ಬೆರಗುಗೊಳಿಸುವ ರಂಗೋಲಿಯ ಸೊಬಗಿಗೆ ಮನ ಸೋಲದವರುಂಟೇ ?
ರಂಗೋಲಿ ಹಾಕುವುದು ಒಂದು ಕಲೆ. ಮನೆ ಮುಂದೆ ಹಾಕಿದ ಅದ್ಭುತ ರಂಗೋಲಿಯನ್ನು ನೋಡಿದರೆ ಆ ಮನೆಯೊಡತಿಯ ಕಲಾಭಿರುಚಿ ಅರ್ಥವಾಗುತ್ತದೆ. ಮನಸ್ಸಿಗೂ ಮುದ ನೀಡುವ ಇಂಥ ಅದ್ಭುತ ರಂಗೋಲಿ ಹಾಕುವುದರಲ್ಲಿ ಸವಿತಾ ಗುರುಪ್ರಸಾದ್ ಅವರದ್ದು ಎತ್ತಿದ ಕೈ. ನೋಡಿ ಎಂಥ ಅದ್ಭುತ ಕಲೆ ಇವರದ್ದೆಂದು.

ಮಲೆನಾಡಿನ ಪುಟ್ಟ ಹಳ್ಳಿಯಾದ ಕೊಡಚಾದ್ರಿ ತಪ್ಪಲಿನ ಕಪ್ಪದೂರಿನವರು ಸವಿತಾ ಗುರುಪ್ರಸಾದ್.ಮದುವೆಯ ನಂತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಗವ್ವೆನ್ನುವ ಕಾಡು, ಧೋ ಎಂದು ಸುರಿಯುವ ಮಳೆ, ಬೆಳದಿಂಗಳು...ಪ್ರಕೃತಿಯ ಚೆಲುವೇ ಇವರ ರಂಗೋಲಿ ಸ್ಫೂರ್ತಿ.
ಚಿತ್ರ ಬಿಡಿಸುವುದು, ಸಂಗೀತ ಕೇಳುವುದು ಹಾಗೂ ತಾವು ಬಿಡಿಸಿದ ರಂಗೋಲಿಗೆ ಅದ್ಭುತ ಕವನಗಳನ್ನು ಬರೆಯುವುದು ಇವರ ಹವ್ಯಾಸ. ಪ್ರತೀ ದಿನ ಬೆಳಗ್ಗೆ ಬೇಗ ಎದ್ದು, ಇವರು ಮನೆ ಮುಂದೆ ಹಾಕುವ ರಂಗೋಲಿಯನ್ನು ಹಲವರು ಬೆರಗುಗಣ್ಣಿನಿಂದ ನೋಡುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿಯೂ ಇವರು ಬಿಡಿಸುವ ರಂಗೋಲಿಗೆ ಕವನದೊಂದಿಗೆ ಪೋಸ್ಟ್ ಮಾಡುತ್ತಾರೆ. ಈ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಜನರಿಂದ ಸಿಗೋ ಅಪಾರ ಲೈಕ್ಸ್ ಹಾಗೂ ಕಮೆಂಟ್ಸ್ ಸವಿತಾರನ್ನು ಮತ್ತಷ್ಟು ಹುರಿದುಂಬಿಸುತ್ತಿದೆ.
ಸವಿತಾ ಗುರುಪ್ರಸಾದ್ ಅದ್ಭುತ ಕಲಾ ಸೃಷ್ಟಿಗೆ ಮಾರು ಹೋಗದವರು ಯಾರು ಹೇಳಿ? ಗಿಡ, ಬಳ್ಳಿ, ಮರ, ಹೂವುಗಳೇ ಇವರ ರಂಗೋಲಿಗೆ ಸ್ಫೂರ್ತಿಯಾಗಿದೆ. ಮಲೆನಾಡಿನ ಪ್ರಕೃತಿಯ ಸೊಬಗು ಇವರ ಕಲೆಯಲ್ಲಿ ಪ್ರತಿಬಿಂಬಿಸುತ್ತದೆ.ಗೆಜ್ಜೆ ವಸ್ತ್ರ ಮಾಡುವ ಹವ್ಯಾಸವೂ ಇವರಿಗಿದೆ.
ಮನೆ, ಸೂರ್ಯೋದಯ, ಹೂವಿನ ಚಿತ್ತಾರ, ಬಣ್ಣ ಬಣ್ಣದ ಹೂವಿನಗಿಡಗಳು, ಶಿವಲಿಂಗ ಮೊದಲಾದ ಬಣ್ಣದ ರಂಗೋಲಿಗಳನ್ನು ಸವಿತಾ ಗುರುಪ್ರಸಾದ್ ಬಿಡಿಸುತ್ತಾರೆ. ಈ ಆಕರ್ಷಕ ಚಿತ್ತಾರ ಎಲ್ಲರ ಕಣ್ಮನ ಸೆಳೆಯುತ್ತದೆ.
ಎಲೆಗಳಿಂದ ತುಂಬಿದ ಮರ, ಬುಟ್ಟಾಗಳಿರುವ ಸೀರೆಯ ಸೊಬಗಿಗೆ ಮಾರು ಹೋಗದವರಿಲ್ಲ. ಸವಿತಾ ಗುರುಪ್ರಸಾದ್ ಕೈ ಚಳಕಕ್ಕೆ ಸುತ್ತಮುತ್ತಲಿನ ಮಂದಿ ಮಾತ್ರವಲ್ಲ ಗ್ರಾಮಸ್ಥರು ಸಹ ಬೆರಗಾಗಿದ್ದಾರೆ. ಅದೇನೆ ಇರ್ಲಿ ಕಲೆಯನ್ನು ಪ್ರೀತಿಸದವರು ಸವಿತಾರ ಸುಂದರ ರಂಗೋಲಿಗೆ ಮನಸೋಲೋದು ಖಂಡಿತ.