ಆಂಬುಲೆನ್ಸ್ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ
ಆಸ್ಪತ್ರೆಯಿಂದ 2 ವರ್ಷದ ಮಗುವಿನ ಶವವನ್ನು 10 ವರ್ಷದ ಸಹೋದರ ಹೊತ್ತೊಯ್ದಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಮ್ಮ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವು ಘಟನೆಗಳು ಸಿಗುತ್ತವೆ. ಮಗುವಿನ ಶವವನ್ನು ಕರೆದೊಯ್ಯಲು ಆಂಬುಲೆನ್ಸ್ ನಿರಕರಿಸಿದ್ದಕ್ಕೆ 10 ವರ್ಷದ ಬಾಲಕನೇ 2 ವರ್ಷದ ಕಿರಿಯ ಸಹೋದರನ ಮೃತದೇಹವನ್ನು ಹೊತ್ತೊಯ್ದಿದ್ದಾನೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು, 10 ವರ್ಷದ ಬಾಲಕ ತನ್ನ 2 ವರ್ಷದ ಕಿರಿಯ ಸಹೋದರನ ಶವವನ್ನು ಕೈಯಲ್ಲಿ ಹಿಡಿದುಕೊಂಡಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕ ಸಾಗರ್ ಕುಮಾರ್ ಮೃತದೇಹದೊಂದಿಗೆ ನಡೆದುಕೊಂಡು ಹೋಗುತ್ತಿದ್ದರೆ, ಆತನ ತಂದೆ ಹತ್ತಿರದಿಂದ ಹಿಂಬಾಲಿಸಿದ್ದಾರೆ. ಆಸ್ಪತ್ರೆಯ ಶವಾಗಾರದಿಂದ ಮಗುವಿನ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಪೊಲೀಸರು ಹೇಳಿದ್ದೇನು..?
2 ವರ್ಷದ ಮಗು ಕಲಾ ಕುಮಾರ್ ಶುಕ್ರವಾರದಂದು ಎಡೆಬಿಡದೆ ಅಳುತ್ತಿದ್ದ ಕಾರಣದಿಂದ ಮಲತಾಯಿ ಸೀತಾ ಆ ಮಗುವನ್ನು ದೆಹಲಿ-ಸಹಾರನ್‌ಪುರ ಹೆದ್ದಾರಿಯ ಬಾಗ್‌ಪತ್ ಬ್ಯಾಂಕ್ ಬಳಿ ಮಗುವನ್ನು ಎಸೆದಿದ್ದಾಳೆ. ಆ ವೇಳೆಗೆ ರಸ್ತೆಯಲ್ಲಿದ್ದ ಕಾರೊಂದು ಮಗುವನ್ನು ತುಳಿದು 2 ವರ್ಷದ ಮಗು ಮೃತಪಟ್ಟಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದ ಬಾಗ್‌ಪತ್‌ನ ಸರ್ಕಲ್ ಆಫೀಸರ್ ದೇವೇಂದ್ರ ಕುಮಾರ್ ಶರ್ಮಾ ’’ಸ್ಥಳೀಯರು ನಮಗೆ ಮಾಹಿತಿ ನೀಡಿದರು, ನಂತರ ಮಹಿಳೆಯ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಲಾಯಿತು. ಬಾಲಕನ ಶವವನ್ನು ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’’ ಎಂದು ತಿಳಿಸಿದ್ದಾರೆ.
ಈ ಮಧ್ಯೆ, 2 ವರ್ಷದ ಮಗುವಿನ ಶವಪರೀಕ್ಷೆಯ ನಂತರ ಕಲಾ ಕುಮಾರ್ ಶವವನ್ನು ಶಾಮ್ಲಿ ಜಿಲ್ಲೆಯಲ್ಲಿ ದಿನಗೂಲಿ ಕಾರ್ಮಿಕರಾಗಿರುವ ಅವರ ತಂದೆ ಪ್ರವೀಣ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು. ಪ್ರವೀಣ್ ಅವರ ಸಂಬಂಧಿ ರಾಂಪಾಲ್ ಮತ್ತು ಅವರ ಮಗ ಸಾಗರ್ ಜೊತೆಗಿದ್ದರು ಎಂದು ತಿಳಿದುಬಂದಿದೆ.
ಆದರೆ, ಮೃತದೇಹ ಸಾಗಿಸಲು ವಾಹನ ಒದಗಿಸುವಂತೆ ಆರೋಗ್ಯಾಧಿಕಾರಿಗೆ ಪ್ರವೀಣ್ ಪದೇ ಪದೇ ಮನವಿ ಮಾಡಿದರೂ, ಅವರು ನಮ್ಮ ಮನವಿಗೆ ಗಮನ ಕೊಡಲಿಲ್ಲ" ಎಂದು ರಾಂಪಾಲ್ ಆರೋಪಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ವಿಡಿಯೋ ವೈರಲ್
10 ವರ್ಷದ ಬಾಲಕ ತನ್ನ 2 ವರ್ಷದ ಸಹೋದರನ ಶವವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಹನ್ಸರಾಜ್ ಮೀನಾ ಎಂಬುವವರು ಆಗಸ್ಟ್ 28 ರಂದು ಈ ಟ್ವೀಟ್ ಮಾಡಿದ್ದು, ಆ ವಿಡಿಯೋವನ್ನು 80 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನಂತರ, ಕೋಮಲ್ ಕರಣ್‌ವಾಲ್ ಎಂಬ ಬಳಕೆದಾರರು ಸಹ ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಅವರು ಇದಕ್ಕೆ ‘’ಆಂಬುಲೆನ್ಸ್ ಸಿಗಲಿಲ್ಲ. ತಂದೆ ಸುಸ್ತಾದ ಕಾರಣ 10 ವರ್ಷದ ಮಗ ತನ್ನ ಸಹೋದರನ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾನೆ. ಯುಪಿಯ ಬಾಗ್‌ಪತ್ ಜಿಲ್ಲೆಯಲ್ಲಿ 2 ವರ್ಷದ ಸಹೋದರನ ಶವದ ಬಳಿ ಮುಗ್ಧ ಮಗು ಅಲೆದಾಡುತ್ತಿರುವ ಚಿತ್ರವು ಸರ್ಕಾರ ಮತ್ತು ವ್ಯವಸ್ಥೆಗೆ ಕಳಂಕವಾಗಿದೆ’’ ಎಂಬ ಕ್ಯಾಪ್ಷನ್ ಅನ್ನು ಇವರು ನೀಡಿದ್ದಾರೆ. ಹನ್ಸರಾಜ್ ಮೀನಾ ಅವರ ವಿಡಿಯೋಗೆ ಸಾವಿರಾರು ಲೈಕ್ಸ್ ಹಾಗೂ ಸಾವಿರಾರು ಜನ ಇದನ್ನು ರೀಟ್ವೀಟ್ ಮಾಡಿದ್ದು, ಕಮೆಂಟ್ ಮೂಲಕ ಸರ್ಕಾರ, ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.