22 ದಿನಗಳ ಅಂತರದಲ್ಲಿ ಜನಿಸಿದ ಅವಳಿ, ಅಪರೂಪದಲ್ಲಿ ಅಪರೂಪದ ಪ್ರಕರಣವಿದು!
ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದ ಕೈಲಿ ಡೋಯ್ಲ್ ಎಂಬ ಮಹಿಳೆ ಗರ್ಭಿಣಿಯಾಗಿದ್ದರು. ಕೆಲವು ತಿಂಗಳ ಹಿಂದೆ, ಆಕೆ ಅವಳಿ ಮಕ್ಕಳ ತಾಯಿಯೂ ಆದರು. ಆದರೆ ಇಬ್ಬರೂ ಮಕ್ಕಳು ಜನಿಸಿದ್ದು ಮಾತ್ರ 22 ದಿನಗಳ ಅಂತರದಲ್ಲಿ, ಅದು ಹೇಗೆ ಸಾಧ್ಯವಾಯ್ತು?
ಇಂದಿನ ಯುಗದಲ್ಲಿ ಅವಳಿ ಮಕ್ಕಳ (twin babies) ಜನನ ಸಾಮಾನ್ಯ. ಅನೇಕ ಶಿಶುಗಳು ಅವಳಿಗಳಾಗಿ ಜನಿಸುತ್ತವೆ. ಆದರೆ ಇಂಗ್ಲೆಂಡಿನಲ್ಲಿ ಒಬ್ಬ ಹೆಂಗಸಿಗೆ ವಿಚಿತ್ರ ಸಂಗತಿಯೊಂದು ಸಂಭವಿಸಿತು. ಆ ಮಹಿಳೆಗೆ ಅವಳಿ ಮಕ್ಕಳು ಜನಿಸಿದ್ದು ನಿಜ. ಆದರೆ ಮೊದಲ ಮಗು ಜನಿಸಿದ 22 ದಿನಗಳ ನಂತರ ಎರಡನೇ ಮಗು ಜನಿಸಿತು. ಇದು ಬಹಳ ಅಪರೂಪದ ಪ್ರಕರಣ. ಈ ರೀತಿಯಾಗಿದ್ದು ಯಾಕೆ ತಿಳಿಯಿರಿ.
ಮಿರರ್ ವರದಿಯ ಪ್ರಕಾರ, ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಕೈಲ್ ಡೋಯ್ಲ್ ಗರ್ಭಿಣಿಯಾಗಿದ್ದರು. ಆಕೆ ಅವಳಿ ಮಕ್ಕಳ ತಾಯಿಯಾಗಲಿದ್ದಾಳೆ ಎಂದು ವೈದ್ಯರು ಹೇಳಿದಾಗ, ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲಾ ಸ್ಕ್ಯಾನ್ ಸಾಮಾನ್ಯವಾಗಿದ್ದವು. ವೈದ್ಯರು ಇಬ್ಬರೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. 22ನೇ ವಾರದ ಹೊತ್ತಿಗೆ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ನಂತರ ಒಂದು ದಿನ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಭಯಾನಕ ನೋವು ಕಾಣಿಸಿಕೊಂಡಿತು.
ಕೇಲೀಯನ್ನು ರಾಯಲ್ ಓಲ್ಡ್ಹ್ಯಾಮ್ ಆಸ್ಪತ್ರೆಗೆ ಕರೆದೊಯ್ದು, ಐದು ದಿನಗಳ ಕಾಲ ವೀಕ್ಷಣೆಯಲ್ಲಿ ಇರಿಸಲಾಯಿತು. ನಂತರ ಆಕೆ ತನ್ನ ಮೊದಲ ಮಗು ಅರ್ಲೋಗೆ ನ್ಯಾಚುರಲ್ ಆಗಿ ಜನ್ಮ ನೀಡಿದಳು. ಆ ಮಗು ಕೇವಲ 1.1 ಪೌಂಡ್ ತೂಗುತ್ತಿತ್ತು. ಮಗುವಿನ ಜರಾಯುವಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ವೈದ್ಯರು ಸಮಸ್ಯೆಯನ್ನು ಬಗೆಹರಿಸಲು ಚಿಕಿತ್ಸೆ ನೀಡಿದರು. ಕೆಲವೇ ಸಮಯದಲ್ಲಿ ಎರಡನೇ ಮಗು ಜನಿಸುತ್ತೆ ಎಂದು ವೈದ್ಯರು ಹೇಳಿದ್ದರು. ಆದರೆ ಆ ಮಗು ಜನಿಸಲೇ ಇಲ್ಲ.
22 ದಿನಗಳ ಬಳಿಕ ಜನಿಸಿದ ಮಗು
ಆದರೆ 2 ದಿನಗಳಾದರೂ ಮಗು ಜನಿಸದಿದ್ದಾಗ, ಕೇಲೀಯ ಹೆರಿಗೆ ನೋವು (labour pain) ಸಹ ಕೆಲವೇ ಗಂಟೆಗಳಲ್ಲಿ ನಿಂತು ಹೋಯಿತು. ನಂತರ ವೈದ್ಯರು ಆಕೆಯನ್ನು ವಿಶ್ರಾಂತಿಗಾಗಿ ಮನೆಗೆ ಕಳುಹಿಸಿದರು. 22 ದಿನಗಳ ನಂತರ, ಕೇಲೀ ಮತ್ತೊಂದು ಆಸ್ಪತ್ರೆಗೆ ತೆರಳಿದಳು. ಅಲ್ಲಿ ವೈದ್ಯರ ಬಳಿ ಅವಳಿ ಮಕ್ಕಳ ಬಗ್ಗೆ ಹೇಳಿದಳು.
ಇಬ್ಬರು ಮಕ್ಕಳ ನಡುವೆ ಇಷ್ಟು ಅಂತರ ಇರಲು ಹೇಗೆ ಸಾಧ್ಯ ಎಂದು ವೈದ್ಯರು ಸಹ ಆಶ್ಚರ್ಯಪಟ್ಟರು. ವೈದ್ಯರಿಗೂ ಅವಳಿಗಳ ಅಂತರವನ್ನು ನಂಬಲು ಸಾಧ್ಯವಾಗಲಿಲ್ಲ. ಅವಳಿ ಮಕ್ಕಳು 22 ದಿನಗಳ ಅಂತರದಲ್ಲಿ ಜನಿಸಿದ್ದು ಕೇಲಿಗೂ ಸಹ ಶಾಕ್ ಆಗಿತ್ತು, ಒಂದು ಮಗು ಜನಿಸಿದ ಬಳಿಕ ಇನ್ನೊಂದು ಮಗು ಯಾವಾಗ ಜನಿಸುತ್ತೆ, ಅಂತ ಕಾಯೋದೇ ಇವರ ದಿನಚರಿಯಾಗಿತ್ತು.
ಸಿಸೇರಿಯನ್ ಡೆಲಿವರಿ
ಎರಡನೇ ಮಗು ಆಗುವ ಸಂದರ್ಭದಲ್ಲಿ ಕೇಲಿಗೆ ಹೆರಿಗೆ ನೋವಿನ ಯಾವುದೇ ಚಿಹ್ನೆ ಕಾಣಿಸಿಕೊಳ್ಳಲಿಲ್ಲವಂತೆ, ಬೇರೆ ರೀತಿಯ ನೋವು ಕಂಡು ಬಂದಿತ್ತು, ಹಾಗಾಗಿ, ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಮಗುವನ್ನು ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕಾಗುತ್ತೆ, ಇಲ್ಲದಿದ್ದರೆ ಮಗು ಸಾಯುತ್ತೆ ಎಂದು ವೈದ್ಯರು ತಿಳಿಸಿದರಂತೆ.
ಕೇಲಿಯ ಸ್ಥಿತಿ ಗಂಭೀರವಾಗಿತ್ತು, ಆಕೆಯ ಜರಾಯುವನ್ನು ಗರ್ಭಾಶಯದ ಒಳ ಗೋಡೆಯಿಂದ ಬೇರ್ಪಡಿಸಲಾಗಿತ್ತು, ಇದರಿಂದಾಗಿ ಮಗುವಿಗೆ ಆಮ್ಲಜನಕ ಸಿಗುವುದು ಕಷ್ಟವಾಗುತ್ತಿತ್ತು. ಹುಟ್ಟಿದಾಗ ಮಗು 2 ಪೌಂಡ್ ತೂಕ ಇತ್ತು. ಮಗುವಿನ ಹೃದಯದಲ್ಲಿ ರಂಧ್ರವಿತ್ತು (hole in the heart) ಮತ್ತು ಜೊತೆಗೆ ಕಣ್ಣುಗಳಲ್ಲಿ ಸಮಸ್ಯೆ ಇತ್ತು. ನಂತರ ಚಿಕಿತ್ಸೆಯ ಮೂಲಕ ಎರಡೂ ಮಕ್ಕಳು ಆರೋಗ್ಯಕರವಾಗಿ ಬೆಳೆದರು. ಒಟ್ಟಲ್ಲಿ ಇದೊಂದು ಅಪರೂಪದ ಅವಳಿಗಳ ಜನನ ಅನ್ನೋದು ಸುಳ್ಳಲ್ಲ.