀ ಪ್ರಕರಣಗಳಿವೆ. ಸಾಮಾನ್ಯವಾಗಿ ದಾಖಲಾದ ಖಚಿತ ಡೆಂಘೀ ಪ್ರಕರಣಗಳಿಗಿಂತ ನಾಲ್ಕು ಪಟ್ಟು ಸಂಶಯಾಸ್ಪದ ಡೆಂಘೀ ರೋಗದ ಹಾವಳಿ ಇರುತ್ತದೆ. ಬೆಂಗಳೂರು ಮತ್ತು ಮೈಸೂರಿನ ನಡುವೆ ಕರಾವಳಿ ಜಿಲ್ಲೆಯ ಜನರ ಓಡಾಟ ತುಸು ಹೆಚ್ಚೇ ಇದೆ. ಪ್ರತಿದಿನ 300ಕ್ಕೂ ಅಧಿಕ ಬಸ್ಸುಗಳು ಉಭಯ ಜಿಲ್ಲೆಗಳ ನಡುವೆ ಓಡಾಟ ನಡೆಸುತ್ತವೆ. ರೈಲು- ವಿಮಾನ ಸಂಪರ್ಕವಿದೆ. ದ.ಕ. ಜಿಲ್ಲೆಯ ವಾತಾವರಣವಂತೂ ಸೊಳ್ಳೆಗಳಿಗೆ ಅತ್ಯಂತ ಪೂರಕ. ಹೀಗಾಗಿ ದ.ಕ. ಜಿಲ್ಲೆಯಲ್ಲೂ ಯಾವ ಕ್ಷಣದಲ್ಲೂ ಡೆಂಘೀ ಹಾವಳಿ ಮತ್ತೆ ಆರಂಭವಾಗುವ ಆತಂಕ ಇದೆ.
ಶಿವಮೊಗ್ಗದಲ್ಲಿ ಡೆಂಘೀ ಜ್ವರ: 160ಕ್ಕೂ ಹೆಚ್ಚು ಪ್ರಕರಣ ಪತ್ತೆ
ಜಿಲ್ಲೆಯಲ್ಲಿ ಈಗ ಡೆಂಘೀ ಸೋಂಕಿನ ಹಾವಳಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ಸುಮ್ಮನಿರುವಂತಿಲ್ಲ. ನಿರ್ಲಕ್ಷ್ಯ ವಹಿಸಿದರೆ ಡೆಂಘೀ ಮಾರಕವೂ ಆಗಬಹುದಾದ ಕಾರಣ ಯಾವುದೇ ಜ್ವರ ಬಂದರೂ ರಕ್ತ ಪರೀಕ್ಷೆ ಮಾಡಿಸಬೇಕು, ಸೊಳ್ಳೆ ಕಡಿತದಿಂದ ದೂರವಿದ್ದು, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
5 ವರ್ಷಗಳಲ್ಲೇ ಕನಿಷ್ಠ: ದ.ಕ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಡೆಂಘೀ, ಮಲೇರಿಯಾ ಈ ವರ್ಷ ಅತ್ಯಂತ ಕಡಿಮೆ ದಾಖಲಾಗಿದೆ. 2019ರಲ್ಲಿ 1589 ಡೆಂಘೀ ಪ್ರಕರಣಗಳಿದ್ದು, 8 ಮಂದಿ ಸಾವಿಗೀಡಾಗಿದ್ದರು. 2020ರಲ್ಲಿ 239 ಪ್ರಕರಣಗಳಲ್ಲಿ 2 ಸಾವು, 2021ರಲ್ಲಿ 295, 2022ರಲ್ಲಿ 388 ಡೆಂಘೀ ಪ್ರಕರಣಗಳಿದ್ದರೆ, ಈ ವರ್ಷ ಇದುವರೆಗೆ 134 ಪ್ರಕರಣಗಳಷ್ಟೇ ದಾಖಲಾಗಿವೆ. ಮಲೇರಿಯಾ ಕೂಡ ಇಳಿಕೆ ಹಾದಿಯಲ್ಲಿದೆ. 2019ರಲ್ಲಿ 2797 ಪ್ರಕರಣಗಳಿದ್ದರೆ, 2020ರಲ್ಲಿ 1397, 2021ರಲ್ಲಿ 689, 2022ರಲ್ಲಿ 168, ಈ ವರ್ಷ ಇದುವರೆಗೆ ಕೇವಲ 50 ಪ್ರಕರಣಗಳು ದಾಖಲಾಗಿವೆ.
‘ಈ ವರ್ಷ ಮಳೆ ಅತಿ ಕಡಿಮೆ ಬಂದಿರುವುದು ಸೋಂಕಿನ ಪ್ರಮಾಣ ಇಳಿಕೆಗೆ ಒಂದು ಕಾರಣ ಹೌದು. ಆದರೆ ಸೋಂಕಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ. ಜಿಲ್ಲೆಯ ಒಟ್ಟು ಮಲೇರಿಯಾ ಸೋಂಕುಗಳಲ್ಲಿ ಶೇ.90ರಷ್ಟುಹಾಗೂ ಡೆಂಘೀ ಪ್ರಕರಣಗಳಲ್ಲಿ ಶೇ.50ಕ್ಕೂ ಅಧಿಕ ಮಂಗಳೂರು ನಗರದಲ್ಲೇ ದಾಖಲಾಗುತ್ತಿದೆ. ಸೋಂಕು ಪತ್ತೆಯಾದ ಕೂಡಲೆ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಉಳಿದವರ ರಕ್ತಪರೀಕ್ಷೆ ನಡೆಸುವುದು, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದಲ್ಲದೆ, ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಾತ್ರವಲ್ಲದೆ, ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ 15 ದಿನಕ್ಕೊಮ್ಮೆ ಭೇಟಿ ನೀಡಿ ಕಾರ್ಮಿಕರ ರಕ್ತ ಪರೀಕ್ಷೆ ನಡೆಸುತ್ತಿರುವುದು, ಡೊಮೆಸ್ಟಿಕ್ ಸರ್ವೇ ಮೂಲಕ ರಾರಯಂಡಮ್ ರಕ್ತ ಪರೀಕ್ಷೆ, ಜನಜಾಗೃತಿ ಮೂಡಿಸಲಾಗುತ್ತಿದೆ. ಇತ್ಯಾದಿ ಅನೇಕ ಕ್ರಮಗಳಿಂದಾಗಿ ಜನರಲ್ಲಿ ಜಾಗೃತಿ ಮೂಡಿದ್ದರಿಂದ ಸೋಂಕಿನ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದೆ’ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್.
ಸಾಮಾನ್ಯವಾಗಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ಸೊಳ್ಳೆ ಉತ್ಪತ್ತಿ ಹೆಚ್ಚಿರುವುದರಿಂದ ಡೆಂಘೀ, ಮಲೇರಿಯಾ ಹಾವಳಿ ಹೆಚ್ಚು. ಪ್ರಸ್ತುತ ಬೆಂಗಳೂರಿನಲ್ಲಿ ಸೋಂಕು ಹೆಚ್ಚಿರುವುದರಿಂದ ಇನ್ನೂ ಒಂದು, ಒಂದೂವರೆ ತಿಂಗಳಾದರೂ ಜಾಗ್ರತೆಯಿಂದ ಇರಬೇಕಾದ ಅಗತ್ಯವಿದೆ.
ರಾಜ್ಯದಲ್ಲಿ ಡೆಂಘೀ ತಾಂಡವ: ಒಂದೇ ತಿಂಗಳಲ್ಲಿ 2489 ಕೇಸ್
ಹೊರಗಿನಿಂದ ಬಂದವರಿಗೆ ಆನೆಕಾಲು ರೋಗ
ಇನ್ನು ಮಾರಕ ಆನೆಕಾಲು ರೋಗ ಕಳೆದೆರಡು ವರ್ಷಗಳಿಂದ ದ.ಕ. ಜಿಲ್ಲೆಯ ಜನರನ್ನು ಬಾಧಿಸಿಲ್ಲ. ಆದರೆ ಉತ್ತರ ಭಾರತದಿಂದ ಬರುವ ಕಾರ್ಮಿಕರಲ್ಲಿ ಪತ್ತೆಯಾಗುತ್ತಿದೆ. ಅಂತಹ 30 ಪ್ರಕರಣಗಳು ಈ ವರ್ಷ ಇದುವರೆಗೆ ದಾಖಲಾಗಿವೆ. ವಲಸೆ ಕಾರ್ಮಿಕರಿಗೆ ನಿಗದಿತವಾಗಿ ರಕ್ತಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡುತ್ತಿರುವುದರಿಂದ ಜಿಲ್ಲೆಯ ಜನರಿಗೆ ಹರಡುವುದು ನಿಂತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅದೇ ರೀತಿ ಚಿಕೂನ್‌ಗುನ್ಯಾ ಕೂಡ ಈ ವರ್ಷ ಇದುವರೆಗೆ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಕಳೆದ ವರ್ಷ 2 ಪ್ರಕರಣಗಳು ಮಾತ್ರ ವರದಿಯಾಗಿದ್ದವು.