ದೇಶದ ಸಿರಿವಂತೆ ರೋಶ್ನಿಯ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ದೇಶದ ಶ್ರೀಮಂತ ವ್ಯಕ್ತಿ ಯಾರೆಂದು ಎಲ್ಲರಿಗೂ ಗೊತ್ತು. ಆದರೆ, ಭಾರತದ ಶ್ರೀಮಂತ ಮಹಿಳೆ ಯಾರು ಗೊತ್ತಾ? ನೀವು ಊಹಿಸಿದಂತೆ ಆಕೆ ಹಿರಿಯ ವಯಸ್ಕಳಲ್ಲ. ಯಂಗ್ ಆ್ಯಂಡ್ ಎನರ್ಜಿಟಿಕ್ ಯುವತಿ. ಹೌದು, ಇಂದಷ್ಟೇ 8.9 ಶತಕೋಟಿ ಡಾಲರ್ ಮೌಲ್ಯದ ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಚೇರ್‌ಪರ್ಸನ್ ಆಗಿ ನೇಮಕಗೊಂಡಿರುವ ರೋಶ್ನಿ ನಡಾರ್ ದೇಶದಲ್ಲೇ ಅತಿ ಶ್ರೀಮಂತ ಮಹಿಳೆ ಎಂಬ ಪಟ್ಟ ಗಳಿಸಿದ್ದಾರೆ. ಇಷ್ಟಕ್ಕೂ ಈ ರೋಶ್ನಿ ಯಾರು? ಅವರ ಆಸ್ತಿಯ ಮೌಲ್ಯವೇನು? ಸಾಧನೆಗಳೇನು?
ದೇಶದ ಶ್ರೀಮಂತ ಮಹಿಳೆಯಾದರೂ ಸರಳವಾಗಿ ಕಾಣಿಸಿಕೊಳ್ಳುವ ರೋಶ್ನಿ ನಡಾರ್ ಮಲ್ಹೋತ್ರಾ ಪ್ರತಿಷ್ಠಿತ ಭಾರತೀಯ ಐಟಿ ಕಂಪನಿ ಎಚ್‌ಸಿಎಲ್‌ನ ಮುಖ್ಯಸ್ಥೆ.
ಇದುವರೆಗೂ ಎಚ್‌ಸಿಎಲ್ ಮುಖ್ಯಸ್ಥರಾಗಿದ್ದು ರೋಶ್ನಿಯ ತಂದೆ, ಬಿಲಿಯನೇರ್ ಶಿವ ನಡಾರ್. ಇನ್ನು ಅವರು ಕಂಪನಿಯ ಎಂಡಿಯಾಗಿ ಮುಂದುವರಿಯಲಿದ್ದಾರೆ.
ದೆಹಲಿಯ ವಸಂತ್ ವ್ಯಾಲಿ ಶಾಲೆಯಲ್ಲಿ ಓದಿದ ರೋಶ್ನಿ, ಇಲಿನಾಯ್ಸ್‌ನ ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿಯಿಂದ ಕಮ್ಯೂನಿಕೇಶನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪಡೆದಿದ್ದಾರೆ.
ಯುಕೆಯ ಸ್ಕೈ ನ್ಯೂಸ್ ಹಾಗೂ ಅಮೆರಿಕದ ಸಿಎನ್‌ಎನ್ ಚಾನೆಲ್‌ನಲ್ಲಿ ನ್ಯೂಸ್ ಪ್ರೊಡ್ಯೂಸರ್ ಆಗಿ ರೋಶ್ನಿ ಕಾರ್ಯ ನಿರ್ವಹಿಸಿದ್ದಾರೆ.
2009ರಲ್ಲಿ ಎಚ್‌ಸಿಎಲ್ ಕಂಪನಿಗೆ ಸೇರಿದ ಆಕೆ, ಒಂದೇ ವರ್ಷದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ, 27ನೇ ವಯಸ್ಸಿಗಾಗಲೇ ಸಿಇಒ ಆದರು.
ಎಚ್‌ಸಿಎಲ್‌ನ ಆರೋಗ್ಯ ವಿಭಾಗದ ವೈಸ್ ಚೇರ್‌ಮನ್ ಆದ ಶಿಖರ್ ಮಲ್ಹೋತ್ರಾರನ್ನು ವಿವಾಹವಾದ ರೋಶ್ನಿಗೆ ಅರ್ಮಾನ್ ಮತ್ತು ಜಹಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಭಾರತದ ಶ್ರೀಮಂತ ಮಹಿಳೆಯಾದ ರೋಶ್ನಿಯ ಆಸ್ತಿಯ ಒಟ್ಟು ಮೌಲ್ಯ 36,000 ಕೋಟಿಗಳು.
ಫೋರ್ಬ್ಸ್‌ನ ವಿಶ್ವದ 100 ಪವರ್‌ಫುಲ್ ಮಹಿಳೆಯರ ಪಟ್ಟಿಯಲ್ಲಿ ಕಳೆದ ಮೂರು ವರ್ಷವೂ ರೋಶ್ನಿ 54ನೇ ಸ್ಥಾನ ಹೊಂದಿದ್ದಾರೆ.