ಮನಸ್ಸಿನಿಂದ ಹೊರಗಿನ ಎಲ್ಲಾ ಯೋಚನೆಗಳನ್ನೂ ಹೊರಹಾಕಿ ನಮ್ಮೊಳಗೆ ನಾವು ಏಕಾಗ್ರತೆಯಿಂದ ಶೂನ್ಯ ಸ್ಥಿತಿಗೆ ತೆರಳುವುದು ನಿಜವಾದ ಧ್ಯಾನ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಾಣಿಸಿದರೂ ವಾಸ್ತವವಾಗಿ ಸುಲಭವಲ್ಲ. ಏಕೆಂದರೆ ಮನಸ್ಸನ್ನು ಏಕಾಗ್ರಗೊಳಿಸುವುದು ಪ್ರಯತ್ನಪೂರ್ವಕವಾಗಿ ಸಿದ್ಧಿಸಬೇಕಾದ ಕಲೆ. ಹಾಗಿದ್ದರೆ ಧ್ಯಾನ ಮಾಡುವುದು ಹೇಗೆ? 7 ಬೇರೆ ಬೇರೆ ವಿಧಾನಗಳು ಇಲ್ಲಿವೆ. ಇವುಗಳಲ್ಲಿ ಯಾವುದನ್ನು ಬೇಕಾದರೂ ಅಭ್ಯಾಸ ಮಾಡಬಹುದು.

ಸಾಮಾನ್ಯವಾಗಿ ಪದ್ಮಾಸನದಲ್ಲಿ ನೇರವಾಗಿ ಕುಳಿತುಕೊಂಡು, ದೇಹವನ್ನು ಹಗುರವಾಗಿರಿಸಿಕೊಂಡು ಏಕಾಂತದಲ್ಲಿ, ಉತ್ತಮ ಪರಿಸರದಲ್ಲಿ ಧ್ಯಾನ ಮಾಡಬೇಕು. ಕನಿಷ್ಠ ಅರ್ಧ ಗಂಟೆಯಾದರೂ ಏಕಸ್ಥಿತಿಯಲ್ಲಿ ಧ್ಯಾನ ಮಾಡುವುದು ಉತ್ತಮ.

NRI ಯಿಂದ ಸೂರ್ಯ ನಮಸ್ಕಾರಕ್ಕೆ ಕರ್ನಾಟಕ ಸಂಗೀತದ ಮೆರುಗು; ನೋಡೋದೇ ಒಂದು ಸೊಬಗು.! 

 1. ಏಕದಿಕ್ಕಿನ ಧ್ಯಾನ

ನಮ್ಮ ಆಲೋಚನೆಯನ್ನು ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸಬೇಕು. ಉದಾಹರಣೆಗೆ, ಯಾವುದೋ ಒಂದು ಚಿತ್ರವನ್ನು ನೋಡುತ್ತಿರಬೇಕು ಅಥವಾ ಕಣ್ಮುಚ್ಚಿಕೊಂಡು ಒಂದು ವಸ್ತುವನ್ನು ಕಲ್ಪಿಸಿಕೊಂಡು ಅದರಿಂದ ಗಮನ ಬೇರೆಡೆಗೆ ಹೋಗದಂತೆ ತಡೆಯಬೇಕು. ಅಥವಾ ನಮ್ಮ ಉಸಿರಿನ ಮೇಲೇ ಗಮನ ಕೇಂದ್ರೀಕರಿಸಬಹುದು. ಇದರಿಂದ ಒತ್ತಡ ನಿವಾರಣೆಯಾಗುತ್ತದೆ.

2. ಖಾಲಿತನದ ಧ್ಯಾನ

ಶೂನ್ಯದಲ್ಲಿ ಮನಸ್ಸನ್ನು ನೆಡಬೇಕು. ಯಾವುದರ ಬಗ್ಗೆಯೂ ಯೋಚಿಸಬಾರದು. ಋುಣಾತ್ಮಕ ಅಂಶಗಳು ಮನಸ್ಸನ್ನು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಇದೊಂದು ನಿಷ್ಕಿ್ರಯ ವಿಧಾನವಾದರೂ ನಮ್ಮನ್ನು ನಾವು ಇದರಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ನಂತರ ಕ್ರಮೇಣ ನಮ್ಮ ಮೇಲೆ ನಮಗೇ ನಿಯಂತ್ರಣವಿಲ್ಲದ ಹಗುರ ಸ್ಥಿತಿಗೆ ದೇಹ ತಲುಪುತ್ತದೆ. ಈ ಧ್ಯಾನ ಏಕಾಗ್ರತೆಗೆ ಒಳ್ಳೆಯದು.

3. ಸಂಚಾರಿ ಧ್ಯಾನ

ಇದೊಂದು ವಿಶಿಷ್ಟಧ್ಯಾನ. ಇಲ್ಲಿ ನೀವು ಕುಳಿತುಕೊಳ್ಳುವುದಿಲ್ಲ. ಸೀಮಿತ ಪರಿಸರದಲ್ಲಿ ನಡೆಯುತ್ತಿರುತ್ತೀರಿ ಅಥವಾ ಸೈಕಲ್‌ ಹೊಡೆಯುತ್ತಿರುತ್ತೀರಿ ಅಥವಾ ಯೋಗಾಸನಗಳನ್ನೇ ಮಾಡುತ್ತಿರುತ್ತೀರಿ. ಆದರೆ, ಹೊರಗಿನ ಯಾವುದೇ ಯೋಚನೆಗಳು ನಿಮ್ಮೊಳಗೆ ಸುಳಿಯುವುದಿಲ್ಲ. ಮನಸ್ಸು ನಿಮ್ಮ ಕ್ರಿಯೆಯೊಳಗೆ ಒಂದಾಗಿ, ಏನನ್ನೂ ಯೋಚಿಸದೆ ಶೂನ್ಯ ಸ್ಥಿತಿಗೆ ತೆರಳುತ್ತದೆ. ದೇಹದ ಮೇಲೆ ನಿಯಂತ್ರಣ ಸಾಧಿಸಲು ಈ ಧ್ಯಾನ ಸಹಕಾರಿ.

ಇಮ್ಯುನಿಟಿ ಹೆಚ್ಚಿಸಲು ಮೂರು ಸರಳ ಯೋಗಾಸನ! 

4. ಮನಃಪೂರ್ವಕ ಧ್ಯಾನ

ಈ ಧ್ಯಾನದಲ್ಲಿ ನೀವೇನು ಮಾಡುತ್ತಿದ್ದೀರಿ ಎಂಬ ಸಂಪೂರ್ಣ ಅರಿವು ನಿಮಗಿರುತ್ತದೆ. ಆದರೆ, ಭೂತಕಾಲವನ್ನಾಗಲೀ ಭವಿಷ್ಯವನ್ನಾಗಲೀ ಯೋಚಿಸುವುದಿಲ್ಲ. ಬದಲಿಗೆ ವರ್ತಮಾನದ ಒಳ್ಳೆಯ ಕ್ಷಣಗಳ ಬಗ್ಗೆ ಯೋಚಿಸುತ್ತೀರಿ. ಇಂತಹ ಧ್ಯಾನವನ್ನು ಎಲ್ಲೆಂದರಲ್ಲಿ, ಸಮಯ ಸಿಕ್ಕಾಗ, ಕಣ್ಣು ಬಿಟ್ಟುಕೊಂಡೇ, ನೀವು ಯಾವ ಸ್ಥಿತಿಯಲ್ಲಿದ್ದೀರೋ ಆ ಸ್ಥಿತಿಯಲ್ಲೇ ಮಾಡಬಹುದು. ಈ ಧ್ಯಾನ ನಿಮ್ಮನ್ನು ನೀವು ಅರಿತುಕೊಳ್ಳುವಂತೆ ಮಾಡುತ್ತದೆ.

5. ಉಸಿರಾಟದ ಧ್ಯಾನ

ಇದು ಸಂಪೂರ್ಣವಾಗಿ ನಿಮ್ಮ ಉಸಿರಾಟದ ಮೇಲೇ ಮನಸ್ಸನ್ನು ಕೇಂದ್ರೀಕರಿಸಿ, ಉದ್ದೇಶಪೂರ್ವಕವಾಗಿ ಉಸಿರಾಟ ನಡೆಸುವ ಕ್ರಿಯೆ. ನಿಧಾನವಾಗಿ ಉಸಿರನ್ನು ಪೂರ್ಣ ಎಳೆದುಕೊಂಡು, ಸಾಧ್ಯವಾದಷ್ಟುಹೊತ್ತು ಶ್ವಾಸಕೋಶದೊಳಗೇ ಇರಿಸಿಕೊಂಡು, ನಂತರ ನಿಧಾನವಾಗಿ ಹೊರಗೆ ಬಿಡುತ್ತಿರಬೇಕು. ಉಸಿರಾಟವನ್ನು ಲೆಕ್ಕ ಮಾಡುತ್ತಿದ್ದರೆ ಮನಸ್ಸು ಬೇರೆ ಸಂಗತಿಗಳ ಬಗ್ಗೆ ಯೋಚಿಸುವುದನ್ನು ತಡೆಯಬಹುದು. ಇದರಿಂದ ಆತಂಕ, ಖಿನ್ನತೆ ನಿವಾರಣೆಯಾಗುತ್ತದೆ.

6. ಕುಂಡಲಿನಿ ಯೋಗ

ಮಂತ್ರದೊಂದಿಗೆ ಮಾಡುವ ಧ್ಯಾನವಿದು. ಯೋಗ್ಯ ಗುರುವಿನ ಮೂಲಕವೇ ಇದನ್ನು ಕಲಿಯಬೇಕು. ಮಂತ್ರೋಪದೇಶ ಪಡೆದು ಈ ಧ್ಯಾನ ಮಾಡಬೇಕು. ಇದು ಯೋಗ ಎಂದು ಕರೆಸಿಕೊಂಡರೂ ವಾಸ್ತವದಲ್ಲಿ ಇದು ಒಂದು ವಿಧದ ಧ್ಯಾನವೇ ಆಗಿದೆ. ಮಾನಸಿಕ ಶಾಂತಿಯ ಜೊತೆಗೆ ಬೆನ್ನುನೋವು ನಿವಾರಣೆ, ಖಿನ್ನತೆ ನಿವಾರಣೆ, ದೇಹದ ಯಾವುದಾದರೂ ಭಾಗದಲ್ಲಿರುವ ಅನಾರೋಗ್ಯದ ನಿವಾರಣೆ ಕೂಡ ಇದರಿಂದ ಸಾಧ್ಯವಿದೆ.

ಕಚೇರಿಯಲ್ಲಿ ಮಾಡಬಹುದಾದ ಸುಲಭ ಆಸನಗಳು!

7. ಜೆನ್‌ ಧ್ಯಾನ

ಬೌದ್ಧರಲ್ಲಿ ಪ್ರಚಲಿತದಲ್ಲಿರುವ ಧ್ಯಾನ ಪದ್ಧತಿಯಿದು. ಇದಕ್ಕೆ ಬೇರೆ ಬೇರೆ ರೀತಿಯ ಹಂತಗಳು ಹಾಗೂ ಭಂಗಿಗಳು ಕೂಡ ಇವೆ. ಮುಖ್ಯವಾಗಿ ದೇಹ, ಮನಸ್ಸು ಮತ್ತು ಉಸಿರಾಟವನ್ನು ಒಂದೇ ಎಂದು ಬಗೆದು, ವಿಶ್ರಾಂತ ಸ್ಥಿತಿಯಲ್ಲಿ ಕುಳಿತು ಈ ಧ್ಯಾನ ಮಾಡಲಾಗುತ್ತದೆ. ನೆಲದ ಮೇಲೆ ಬುದ್ಧನ ಭಂಗಿಯಲ್ಲಿ ಕುಳಿತು ಕಣ್ಮುಚ್ಚಿಕೊಂಡು ಈ ಧ್ಯಾನ ಮಾಡಬೇಕು. ಇದರಲ್ಲೂ ಹಲವು ವಿಧಗಳಿವೆ. ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆಗೆ ಈ ಧ್ಯಾನ ಸಹಕಾರಿ.