ರೋಗ ಬಾರದಂತೆ ಕಾಪಾಡುವುದು ಯೋಗ, ಆರೋಗ್ಯವಾಗಿ ಉಳಿಯುವುದು ಕ್ಷೇಮ. ಇವೆರಡಕ್ಕೂ ಬೇಕಾಗಿರುವುದು ರೋಗನಿರೋಧಕ ಶಕ್ತಿ. ಅದನ್ನು ಸಂಪಾದಿಸುವುದೇ ಬಹು ಕಷ್ಟದ ಮತ್ತು ಸುಲಭದ ಕೆಲಸ. ಕಷ್ಟಯಾಕೆಂದರೆ ನಾವು ಸಣ್ಣಪುಟ್ಟವ್ಯಾಯಮವನ್ನೂ ಮಾಡುವುದಿಲ್ಲ. ಸುಲಭ ಏಕೆಂದರೆ ದಿನಕ್ಕೆ ಹತ್ತು ನಿಮಿಷ ಮೀಸಲಿಟ್ಟರೆ ಇಮ್ಯೂನಿಟಿ ನಮ್ಮದಾಗುತ್ತದೆ. ಮೂರು ಅತ್ಯಂತ ಸುಲಭವಾದ ಯೋಗಾಸನಗಳನ್ನು ಇಲ್ಲಿ ಕೊಟ್ಟಿದ್ದೇವೆ. ಇವು ಇಮ್ಯುನಿಟಿ ಬೆಳೆಸುವಲ್ಲಿ ಅತೀ ಉಪಯುಕ್ತ. ಯಾರು ಬೇಕಿದ್ದರೂ ಮಾಡಬಹುದಾದ ಸರಳ ಯೋಗಗಳಿವು.

1. ಮತ್ಸ್ಯಾಸನ: ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಕಡಿಮೆ ಮಾಡಿ, ರೋಗನಿರೋಧಕ ಚೈತನ್ಯಉಕ್ಕುವಂತೆ ಮಾಡುವ ಆಸನ ಇದು. ಉಸಿರಾಟದ ತೊಂದರೆ ಇರುವವರಿಗೆ ಇದು ಅತ್ಯಂತ ಸೂಕ್ತ. ಇದು ಮೂಗಿನ ಹೊಳ್ಳೆಗಳು ಮತ್ತು ಶ್ವಾಸನಾಳವನ್ನು ಶುದ್ಧಿಗೊಳಿಸುತ್ತದೆ. ಮೈ ಮನ ಹಗುರಾಗುತ್ತವೆ.

ಹೀಗೆ ಮಾಡಿ:

ಪದ್ಮಾಸನದಲ್ಲಿ ಕುಳಿತುಕೊಳ್ಳಿ. ನಿಧಾನವಾಗಿ ತಲೆಯನ್ನು ಎತ್ತುತ್ತಾ ಬನ್ನಿ, ಹಾಗೆಯೇ ಎದೆಯನ್ನೂ ಮೇಲಕ್ಕೆತ್ತಿ. ಕೈಗಳನ್ನು ಅಗಲಿಸಿ. ಸರಾಗವಾಗಿ ಉಸಿರಾಡುತ್ತಿರಿ. ಅಂಗೈ ಮೇಲಿರುವಂತೆ ನಿಧಾನವಾಗಿ ನಿಮ್ಮ ಕಾಲುಗಳನ್ನು ಮಂದಕ್ಕೆ ಚಾಚಿ. ಇದೇ ಭಂಗಿಯಲ್ಲಿ ಎರಡರಿಂದ ಮೂರು ನಿಮಿಷ ಇರಿ.

ಕಚೇರಿಯಲ್ಲಿ ಮಾಡಬಹುದಾದ ಸುಲಭ ಆಸನಗಳು!

2.ವಿಪರೀತ ಕರಣಿ : ವಿಪರೀತ ಅಂದರೆ ತಲೆಕೆಳಗೆ. ಕರಣಿ ಅಂದ್ರೆ ಕ್ರಿಯೆ. ರಕ್ತಸಂಚಾರ ಸರಾಗಗೊಳಿಸುವ ಆಸನ ಇದು. ಇದರಿಂದ ಅನೇಕ ಉಪಯೋಗಗಳುಂಟು.

ಹೀಗೆ ಮಾಡಿ:

ಗೋಡೆಗೆ ಮುಖ ಮಾಡಿ ಚಾಪೆಯ ಮೇಲೆ ಕುಳಿತುಕೊಳ್ಳಿ. ನಿಧಾನವಾಗಿ ಕಾಲುಗಳನ್ನೆತ್ತಿ ಗೋಡೆಗೆ ಆನಿಸಿ. ಆದಷ್ಟೂಗೋಡೆಯ ಸಮೀಪಕ್ಕೆ ಹೋಗಿ. ಕತ್ತನ್ನು ಕೊಂಚ ಎತ್ತಿ, ಕಾಲುಗಳ ಆಧಾರದಿಂದ ಬೆನ್ನನ್ನು ನೆಲದಿಂದ ಮೇಲೆತ್ತಿ. ಆದಷ್ಟೂನಿಸೂರಾಗಿ ಇದನ್ನು ಮಾಡಿ. ಇದೇ ಭಂಗಿಯಲ್ಲಿ 15 ನಿಮಿಷ ಇರಿ.

3. ಉತ್ಥಾನಾಸನ: ಅತೀ ಸರಳವಾದ ಆಸನ ಇದು. ಇದರಿಂದ ಸೈನಸ್‌ ಮತ್ತು ಶೀತದ ತೊಂದರೆ ನಿವಾರಣೆ ಆಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಹೀಗೆ ಮಾಡಿ:

ನೆಟ್ಟಗೆ ನಿಂತುಕೊಂಡು ಕಾಲುಗಳನ್ನು ಕೊಂಚ ದೂರದಲ್ಲಿಡಿ. ನಿಧಾನವಾಗಿ ಬಗ್ಗುತ್ತಾ ಬನ್ನಿ. ನಿಮ್ಮ ಕೈಯನ್ನು ನೆಲಕ್ಕೆ ತಾಗಿಸಿ, ತಲೆಯನ್ನು ಮೊಣಕಾಲಿಗೆ ಮುಟ್ಟಿಸಿ. ಅದೇ ಸ್ಥಿತಿಯಲ್ಲಿ ಸುಮಾರು ಹತ್ತು ಹನ್ನೆರಡು ಸಲ ಸುಧೀರ್ಘವಾಗಿ ಉಸಿರಾಡಿ. ಮತ್ತೆ ಮೊದಲಿನ ಸ್ಥಿತಿಗೆ ಬನ್ನಿ.