ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
blood related marriage : ಕೆಲ ಮಕ್ಕಳು ಹುಟ್ಟುವಾಗ್ಲೇ ಕಾಯಿಲೆ ಹೊತ್ತು ತಂದಿರ್ತಾರೆ. ಮತ್ತೆ ಕೆಲ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗ್ತಾರೆ. ಇದಕ್ಕೆಲ್ಲ ಮುಖ್ಯ ಕಾರಣವೊಂದಿದೆ. ಅದೇನು ಅಂತ ಅನೇಕ ಅಧ್ಯಯನ ಸ್ಪಷ್ಟಪಡಿಸಿದೆ.

ಪಾಲಕರೇ ಹೊಣೆ
ಮಗು ಹೆಣ್ಣಾಗ್ಲಿ, ಗಂಡಾಗ್ಲಿ ಆರೋಗ್ಯ (Health)ವಾಗಿ ಜನಿಸಲಿ, ನೂರು ಕಾಲ ಚೆನ್ನಾಗಿ ಬಾಳಲಿ ಅಂತ ಪಾಲಕರು ಬಯಸ್ತಾರೆ. ಅನಾರೋಗ್ಯ ಅಂಟಿಸಿಕೊಂಡೇ ಮಗು ಹುಟ್ಟಿದ್ರೆ ಪಾಲಕರ ನೋವು ಹೇಳತೀರದು. ಮಗುವಿನ ನೋವನ್ನು ಪಾಲಕರಿಗೆ ಸಹಿಸಲು ಸಾಧ್ಯವಿಲ್ಲ. ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ಕೊನೆಯವರೆಗೆ ನೋಡಿಕೊಳ್ಳೋದು ಸುಲಭವಲ್ಲ. ಇಕ್ಕಟ್ಟಿನಲ್ಲಿ ಪ್ರತಿ ದಿನ ಕಣ್ಣೀರು ಹಾಕುವ ಪಾಲಕರ ಈ ಸ್ಥಿತಿಗೆ ಪಾಲಕರೇ ಕಾರಣ. ಜನರು ಮಾಡುವ ಕೆಲ ತಪ್ಪುಗಳಿಗೆ ಮಕ್ಕಳು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ಕಾರಣಕ್ಕೆ ಮಕ್ಕಳನ್ನು ಕಾಡುತ್ತೆ ಕಾಯಿಲೆ
ಮಕ್ಕಳಿಗೆ ಕಾಡುವ ಅನೇಕ ಖಾಯಿಲೆಗೆ ಪಾಲಕರು ಯಾವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ತಾರೆ ಎಂಬುದು ಮುಖ್ಯ ಕಾರಣವಾಗುತ್ತದೆ. ಹತ್ತಿರದ ರಕ್ತ ಸಂಬಂಧಿಕರಲ್ಲಿ ಮದುವೆಯಾಗುವುದು ಇದಕ್ಕೆ ಮುಖ್ಯ ಕಾರಣ. ಕುಟುಂಬಸ್ಥರನ್ನೇ ಮದುವೆ ಆಗುವುದ್ರಿಂದ ಮಕ್ಕಳಿಗೆ ಗಂಭೀರ ಅನಾರೋಗ್ಯ ಕಾಡುತ್ತದೆ. ತಂದೆ ಹಾಗೂ ತಾಯಿಯಲ್ಲಿ ಕಂಡು ಬರುವ ಸಣ್ಣ ಅನುವಂಶಿಕ ದೋಷ ಮಗುವನ್ನು ಕಾಡುತ್ತದೆ. ಈ ಬಗ್ಗೆ ಈಗಾಗಲೇ ಅನೇಕ ಸಂಶೋಧನೆ ನಡೆದಿದೆ.
ರಕ್ತ ಸಂಬಂಧಿಕರನ್ನು ಮದುವೆ ಆದ್ರೆ ಕಾಡುವ ಕಾಯಿಲೆ ಯಾವುದು?
ಕುಟುಂಬಸ್ಥರು, ಸಂಬಂಧಿಕರನ್ನು ಮದುವೆಯಾದ ದಂಪತಿಗೆ ಜನಿಸುವ ಮಕ್ಕಳು ಚಯಾಪಚಯ ಸಮಸ್ಯೆ, ಆನುವಂಶಿಕ ಸಮಸ್ಯೆ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಏರುಪೇರನ್ನು ಅನುಭವಿಸುತ್ತಾರೆ. ಡೌನ್ ಸಿಂಡ್ರೋಮ್, ಫ್ರಾಗಿಲ್ ಎಕ್ಸ್ ಸಿಂಡ್ರೋಮ್, ಕ್ಲೈನ್ಫೆಲ್ಟರ್ ಸಿಂಡ್ರೋಮ್ ಮತ್ತು ಟ್ರಿಪಲ್-ಎಕ್ಸ್ ಸಿಂಡ್ರೋಮ್ನಂತಹ ಗಂಭೀರ ಕಾಯಿಲೆಗೆ ತುತ್ತಾಗುತ್ತಾರೆ. ಫ್ರಾಗಿಲ್ ಎಕ್ಸ್ ಸಿಂಡ್ರೋಮ್ ಮಗುವಿನ ಬುದ್ಧಿವಂತಿಕೆ, ಮಾನಸಿಕ ಆರೋಗ್ಯ, ದೈಹಿಕ ಗುಣಲಕ್ಷಣಗಳು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಯಿರುವ ಮಕ್ಕಳು ಕಲಿಕಾ ನ್ಯೂನತೆಗಳು ಮತ್ತು ಹಲವಾರು ಇತರ ಸಮಸ್ಯೆಗಳನ್ನು ಸಹ ಅನುಭವಿಸಬಹುದು. ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಮಗು ಜೀವನ ಪರ್ಯಂತ ಈ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಮಧುಮೇಹ, ಹೃದ್ರೋಗ, ಬೊಜ್ಜು ಮತ್ತು ಕೆಲವು ರೀತಿಯ ಕ್ಯಾನ್ಸರ್ನಂತಹ ಹಲವಾರು ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಗರ್ಭಧಾರಣೆಯಲ್ಲಿ ಸಮಸ್ಯೆ, ಗರ್ಭಪಾತ, ಕ್ಷಯ ಮತ್ತು ಹೆಪಟೈಟಿಸ್ನಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ. ಪೋಷಕರ ನಡುವಿನ ಸಂಬಂಧ ಹತ್ತಿರವಾದಷ್ಟೂ,ಆನುವಂಶಿಕ ಕಾಯಿಲೆ ಹೆಚ್ಚಾಗುತ್ತದೆ. ಅಧ್ಯಯನದ ಪ್ರಕಾರ, ಒಂದೇ ವಂಶವಾಹಿಯಲ್ಲಿ ಮದುವೆಯಾಗುವುದರಿಂದ ರಕ್ತಹೀನತೆ, ಉಸಿರಾಟದ ತೊಂದರೆ, ಕಿರಿಕಿರಿ, ಚರ್ಮದ ಸಮಸ್ಯೆ ಕೂಡ ಕಾಡುವ ಅಪಾಯವಿದೆ.
ಡಿಎನ್ಎ ಹಂಚಿಕೆ
ಒಡಹುಟ್ಟಿದವರು ತಮ್ಮ ಡಿಎನ್ಎಯ ಶೇಕಡಾ 50 ಅನ್ನು ಹಂಚಿಕೊಳ್ಳುತ್ತಾರೆ. ಚಿಕ್ಕಪ್ಪ ಮತ್ತು ಸೊಸೆಯಂದಿರು ತಮ್ಮ ಡಿಎನ್ಎಯ ಶೇಕಡಾ 25 ರಷ್ಟನ್ನು ಹಂಚಿಕೊಳ್ಳುತ್ತಾರೆ. ಸೋದರಸಂಬಂಧಿಗಳು ಡಿಎನ್ಎಯ ಶೇಕಡಾ 12.5 ರಷ್ಟನ್ನು ಹಂಚಿಕೊಳ್ಳುತ್ತಾರೆ.
ಯುವಕರು ಎಚ್ಚೆತ್ತುಕೊಳ್ಳಬೇಕು
ಇತರ ಮಕ್ಕಳಿಗೆ ಈ ರೋಗ ಕಾಡುವುದಿಲ್ಲ ಎಂದಲ್ಲ. ಆದ್ರೆ ರಕ್ತ ಸಂಬಂಧಿ ದಂಪತಿಗೆ ಜನಿಸಿದ ಮಕ್ಕಳಿಗೆ ಇಂಥ ರೋಗ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಯುವಕರು ಮದುವೆಗೆ ಮುನ್ನ ಹತ್ತಾರು ಬಾರಿ ಆಲೋಚನೆ ಮಾಡುವುದು ಸೂಕ್ತ. ಸಾಧ್ಯವಾದಷ್ಟು ರಕ್ತ ಸಂಬಂಧಿಕರು ಅದ್ರಲ್ಲೂ ಅತೀ ಹತ್ತಿರದ ರಕ್ತ ಸಂಬಂಧಿಕರ ಜೊತೆ ಸಪ್ತಪದಿ ತುಳಿಯಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಸಂಪ್ರದಾಯದ ಜೊತೆ ಆರೋಗ್ಯ
ಭಾರತದಲ್ಲಿ ಶೇಕಡ 11 ರಷ್ಟು ವಿವಾಹಗಳು ರಕ್ತ ಸಂಬಂಧಿಗಳು ಅಥವಾ ನಿಕಟ ಸಂಬಂಧಿಗಳ ನಡುವೆ ನಡೆಯುತ್ತವೆ. ಮದುವೆ ಸಾಂಪ್ರದಾಯಿಕ, ವೈಯಕ್ತಿಕ, ಧಾರ್ಮಿಕ ಮತ್ತು ಸಾಮಾಜಿಕ ವಿಷಯವಾಗಿದ್ದರೂ ವೈಜ್ಞಾನಿಕ ಹಾಗೂ ವೈದ್ಯಕೀಯ ದೃಷ್ಟಿಯಿಂದ ನೋಡುವ ಅಗತ್ಯವೂ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

