Health Tips: ನಕ್ರೆ ಮಾತ್ರವಲ್ಲ, ಅತ್ತರೂ ಆರೋಗ್ಯಕ್ಕೆ ಒಳ್ಳೇದು!
ಆಗಾಗ ನೀವು ಬಾತ್ ರೂಮಿನಲ್ಲೋ, ಬೆಡ್ ರೂಮಿನಲ್ಲೋ ಅವಿತುಕೊಂಡು ಅಳ್ತೀರಾ.. ಅದಕ್ಕೆ ಮುಜುಗರ ಬೇಡ. ಅಳು ನಿಮ್ಮ ಆರೋಗ್ಯವನ್ನು ಹಾಳು ಮಾಡೋದಿಲ್ಲ. ತಿಂಗಳಿಗೊಮ್ಮೆ ಇಲ್ಲ ವಾರಕ್ಕೊಮ್ಮೆ ಅಳೋದ್ರಿಂದ ಸಾಕಷ್ಟು ಲಾಭವಿದೆ.
ಸದಾ ನಗ್ತಿದ್ದರೆ ಎಲ್ಲ ಒತ್ತಡ ಕಡಿಮೆಯಾಗುತ್ತೆ ಅನ್ನೋದನ್ನು ನಾವು ಕೇಳಿರ್ತೇವೆ. ಸದಾ ಗಂಟುಮುಖ ಹಾಕಿಕೊಂಡು ಓಡಾಡ್ಬೇಡ, ಸ್ವಲ್ಪ ನಗು ಅಂತಾ ಜನರು ಹೇಳ್ತಿರುತ್ತಾರೆ. ನಗು ಆರೋಗ್ಯವನ್ನು ವೃದ್ಧಿಸುತ್ತೆ ಎನ್ನುವ ಕಾರಣಕ್ಕೆ ಲಾಫಿಂಗ್ ಕ್ಲಬ್ ಗಳು ಇವೆ. ನಾವು ಸಾರ್ವಜನಿಕ ಪ್ರದೇಶದಲ್ಲಿ ಮುಕ್ತವಾಗಿ ನಕ್ಕಂತೆ ಅಳೋದಿಲ್ಲ. ಅಳುವನ್ನು ನಾವು ಮುಜುಗರದ ವಿಷ್ಯವೆಂದೇ ಪರಿಗಣಿಸಿದ್ದೇವೆ. ಮಕ್ಕಳು ಅತ್ತಂತೆ ಎಲ್ಲರ ಮುಂದೆಯಾಗ್ಲಿ ಇಲ್ಲ ಸಣ್ಣಪುಟ್ಟ ಕಾರಣಕ್ಕೆ ದೊಡ್ಡವರಿಗೆ ಅಳು ಬರೋದಿಲ್ಲ.
ನಮಗೆ ತುಂಬಾ ನೋವಾದಲ್ಲಿ, ಯಾರಿಂದಲೋ ಮೋಸಹೋದಾಗ ಇಲ್ಲವೆ ಆಪ್ತರನ್ನು ಕಳೆದುಕೊಂಡಾಗ ನಾವು ಅಳ್ತೇವೆ. ಸಾವಿನ ಮನೆಯಲ್ಲಿ ಕೆಲವರು ಕಣ್ಣೀರು ಹಾಗದೆ ಸುಮ್ಮನಿದ್ದಾಗ, ಅತ್ತು ಬಿಡಿ, ನೋವು ಕಡಿಮೆ ಆಗುತ್ತೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಈ ಸಂದರ್ಭದಲ್ಲೂ ಅಳ (Crying) ದೆ, ನೋವನ್ನು ನುಂಗಿಕೊಂಡ ಆಪ್ತರು ಪ್ರಜ್ಞೆ ತಪ್ಪೋದಿದೆ ಇಲ್ಲವೆ ಮಾನಸಿಕ (Mental) ಅಸ್ವಸ್ಥೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ನೋವನ್ನು ಹಿಡಿದಿಟ್ಟುಕೊಳ್ಳಬಾರದು, ನಗುವಿನಂತೆ ಅಳು ಬಂದಾಗ್ಲೂ ಅತ್ತು ಬಿಡಬೇಕು ಎನ್ನುತ್ತಾರೆ ತಜ್ಞರು.
ಅಳುವಿನ ವಿಷ್ಯದಲ್ಲಿ ಮಕ್ಕಳನ್ನು ಬಿಟ್ಟರೆ ಮಹಿಳೆಯರು ಮುಂದಿರುತ್ತಾರೆ. ಕೆಲವೊಮ್ಮೆ ಅತೀ ಕೋಪ (Anger) ಬಂದಾಗ್ಲೂ ಅವರ ದುಃಖ ಉಮ್ಮಳಿಸಿ ಬರುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಭಾವನೆಯನ್ನು ಅದುಮಿಡಲು ಸಾಧ್ಯವಿಲ್ಲ. ಅದೇ ಪುರುಷರು ಅಳೋದು ಬಹಳ ಅಪರೂಪ. ತಮ್ಮ ನೋವು, ದುಃಖವನ್ನು ಅವರು ತಡೆ ಹಿಡಿಯುವ ಕಾರಣ ಮಾನಸಿಕ ತೊಂದರೆ ಅವರಿಗೆ ಹೆಚ್ಚು. ಅವರು ಬೇಗ ಸಾವನ್ನಪ್ಪಲು ಇದೇ ಕಾರಣ. ಅಳುವುದ್ರಿಂದ ಸಾಕಷ್ಟು ಲಾಭವಿದೆ. ನಾವಿಂದು ಅಳುವಿನಂದಾಗುವ ಲಾಭವೇನು ಎಂಬುದನ್ನು ಹೇಳ್ತೇವೆ.
ಅಳುವಿನಿಂದಿದೆ ಈ ಲಾಭ :
ನೆಮ್ಮದಿ ಭಾವ : ನಾವು ಅಳುವುದ್ರಿಂದ ತ್ತಡದ ಹಾರ್ಮೋನ್ ಹೊರಗೆ ಹೋಗುತ್ತದೆ. ಆಗ ನಮಗೆ ನೆಮ್ಮದಿ ಎನ್ನಿಸುತ್ತದೆ. ದುಃಖವನ್ನು ಮನಸ್ಸಿನಲ್ಲಿ ಕಟ್ಟಿಟ್ಟುಕೊಂಡಾಗ ಮನಸ್ಸು ವಿಚಲಿತಗೊಂಡಿರುತ್ತದೆ. ಕಣ್ಣೀರು ಸುರಿಸಿದ್ರೆ ನಮ್ಮ ಮನಸ್ಸು ಶಾಂತವಾಗುತ್ತದೆ. ಅಳುವುದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ನಿಮಗೆ ಒತ್ತಡವಾಗಿದೆ ಎನ್ನಿಸಿದಾಗ ನೀವು ಸ್ವಲ್ಪ ಅಳೋದ್ರಲ್ಲಿ ತಪ್ಪೇನಿಲ್ಲ.
HEALTH TIPS: ಮನುಷ್ಯನ ಅತ್ಯಂತ ಅಪಾಯಕಾರಿ ಆವಿಷ್ಕಾರ ಯಾವುದು ಗೊತ್ತಾ?
ನೋವು ನಿವಾರಕ : ಅಳುವನ್ನು ನೀವು ನೋವು ನಿವಾರಕ ಎನ್ನಬಹುದು. ಯಾಕೆಂದ್ರೆ ಅತ್ತಾಗ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್‌ಗಳನ್ನು ಬಿಡುಗಡೆ ಆಗುತ್ತದೆ. ಆಗ ನಿಮ್ಮ ದೈಹಿಕ ಮತ್ತು ಭಾವನಾತ್ಮಕ ನೋವವು ಕಡಿಮೆಯಾಗುತ್ತದೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮ : ಅಳುವುದು ನಮ್ಮ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. ನಾವು ಅತ್ತಾಗ ನಮ್ಮ ಕಣ್ಣಲ್ಲಿರುವ ಧೂಳು ಮತ್ತು ಕಸ ನೀರಿನ ಜೊತೆಗೆ ಹೊರಗೆ ಬರುತ್ತದೆ. ಇದ್ರಿಂದ ಕಣ್ಣು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗುತ್ತದೆ. ಅಳು ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸುತ್ತದೆ. ಮಾನಸಿಕವಾಗಿ ನಮ್ಮನ್ನು ಬಲಗೊಳಿಸುವ ಕೆಲಸವನ್ನು ಅಳು ಮಾಡುತ್ತದೆ. ಶುಷ್ಕ ಕಣ್ಣಿನ ಸಮಸ್ಯೆ ಇರುವವರು ವಾರಕ್ಕೆ ಒಮ್ಮೆಯಾದ್ರೂ ಅಳಬೇಕು.
ರೆಡ್ ಮೀಟ್ ತಿನ್ನೋದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ? ಅಧ್ಯಯನ ಹೇಳೋದೇನು?
ಸಂಬಂಧ ಗಟ್ಟಿ : ನಿಮ್ಮ ಆಪ್ತರ ಜೊತೆ ಕುಳಿತು ನೀವು ಅತ್ತಲ್ಲಿ ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ನೆರವಾಗುತ್ತದೆ. ಪರಸ್ಪರ ಬೆಂಬಲ ನೀಡಲು, ಕಾಳಜಿ ತೋರಿಸಲು ಇದು ಸಹಕಾರಿ.
ಮಾನಸಿಕ ರೋಗದಿಂದ ಮುಕ್ತಿ : ನೀವು ಮನಸ್ಸು ಬಿಚ್ಚಿ ಅತ್ತಲ್ಲಿ ನೀವು ಮಾನಸಿಕವಾಗಿ ದೃಢವಾಗಿರಬಲ್ಲಿರಿ. ನಿಮ್ಮ ಮನಸ್ಸಿನಲ್ಲೇ ಎಲ್ಲವನ್ನು ಬಚ್ಚಿಟ್ಟುಕೊಂಡು, ಅಳುವನ್ನು ನುಂಗಿಕೊಂಡಾಗ ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಖಿನ್ನತೆ, ಕೀಳರಿಮೆ ಸೇರಿದಂತೆ ಅನೇಕ ಮಾನಸಿಕ ಸಮಸ್ಯೆಗಳು ಶುರುವಾಗೋದು ಇಲ್ಲಿಂದಲೆ.