Health Tips : ಆಲೂಗಡ್ಡೆ ಜ್ಯೂಸ್ ಕುಡಿದು ಆರೋಗ್ಯ ಕಾಪಾಡ್ಕೊಳ್ಳಿ
ರುಚಿ ವಿಷ್ಯದಲ್ಲಿ ಆಲೂಗಡ್ಡೆ ಮುಂದಿದೆ. ಮಕ್ಕಳಿಗೆ ಅತ್ಯಂತ ಇಷ್ಟವಾಗುವ ತರಕಾರಿಯಲ್ಲಿ ಆಲೂಗಡ್ಡೆ ಕೂಡ ಒಂದು. ಫಾಸ್ಟ್ ಫುಡ್ ಗೆ ಮಾತ್ರವಲ್ಲ ಆರೋಗ್ಯ ವೃದ್ಧಿಗೂ ನೀವು ಆಲೂಗಡ್ಡೆ ಬಳಸ್ಬಹುದು. ಅದ್ರ ಲಾಭವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುವ ತರಕಾರಿಗಳಲ್ಲಿ ಆಲೂಗೆಡ್ಡೆ ಕೂಡ ಒಂದು. ಆಲೂಗಡ್ಡೆ ಎಲ್ಲ ತರಕಾರಿ ಜೊತೆ ಹೊಂದಿಕೊಳ್ಳುವಂತಹದ್ದು. ಹಾಗಾಗಿಯೇ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಇದು ಜಾಗ ಪಡೆದಿರುತ್ತದೆ. ಆಲೂಗಡ್ಡೆಯಿಂದ ಸಾಕಷ್ಟು ವೆರೈಟಿ ಅಡುಗೆ ಮಾಡ್ಬಹುದು. ಆಲೂಗೆಡ್ಡೆ ಫ್ರೆಂಚ್ ಫ್ರೈಸ್, ಆಲೂಗೆಡ್ಡೆ ಪಕೋಡ, ಆಲೂಗಡ್ಡೆ ಪರಾಠ ಹೀಗೆ ಆಲೂಗಡ್ಡೆಯಿಂದ ಮಾಡಿದ ಆಹಾರವನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕೆಲವರು ಆಲೂಗಡ್ಡೆ ಕೊಬ್ಬನ್ನು ಹೆಚ್ಚಿಸುತ್ತದೆ ಎಂದುಕೊಂಡಿದ್ದಾರೆ. ಆದ್ರೆ ಅವರ ನಂಬಿಕೆ ತಪ್ಪು. ಆಲೂಗಡ್ಡೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಬಿ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳು ಆಲೂಗಡ್ಡೆಯಲ್ಲಿ ಕಂಡುಬರುತ್ತವೆ. ಆಲೂಗಡ್ಡೆಯನ್ನು ನಿತ್ಯದ ದಿನಚರಿಯಲ್ಲಿ ಸೇರಿಸಬೇಕು. ಆಲೂಗಡ್ಡೆ ತ್ವಚೆಗೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. ಅಷ್ಟೇ ಅಲ್ಲ, ಆಲೂಗಡ್ಡೆಯಿಂದ ಮಾಡಿದ ಖಾದ್ಯಕ್ಕಿಂತ ಆಲೂಗಡ್ಡೆ ರಸದ ಪ್ರಯೋಜನ ಹೆಚ್ಚು. ಆಲೂಗೆಡ್ಡೆ ರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಲೂಗೆಡ್ಡೆ ರಸದ ಪ್ರಯೋಜನಗಳು ಮತ್ತು ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ.
ಮೊದಲು ಆಲೂಗಡ್ಡೆ (Potato) ರಸ ತೆಗೆಯೋದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ :
ಆಲೂಗಡ್ಡೆ ರಸಕ್ಕೆ ಬೇಕಾಗುವ ಸಾಮಗ್ರಿ : ಆಲೂಗಡ್ಡೆ, ಸಕ್ಕರೆ ಅಥವಾ ಉಪ್ಪು, ಮೂಸುಂಬೆ ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್.
ಆಲೂಗಡ್ಡೆ ರಸ ತಯಾರಿಸುವ ವಿಧಾನ : ಆಲೂಗಡ್ಡೆ ರಸ (Juice) ತಯಾರಿಸುವುದು ಹೇಗೆ? : ಆಲೂಗೆಡ್ಡೆ ರಸವನ್ನು ತಯಾರಿಸಲು ಮೊದಲು ಆಲೂಗಡ್ಡೆಯನ್ನು ಸಂಪೂರ್ಣವಾಗಿ ತೊಳೆಯಬೇಕು. ಅದರಲ್ಲಿರುವ ಕೊಳಕು ಮತ್ತು ಮಣ್ಣನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಇದರ ನಂತರ, ಆಲೂಗಡ್ಡೆಯನ್ನು ಜ್ಯೂಸರ್ ನಲ್ಲಿ ಹಾಕಿ ಮಿಕ್ಸಿ ಮಾಡ್ಬೇಕು. ಆಗ ಆಲೂಗಡ್ಡೆ ರಸ ತಯಾರಾಗುತ್ತದೆ. ಈ ರಸವನ್ನು ಜರಡಿ ಹಿಡಿದು ಸೇವನೆ ಮಾಡ್ಬೇಕು.
ಬರೀ ಆಲೂಗಡ್ಡೆ ರಸ ಸೇವನೆ ಇಷ್ಟವಿಲ್ಲ ಎನ್ನುವವರು ಯಾವುದಾದ್ರೂ ಹಣ್ಣಿನ ರಸವನ್ನು ಮಿಕ್ಸ್ ಮಾಡ್ಬಹುದು. ಕಿತ್ತಳೆ ಅಥವಾ ಮೋಸಂಬಿ ರಸವನ್ನು ಮಿಕ್ಸ್ ಮಾಡಬಹುದು. ಆಲೂಗಡ್ಡೆ ರಸಕ್ಕೆ ನೀವು ಉಪ್ಪು ಅಥವಾ ಸಕ್ಕರೆ ಇದ್ರಲ್ಲಿ ಯಾವುದನ್ನಾದ್ರೂ ಉಪಯೋಗಿಸಬಹುದು.
ಆಲೂಗಡ್ಡೆ ರಸದಿಂದ ಏನೆಲ್ಲ ಪ್ರಯೋಜನ ? : ಮಧುಮೇಹ (Diabetes) ರೋಗಿಗಳಿಗೆ ಪ್ರಯೋಜನಕಾರಿ : ಆಲೂಗೆಡ್ಡೆ ರಸವು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಲೂಗೆಡ್ಡೆ ರಸವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಆಲೂಗಡ್ಡೆ ರಸವು ಶೂನ್ಯ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ ಎಂಬುದನ್ನು ನೆನಪಿಡಿ. ಹಾಗಾಗಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ಆತಂಕ ಬೇಡ. ಆರಾಮವಾಗಿ ಆಲೂಗಡ್ಡೆಯನ್ನು ನಿಮ್ಮ ಡಯಟ್ ನಲ್ಲಿ ಬಳಸಬಹುದು.
ಇದನ್ನೂ ಓದಿ: ಉದ್ದವಾದ ಉಗುರು ಬಿಟ್ಟಿದ್ದೀರಾ? ನಿಮ್ ಆರೋಗ್ಯ ಹುಷಾರ್ ಕಣ್ರೀ…
ಆಲೂಗಡ್ಡೆ ರಸ ಚರ್ಮಕ್ಕೆ ಪ್ರಯೋಜನಕಾರಿ : ಆಲೂಗೆಡ್ಡೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ನಿಮ್ಮ ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ ಮತ್ತು ಪೋಷಿಸುತ್ತದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಮೊಡವೆ, ಸುಕ್ಕುಗಳು, ಕಪ್ಪು ವರ್ತುಲಗಳಂತಹ ಸಮಸ್ಯೆಗಳು ದೂರವಾಗುತ್ತವೆ. ಆಲೂಗಡ್ಡೆ ರಸವನ್ನು ಕುಡಿಯುವುದು ಮಾತ್ರವಲ್ಲ ಅದನ್ನು ಮುಖಕ್ಕೆ ಹಚ್ಚಬಹುದು.
ಇದನ್ನೂ ಓದಿ: Health Benefits: ಖಾಲಿ ಹೊಟ್ಟೆಯಲ್ಲಿ ಈ ಎರಡರ ಎಲೆ ತಿಂದ್ನೋಡಿ
ಜೀರ್ಣಾಂಗ ವ್ಯವಸ್ಥೆ ಸುಧಾರಣೆ : ಆಲೂಗಡ್ಡೆ ರಸವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಸಿಡಿಟಿ, ಅಜೀರ್ಣ, ವಾಯು, ಹೊಟ್ಟೆ ಉಬ್ಬರದ ಸಮಸ್ಯೆ ಇರುವವರು ಆಲೂಗೆಡ್ಡೆ ರಸವನ್ನು ಸೇವಿಸಬೇಕು. ಇದು ಹೊಟ್ಟೆಯಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡುವ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಆಲೂಗಡ್ಡೆ ಹೊಟ್ಟೆ ಉಬ್ಬರ ಹೆಚ್ಚಿಸುತ್ತದೆ ಎಂದು ಜನರು ನಂಬಿದ್ದಾರೆ. ಆದ್ರೆ ಹೊಟ್ಟೆ ಉಬ್ಬರ ಸಮಸ್ಯೆಗೆ ಆಲೂಗಡ್ಡೆ ರಸ ಒಳ್ಳೆಯದು ಎನ್ನುತ್ತಾರೆ ತಜ್ಞರು.