Acid Reflux: ಪಿತ್ತದಿಂದ ಉಂಟಾಗುವ ಎದೆಯುರಿ ಕಡಿಮೆ ಮಾಡ್ಕೊಳಿ
Health Tips: ಪಿತ್ತದಿಂದ ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ ಉರಿಯಾಗುವುದು ಹೆಚ್ಚು. ಹೊಟ್ಟೆಯಲ್ಲಿ ಉತ್ಪತ್ತಿಯಾದ ಆಸಿಡಿಕ್ ಅಂಶ ಹೊಟ್ಟೆಯಿಂದ ಮೇಲೆ ಹಿಮ್ಮುಖವಾಗಿ ಚಲಿಸುವುದರಿಂದ ಹೀಗಾಗುತ್ತದೆ. ಇದನ್ನು ತಡೆಯಲು ಜೀವನಶೈಲಿಯಲ್ಲಿ ಸುಧಾರಣೆ ಮಾಡಿಕೊಳ್ಳುವುದೇ ಪರಿಹಾರ.
ಬೇಸಿಗೆಯಲ್ಲಿ ಪಿತ್ತದ (Acidity) ಸಮಸ್ಯೆ ಸಾಮಾನ್ಯ. ಉಷ್ಣ ಹವಾಮಾನದಲ್ಲಿ (Humidity) ಪಿತ್ತದ ಸಮಸ್ಯೆ ಯಾವಾಗಲೂ ಉಲ್ಬಣವಾಗುವುದು ಸಹಜ. ಹೀಗಾಗಿಯೇ ಪಿತ್ತದ ತೊಂದರೆ ಉಳ್ಳವರು ಬೇಸಿಗೆಯಲ್ಲಿ ಹೆಚ್ಚು ಹುಷಾರಾಗಿರಬೇಕು. ಪಿತ್ತದಿಂದ ಉಂಟಾಗುವ ಹೊಟ್ಟೆಯ ಮೇಲ್ಭಾಗದಲ್ಲಿ ಉರಿಯುವುದು, ಎದೆಯುರಿ, ತಲೆನೋವು (Headache) ಮುಂತಾದ ಸಮಸ್ಯೆಗಳು ಈ ಸಮಯದಲ್ಲಿ ಇನ್ನಿಲ್ಲದಂತೆ ಕಾಡುತ್ತವೆ.
ಹೊಟ್ಟೆಯಲ್ಲಿ ಪಿತ್ತಕಾರಿ (Acidic) ಅಂಶಗಳು ಹೆಚ್ಚಾದಾಗ ಎದೆಯಲ್ಲಿ ಉರಿಯಾಗುವ ಸಮಸ್ಯೆ ಬಹುತೇಕ ಎಲ್ಲರಿಗೂ ಇರುತ್ತದೆ. ಆದರೆ, ಬಹಳಷ್ಟು ಜನರಲ್ಲಿ ಎಂದೋ ಒಮ್ಮೆ ಮಾತ್ರ ಸಮಸ್ಯೆ ಉಂಟಾಗಬಹುದು. ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ ಉರಿಯಾದಾಗ ಸಾಮಾನ್ಯವಾಗಿ ಜನರು ನೀರಿನ ಮೊರೆ ಹೋಗುತ್ತಾರೆ. ಆದರೆ, ಇದಕ್ಕೆ ಕೆಲವು ಬೇರೆ ಮಾರ್ಗೋಪಾಯಗಳೂ ಇವೆ.
ನಿಮ್ಮ ಮಲಗುವ ಭಂಗಿ (Posture) ಯಾವುದು?
ಮಲಗಿದಾಗ ಹೊಟ್ಟೆಯಿಂದ ಪಿತ್ತದ ಹಿಮ್ಮುಖ ಹರಿವು ಸುಲಭವಾಗಿ ಆಗುತ್ತದೆ. ಹೀಗಾಗಿ, ಎದೆಯಲ್ಲಿ ಉರಿಯಾಗುವುದು ಹೆಚ್ಚು. ಹೀಗಾಗಿಯೇ ರಾತ್ರಿ ಸರಿಯಾಗಿ ನಿದ್ರೆಯೂ (Sleep) ಬರುವುದಿಲ್ಲ. ಇದನ್ನು ನಿವಾರಿಸಿಕೊಳ್ಳಲು ತಲೆಯ ಭಾಗದಲ್ಲಿ ಹಾಸಿಗೆಯನ್ನು ಎಂಟು ಇಂಚು ಎತ್ತರ ಮಾಡಿಕೊಂಡು ಮಲಗಬೇಕು. ಅಂದರೆ, ಏಕಾಏಕಿ ಎತ್ತರದ ದಿಂಬಿಡುವುದಲ್ಲ, ಹಾಸಿಗೆಯ ಕೆಳಭಾಗದಲ್ಲಿ ದಿಂಬನ್ನು ಇಟ್ಟುಕೊಂಡರೆ ಅನುಕೂಲ. ಹಿಂದೊಮ್ಮೆ ನಡೆಸಲಾಗಿದ್ದ ಅಧ್ಯಯನದ ಪ್ರಕಾರ, ಇದರಿಂದ ತುಂಬ ಅನುಕೂಲವಾಗುತ್ತದೆ.
ಡಿಗ್ಲೈಸಿರೈಜೆನೇಟೆಡ್ ಜ್ಯೇಷ್ಠಮಧು (ಡಿಜಿಎಲ್-DGL) ಬಳಸಿ
ಜ್ಯೇಷ್ಠಮಧುವಿನ ಬಳಕೆ ಕುರಿತು ಸಾಕಷ್ಟು ಜನರಿಗೆ ಅರಿವಿದೆ. ಇದೊಂದು ಔಷಧೀಯ ಸಸ್ಯ. ದೀರ್ಘಕಾಲದ ಹೊಟ್ಟೆಯ ಸಮಸ್ಯೆಗೆ ಇದನ್ನು ಬಳಸಿದರೆ ರೋಗ ಶಮನವಾಗುತ್ತದೆ. ಜ್ಯೇಷ್ಠಮಧುವನ್ನು ಸಂಸ್ಕರಿಸಿ ಡಿಗ್ಲೈಸಿರೈಜೆನೇಟೆಡ್ ಗೊಳಿಸಲಾಗುತ್ತದೆ. ಇದರಿಂದ ಅದರಲ್ಲಿರುವ ಗ್ಲೈಸಿರೈಜಿನ್ ಎನ್ನುವ ಸಂಯುಕ್ತವನ್ನು ತೆಗೆದುಹಾಕಲಾಗುತ್ತದೆ. ಈ ಅಂಶದಿಂದ ರಕ್ತದೊತ್ತಡ (Blood Pressure) ಹೆಚ್ಚಾಗಬಲ್ಲದು. ಡಿಜಿಎಲ್ ಹೊಟ್ಟೆಯಲ್ಲಿ ಉರಿಗೆ ಕಾರಣವಾಗುವ ಅಂಶವನ್ನು ನಿವಾರಿಸಿ ಆರಾಮ ನೀಡುತ್ತದೆ. ಶುಂಠಿ (Ginger) ಕೂಡ ಪಿತ್ತದ ನಿವಾರಣೆಗೆ ಸಹಕಾರಿ.
ಸ್ವಲ್ಪ ಸ್ವಲ್ಪ ತಿನ್ನಿ (Small Meal)
ಒಂದೇ ಬಾರಿ ಜಾಸ್ತಿ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ಜೀರ್ಣಾಂಗದ ಮೇಲೆ ಒತ್ತಡವುಂಟಾಗುತ್ತದೆ. ಆಗ ಹೊಟ್ಟೆಯಲ್ಲಿ ಅಧಿಕ ಆಸಿಡಿಕ್ ಅಂಶ ಉತ್ಪತ್ತಿಯಾಗಿ ಹಿಮ್ಮುಖ ಹರಿವು ಅಂದರೆ ಹೊಟ್ಟೆಯಿಂದ ಎದೆಯ ಕಡೆಗೆ ಆಸಿಡ್ ಅಂಶ ಸಾಗುತ್ತದೆ.
ಕಾಫಿಯ (Coffee) ಮೇಲೆ ನಿಯಂತ್ರಣವಿರಲಿ
ಒಂದೊಮ್ಮೆ ನೀವು ಪದೇ ಪದೆ ಕಾಫಿ ಕುಡಿಯುವವರಾಗಿದ್ದರೆ ಅದರ ಮೇಲೆ ನಿಯಂತ್ರಣವಿರಲಿ. ಏಕೆಂದರೆ, ಕಾಫಿ ಪಿತ್ತವುಂಟುಮಾಡುವ ಪಾನೀಯ. ಹೊಟ್ಟೆಯಲ್ಲಿ ಅಧಿಕ ಮಟ್ಟದ ಆಸಿಡ್ ಉತ್ಪತ್ತಿ ಮಾಡುವ ಗುಣ ಹೊಂದಿದೆ.
ಇದನ್ನೂ ಓದಿ: ತಲೆನೋವು ಅಂತ ಆಗಾಗ ಬಾಮ್ ಹಚ್ಚಿಕೊಳ್ಬೇಡಿ, ಇದ್ರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಯಾಗುತ್ತೆ ನೋಡಿ !
ಬೇಸಿಗೆ ಆಹಾರದ (Summer Food) ಕುರಿತು ಗಮನವಿರಲಿ
ಬೇಸಿಗೆಯಲ್ಲಿ ಯಾವುದೇ ರೀತಿಯ ಸಂಸ್ಕರಿತ ಆಹಾರದಿಂದ ಸಮಸ್ಯೆ ಹೆಚ್ಚಾಗುತ್ತದೆ. ಚಿಪ್ಸ್, ಕರಿದ ತಿಂಡಿಗಳು, ಹಸಿಮೆಣಸಿನಕಾಯಿ ಮುಂತಾದವುಗಳಿಂದ ಪಿತ್ತ ಹೆಚ್ಚಾಗುತ್ತದೆ. ಹೀಗಾಗಿ, ಆಸಿಡಿಕ್ ಅಂಶದ ಬದಲು ಆಲ್ಕಲೈನ್ ಅಂಶ ಹೆಚ್ಚಾಗಿರುವ ಆಹಾರ ಸೇವನೆ ಮಾಡಬೇಕು. ಹೂಕೋಸು, ಸೋಂಪು ಹಾಗೂ ಬಾಳೆಹಣ್ಣುಗಳನ್ನು ಸೇವಿಸಬಹುದು. ಹೆಚ್ಚು ನಾರಿನಂಶ ಇರುವ ಆಹಾರ ಪದಾರ್ಥ ಸೇವನೆ ಮಾಡಬೇಕು. ಅಲೋವೆರಾ (Aloe Vera) ಜ್ಯೂಸ್ ಕುಡಿಯಬಹುದು.
ಇದನ್ನೂ ಓದಿ: Health Benefits of Pink Salt: ಪಿಂಕ್ ಸಾಲ್ಟ್ ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ
ರಾತ್ರಿ ಆಹಾರದ (Dinner) ಬಳಿಕ ಏನು ಮಾಡಬೇಕು?
ರಾತ್ರಿ ಊಟದ ಬಳಿಕ ಕನಿಷ್ಠ 2 ತಾಸುಗಳ ಬಳಿಕ ಮಲಗಬೇಕು. ಇದರಿಂದ ಪಿತ್ತದಿಂದ ಉಂಟಾಗುವ ಹೊಟ್ಟೆಯುರಿ ಕಡಿಮೆಯಾಗುತ್ತದೆ. ಮಲಗುವಾಗ ಎಡ ಮಗ್ಗುಲಲ್ಲಿ ಅಂದರೆ ಬಲಭಾಗವನ್ನು ಮೇಲೆ ಮಾಡಿಕೊಂಡೇ ಮಲಗಬೇಕು. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ, ಆದರೆ ಅನುಸರಿಸುವವರು ಕಡಿಮೆ. ಬಲಭಾಗದ ಮಗ್ಗುಲಲ್ಲಿ ಮಲಗುವವರಿಗೆ ಆಸಿಡಿಟಿ ಸಮಸ್ಯೆ ಹೆಚ್ಚು.