ಪ್ರತಿ ದಿನ 24 ಗಂಟೆ ಸಾಕಾಗುತ್ತಿಲ್ಲ ಎನಿಸುತ್ತದೆಯೇ? ಅಂದುಕೊಂಡಿದ್ದೆಲ್ಲ ಮುಗಿಸಲಾಗದೆ ಸಮಯವೇ ವಿಲನ್ ಎನಿಸುತ್ತದೆಯೇ? ಆದರೆ, ಸಮಯವೆಂಬುದು ನಿಜವಾಗಿ ಹೀರೋ. ಅದಕ್ಕೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಮಾಡಿ ಗೊತ್ತಿಲ್ಲ.

ಇಡೀ ಭೂಮಿಯಲ್ಲಿರುವ ಪ್ರತಿಯೊಬ್ಬರಿಗೂ ಒಂದು ದಿನಕ್ಕೆ ಸಿಗುವುದು 24 ಗಂಟೆಗಳೇ. ಆದರೆ ಕೆಲವರು ಅದೇ ಸಮಯದಲ್ಲಿ ಹತ್ತಾರು ಕೆಲಸಗಳನ್ನು ಮುಗಿಸಿಕೊಂಡರೆ ಮತ್ತೆ ಕೆಲವರು ಒಂದನ್ನು ಮುಗಿಸಲು ಒದ್ದಾಡುತ್ತಾರೆ. ಹೇಗೆ ಸಾಧ್ಯ? ಈ ಮೊದಲ ಕೆಟಗರಿಗೆ ಇರುವ ಸಮಯದಲ್ಲೇ ಹೆಚ್ಚು ಕೆಲಸ ಮಾಡಲು ಏನು ಮಾಡಬೇಕೆಂಬ ಅರಿವಿದೆ. ಸಮಯವನ್ನು ಹೇಗೆ ಕಳೆಯಬೇಕೆಂಬ ಪಕ್ಕಾ ಸೆನ್ಸ್ ಇದೆ. ಇದೇ ಪ್ರಾಡಕ್ಟಿವ್ ಆಗಿರುವವರ ನಡುವೆಯೂ, ಬದುಕಲ್ಲಿ ನಿಂತ ನೀರಾದವರ ಹಾಗೂ ಮುಂದೆ ಹೋಗಲಾಗದೆ ಒದ್ದಾಡುವವರ ನಡುವೆಯೂ ಇರುವ ವ್ಯತ್ಯಾಸ. 

ಸೆಲ್ಫೀ ಕೇಳಿದ ಸಾತ್ವಿಕ್ ಹೆಗಡೆಗೆ ಧೈರ್ಯ ಬಂದಿದ್ದೆಲ್ಲಿಂದ?

ಅಯ್ಯೋ ಎಷ್ಟೊಂದೆಲ್ಲ ಮಾಡಲಿದೆ, ಸಮಯ ಹೊಂದಿಸಲಾಗುತ್ತಿಲ್ಲ ಎನ್ನುವುದು ನಿಮ್ಮ ಅಳಲೂ ಆಗಿದ್ದರೆ ಹೀಗ್ ಮಾಡಿ...

1. ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿ

ನೀವು ಆ ದಿನ ಮಾಡಬೇಕಾದ ಎಲ್ಲ ಕೆಲಸಗಳನ್ನು ಬರೆದಿಡುವುದು ನಿಮಗೆ ರಿಮೈಂಡರ್‌ನಂತೆ ಕೆಲಸ ಮಾಡುವುದಷ್ಟೇ ಅಲ್ಲ, ಕೆಲಸ ಮಾಡಲು ಪ್ರೇರೇಪಣೆಯಾಗಿಯೂ ವರ್ತಿಸುತ್ತದೆ. ಮಂದವಾದ ಪೆನ್, ಶಾರ್ಪ್ ಆದ ನೆನಪಿನಶಕ್ತಿಗಿಂತ ಹೆಚ್ಚು ಬಲಶಾಲಿ ಎಂಬುದು ನೆನಪಿರಲಿ. ಹಲವಾರು ಟಾಸ್ಕ್‌ಗಳು ತಲೆಯಲ್ಲಿದ್ದರೆ ಅವುಗಳಲ್ಲಿ ಹಲವು ಬಿಟ್ಟು ಹೋಗುತ್ತವೆ. ಇಲ್ಲವೇ ಸಮಯಕ್ಕೆ ಸರಿಯಾಗಿ ನೆನಪಾಗುವುದಿಲ್ಲ. ಆದರೆ, ಅದನ್ನು ಬರೆದಿಟ್ಟರೆ ಒಂದೊಂದು ಕೆಲಸವಾದಂತೆಲ್ಲ ಟಿಕ್ ಮಾಡುವ ಮಜವೇ ಬೇರೆ. 

2. ಒಮ್ಮೆಗೆ ಒಂದೇ ಟಾಸ್ಕ್ ಮಾಡಿ

ಮಲ್ಟಿಟಾಸ್ಕಿಂಗ್ ಹೆಸರು ಕೇಳಿದರೆ ಎಲ್ಲವನ್ನೂ ಒಟ್ಟಿಗೇ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು ಎನಿಸುತ್ತದೆ. ಆದರೆ, ಇದರಿಂದ ಯಾವೊಂದು ಕೆಲಸವೂ ಸರಿಯಾಗಿ ಆಗುವುದಿಲ್ಲ. ಅಷ್ಟೇ ಅಲ್ಲ, ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಅದಕ್ಕಿಂತ ಒಂದು ಸಮಯಕ್ಕೆ ಒಂದೇ ಟಾಸ್ಕ್ ಮೇಲೆ ಗಮನ ಹರಿಸಿದರೆ ಉತ್ಪಾದಕತೆ ಹೆಚ್ಚುತ್ತದೆ. ಜೊತೆಗೆ ಏಕಾಗ್ರತೆಯೂ ನಿಲ್ಲುತ್ತದೆ. ಇದರಿಂದ ಗುಣಮಟ್ಟದ ಕೆಲಸ ಬೇಗ ಆಗುತ್ತದೆ. 

ಈಗಷ್ಟೇ ಕೆಲಸಕ್ಕೆ ಸೇರಿದ್ದೀರಾ? ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

3. ಗಮನಕ್ಕೆ ಭಂಗ ತರುವಂಥವನ್ನು ದೂರವಿಡಿ

ಪದೇ ಪದೇ ಡಿಸ್ಟ್ರ್ಯಾಕ್ಟ್ ಆಗುತ್ತಿದ್ದರೆ, ನಮ್ಮ ಅರಿವಿಗೆ ಬರದೆಯೇ ಗಂಟೆಗಟ್ಟಲೆ ಸಮಯ ಹಾಳು ಮಾಡಿರುತ್ತೇವೆ. ಜೊತೆಗೆ ಏಕಾಗ್ರತೆಯೂ ಸಿದ್ದಿಸದೆ ಕೆಲಸ ಮುಗಿಯುವುದೇ ಇಲ್ಲ. ಇಂದು ಎಲ್ಲಕ್ಕಿಂತ ದೊಡ್ಡ ಡಿಸ್ಟ್ರ್ಯಾಕ್ಷನ್ ಎಂದರೆ ಮೊಬೈಲ್ ಫೋನ್. ಸಾಧ್ಯವಾದಷ್ಟು ಅದನ್ನು ದೂರದಲ್ಲಿಟ್ಟು ಕೆಲಸ ಮುಗಿದ ಮೇಲೆ ಒಂದೈದು ನಿಮಿಷ ಚೆಕ್ ಮಾಡಿ. ಕೆಲಸಕ್ಕೆ ಮೊಬೈಲ್ ಅಗತ್ಯವಿದ್ದಲ್ಲಿ ನೋಟಿಫಿಕೇಶನ್‌ಗಳು ಬರದಂತೆ ಸೆಟಿಂಗ್ಸ್ ಮಾಡಿಕೊಳ್ಳಿ ಇಲ್ಲವೇ ಇಂಟರ್‌ನೆಟ್ ಅಗತ್ಯವಿಲ್ಲವೆಂದರೆ ಫ್ಲೈಟ್ ಮೋಡ್‌ನಲ್ಲಿಡಿ. 

4. ಚೆನ್ನಾಗಿ ರೆಸ್ಟ್ ಮಾಡಿ

ಸಾಮಾನ್ಯವಾಗಿ ಬಹಳಷ್ಟು ಕೆಲಸವಿದ್ದಾಗ ಎಷ್ಟು ಸುಸ್ತಾದರೂ ರೆಸ್ಟ್ ಮಾಡಿದರೆ ಸಮಯ ಹಾಳಾಗುತ್ತದೆ ಎಂದು ಮಲಗುವುದನ್ನು ಮುಂದೂಡುತ್ತೇವೆ. ಆದರೆ, ನಿದ್ರೆಗಣ್ಣಿನಲ್ಲಿ ಅಥವಾ ಸುಸ್ತಾದಾಗ ಕೆಲಸ ಮಾಡಿದರೆ ಹೆಚ್ಚು ಮಾಡಲಾಗುವುದಿಲ್ಲ. ಬದಲಿಗೆ ಅರ್ಧ ಗಂಟೆ ಮಲಗಿ ಏಳಿ. ಫುಲ್ ರಿಚಾರ್ಜ್ ಆಗಿರುತ್ತೀರಿ. ಈಗ ಕೆಲಸದ ಬಗ್ಗೆ ಪೂರ್ತಿ ಫೋಕಸ್ ಮಾಡಲು ಮೆದುಳು ಹಾಗೂ ಮನಸ್ಸು ತಯಾರಿರುತ್ತದೆ.

ಜಗತ್ತಿನ ಅತಿ ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು

5. ಸುತ್ತಮುತ್ತ ಜೋಡಿಸಿಟ್ಟುಕೊಳ್ಳಿ

ನಿಮ್ಮ ಸುತ್ತಮುತ್ತದ ಜಾಗ ಚೆನ್ನಾಗಿ ಜೋಡಿಸಿ ಸ್ವಚ್ಛವಾಗಿದ್ದಾಗ, ನಿಮ್ಮ ಬಲಿ ಹೆಚ್ಚು ಸಮಯ ಇರುತ್ತದೆ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ? ಹೀಗಿದ್ದಾಗ ಯಾವುದು ಎಲ್ಲಿದೆ ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಅಗತ್ಯ ವಸ್ತುಗಳಿಗಾಗಿ ಹುಡುಕಾಡುತ್ತಾ ಸಮಯ ಹಾಳು ಮಾಡಬೇಕಿಲ್ಲ. 

6. ದಿನಚರಿ ಸರಿಮಾಡಿಕೊಳ್ಳಿ

ಪ್ರತಿ ದಿನ ಒಂದೇ ಸಮಯಕ್ಕೆ ಏಳುವುದು, ಮಲಗುವುದು, ಊಟ ತಿಂಡಿ, ಸ್ನಾನ ಎಂದು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿಕೊಳ್ಳಿ. ಪ್ರಾಡಕ್ಟಿವ್ ಜನರು ಒಂದೇ ರೂಟಿನ್ ಹೊಂದಿರುತ್ತಾರೆ. ಉದಾಹರಣೆಗೆ ಬೆಳಗ್ಗೆದ್ದು ಸ್ನಾನ ತಿಂಡಿ ಇತ್ಯಾದಿ ಕಾರ್ಯಗಳನ್ನು 8 ಗಂಟೆಯೊಳಗೆ ಮುಗಿಸಿ, ಒಂಬತ್ತಕ್ಕೆಲ್ಲ ಮಾಡಬೇಕಾದ ಕೆಲಸ ಆರಂಭಿಸಿ. ಅದರಲ್ಲೇ ಕ್ರಿಯೇಟಿವ್ ಆಗಿರಲು ಪ್ರಯತ್ನಿಸಿ. 

ಎಷ್ಟೇ ಎತ್ತರಕ್ಕೇರಿದರೂ ಹತ್ತಿದ ಏಣಿನ ಒದೆಯಬೇಡಿ!

7. ರಿವಾರ್ಡ್ ಕೊಟ್ಟುಕೊಳ್ಳಿ

ಯಾರಿಗೆ ತಾನೇ ರಿವಾರ್ಡ್ ಇಷ್ಟವಿರಲ್ಲ? ನೀವು ಅಂದುಕೊಂಡ ಅಷ್ಟೂ ಸಮಯವನ್ನು ಅಂದುಕೊಂಡ ಸಮಯದಲ್ಲಿ ಮುಗಿಸಿದ ಬಳಿಕ ಒಂದು ದಿನ ಆಫ್ ಕೊಟ್ಟುಕೊಳ್ಳುವುದು ಅಥವಾ ಮೂವಿ ನೋಡುವುದು ಹೀಗೆ ರಿವಾರ್ಡ್ ಕೊಟ್ಟುಕೊಳ್ಳಿ.