Asianet Suvarna News Asianet Suvarna News

ಈ ಏಳು ಅಭ್ಯಾಸಗಳಿಗೆ ಈಗಲೇ ಎಳ್ಳುನೀರು ಬಿಡಿ!

ನಮಗೆಲ್ಲರಿಗೂ ಕೆಲವೊಂದಿಷ್ಟು ದುರಭ್ಯಾಸಗಳಿರುತ್ತವೆ. ಅದರಿಂದಾಗಿ ನಾವು ಬದುಕಿನಲ್ಲಿ ಸುಖ, ನೆಮ್ಮದಿ, ಯಶಸ್ಸು, ಸಂತೋಷದಿಂದ ವಂಚಿತರಾಗುತ್ತೇವೆ. ಅಂಥ ಅಭ್ಯಾಸಗಳು ಯಾವುವು ಗೊತ್ತಾ? ಅವನ್ನು ಬಿಡಲು ಏನು ಮಾಡಬೇಕು?
 

6 Habits You must Quit Right Now
Author
Bangalore, First Published Oct 10, 2019, 3:52 PM IST

ಬದುಕಲ್ಲಿ ಯಶಸ್ಸು, ನೆಮ್ಮದಿ, ಸಂತೋಷ ಪ್ರತಿಯೊಂದಕ್ಕೂ ಅಡ್ಡಗಾಲು ಹಾಕುವಂಥ ಕೆಲವೊಂದಿಷ್ಟು ಅಭ್ಯಾಸಗಳನ್ನು ಅನಗತ್ಯವಾಗಿ ನಾವು ಬೆಳೆಸಿಕೊಂಡಿರುತ್ತೇವೆ. ಇದರಿಂದ ನಮಗಾಗಲೀ, ಬೇರೆಯವರಿಗಾಗಲೀ ಲಾಭವಿಲ್ಲ. ಮತ್ತೇಕೆ ಅವುಗಳನ್ನು ಪೋಷಿಸಬೇಕು? ಬಿಟ್ಟು ಬಿಡೋಣ ಬನ್ನಿ...

ಅತಿಯಾಗಿ ಯೋಚಿಸೋದು ಬಿಡಿ

ಯಾವುದೇ ವಿಷಯದ ಕುರಿತು ಅತಿಯಾಗಿ ಯೋಚಿಸುವುದರಿಂದ ನಮ್ಮ ಮನಸ್ಸು ಹಾಗೂ ಮೆದುಳಿನ ಮೇಲೆ ಯೋಚನೆಗಳ ಪ್ರವಾಹವೇ ಹರಿದುಬರುತ್ತದೆ. ಅತಿಯಾಗಿ ಅರ್ಥ ಕಲ್ಪಿಸುವುದು, ಅತಿಯಾದ ಚಿಂತೆ ಇವುಗಳಿಂದಾಗಿ ನಿದ್ದೆ ಹಾಗೂ ಶಾಂತಿ ಕಳೆದುಕೊಂಡು ನಮ್ಮ ಜೀವನದ ಮೇಲಿನ ನಿಯಂತ್ರಣ ಕಳೆದುಕೊಂಡು ಬಿಡುತ್ತೇವೆ. ಇದರಿಂದ ನೆಮ್ಮದಿ ಕಳೆದುಕೊಳ್ಳುವ ಜೊತೆಗೆ ಮಾನಸಿಕವಾಗಿ ಜರ್ಝರಿತವಾಗಿಬಿಡುತ್ತೇವೆ. ಅದರ ಬದಲು ಗೊಂದಲ, ಭಯಗಳನ್ನು ಅವುಗಳ ಪಾಡಿಗೆ ಬಿಟ್ಟು ತಾಳ್ಮೆ ಬೆಳೆಸಿಕೊಂಡು ವಾಸ್ತವದಲ್ಲಿ ಬದುಕುವುದನ್ನು ರೂಢಿಸಿಕೊಳ್ಳಿ. ಯಾವುದೇ ಸನ್ನಿವೇಶವನ್ನು ಪಾಸಿಟಿವ್ ಮೈಂಡ್‌ಸೆಟ್‌ನಲ್ಲೇ ಫೇಸ್ ಮಾಡಿ. ಯಾವುದೂ ನೀವು ಅತಿಯಾಗಿ ಯೋಚಿಸಿದಾಗ ಇದ್ದಷ್ಟು ಕೆಟ್ಟದಾಗಿರುವುದಿಲ್ಲ. 

ಕಚೇರಿಯಲ್ಲಿದ್ದರೆ ಬೆಸ್ಟೀ, ಕೆಲಸದಲ್ಲಿ ಹೆಚ್ಚುತ್ತೆ ಪ್ರೀತಿ

ನೆಗೆಟಿವ್‌ಗಳ ಮೇಲೆ ಫೋಕಸ್ ಬೇಡ

ಪ್ರತಿ ವಿಷಯ, ಸನ್ನಿವೇಶಗಳಲ್ಲೂ ನೀವು ಎರಡು ರೀತಿ ಯೋಚಿಸಬಹುದು, ಎರಡು ರೀತಿ ಪ್ರತಿಕ್ರಿಯಿಸಬಹುದು. ನಿಮಗೆ ಬೇಕಾದಂತೆ ಏನೂ ಘಟಿಸದ್ದರ ಬಗ್ಗೆ ಕರುಬುವುದು ಅಥವಾ ಯಾವುದು ಚೆನ್ನಾಗಿ ಹೋಗುತ್ತಿದೆಯೋ ಅದರ ಕುರಿತು ಖುಷಿ ಪಡುತ್ತಾ ಅದನ್ನು ಇನ್ನಷ್ಟು ಚೆನ್ನಾಗಾಗಿಸುವತ್ತ ಕೆಲಸ ಮಾಡುವುದು. ಬಹಳಷ್ಟು ಜನ ಮೊದಲ ದಾರಿ ಹಿಡಿಯುತ್ತಾರೆ. ಏಕೆಂದರೆ, ಹಳಿಯುವುದು, ಕರುಬುವುದು, ದೂರುವುದು ಸುಲಭ. ಆದರೆ, ಅದು ನಮ್ಮನ್ನು ಹಾಳು ಮಾಡುವುದೇ ಹೊರತು ಉತ್ತಮವಂತೂ ಪಡಿಸುವುದಿಲ್ಲ. ಪ್ರತಿ ನೆಗೆಟಿವ್ ವಿಷಯಗಳಿಗೆ ವಿರುದ್ಧವಾದ, ಉತ್ತಮವಾದ ಸಂಗತಿಗಳು ಏನಿವೆ ಹುಡುಕಿ. ಅದರ ಪಾಸಿಟಿವ್ ಸೈಡ್ ಕುರಿತು ಯೋಚಿಸಿ. ಇದನ್ನು ಸ್ವಲ್ಪ ಸಮಯ ಅಭ್ಯಾಸ ಮಾಡಿದರೆ, ನಂತರ ಪ್ರತಿ ಸನ್ನಿವೇಶದಲ್ಲೂ ಪಾಸಿಟಿವ್ ಯೋಚನೆಗಳೇ ಮೊದಲು ಬರುತ್ತವೆ. 

ಕೀಳರಿಮೆಗೆ ಬೈ ಹೇಳಿ

ನಿಮ್ಮನ್ನು ನೀವು ಎಲ್ಲ ಕಡೆ ಕೆಳಗಿಳಿಸಿಕೊಳ್ಳುವುದರಿಂದ ಆತ್ಮವಿಶ್ವಾಸ ಹಾಗೂ ಸ್ವನಂಬಿಕೆ ಇಳಿದು ಹೋಗುತ್ತದೆ. ಅಭದ್ರತೆ ಹಾಗೂ ತಮ್ಮನ್ನು ತಾವು ಯಾವುದಕ್ಕೂ ಉಪಯೋಗಕ್ಕಿಲ್ಲದವರು ಎಂದುಕೊಳ್ಳುವವರಿಗೆ ಹೀಗೆ ಯೋಚಿಸುವ ಅಭ್ಯಾಸ. ಸಾಮಾನ್ಯವಾಗಿ ಅವರು ನನ್ನಿಂದಾಗಲ್ಲ, ನಾನು ಉಪಯೋಗವಿಲ್ಲ, ನಾನು ಚೆಂದವಿಲ್ಲ, ನಾನು ಮೂರ್ಖ, ದಡ್ಡ, ನನ್ನನ್ನು ಯಾರೂ ಪ್ರೀತಿಸುವುದಿಲ್ಲ- ಇಂಥ ಯೋಚನೆಗಳಲ್ಲೇ ದಿನದ ಬಹುತೇಕ ಸಮಯವನ್ನು ಹಾಳು ಮಾಡುತ್ತಾರೆ. ಈ ಬಗ್ಗೆ ಗಮನ ಹರಿಸಿ, ನೆಗೆಟಿವ್ ಮಾತುಗಳನ್ನು ಬಿಟ್ಟುಬಿಡಿ. ನಿಮ್ಮ ಮೇಲೆ ನಿಮಗೇ ಪ್ರೀತಿ, ಕರುಣೆ ಇಲ್ಲವೆಂದರೆ ಬೇರೆಯವರಿಗೆ ಹೇಗೆ ಹುಟ್ಟುತ್ತದೆ. ಸ್ವಪ್ರೀತಿ ಬೆಳೆಸಿಕೊಳ್ಳಿ. ಬದಲಾಗಬೇಕೆಂದು ಮನಸ್ಸು ಮಾಡಿದರೆ ಬದಲಾವಣೆ ತಾನಾಗಿಯೇ ಬರುತ್ತದೆ. ನಿಮ್ಮ ಬಗ್ಗೆ ನೀವು ಸಕಾರಾತ್ಮಕ ಮಾತುಗಳನ್ನು ಹೇಳಿಕೊಳ್ಳಲು ಆರಂಭಿಸಿ. ನಾನು ಬದಲಾಗಬಲ್ಲೆ, ಹೀಗೆಯೇ ಆಗಬೇಕು ಎಂದು ಯೋಚಿಸಿ, ಅದಕ್ಕೆ ಬೇಕಾದ ಅಭ್ಯಾಸ ಹಾಗೂ ಪ್ರಯತ್ನ ಹಾಕಿ. ವರ್ಷವೊಂದರಲ್ಲೇ ಅದೆಷ್ಟೆಲ್ಲ ಬದಲಾವಣೆಗಳು ಸಾಧ್ಯ ನೀವೇ ಸ್ವತಃ ನೋಡಿ. 

ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡೋ ಸಿಂಪಲ್ ಟ್ರಿಕ್ಸ್‌ಗಳಿವು!

ಭೂತದಲ್ಲಿ ಬದುಕೋದನ್ನು ಬಿಟ್ಬಿಡಿ

ಸದಾ ಗತಕಾಲವನ್ನೇ ಯೋಚಿಸೋದು, ಅದನ್ನೇ ಮತ್ತೆ ಬದುಕೋದು, ಆಗಿನ ತಪ್ಪುಗಳನ್ನು ಹಳಿಯುವುದು, ಆಗ ಎಷ್ಟು ಚೆನ್ನಾಗಿತ್ತೆಂದು ಅದರ ನೆನಪಲ್ಲೇ ಮುಳುಗುವುದರಿಂದ ವರ್ತಮಾನವೆಂಬುದು ವ್ಯರ್ಥವಾಗಿ ಕಳೆದು ಹೋಗುತ್ತಿರುತ್ತದೆ. ಬಹುಷಃ ನಿೀವು ವರ್ತಮಾನವನ್ನು ಎಂಜಾಯ್ ಮಾಡುತ್ತಿಲ್ಲ ಅಥವಾ ಭವಿಷ್ಯದ ಕುರಿತ ಭಯ ನಿಮ್ಮನ್ನು ಗತಕ್ಕೆ ತೆಗೆದುಕೊಂಡು ಹೋಗುತ್ತಿರುತ್ತದೆ. ಆದರೆ, ಭೂತದಲ್ಲಿ ಬದುಕುವುದರಿಂದ ಬದುಕಿಗೆ ಯಾವ ಲಾಭವೂ ಇಲ್ಲ. ಜೀವನದಲ್ಲಿ ಕೆಲ ವಿಷಯಗಳನ್ನು ನಾವು ನಿಯಂತ್ರಿಸಲಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಹಳಿಯುವ ವಿಷಯಗಳನ್ನು ಬಿಟ್ಟು ಬಿಡಿ. ವಾಸ್ತವದಲ್ಲಿ, ವರ್ತಮಾನದಲ್ಲಿ ಬದುಕುವುದನ್ನು ಅಭ್ಯಾಸ ಮಾಡಿಕೊಂಡು ಕನಸಿನ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ.

ಬದಲಾವಣೆಯ ಭಯ ಬಿಡಿ

ಭಯ ಎನ್ನುವುದು ಯಾವಾಗಲೂ ನಮ್ಮನ್ನು ಹಾಳುಗೆಡವುವ ಹಾದಿಯೇ. ಅದು ನಮ್ಮ ಆತ್ಮವಿಶ್ವಾಸ ಕೆಡವಿ, ಬೆಳವಣಿಗೆಗೆ ಅಡ್ಡಗಾಲು ಹಾಕುತ್ತದೆ. ಜೀವನದಲ್ಲಿ ಬಹುತೇಕ ಭಯಗಳು ಕಲ್ಪನೆಯಷ್ಟೇ ಆಗಿರುತ್ತವೆಯೇ ಹೊರತು ನೈಜವಾಗಿ ಅವು ಹಾಗಿರುವುದೇ ಇಲ್ಲ. ಭಯ ಬದಲಾವಣೆಗಳಿಗೆ ನಮ್ಮನ್ನು ತೆರೆದುಕೊಳ್ಳದಂತೆ ಮಾಡುತ್ತದೆ. ಆದರೆ ಪಾಸಿಟಿವ್ ಯೋಚನೆಗಳು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುತ್ತವೆ. ಯಾವಾಗಲೂ ಬದಲಾವಣೆ ಎಂದರೆ ಕೆಟ್ಟದೇ ಎಂದು ಯೋಚಿಸುವ ಬದಲು, ಬದಲಾವಣೆ ಯಾವಾಗಲೂ ಉತ್ತಮವೇ ಆಗಿರುತ್ತದೆ ಎಂದು ಯೋಚಿಸಲು ಮೆದುಳಿಗೆ ಕಲಿಸಿ. ಭಯಕ್ಕೆ ಸಮಯ, ಗಮನ ಹಾಗೂ ಎನರ್ಜಿ ಕೊಡಬೇಡಿ. 

ಎಲ್ಲರನ್ನೂ ಮೆಚ್ಚಿಸುವ ಯತ್ನ ಬಿಡಿ

ಇನ್ನೊಬ್ಬರ ಕಣ್ಣಿನಲ್ಲಿ ಕೆಟ್ಟವರಾಗುವುದು, ರಿಜೆಕ್ಟ್  ಆಗುವುದೆಂದರೆ ನಮಗೆಲ್ಲ ಭಯ. ಹಾಗಾಗಿ, ಸದಾ ಎಲ್ಲರನ್ನೂ ಮೆಚ್ಚಿಸಲು ಯತ್ನಿಸುತ್ತೇವೆ. ಈ ಹಂತದಲ್ಲಿ ನಾವು ನಾವಾಗಿರುವುದನ್ನೇ ಮರೆಯುತ್ತೇವೆ. ನಮ್ಮನ್ನು ನಾವೇ ರೆಜೆಕ್ಟ್ ಮಾಡಿಕೊಳ್ಳುತ್ತೇವೆ. ಇದು ಬದುಕಿನ ಅತ್ಯಂತ ದೊಡ್ಡ ಸೋಲಲ್ಲವೇ? ಎಷ್ಟೇ ಪ್ರಯತ್ನ ಹಾಕಿದರೂ ಎಲ್ಲರನ್ನೂ ಮೆಚ್ಚಿಸುವುದು ಅಸಾಧ್ಯ, ಹೀಗಾಗಿ, ನಿಮಗೆ ಬೇಕಾದಂತೆ, ನೀವಿರುವಂತೆ ಬದುಕಿ. ಏಕೆಂದರೆ ಎಷ್ಟೇ ಮತ್ತೊಬ್ಬರನ್ನು ಮೆಚ್ಚಿಸಿದರೂ ವರ್ಷಗಳು ಉರುಳಿದಾಗ ಅದೆಲ್ಲ ಅಗತ್ಯವಿರಲಿಲ್ಲ ಎನಿಸುತ್ತದೆ. 

Follow Us:
Download App:
  • android
  • ios