ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನವಜಾತ ಶಿಶುವಿಗೆ ಹೃದಯಾಘಾತವಾಗಿದ್ದು, ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಶು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು (ಜು.17): ರಾಜ್ಯದಲ್ಲಿ ಹೃದಯಾಘಾತದ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಬುಧವಾರ ಕೂಡ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನವಜಾತ ಶಿಶುವಿಗೆ ಹೃದಯಾಘಾತವಾಗಿದ್ದು, ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಶು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ಮೂಡಿಗೆರೆಯ ರಘು-ಸುಷ್ಮಾ ದಂಪತಿಯ ಮಗು ಹೃದಯಾಘಾತಕ್ಕೆ ಒಳಗಾಗಿದೆ. ಸುಷ್ಮಾ, ಹಾಸನದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಶಿಶು ಹುಟ್ಟಿದ ಕೆಲ ತಾಸುಗಳ ಬಳಿಕ ಹೃದಯಾಘಾತವಾಗಿದೆ. ಮಗುವನ್ನು 3 ತಾಸಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ತಜ್ಞ ವೈದ್ಯರ ತಂಡವು ತಕ್ಷಣವೇ ಚಿಕಿತ್ಸೆ ಆರಂಭಿಸಿ, ಮಗುವಿನ ಪ್ರಾಣ ಉಳಿಸಿದ್ದಾರೆ
ಈ ಮಧ್ಯೆ, ಕೊಪ್ಪಳದ 26 ವರ್ಷದ ಮಹಿಳೆ ಮಂಜುಳಾ ಹೂಗಾರ (26) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆ ಕೊಟ್ಟೂರಿನ ಎಚ್.ಕೆ.ರೇಖಾ (37), ಮಂಡ್ಯದ ಪಾಂಡವಪುರ ತಾಲೂಕಿನ ಗುಮ್ಮನಹಳ್ಳಿಯಲ್ಲಿ ಮಂಜುನಾಥ್ (44), ಬಾಗಲಕೋಟೆಯ ಜಮಖಂಡಿಯಲ್ಲಿ ಸಿದ್ದು ಮೀಸಿ (63) ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹೃದಯಾಘಾತ ಕುರಿತು ಭಯಬೇಡ, ಜಾಗೃತಿ ಮುಖ್ಯ: ಹೃದಯಾಘಾತದ ಕುರಿತು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಕುರಿತು ಭಯಪಡದೇ ಸೂಕ್ತ ಜಾಗೃತಿ ಹೊಂದುವುದು ಅವಶ್ಯಕವಾಗಿದೆ ಎಂದು ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್‌ಕೇರ್ ಸೆಂಟರ್‌ನ ಹಿರಿಯ ಹೃದ್ರೋಗ ತಜ್ಞ ಡಾ. ರಘು ಪ್ರಸಾದ ಹೇಳಿದರು. ಇಲ್ಲಿನ ವಿದ್ಯಾನಗರದ ಸ್ಟೆಲ್ಲರ್ ಮಾಲ್‌ನಲ್ಲಿರುವ ಕನ್ನಡಪ್ರಭ ಕಚೇರಿಯಲ್ಲಿ ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ಸಹಯೋಗದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದಯ ಹಾಗೂ ದಂತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬದಲಾದ ಜೀವನಶೈಲಿ, ಧೂಮಪಾನ, ಮದ್ಯಪಾನ ಮಾಡುವುದರಿಂದ ಹೃದಯಾಘಾತದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರವಾದ ವಸ್ತು ಎತ್ತಿದಾಗ, ಹೆಚ್ಚು ನಡೆದಾಗ ಉಂಟಾಗುವ ಅಲ್ಪ ಪ್ರಮಾಣದ ಸುಸ್ತು, ಆಯಾಸಕ್ಕೆ ಭಯಪಡುವ ಅಗತ್ಯವಿಲ್ಲ. ಆದರೆ, ಹೆಚ್ಚಿನ ಸುಸ್ತು, ಆಯಾಸವಾದಲ್ಲಿ ನಿರ್ಲಕ್ಷಿಸದೇ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು. ಹಿಂದಿನ ಜೀವನ ಶೈಲಿಗೂ, ಇಂದಿನ ಜೀವನ ಶೈಲಿಗೂ ತುಂಬಾ ವ್ಯತ್ಯಾಸವಿದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾದ ವ್ಯಾಯಾಮ, ಆರೋಗ್ಯಯುತ ಆಹಾರ ಸೇವನೆಗೆ ಆದ್ಯತೆ ನೀಡಿ. ಗುಟ್ಕಾ, ತಂಬಾಕು, ಸಿಗರೇಟ್ ಸೇವನೆ ಸಂಪೂರ್ಣವಾಗಿ ತ್ಯಜಿಸಿ ಉತ್ತಮ ಆರೋಗ್ಯದತ್ತ ಕಾಳಜಿ ವಹಿಸುವಂತೆ ಕರೆ ನೀಡಿದರು.
