Asianet Suvarna News Asianet Suvarna News

ತಿಂಗಳ ಹಿಂದೆ ಕಚ್ಚಿದ ನಾಯಿ: ರೇಬಿಸ್‌ಗೆ 19 ವರ್ಷದ ತರುಣಿ ಬಲಿ

ಹುಚ್ಚು ನಾಯಿ ಕಡಿದು ತಿಂಗಳ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ದೇವರ ನಾಡು ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ. ಕಳೆದ ತಿಂಗಳು ನೆರೆ ಮನೆಯವರ ನಾಯಿಯೊಂದು 19 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಕಡಿದಿತ್ತು .

19 year kerala teen died by rabies akb
Author
Kerala, First Published Jul 1, 2022, 3:10 PM IST

ಕೇರಳ: ಹುಚ್ಚು ನಾಯಿ ಕಡಿದು ತಿಂಗಳ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ದೇವರ ನಾಡು ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ. ಕಳೆದ ತಿಂಗಳು ನೆರೆ ಮನೆಯವರ ನಾಯಿಯೊಂದು 19 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಕಡಿದಿತ್ತು . ಇದಾದ ಬಳಿಕ ವಿದ್ಯಾರ್ಥಿನಿ ಇದಕ್ಕೆ ಲಸಿಕೆ ತೆಗೆದುಕೊಂಡಿದ್ದಳು. ಆದಾಗ್ಯೂ ಆಕೆಗೆ ರೇಬಿಸ್‌ ಶುರುವಾಗಿದ್ದು, ತ್ರಿಶೂರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (MCH) ರೇಬಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿನ್ನೆ(ಜೂ.30) ಗುರುವಾರ ಸಾವನ್ನಪ್ಪಿದ್ದಾಳೆ.

ಪಾಲಕ್ಕಾಡ್‌ನ (Palakkad) ಮಂಕರದಲ್ಲಿರುವ (Mankara) ಪಡಿಂಜಕರ (Padinjakara) ಮನೆಯ ಶ್ರೀಲಕ್ಷ್ಮಿ (Sreelakshmi) ಸಾವಿಗೀಡಾದ ತರುಣಿ,  ಮೇ 30 ರಂದು ಈಕೆ ಕೊಯಮತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ ಈಕೆಗೆ ನೆರೆಮನೆಯವರ ನಾಯಿ ಕಡಿದಿತ್ತು. ಘಟನೆಯ ನಂತರ ವೈದ್ಯರು ಸೂಚಿಸಿದ ಆ್ಯಂಟಿ ರೇಬಿಸ್ ಲಸಿಕೆಗಳನ್ನು ಆಕೆ ತೆಗೆದುಕೊಂಡಿದ್ದಾಳೆ ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ಎರಡು ದಿನಗಳ ಹಿಂದೆ ರೇಬಿಸ್‌ನ ಲಕ್ಷಣಗಳಲ್ಲಿ ಒಂದಾದ ತೀವ್ರ ಜ್ವರದಿಂದ ಬಳಲುತ್ತಿದ್ದ ಆಕೆಯನ್ನು ತ್ರಿಶೂರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆ ಸಾವನ್ನಪ್ಪಿದ್ದಾಳೆ.

ಎಚ್ಚರ.. ಬೆಂಗ್ಳೂರಿನಲ್ಲಿವೆ ರೇಬಿಸ್‌ ಲಸಿಕೆ ಪಡೆಯದ 2ಲಕ್ಷ ಬೀದಿನಾಯಿಗಳು..!

ಕೇರಳ ರಾಜ್ಯ ಆರೋಗ್ಯ (Health Minister) ಸಚಿವೆ ವೀಣಾ ಜಾರ್ಜ್ (Veena George) ಅವರು ಈ ಬಗ್ಗೆ ಪಾಲಕ್ಕಾಡ್‌ನ (Palakkad district) ಆರೋಗ್ಯ ಸೇವಾ ನಿರ್ದೇಶಕರಿಂದ ವರದಿ ಕೇಳಿದ್ದಾರೆ. ಘಟನೆಯ ತನಿಖೆಗೆ ಪಾಲಕ್ಕಾಡ್ ಜಿಲ್ಲಾ ಕಣ್ಗಾವಲು ಅಧಿಕಾರಿ ನೇತೃತ್ವದ ತಂಡವನ್ನು ಸಹ ರಚಿಸಲಾಗುವುದು ಎಂದು ಅವರು ಹೇಳಿದರು. ಘಟನೆಯ ನಂತರ ಶ್ರೀಲಕ್ಷ್ಮಿ ನಾಲ್ಕು ಆಂಟಿ ರೇಬಿಸ್ ಲಸಿಕೆಗಳನ್ನು ತೆಗೆದುಕೊಂಡಿದ್ದರು. ಆದರೂ ಆಕೆ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿ ಸಂದೀಪ್ (Sandeep) ತಿಳಿಸಿದರು.

ಆ ಸಂದರ್ಭದಲ್ಲಿ ನಾಯಿ ತನ್ನ ಮಾಲೀಕ ಸೇರಿದಂತೆ ಇತರರಿಗೆ ಕಚ್ಚಿದ್ದರಿಂದ ಕುಟುಂಬ ಮತ್ತು ನಿವಾಸಿಗಳು ಆತಂಕ ಮತ್ತು ಭಯದಲ್ಲಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರು: ನಗರದಲ್ಲಿ ರೇಬಿಸ್‌ ಕಾಯಿಲೆ ಆತಂಕ 

ಈ ಮಧ್ಯೆ ಬೆಂಗಳೂರು ನಗರವನ್ನು 2025ನೇ ಇಸವಿಯೊಳಗೆ ರೇಬಿಸ್‌ ಮುಕ್ತ ಮಾಡುವ ಗುರಿಯನ್ನು ಬೆಂಗಳೂರು ನಗರ ಪಾಲಿಕೆ ಹೊಂದಿದೆ. ಆದರೆ ಶ್ವಾನಗಳಿಗೆ ರೇಬಿಸ್‌ ರೋಗ ನಿರೋಧಕ (ಆ್ಯಂಟಿ ರೇಬಿಸ್‌ ವ್ಯಾಕ್ಸಿನ್‌-ಎಆರ್‌ವಿ) ಚುಚ್ಚುಮದ್ದು ನೀಡುವ ಗುರಿಯನ್ನು ಮುಟ್ಟಲು ಇದುವರೆಗೂ ಸಾಧ್ಯವಾಗಿಲ್ಲ. ಇಂದಿಗೂ ನಗರದ 2 ಲಕ್ಷಕ್ಕೂ ಶ್ವಾನಗಳಿಗೆ ರೇಬಿಸ್‌ ಚುಚ್ಚುಮದ್ದು ಹಾಕಿಲ್ಲ! ಪಾಲಿಕೆ ವ್ಯಾಪ್ತಿಯಲ್ಲಿ 3.09 ಲಕ್ಷ ಶ್ವಾನಗಳಿದ್ದು, ಅವುಗಳಿಗೆ ಪ್ರತಿ ವರ್ಷ ರೇಬಿಸ್‌ ರೋಗ ನಿರೋಧಕ ಚುಚ್ಚು ಮದ್ದು ನೀಡಬೇಕು. ಆದರೆ ಇನ್ನೂ 2 ಲಕ್ಷಕ್ಕೂ ಅಧಿಕ ನಾಯಿಗಳಿಗೆ ಕಳೆದ ಸಾಲಿನಲ್ಲಿ ಲಸಿಕೆಯನ್ನೇ ಹಾಕಿಲ್ಲ.

ಇನ್ನು ಪಾಲಿಕೆಯ ಪಶುಪಾಲನಾ ವಿಭಾಗದ ಮಾಹಿತಿಯಂತೆ ಈವರೆಗೆ ಶೇ.70ರಷ್ಟು ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ-ಅನಿಮಲ್‌ ಬರ್ತ್‌ ಕಂಟ್ರೋಲ್‌) ಮಾಡಲಾಗಿದೆ. ಇನ್ನೂ ಶೇ.30ರಷ್ಟು ಶ್ವಾನಗಳಿಗೆ ಎಬಿಸಿ ಮಾಡಿಲ್ಲ. ಹೀಗಾಗಿ ಎಬಿಸಿಗೆ ಒಳಗಾಗದ ಶ್ವಾನಗಳಿಂದ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಶ್ವಾನಗಳ ಸಂತತಿಯು ಹೆಚ್ಚುತ್ತಿದ್ದು, ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಆದರೂ ಸಂತಾನಹರಣ ಶಸ್ತ್ರಚಿಕಿತ್ಸೆ ಸಂಖ್ಯೆ ಹೆಚ್ಚಿಸುವ ಕಾರ್ಯ ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ.

ಎಂಟು ವಲಯಗಳಲ್ಲಿ ನಿತ್ಯ 800 ಶ್ವಾನಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಗುರಿಯನ್ನು ಈ ಹಿಂದೆ ನೀಡಲಾಗಿತ್ತು. ಆದರೆ, 2021-22ನೇ ಸಾಲಿನಲ್ಲಿ ಪ್ರತಿ ವಲಯದಲ್ಲಿ ದಿನಕ್ಕೆ 20ರಂತೆ ಎಂಟು ವಲಯಗಳಲ್ಲಿ ನಿತ್ಯ 160ರಿಂದ 200 ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಪಾಲಿಕೆಯು ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆಗಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ 5 ಕೋಟಿ ಅನುದಾನ ಮೀಸಲಿಡುತ್ತದೆ. ಪ್ರತಿ ಶ್ವಾನಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು .1200 ಮತ್ತು ರೇಬಿಸ್‌ ಚುಚ್ಚು ಮದ್ದು ನೀಡಲು .155 ಗಳನ್ನು ಪಾಲಿಕೆ ವೆಚ್ಚ ಮಾಡುತ್ತಿದೆ. ಪ್ರತಿ ವರ್ಷ ಇಷ್ಟೆಲ್ಲಾ ಅನುದಾನ ಖರ್ಚಾಗುತ್ತಿದ್ದರೂ ಸಂತಾನಹರಣ ಶಸ್ತ್ರಚಿಕಿತ್ಸೆಗೊಳಗಾದ ಶ್ವಾನಗಳನ್ನು ಪತ್ತೆ ಮಾಡುವುದೇ ಕಷ್ಟವಾಗಿದೆ. 
 

Follow Us:
Download App:
  • android
  • ios