ತೂಕ ಇಳಿಸಿಕೊಳ್ಳುವ ಆತುರದಲ್ಲಿ ಆರೋಗ್ಯ ಹಾಳು ಮಾಡ್ಕೊಳ್ಳಬೇಡಿ
ಜೀವನ ಶೈಲಿ ತೂಕ ಹೆಚ್ಚು ಮಾಡ್ತಿದೆ. ಸ್ಲಿಮ್ ಆಗಲು ಜನ ಸಾಹಸ ಮಾಡ್ತಿದ್ದಾರೆ. ಫಟಾಫಟ್ ತೂಕ ಇಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಏನೇನೋ ಮಾಡ್ತಿದ್ದಾರೆ. ಇದ್ರಿಂದ ಗೊತ್ತಿಲ್ಲದೆ ಆರೋಗ್ಯ ಕೆಡಿಸಿಕೊಳ್ತಿದ್ದಾರೆ.
ನಾವು – ನೀವೆಲ್ಲ ಸದ್ಯ ತೂಕ ಇಳಿಸಿಕೊಳ್ಳುವ ಆತುರದಲ್ಲಿದ್ದೇವೆ. ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ. ಬೀಜ, ಮೊಳಕೆಯೊಡೆದ ತಕ್ಷಣ ಬೆಳೆ ಬರಬೇಕು ಎನ್ನುವ ಜನರ ಸಂಖ್ಯೆ ಹೆಚ್ಚಾಗಿದೆ. ಫಲಿತಾಂಶಕ್ಕೆ ದೀರ್ಘಕಾಲ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಬ್ಯುಸಿನೆಸ್ ಶುರು ಮಾಡಿದ ತಕ್ಷಣ ಲಾಭವಾಗ್ಬೇಕು ಎನ್ನುವ ರೀತಿಯಲ್ಲೇ ವ್ಯಾಯಾಮ ಮಾಡಿದ ದಿನವೇ ತೂಕ ಕಡಿಮೆಯಾಗ್ಬೇಕು ಎಂಬ ಬಯಕೆ ಅನೇಕರದ್ದು. ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಜನರು ಆದ್ಯತೆ ನೀಡ್ತಿದ್ದಾರೆ. ಮಾರುಕಟ್ಟೆಯಲ್ಲಿ ತೂಕ ಇಳಿಸಿಕೊಳ್ಳಲು ಅನೇಕ ಔಷಧಿಗಳು ಲಭ್ಯವಿದೆ. ಬೊಜ್ಜಿನ ಶಸ್ತ್ರಚಿಕಿತ್ಸೆ ಕೂಡ ನಡೆಯುತ್ತದೆ. ಹಾಗೆಯೇ ಜಿಮ್, ವ್ಯಾಯಾಮ, ಯೋಗ ತರಗತಿಗಳ ಸಂಖ್ಯೆಯೂ ಹೆಚ್ಚಿದೆ. ಮನೆ ಮದ್ದು ಸೇರಿದಂತೆ ಕೆಲ ಡಯಟ್ ಚಾಟ್ ಗಳು ಈಗ ಜನರಿಗೆ ಲಭ್ಯವಿದೆ. ತೂಕ ಇಳಿಕೆ ಬರದಲ್ಲಿ ಅನೇಕರು ತಪ್ಪುಗಳನ್ನು ಮಾಡ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ.
ಬ್ರೇಕ್ ಫಾಸ್ಟ್ (Break Fast) ಸ್ಕಿಪ್ : ಬೆಳಗಿನ ಉಪಹಾರ ಬಿಟ್ರೆ ಬೇಗ ತೂಕ (Weight ) ಕಡಿಮೆ ಮಾಡಿಕೊಳ್ಳಬಹುದು ಎಂಬ ಮಾತನ್ನು ನೀವು ಕೇಳಿರ್ತೀರಿ. ಇದೇ ಕಾರಣಕ್ಕೆ ಅನೇಕರು ಬೆಳಗಿನ ಉಪಹಾರ ಸೇವನೆ ಮಾಡೋದಿಲ್ಲ. ಆದ್ರೆ ಇದು ಸಂಪೂರ್ಣ ತಪ್ಪು ವಿಧಾನ. ತಜ್ಞ ವೈದ್ಯರ ಪ್ರಕಾರ, ಬೆಳಿಗ್ಗೆ ಉಪಹಾರ ಸೇವನೆ ಮಾಡದೆ ಹೋದ್ರೆ ಆರೋಗ್ಯ ಹಾಳಾಗುವ ಜೊತೆಗೆ ತೂಕ ಏರಿಕೆಯಾಗುವ ಸಾಧ್ಯತೆಯಿದೆ.
ಹಸಿ ಪದಾರ್ಥ : ಶುಂಠಿ, ಈರುಳ್ಳಿ, ಅನಾನಸ್, ಆವಕಾಡೊ, ಮೆಣಸಿನಕಾಯಿ, ಕೋಸುಗಡ್ಡೆ, ಬೆಳ್ಳುಳ್ಳಿ ಮತ್ತು ಗ್ರೀ ಟೀಯಂತಹ ಆಹಾರವು ದೇಹದ ಚಯಾಪಚಯವನ್ನು ಹೆಚ್ಚಿಸುತ್ತವೆ. ಇದ್ರಿಂದ ಕೊಬ್ಬು ಸುಲಭವಾಗಿ ಕರಗುತ್ತದೆ ಎಂದು ಅನೇಕರು ಹೇಳ್ತಾರೆ. ಆದ್ರೆ ಇದ್ರಿಂದ ಕೊಬ್ಬು ಕರಗುತ್ತದೆ ಎಂಬುದಕ್ಕೆ ಯಾವುದೇ ಸರಿಯಾದ ಸಾಕ್ಷ್ಯವಿಲ್ಲ.
ಮೊದಲ ಬಾರಿ ತಾಯಿಯಾಗುತ್ತಿದ್ದೀರಾ ? ಈ ವಿಚಾರಗಳ ಬಗ್ಗೆ ಗೊತ್ತಿರಲಿ
ಮಾತ್ರೆ – ಔಷಧಿ (Medicine) : ತೂಕ ಇಳಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ಮಾತ್ರೆ, ಔಷಧಿ ಹಾಗೂ ಅನೇಕ ರೀತಿಯ ಆಹಾರ ಪದಾರ್ಥಗಳು ಸಿಗುತ್ತವೆ. ಅವು ತೂಕ ಕಡಿಮೆ ಮಾಡುತ್ತವೆ ಎಂದು ಕಂಪನಿಗಳು ಜಾಹೀರಾತು (Advertisement) ನೀಡುತ್ತವೆ. ಆದ್ರೆ ಅದಕ್ಕೂ ಯಾವುದೇ ಸ್ಪಷ್ಟ ಪುರಾವೆ ಇರುವುದಿಲ್ಲ. ಜೊತೆಗೆ ಅವು ಆರೋಗ್ಯವನ್ನು ಹಾಳು ಮಾಡಬಹುದು. ಎಲ್ಲರೂ ಈ ಪದಾರ್ಥ ಸೇವನೆ ಯೋಗ್ಯವಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ತೂಕ ಇಳಿಸಿಕೊಳ್ಳುವ ಮಾತ್ರೆ, ಔಷಧಿ ತೆಗೆದುಕೊಳ್ಳುವಾಗ್ಲೂ ವೈದ್ಯರ ಸಲಹೆ ಪಡೆಯಬೇಕು. ಇವು ರಕ್ತದೊತ್ತಡ, ಖಿನ್ನತೆ ಸಮಸ್ಯೆಗೆ ಕಾರಣವಾಗುವ ಅಪಾಯವಿರುತ್ತದೆ.
ರೆಡ್ಯೂಸ್ ಫ್ಯಾಟ್ (Reduce Fat) : ಕೆಲ ಆಹಾರ ಪದಾರ್ಥದ ಮೇಲೆ ರೆಡ್ಯೂಸ್ ಫ್ಯಾಟ್ ಎಂದು ಬರೆದಿರುತ್ತದೆ. ಹಾಗಾಂದ್ರೆ ಇದ್ರಲ್ಲಿ ಕೊಬ್ಬಿನಂಶವಿಲ್ಲ ಎಂದಲ್ಲ. ಬೇರೆ ಆಹಾರಕ್ಕೆ ಹೋಲಿಸಿದ್ರೆ ಕಡಿಮೆ ಇದೆ ಎಂದರ್ಥ. ಹಾಗಾಗಿ ಇದ್ರ ಸೇವನೆ ಮಾಡುವಾಗ್ಲೂ ಎಚ್ಚರವಹಿಸಿ.
ಸ್ನ್ಯಾಕ್ಸ್ : ಅನೇಕರು ಸ್ನ್ಯಾಕ್ಸ್ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತದೆ ಎಂಬ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಆರೋಗ್ಯಕರ ಸ್ನ್ಯಾಕ್ಸ್ ತಿನ್ನುವುದರಿಂದ ಯಾವುದೇ ಸಮಸ್ಯೆಯಿಲ್ಲ.
ಇಷ್ಟದ ಆಹಾರ : ತೂಕ ಇಳಿಸಿಕೊಳ್ಳಲು ಬಯಸುವ ಜನರು ಇಷ್ಟದ ಆಹಾರ ಸೇವನೆ ನಿಲ್ಲಿಸ್ತಾರೆ. ತಜ್ಞರ ಪ್ರಕಾರ ಇದು ತಪ್ಪು. ಸ್ವಲ್ಪ ಪ್ರಮಾಣದಲ್ಲಿಯಾದ್ರೂ ನಿಮ್ಮಿಷ್ಟದ ಆಹಾರ ಸೇವನೆ ಮಾಡ್ಬೇಕು.
ಬೇಗ ತೂಕ ಕಡಿಮೆಯಾಗಬೇಕಾ? ಈ ರೊಟ್ಟಿ ತಿಂದು ನೋಡಿ
ಸಕ್ಕರೆ – ಉಪ್ಪು : ಅನೇಕರು ತೂಕ ಇಳಿಸಿಕೊಳ್ಳಲು ಸಕ್ಕರೆ ಹಾಗೂ ಉಪ್ಪಿನ ಸೇವನೆ ಬಿಡ್ತಾರೆ. ಇದು ಕೂಡ ತಪ್ಪು ವಿಧಾನ. ಸ್ವಲ್ಪ ಪ್ರಮಾಣದಲ್ಲಿ ಇವೆರಡೂ ನಮ್ಮ ದೇಹ ಸೇರುವ ಅಗತ್ಯವಿದೆ.