Health Tips: ರಾತ್ರಿ ಸಾಕ್ಸ್ ಹಾಕ್ಕೊಂಡು ಮಲಗುವ ಮುನ್ನ ಇದನ್ನು ತಿಳ್ಕೊಳ್ಳಿ
ಉತ್ತಮ ಆರೋಗ್ಯ ಬೇಕೆಂದ್ರೆ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ಬೇಕು. ರಾತ್ರಿ ಸಾಕ್ಸ್ ಧರಿಸಿ ಮಲಗುವ ಅಭ್ಯಾಸ ನಿಮಗಿದ್ದರೆ ಅದರ ಲಾಭದ ಜೊತೆ ನಷ್ಟದ ಬಗ್ಗೆ ತಿಳಿದುಕೊಳ್ಳಿ. ನೀವು ಬಳಸುವ ಸಾಕ್ಸ್ ತಪ್ಪಾಗಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ.
ಆರೋಗ್ಯಕರ ಜೀವನಕ್ಕೆ ನಿದ್ರೆ (Sleep) ಬಹಳ ಮುಖ್ಯ. ಆರೋಗ್ಯವಂತ ವ್ಯಕ್ತಿ ದಿನಕ್ಕೆ 6 – 7 ಗಂಟೆ ನಿದ್ರೆ ಮಾಡಬೇಕು. ಕೆಲಸದ ಕಾರಣ ಅನೇಕರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ರಾತ್ರಿ (Night) ನಿದ್ರೆ ಬರದೆ ಒದ್ದಾಡುವವರಿದ್ದಾರೆ. ಇದಕ್ಕೆ ಅನೇಕ ಕಾರಣವಿದೆ. ನಿದ್ರೆ ಸರಿಯಾಗಿ ಬರಬೇಕೆಂದ್ರೆ ಆಹಾರ ಕ್ರಮ ಸರಿಯಾಗಿರಬೇಕು, ಪ್ರತಿ ದಿನ ವ್ಯಾಯಾಮ (Exercise) ಮಾಡಬೇಕೆಂದು ತಜ್ಞರು ಸಲಹೆ ನೀಡ್ತಾರೆ. ಇದ್ರ ಜೊತೆಗೆ ರಾತ್ರಿ ಸಾಕ್ಸ್ ಧರಿಸಿ ಮಲಗಿದ್ರೆ ನಿದ್ರೆ ಸಮಸ್ಯೆ ಕಾಡೋದಿಲ್ಲ. ಚಳಿಗಾಲದಲ್ಲಿ ಇಡೀ ದಿನ ಸಾಕ್ಸ್ ಧರಿಸುವವರಿದ್ದಾರೆ. ಮತ್ತೆ ಕೆಲವರು ಚಳಿಗೆ ಮಧ್ಯರಾತ್ರಿ ಎಚ್ಚರವಾದ್ರೆ ಎನ್ನುವ ಕಾರಣಕ್ಕೆ ಕಾಲಿಗೆ ಸಾಕ್ಸ್ ಹಾಕಿ ಮಲಗ್ತಾರೆ. ಸಾಕ್ಸ್ ಕಾಲನ್ನು ಬೆಚ್ಚಗಿಡುತ್ತದೆ ಎನ್ನುವ ಕಾರಣಕ್ಕೆ ಈ ಉಪಾಯ ಮಾಡ್ತಾರೆ.
ರಾತ್ರಿ (Night) ಸಾಕ್ಸ್ (Socks) ಧರಿಸಿ ಮಲಗುವುದ್ರಿಂದ ಅನೇಕ ಪ್ರಯೋಜನವಿದೆ. ನಿದ್ರೆ ಸಮಸ್ಯೆ ದೂರವಾಗುವ ಜೊತೆಗೆ ಗಾಢ ನಿದ್ರೆ (Sleep) ಬರುತ್ತದೆ. ನಾವಿಂದು ಸಾಕ್ಸ್ ಧರಿಸುವುದ್ರಿಂದ ಆಗುವ ಲಾಭ ಹಾಗೂ ನಷ್ಟದ ಬಗ್ಗೆ ಹೇಳ್ತೆವೆ. ಲಾಭ ಹೇಳುವ ಮೊದಲು ಸಾಕ್ಸ್ ಧರಿಸುವ ವೇಳೆ ಯಾವ ತಪ್ಪು (Mistake) ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೆವೆ.
Heat Wave: ಹೆಚ್ಚುವ ತಾಪಮಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ?
ಗಾತ್ರ : ಸಾಕ್ಸ್ ಧರಿಸಿ ಮಲಗಿದ್ರೆ ನಿಮ್ಮ ರಕ್ತಪರಿಚಲನೆ ಸುಧಾರಿಸುತ್ತದೆ. ಆದ್ರೆ ನೀವು ಸಾಕ್ಸ್ ಧರಿಸುವ ವೇಳೆ ಅದ್ರ ಗಾತ್ರದ ಬಗ್ಗೆ ಗಮನ ನೀಡಬೇಕಾಗುತ್ತದೆ. ನೀವು ಬಿಗಿಯಾದ ಸಾಕ್ಸ್ ಧರಿಸಿ ಮಲಗಿದ್ರೆ ರಕ್ತದ ಹರಿವು ಕಡಿಮೆಯಾಗುವ ಅಪಾಯವಿರುತ್ತದೆ.
ಸಾಕ್ಸ್ ಸ್ವಚ್ಛತೆ : ಒಂದೇ ಸಾಕ್ಸನ್ನು ಅನೇಕ ದಿನ ಬಳಸುವವರಿದ್ದಾರೆ. ಕೆಲವರು ಪಾದಗಳ ಬಿರುಕನ್ನು ತಡೆಯಲು ಪಾದಗಳಿಗೆ ಎಣ್ಣೆ ಹಚ್ಚಿ ನಂತ್ರ ಸಾಕ್ಸ್ ಹಾಕಿರುತ್ತಾರೆ. ಆದ್ರೆ ಅದನ್ನು ಸ್ವಚ್ಛಗೊಳಿಸಿರುವುದಿಲ್ಲ. ಕೊಳಕಾದ ಸಾಕ್ಸನ್ನು ಪದೇ ಪದೇ ಬಳಸಿದ್ರೆ ಇದು ಸೋಂಕಿಗೆ ಕಾರಣವಾಗುತ್ತದೆ. ಇದ್ರಿಂದ ವಾಸನೆ ಬರುತ್ತದೆ. ಹಾಗಾಗಿ ಪ್ರತಿ ದಿನ ಬಳಸುವ ಸಾಕ್ಸ್ ಸ್ವಚ್ಛಗೊಳಿಸಿ. ಸಾಕ್ಸ್ ತಾಜಾ ಇರುವಂತೆ ನೋಡಿಕೊಳ್ಳಿ.
ರಾತ್ರಿ ಸಾಕ್ಸ್ ಧರಿಸಿ ಮಲಗುವುದ್ರಿಂದ ಆಗುವ ಲಾಭಗಳು :
ಉತ್ತಮ ರಕ್ತ ಸಂಚಾರ : ನೀವು ರಾತ್ರಿ ಸಾಕ್ಸ್ ಧರಿಸಿ ಮಲಗುವುದ್ರಿಂದ ರಕ್ತ ಪರಿಚಲನೆ ಸುಲಭವಾಗುತ್ತದೆ. ಕೆಲ ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ. ಸಾಕ್ಸ್ ಧರಿಸಿ ಮಲಗಿದ್ರೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚುತ್ತದೆ ಎಂದು ವರದಿಗಳು ಹೇಳಿವೆ.ಇದರಿಂದಾಗಿ ಹೃದಯ, ಶ್ವಾಸಕೋಶ ಮತ್ತು ಸ್ನಾಯು ಬಲಪಡೆಯುತ್ತದೆ.
ಋತುಬಂಧದ ಸಮಸ್ಯೆಗೆ ಪರಿಹಾರ : ಸಾಮಾನ್ಯವಾಗಿ ಋತುಬಂಧದ ವೇಳೆ ನಿದ್ರೆ ಸಮಸ್ಯೆ ಕಾಡುತ್ತದೆ. ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ಸಾಕ್ಸ್ ಧರಿಸಿ ಮಲಗಿದ್ರೆ ತಾಪಮಾನ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಇದು ತಪ್ಪು. ಬೆಚ್ಚಗಿನ ಪಾದಗಳು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ದೇಹದ ಉಷ್ಣತೆಯನ್ನು ಸ್ಥಿರಗೊಳಿಸುತ್ತದೆ.
HANDWRITING ಆರೋಗ್ಯದ ಬಗ್ಗೆ ತಿಳಿಸುತ್ತೆ, ಗ್ರಾಫಾಲಜಿ ಬಗ್ಗೆ ಗೊತ್ತಿದ್ಯಾ ?
ಬೇಗ ನಿಮ್ಮನ್ನಾವರಿಸಲಿದೆ ನಿದ್ರೆ : ಅನೇಕರಿಗೆ ಹಾಸಿಗೆಗೆ ಹೋದ ತಕ್ಷಣ ನಿದ್ರೆ ಬರುವುದಿಲ್ಲ. ರಾತ್ರಿ ಪೂರ್ತಿ ನಿದ್ರೆ ಬರದೆ ಹೊರಳಾಡುವವರಿದ್ದಾರೆ. ಅಂಥವರು ಸಾಕ್ಸ್ ಧರಿಸಿ ಮಲಗಬಹುದು. ಸಾಕ್ಸ್ ಧರಿಸಿ ಮಲಗುವುದ್ರಿಂದ ನಿದ್ರೆ ಬೇಗ ಬರುತ್ತದೆ. ರಕ್ತದ ಹರಿವು ಕೈಗಳು ಹಾಗೂ ಪಾದಗಳಿಗೆ ಹೆಚ್ಚಾಗುವ ಕಾರಣ ನಿಮ್ಮ ದೇಹದ ತಾಪಮಾನ ಕಡಿಮೆಯಾಗಿ ಬೇಗ ನಿದ್ರೆ ಬರುತ್ತದೆ.
ಬಿರುಕುಬಿಟ್ಟ ಪಾದಗಳಿಗೆ ಇದ್ರಿಂದ ಪರಿಹಾರ : ಚಳಿಗಾಲದಲ್ಲಿ ಹಿಮ್ಮಡಿ ಬಿರುಕುಬಿಡುತ್ತದೆ. ಅನೇಕರಿಗೆ ಇದು ವಿಪರೀತ ನೋವು ನೀಡುವುದಲ್ಲದೆ ರಕ್ತ ಬರುತ್ತದೆ. ಶುಷ್ಕ ಗಾಳಿಗೆ ಹಿಮ್ಮಡಿಯನ್ನು ಒಡ್ಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ನೀವು ಸಾಕ್ಸ್ ಹಾಕಿ ಮಲಗಿದ್ರೆ ನಿಮ್ಮ ಕಾಲಿನ ತೇವಾಂಶ ಅಲ್ಲಿಯೇ ಉಳಿಯುವುದಲ್ಲದೆ ಚರ್ಮ ಮೃದುವಾಗುತ್ತದೆ.