ಚಳಿಗಾಲದಲ್ಲಿ ಪ್ರತಿದಿನ ಒಳ ಉಡುಪು ಬದಲಿಸಿ…. ಇಲ್ಲಾಂದ್ರೆ ಏನೇನೋ ರೋಗ ಬರುತ್ತೆ ಹುಷಾರ್
ಚಳಿಗಾಲ ಎಂಬ ಹೆಸರು ಕೇಳಿದ್ರೆ ಸಾಕು, ಸ್ನಾನ ಮಾಡೋದನ್ನೇ ಜನರು ಮರೆಯುತ್ತಾರೆ. ಇತ್ತೀಚಿಗೆ ದಿನಗಳಲ್ಲಿ ಚಳಿ ಕಡಿಮೆ ಇದ್ರೂ, ಚಳಿ ತುಂಬಾ ಇರೋ ಕಡೆ ಜನರು ಚಳಿಗಾಲದಲ್ಲಿ ಸ್ನಾನ ಸ್ಕಿಪ್ ಮಾಡಿ, ಅದೇ ಬಟ್ಟೆಯನ್ನು ಧರಿಸುತ್ತಾರೆ. ಅದರಲ್ಲೂ ಒಳ ಉಡುಪುಗಳನ್ನು ಸಹ ಜನ ಬದಲಾಯಿಸೋದೆ ಇಲ್ಲ. ಆದ್ರೆ ಇದು ಡೇಂಜರ್ ಗೊತ್ತಾ?
ಚಳಿಗಾಲ (winter season) ಅಂದರೆ, ಸೋಂಬೇರಿತನ ಜನರ ಬೆನ್ನು ಬಿಡೋದೆ ಇಲ್ಲ. ಯಾಕಂದ್ರೆ ಹೊರಗೆ ಜೋರಾಗಿ ಚಳಿ ಇರೋವಾಗ, ಬೆಳಗ್ಗೆ ಬೇಗ ಎದ್ದೇಳಲು ಜನರು ಕಷ್ಟ ಪಡ್ತಾರೆ, ಇಂತಹ ಸಮಯದಲ್ಲಿ ಸ್ನಾನ ಮಾಡೋದಂತು ದೂರ ಮಾತು, ನೀರಿನ ಹೆಸರು ಕೇಳಿದ್ರೆ ಓಡಿ ಹೋಗೋ ಜನರಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದೀರ?
ಚಳಿಗಾಲದಲ್ಲಿ, ಆಯಾಸ ಮತ್ತು ಸೋಮಾರಿತನದಿಂದಾಗಿ (laziness) ಜನರು ಹಲವಾರು ದಿನಗಳವರೆಗೆ ಸ್ನಾನ ಮಾಡೋದೇ ಇಲ್ಲ ಮತ್ತು ಈ ಕಾರಣದಿಂದಾಗಿ, ಜನರು ತಮ್ಮ ಬಟ್ಟೆಗಳನ್ನು ದೀರ್ಘಕಾಲದವರೆಗೆ ಬದಲಾಯಿಸುವುದಿಲ್ಲ. ಕೆಲವರಂತೂ ಒಳ ಉಡುಪುಗಳನ್ನು ಸಹ ಬದಲಾಯಿಸೋದಿಲ್ಲ. ಸ್ನಾನನೇ ಮಾಡಿಲ್ಲ, ಇನ್ನು ಇನ್ನರ್ ವೇರ್ ಬದಲಾಯಿಸೋದು ಯಾಕೆ ಎಂದು ಸುಮ್ಮನಾಗೋರೆ ಹೆಚ್ಚು. ನೀವು ಸಹ ಈ ತಪ್ಪನ್ನು ಮಾಡಿದರೆ, ಅದು ನಿಮ್ಮ ಇಂಟಿಮೆಟ್ ಹೈಜಿನ್ ಗೆ (intimate hygiene) ಮಾರಕವಾಗುವ ಸಾಧ್ಯತೆ ತುಂಬಾ ಇದೆ.
ದೀರ್ಘಕಾಲದವರೆಗೆ ಒಂದೇ ಒಳ ಉಡುಪುಗಳನ್ನು (innerwear) ಧರಿಸೋದು ತುಂಬಾ ದೊಡ್ಡ ತಪ್ಪು. ಇದೊಂದು ಅನಾರೋಗ್ಯಕರ ಅಭ್ಯಾಸ. ಚಳಿಗಾಲದಲ್ಲಿ ಮಾತ್ರವಲ್ಲ, ಯಾವುದೇ ಸಮಯದಲ್ಲಿ ನೀವು ಒಳ ಉಡುಪುಗಳನ್ನು ದೀರ್ಘಕಾಲದವರೆಗೆ ಬದಲಾಯಿಸದೇ ಇದ್ರೆ ಏನೇನು ಸಮಸ್ಯೆ ಕಾಡುತ್ತೆ ನೋಡಿ.
ವಜೈನಾ ವಾಸನೆ
ದಿನವಿಡೀ ಒಳ ಉಡುಪುಗಳ ಮೇಲೆ ವಿಸರ್ಜನೆ ಮತ್ತು ತೇವಾಂಶ ಉಳಿದುಕೊಳ್ಳೋದರಿಂದ ಬ್ಯಾಕ್ಟೀರಿಯಾ, ಯೀಸ್ಟ್ ಮತ್ತು ಶಿಲೀಂಧ್ರಗಳು ಸುಲಭವಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಅವು ಹೆಚ್ಚಾಗಿ ಮಲ ಮತ್ತು ಮೂತ್ರದ (Urine) ವಸ್ತುಗಳಿಂದ ಕಲುಷಿತಗೊಳ್ಳುತ್ತವೆ. ಇದರಿಂದ ಯೋನಿಯಲ್ಲಿ (vagina) ಕೆಟ್ಟ ವಾಸನೆ ಬರೋದಕ್ಕೆ ಆರಂಭವಾಗುತ್ತೆ. ಇದು ಮುಜುಗರವನ್ನುಂಟು ಮಾಡುವುದಲ್ಲದೆ, ಅನಾರೋಗ್ಯವನ್ನು ಸಹ ಉಂಟು ಮಾಡುತ್ತೆ.
ಖಾಸಗಿ ಭಾಗದಲ್ಲಿ ಮೊಡವೆ
ಬೆವರು, ತೇವಾಂಶ, ಕೊಳಕು ಮತ್ತು ಎಣ್ಣೆಯ ಶೇಖರಣೆಯಿಂದಾಗಿ, ನೋವಿನ ಕೆಂಪು ಮೊಡವೆಗಳು (pimple in private part) ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಮುಖದಂತೆಯೇ, ವಜೈನಾದಲ್ಲಿ ಮೊಡವೆಗಳು ಮೂಡದಂತೆ ಮಾಡಲು ನಿಮ್ಮ ಇಂಟಿಮೇಟ್ ಏರಿಯಾವನ್ನು ಫ್ರೆಶ್ ಮತ್ತು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು.
ಯೀಸ್ಟ್ ಸೋಂಕಿನ ಸಂತಾನೋತ್ಪತ್ತಿ ತಾಣವಾಗುತ್ತದೆ
ಯೀಸ್ಟ್ ಸೋಂಕು (yeast infection) ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯ ಸೋಂಕುಗಳಲ್ಲಿ ಒಂದಾಗಿದೆ, ಮತ್ತು ಇದು ಅನೈರ್ಮಲ್ಯ ಅಭ್ಯಾಸಗಳಿಂದ ಉಂಟಾಗುತ್ತದೆ. ಇಂತಹ ಸೋಂಕುಗಳು ಸಾಮಾನ್ಯವಾಗಿ ಒಂದೇ ಕೊಳಕು ಒಳ ಉಡುಪುಗಳನ್ನು ಹಲವಾರು ದಿನಗಳವರೆಗೆ ಧರಿಸುವುದರಿಂದ ಹರಡುತ್ತವೆ. ಅಷ್ಟೇ ಅಲ್ಲ ಇದರಿಂದ ತುರಿಕೆ, ಕಿರಿಕಿರಿ ಸಹ ಉಂಟಾಗಬಹುದು.
ದದ್ದು ಉಂಟಾಗಬಹುದು
ಹೆಚ್ಚಾಗಿ ಈ ಸಮಸ್ಯೆ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡುತ್ತದೆ. ದದ್ದುಗಳು ನಿಜವಾಗಿಯೂ ನೋವು ಮತ್ತು ಅಹಿತಕರ ಭಾವ ಮೂಡಿಸುತ್ತೆ. ಇದು ತುಂಬಾ ನೋವಿಂದ ಕೂಡಿದ್ದು, ನಿಮ್ಮ ದಿನವನ್ನೇ ಹಾಳು ಮಾಡಬಹುದು. ಹಾಗಾಗಿ ಪ್ರತಿದಿನ ಇದನ್ನು ಬದಲಾಯಿಸದಿದ್ದರೆ ಹೆಚ್ಚುವರಿ ತೇವಾಂಶದಿಂದಾಗಿ ನಿಮ್ಮ ಚರ್ಮದಲ್ಲಿ ಕಿರಿಕಿರಿ, ಉರಿಯೂತ (Inflamation) ಉಂಟಾಗಬಹುದು. ಇದು ದದ್ದುಗಳಿಗೆ ಕಾರಣವಾಗಬಹುದು. ಹಾಗಾಗಿ ನಿಯಮಿತವಾಗಿ ಒಳ ಉಡುಪುಗಳನ್ನು ಬದಲಾಯಿಸಿ.