Asianet Suvarna News Asianet Suvarna News

108 ತಾಂತ್ರಿಕ ಸಮಸ್ಯೆ; ಸಕಾಲಕ್ಕೆ Ambulance ಸಿಗದೆ ಮಹಿಳೆ ಸಾವು

  • ‘ನೂರೆಂಟು’ ತಾಂತ್ರಿಕ ಸಮಸ್ಯೆ: ಆ್ಯಂಬುಲೆನ್ಸ್‌
  • ಸೇವೆ ವ್ಯತ್ಯಯ, ಸರ್ಕಾರದ ‘ತುರ್ತು ಚಿಕಿತ್ಸೆ’
  • - ಜಿವಿಕೆಯ ಸರ್ವರ್‌, ಸಾಫ್‌್ಟವೇರ್‌ ಸಮಸ್ಯೆ
  • 108 ಆ್ಯಂಬುಲೆನ್ಸ್‌ ಹೆಲ್ಪ್‌ಲೈನ್‌ ಸ್ಥಗಿತ
  • ಆ್ಯಂಬುಲೆನ್ಸ್‌ ಸೇವೆ ವಿಳಂಬ,
  • ತುಮಕೂರು ಮಹಿಳೆ ಸಾವು
A woman died without getting an ambulance on time at tumakuru rav
Author
First Published Sep 26, 2022, 7:13 AM IST

ಬೆಂಗಳೂರು (ಸೆ.26) : ರಾಜ್ಯ ಆ್ಯಂಬುಲೆನ್ಸ್‌ ತುರ್ತು ಸಹಾಯವಾಣಿ ‘108’ರಲ್ಲಿ ಶನಿವಾರ ಸಂಜೆ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ರಾಜ್ಯದ ಅನೇಕ ಕಡೆ ತುರ್ತು ಆ್ಯಂಬುಲೆನ್ಸ್‌ ಸೇವೆ ದೊರೆಯದೇ ಸಾವಿರಾರು ಸಾರ್ವಜನಿಕರು ಭಾರೀ ತೊಂದರೆ ಅನುಭವಿಸಬೇಕಾಗಿ ಬಂತು.

ಗಾಯಾಳುವನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ರವಾನೆ; ಆಂಬುಲೆನ್ಸ್‌ ನಂಬಿಕೊಂಡ್ರೆ ಸಾವೇ ಗತಿ

ಶನಿವಾರ ಸಂಜೆಯಿಂದಲೇ 108 ಆ್ಯಂಬುಲೆನ್ಸ್‌ ಸೇವೆ ನಿರ್ವಹಿಸುತ್ತಿರುವ ಜಿವಿಕೆ ಸಂಸ್ಥೆಯ ತಂತ್ರಾಂಶದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಪರಿಣಾಮ ನಿಗದಿತ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಆ್ಯಂಬುಲೆನ್ಸ್‌ ನೆರವಿಗೆ ಹಲವು ಪ್ರಯತ್ನ ಮಾಡಿದರೂ ಯಾರೂ ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ, ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗಳು ಲಭ್ಯವಾಗದೇ ರೋಗಿಗಳು ಭಾರೀ ಪರದಾಟ ಅನುಭವಿಸಿದರು. ಈ ಸಮಸ್ಯೆಯು ಭಾನುವಾರ ಕೂಡಾ ಮುಂದುವರೆದಿತ್ತು. ಈ ನಡುವೆ ಆರೋಗ್ಯ ಇಲಾಖೆಯು, ತುರ್ತು ಸಹಾಯವಾಣಿ 112, ಆರೋಗ್ಯ ಸಹಾಯವಾಣಿ 104 ಹಾಗೂ ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಆರಂಭಿಸುವ ಮೂಲಕ ತಾತ್ಕಾಲಿಕ ಪರಿಹಾರ ಒದಗಿಸುವ ಪ್ರಯತ್ನ ಮಾಡಿದೆ.

ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಜಿವಿಕೆ ಇಎಂಆರ್‌ಐ ಮುಖ್ಯಸ್ಥ ಆರ್‌.ಜಿ.ಹನುಮಂತಪ್ಪ, ‘ಕರೆಗಳನ್ನು ಸ್ವೀಕರಿಸುವ ವ್ಯವಸ್ಥೆಯ ಸರ್ವರ್‌, ಸಾಫ್‌್ಟವೇರ್‌, ಹಾರ್ಡ್‌ವೇರ್‌ ಮೂರರಲ್ಲೂ ಸಮಸ್ಯೆ ಕಾಣಿಸಿಕೊಂಡಿವೆ. ಸಾರ್ವಜನಿಕ ಕರೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಾಫ್‌್ಟವೇರ್‌ ಸಮಸ್ಯೆಯಿಂದ ಮಾನಿಟರ್‌ ಸಿಸ್ಟಂ ಕೆಲಸ ಮಾಡುತ್ತಿಲ್ಲ. ಚೆನ್ನೈನಿಂದ ಸರ್ವರ್‌, ಹಾರ್ಡ್‌ವೇರ್‌ಗೆ ಕಾಯುತ್ತಿದ್ದೇವೆ. ಆ ಬಳಿಕ ಸಮಸ್ಯೆ ಸರಿಪಡಿಸಲಾಗುವುದು’ ಎಂದು ತಿಳಿಸಿದ್ದಾರೆ.

ಪರ್ಯಾಯ ವ್ಯವಸ್ಥೆ ಆಗಿದೆ, ಜನರಿಗೆ ಆತಂಕ ಬೇಡ:

108 ಹೆಲ್ಪ್‌ಲೈನ್‌ ತನ್ನಿಂತಾನೇ ಕರೆ ಸ್ವೀಕರಿಸಿ 2 ನಿಮಿಷದಲ್ಲಿ ಆ್ಯಂಬುಲೆನ್ಸ್‌ ಹಂಚಿಕೆ ಮಾಡುತ್ತಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಇದಕ್ಕೆ 6-7 ನಿಮಿಷ ಆಗುತ್ತಿದೆ. ನಿತ್ಯ 7-8 ಸಾವಿರ ಕರೆ ಬದಲು 2-2.5 ಸಾವಿರ ಕರೆ ಮಾತ್ರ ಸ್ವೀಕರಿಸಲು ಸಾಧ್ಯವಾಗುತ್ತಿದೆ. ತಾಂತ್ರಿಕ ವ್ಯವಸ್ಥೆ 15 ವರ್ಷ ಹಳೆಯದಾದ ಕಾರಣ ಸಮಸ್ಯೆ ಉಂಟಾಗಿದೆ. ಬ್ಯಾಕ್‌ ಅಪ್‌ ಸರ್ವರ್‌ ಅಳವಡಿಸಲಾಗಿದೆ. ತುರ್ತು ಸಹಾಯವಾಣಿ 112, ಆರೋಗ್ಯ ಸಹಾಯವಾಣಿ 104 ಕೂಡ ಆ್ಯಂಬುಲೆನ್ಸ್‌ ಸೇವೆಗೆ ಬಳಸಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

- ಡಾ ಕೆ.ಸುಧಾಕರ್‌, ಆರೋಗ್ಯ ಸಚಿವ

108 ಸಹಾಯವಾಣಿ ಕರೆಗಳು ಆಟೋಮ್ಯಾಟಿಕ್‌ ಆಗಿ ಕರೆಗಳನ್ನು ಸ್ವೀಕರಿಸಿ 2 ನಿಮಿಷಗಳಲ್ಲಿ ಆ್ಯಂಬುಲೆನ್ಸ್‌ ಹಂಚಿಕೆ ಕಾರ್ಯ ಮಾಡಲಾಗುತ್ತಿತ್ತು. ತಾಂತ್ರಿಕ ಸಮಸ್ಯೆಯಿಂದ ಈಗ ಈ ಪ್ರಕ್ರಿಯೆಗೆ 6 ರಿಂದ 7 ನಿಮಿಷಗಳ ಕಾಲ ತೆಗೆದುಕೊಳ್ಳಲಾಗುತ್ತಿದೆ. ಪ್ರತಿದಿನ 7 ರಿಂದ 8 ಸಾವಿರ ಕರೆಗಳ ಬದಲು 2 ರಿಂದ 2.5 ಸಾವಿರ ಕರೆಗಳನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಗುತ್ತಿದೆ. 15 ವರ್ಷ ಹಳೆಯ ತಾಂತ್ರಿಕ ವ್ಯವಸ್ಥೆ ಇದಾಗಿರುವುದರಿಂದ ಸರ್ವರ್‌ಗೆ ವೈರಸ್‌ ಸಮಸ್ಯೆ ಆಗಿದೆ. ಬ್ಯಾಕ್‌ ಅಪ್‌ ಸರ್ವರ್‌ನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ವೈಯಕ್ತಿಕ ಮೊಬೈಲ… ಸಂಖ್ಯೆಗಳಿಗೂ ಕರೆ ಬಂದರೆ ಸ್ವೀಕರಿಸಿ ಅಗತ್ಯ ಸೇವೆಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ತುರ್ತು ಸೇವೆ ಒದಗಿಸುವ 112 ಸಹಾಯವಾಣಿ, 104- ಆರೋಗ್ಯ ಸಹಾಯವಾಣಿ ನೆರವು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಹೊಸಬರಿಗೆ ಟೆಂಡರ್‌: ಸದ್ಯ ಆ್ಯಂಬುಲೆನ್ಸ್‌ ಸೇವೆ ನೀಡುತ್ತಿರುವ ಜಿವಿಕೆ ಕಾನೂನಾತ್ಮಕ ಹೋರಾಟ ಮಾಡಿದೆ. ಆದರೆ ಅವರ ಸೇವೆ ಸರ್ಕಾರಕ್ಕೆ ಸಮಾಧಾನ ತಂದಿಲ್ಲ. ಈಗಾಗಲೇ ಕೋರ್ಚ್‌ ಮಾರ್ಗಸೂಚಿಯಂತೆ ಹೊಸ ಟೆಂಡರ್‌ ಆಗಿದೆ. ಒಳ್ಳೆಯ ಸೇವೆ ನೀಡುವ ಸಂಸ್ಥೆ ಇನ್ನೊಂದು ತಿಂಗಳಲ್ಲಿ 108 ಆರೋಗ್ಯ ಸೇವೆ ನೀಡಲಿದೆ ಎಂದರು.

ಆಂಬುಲೆನ್ಸ್‌ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ

ವಸೂಲಿಗಿಳಿದ ಖಾಸಗಿ ಆ್ಯಂಬುಲೆನ್ಸ್‌ಗಳು; 108 ಆ್ಯಂಬುಲೆನ್ಸ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದರಿಂದ ಅನಿವಾರ್ಯವಾಗಿ ರೋಗಿಗಳು ಖಾಸಗಿ ಆ್ಯಂಬುಲೆನ್ಸ್  ಮೊರೆ ಹೋಗುತ್ತಿದ್ದಾರೆ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲ ಖಾಸಗಿ ಆ್ಯಂಬುಲೆನ್ಸ್‌ ಸಂಸ್ಥೆಗಳು ದುಬಾರಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ. ಸತತ ಪ್ರಯತ್ನಗಳ ಬಳಿಕವೂ 108 ಆ್ಯಂಬುಲೆನ್ಸ್‌ ಸಿಗದೇ ಕೆಲವರು ಅನಿವಾರ್ಯವಾಗಿ ರೋಗಿಗಳು ಜೀವ ಉಳಿಸಿಕೊಳ್ಳಲು ಖಾಸಗಿ ಆ್ಯಂಬುಲೆ®್ಸ… ಕೇಳಿದಷ್ಟುಹಣ ನೀಡಿ ಆಸ್ಪತ್ರೆಗೆ ತೆರಳುತ್ತಿದ್ದ ಘಟನೆಗಳು ನಡೆದಿದೆ.

ಆ್ಯಂಬುಲೆನ್ಸ್‌ ಸಿಗದೆ ಮಹಿಳೆ ಸಾವು

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಗ್ರಾಮದಲ್ಲಿ ಭಾನುವಾರ ಆಸ್ಪತ್ರೆಗೆ ಸಾಗಿಸಲು ಸಕಾಲದಲ್ಲಿ ಆ್ಯಂಬುಲೆನ್ಸ್‌ ಸೇವೆ ಸಿಗದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ದಲಿತ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಐ.ಡಿ.ಹಳ್ಳಿ ಗ್ರಾಮದ ನಿವಾಸಿ ಜಯಮ್ಮ (65) ಮೃತ ದುರ್ದೈವಿ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ಕುಟುಂಬಸ್ಥರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ಪೋನ್‌ ಮಾಡಿ ಒಂದು ಗಂಟೆ ಕಾದರೂ ಆ್ಯಂಬುಲೆನ್ಸ್‌ ಬರಲಿಲ್ಲ. ನಂತರ, ಕುಟುಂಬಸ್ಥರು ತಾಲೂಕು ಆರೋಗ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ, ಅತಿ ಶೀಘ್ರವಾಗಿ ಆ್ಯಂಬುಲೆನ್ಸ್‌ ಕಳಿಸಿ ಕೊಡುವಂತೆ ಮನವಿ ಮಾಡಿಕೊಂಡರು. ಆರೋಗ್ಯಾಧಿಕಾರಿಗೆ ಕರೆ ಮಾಡಿದ ಬಳಿಕ ಆ್ಯಂಬುಲೆನ್ಸ್‌ ಬಂತಾದರೂ ಅಷ್ಟೋತ್ತಿಗಾಗಲೇ ಜಯಮ್ಮನ ಪ್ರಾಣ ಮನೆಯಲ್ಲಿಯೇ ಹೋಗಿತ್ತು.

Follow Us:
Download App:
  • android
  • ios