ರಾಜಸ್ಥಾನದಲ್ಲಿ 9 ವರ್ಷದ ಬಾಲಕಿ ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಊಟದ ವಿರಾಮದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದರು ಪ್ರಯೋಜನವಾಗಿಲ್ಲ.

ಜೈಪುರ: 4ನೇ ತರಗತಿಯಲ್ಲಿ ಓದುತ್ತಿದ್ದ ಆರೋಗ್ಯವಂತ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 9 ವರ್ಷದ ಪ್ರಾಚಿ ಕುಮಾವತ್ ಹಠಾತ್ ಸಾವನ್ನಪ್ಪಿದ್ದ ಬಾಲಕಿಯಾಗಿದ್ದು, ಸದಾ ಚಟುವಟಿಕೆಯಿಂದ ಇದ್ದ ಆರೋಗ್ಯವಂತ ಬಾಲಕಿಯ ಅಚಾನಕ್ ಸಾವು ಪೋಷಕರು ಸೇರಿದಂತೆ ಇಡೀ ಗ್ರಾಮಕ್ಕೆ ಆಘಾತ ನೀಡಿದೆ. ಈ ಬಾಲಕಿ ಸಿಕರ್ ಜಿಲ್ಲೆಯ ದಾಂತ ನಗರದ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಳು.

ಮಂಗಳವಾರ ಮಧ್ಯಾಹ್ನ ಶಾಲೆಯಲ್ಲಿ ಊಟದ ವಿರಾಮದ ವೇಳೆ ಊಟ ಮಾಡುವುದಕ್ಕಾಗಿ ಕೆಳಗೆ ಕುಳಿತು ಬುತ್ತಿ ತೆರೆದ ಬಾಲಕಿ ಅಲ್ಲೇ ಪ್ರಜ್ಞೆ ಕಳೆದುಕೊಂಡು ಕೆಲ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ. ಕೂಡಲೇ ಶಿಕ್ಷಕರು ಆಕೆಯ ಸಹಾಯಕ್ಕೆ ಧಾವಿಸಿದ್ದು, ಸಮೀಪದ ಸಮುದಾಯ ಅರೋಗ್ಯ ಕೇಂದ್ರಕ್ಕೂ ಆಕೆಯನ್ನು ಕರೆದೊಯ್ದಿದ್ದಾರೆ.

ಅವಳನ್ನು ಬದುಕಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ಅವಳಿಗೆ ನಾಡಿಮಿಡಿತವಿರಲಿಲ್ಲ, ಅವಳ ರಕ್ತದೊತ್ತಡ ಕುಸಿದಿತ್ತು ಮತ್ತು ಅವಳು ಉಸಿರಾಡಲು ಕಷ್ಟಪಡುತ್ತಿದ್ದಳು, ಹೃದಯ ಸ್ತಂಭನದ ಲಕ್ಷಣಗಳು ಕಾಣಿಸಿಕೊಂಡವು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ನಂತರ ಅಲ್ಲಿಂದ ಬಾಲಕಿಯನ್ನು ಪೋಷಕರು ಸಿಕರ್‌ನ ದೊಡ್ಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಬಾಲಕಿ ಉಸಿರು ಚೆಲ್ಲಿದ್ದಾಳೆ.

ಬಾಲಕಿಗೆ ಸಣ್ಣ ಪ್ರಮಾಣದ ಶೀತ ಇತ್ತು ಹೀಗಾಗಿ ಬಾಲಕಿ ಕಳೆದೆರಡು ದಿನಗಳಿಂದ ಶಾಲೆಗೆ ಬಂದಿರಲಿಲ್ಲ ಎಂದು ಆಕೆ ಓದುತ್ತಿದ್ದ ಆದರ್ಶ ವಿದ್ಯಾ ಮಂದಿರ ಶಾಲೆಯ ಪ್ರಾಂಶುಪಾಲ ನಂದ ಕಿಶೋರ್ ತಿವಾರಿ ಹೇಳಿದ್ದಾರೆ.

ಘಟನೆ ನಡೆದಂದು ಶಾಲೆಗ ಬಂದ ಆಕೆ ಆರೋಗ್ಯವಾಗಿದ್ದಂತೆ ಕಾಣುತ್ತಿದ್ದಳು, ಆಕೆ ಮುಂಜಾನೆ ಅಸೆಂಬ್ಲಿ ಪ್ರಾರ್ಥನೆಯಲ್ಲೂ ಭಾಗಿಯಾಗಿದ್ದಳು. ಆದರೆ ಊಟದ ಸಮಯದಲ್ಲಿ ಕುಸಿದು ಬಿದ್ದ ಆಕೆ ನಂತರ ಮೇಲೇಳಲಿಲ್ಲ.

ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು 9 ವರ್ಷದ ಬಾಲಕಿಯನ್ನು ನಮ್ಮ ಬಳಿಗೆ ಕರೆತಂದರು. ಅವಳು ಪ್ರಜ್ಞೆ ತಪ್ಪಿ ಉಸಿರಡುವುದಕ್ಕೆ ಕಷ್ಟಪಡುತ್ತಿದ್ದಳು. . ಬಿಪಿ ಇರಲಿಲ್ಲ, ನಾಡಿಮಿಡಿವೂ ಇರಲಿಲ್ಲ ಮತ್ತು ಅವಳ ಹೃದಯವೂ ಬಡಿಯುತ್ತಿರಲಿಲ್ಲ. ನಾವು ಸಿಪಿಆರ್ ಪ್ರಾರಂಭಿಸಿದೆವು, ಅವಳಿಗೆ ಆಮ್ಲಜನಕ ಮತ್ತು ತುರ್ತು ಔಷಧಿಗಳನ್ನು ನೀಡಿದ್ದೇವೆ ಜೊತೆಗೆ ಇಂಜೆಕ್ಷನ್ ಮತ್ತು ಡ್ರಿಪ್ ನೀಡಿದ್ದೇವೆ ಎಂದು ದಂತಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಚಿಗೆ ಮೊದಲಿಗೆ ಚಿಕಿತ್ಸೆ ನೀಡಿದ ಐದ್ಯ ಡಾ. ಸುಭಾಷ್ ವರ್ಮಾ ಹೇಳಿದ್ದಾರೆ.

ಚಟುವಟಿಕೆಯಿಂದ ಇದ್ದ ಮಗಳು ಹಠಾತ್ ಆಗಿ ಹೊರಟು ಹೋಗಿದ್ದನ್ನು ನೋಡಿ ಕುಟುಂಬದವರು ಆಘಾತಕ್ಕಿಡಾಗಿದ್ದು ಮಗಳ ದೇಹವನ್ನು ಅಂತಿಮ ವಿಧಿ ವಿಧಾನಗಳಿಗಾಗಿ ಕರೆದೊಯ್ದಿದ್ದಾರೆ. ಮೃತ ಬಾಲಕಿಗೆ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ,

ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ವೈದ್ಯ ಡಾ. ಆರ್.ಕೆ. ಜಂಗಿದ್, ಸುಮಾರು ಒಂದೂವರೆ ಗಂಟೆಗಳ ಕಾಲ ಅವಳಿಗೆ ಪ್ರಜ್ಞೆ ತರಿಸಲು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ. ಪ್ರಾಥಮಿಕ ಲಕ್ಷಣಗಳು ಮಗುವಿಗೆ ಹೃದಯಾಘಾತದಂತೆ ಕಾಣುತ್ತಿತ್ತು ಮತ್ತು ನಾವು ಅವಳಿಗೆ ನೀಡುತ್ತಿದ್ದ ಸಿಪಿಆರ್, ಆಮ್ಲಜನಕ ಮತ್ತು ಔಷಧಿಗಳಂತಹ ಹೃದಯ ಚಿಕಿತ್ಸೆಗೆ ಅವಳು ಪ್ರತಿಕ್ರಿಯಿಸಿದಳು ಹೀಗಾಗಿ ನಾವು ಅವಳನ್ನು ಆಂಬ್ಯುಲೆನ್ಸ್‌ನಲ್ಲಿ ಇರಿಸಿ ಸಿಕಾರ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದೆವು ಎಂದು ಡಾ. ಜಂಗಿದ್ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ ಇಲ್ಲದೆ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆಕೆ ಖಂಡಿತವಾಗಿಯೂ ಹೃದಯ ಸ್ತಂಭನದಿಂದ ಬಳಲುತ್ತಿರುವಂತೆ ಕಂಡುಬಂದಿದೆ. ಬಹುಶಃ ಆಕೆಗೆ ಹುಟ್ಟಿನಿಂದಲೇ ಹೃದಯ ಕಾಯಿಲೆ ಇದ್ದಿರಬಹುದು, ಅದು ಎಂದಿಗೂ ಪತ್ತೆಯಾಗಿಲ್ಲ ಮತ್ತು ಬೇರೆ ಯಾವುದೋ ಸ್ಥಿತಿಯಿಂದಾಗಿ ಇದ್ದಕ್ಕಿದ್ದಂತೆ ಉಲ್ಬಣಗೊಂಡಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಆಕೆಯ ಶಾಲೆಯಲ್ಲಿ ರೆಕಾರ್ಡ್‌ ಮಾಡಿದ್ದ ಆಕೆಯ ಕೊನೆಯ ವೀಡಿಯೋದಲ್ಲಿ ಬಾಲಕಿ ನಗುತ್ತಾ ತನ್ನ ಹೆಸರು ಹಾಗೂ ತರಗತಿಯನ್ನು ಹೇಳುತ್ತಾ ಮುಂದೆ ಸಾಗುತ್ತಿರುವ ದೃಶ್ಯವಿದೆ. ಕುಟುಂಬದವರು ಪ್ರಾಚಿಗೆ ಇದುವರೆಗೆ ಯಾವುದೇ ಗಂಭೀರ ಸಮಸ್ಯೆಗಳಿರಲಿಲ್ಲ ಎಂದು ಹೇಳಿಕೊಂಡಿದ್ದು, ಆಕೆಯ ಹಠಾತ್ ಸಾವು ಪೋಷಕರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.