- Home
- Karnataka Districts
- ನೆಲಮಂಗಲದಲ್ಲಿ ಕೊಳಕುಮಂಡಲ ಬೆನ್ನಲ್ಲೇ ನಾಗರಹಾವಿನ ಮರಿಗಳು ಪ್ರತ್ಯಕ್ಷ: ಜನರಿಗೆ ಎಚ್ಚರಿಕೆ ಕೊಟ್ಟ ಉರಗ ತಜ್ಞರು!
ನೆಲಮಂಗಲದಲ್ಲಿ ಕೊಳಕುಮಂಡಲ ಬೆನ್ನಲ್ಲೇ ನಾಗರಹಾವಿನ ಮರಿಗಳು ಪ್ರತ್ಯಕ್ಷ: ಜನರಿಗೆ ಎಚ್ಚರಿಕೆ ಕೊಟ್ಟ ಉರಗ ತಜ್ಞರು!
ನೆಲಮಂಗಲದಲ್ಲಿ ಕೊಳಕುಮಂಡಲ ಹಾವುಗಳ ಬಳಿಕ ಇದೀಗ ನಾಗರಹಾವುಗಳ ಮರಿಗಳು ಪತ್ತೆಯಾಗಿವೆ. ಇದು ಹಾವುಗಳ ಮರಿಮಾಡುವ ಸಮಯವಾಗಿದ್ದು, ಮನೆಯ ಸುತ್ತಮುತ್ತ ಸೇರಿಕೊಳ್ಳುವ ವಿಷಕಾರಿ ಮರಿಗಳಿಂದ ಎಚ್ಚರದಿಂದಿರಲು ಉರಗ ತಜ್ಞರು ಸಲಹೆ ನೀಡಿದ್ದಾರೆ.

ಕಳೆದ ಮೇ ತಿಂಗಳ 24ರಂದು ನೆಲಮಂಗಲ ಪಟ್ಟಣದಲ್ಲಿ ರಾಶಿಯಷ್ಟು ಕೊಳಕುಮಂಡಲ ಹಾವಿನ ಮರಿಗಳು ಪತ್ತೆಯಾಗಿದ್ದವು. ಅವುಗಳನ್ನು ರಕ್ಷಣೆ ಮಾಡಿ ಬೇರೆಡೆ ಸ್ಥಳಾಂತರಿಸಿ ಸ್ಥಳೀಯರ ಪ್ರಾಣಭಯ ದೂರು ಮಾಡಲಾಗಿತ್ತು. ಇದೀಗ ಮತ್ತೊಂದು ಭಾರೀ ವಿಷಕಾರಿ ಹಾವಿನ ಜಾತಿಗೆ ಸೇರಿದ ಮತ್ತೊಂದು ನಾಗರಹಾವಿನ ಮರಿಗಳು ಇದೀಗ ಪತ್ತೆಯಾಗಿವೆ.
ಉರಗ ರಕ್ಷಕ ವಿಶ್ವನಾಥ್ ಅವರು ನೆಲಮಂಗಲ ಪಟ್ಟಣದ ಜನವಸತಿ ಪ್ರದೇಶದಲ್ಲಿದ್ದ 8ಕ್ಕೂ ಅಧಿಕ ನಾಗರಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಹಾವಿನ ಮರಿಗಳು ಮೊಟ್ಟೆಯೊಡೆದು ಹೊರಗೆ ಬರುವ ಅವಧಿಯಾಗಿದೆ. ಈ ಸಂದರ್ಭದಲ್ಲಿ ಹಾವಿನ ಮರಿಗಳು ಮನೆಯ ಕಾಂಪೌಂಡ್ ಒಳಗೆ ಬೆಚ್ಚಗಿರುವ ಪ್ರದೇಶಗಳಿಗೆ ಬಂದು ಸೇರಿಕೊಳ್ಳುತ್ತವೆ.
ಮನೆಯ ಮೆಟ್ಟಿಲುಗಳ ಕೆಳಗೆ ಇಟ್ಟಿರುವ ಅನಗತ್ಯ ವಸ್ತುಗಳಿರುವ ಜಾಗ, ಬೈಕ್‌ಗಳು, ಚಪ್ಪಲಿ ಸ್ಟ್ಯಾಂಡ್‌ಗಳು ಹಾಗೂ ಮನೆಯ ಹೊರಗೆ ಬಿಟ್ಟಿರುವ ಶೂಗಳಲ್ಲಿ ಹಾವಿನ ಮರಿಗಳು ಹೋಗಿ ಸೇರಿಕೊಳ್ಳುತ್ತವೆ.
ಇನ್ನು ಈ ಬಗ್ಗೆ ತಿಳಿಯದ ಮಕ್ಕಳು ಹಾವಿರುವ ಜಾಗದಲ್ಲಿ ಹೋಗಿ ಕಚ್ಚಿಸಿಕೊಂಡು ಹಾನಿಗೊಳಗಾಗುತ್ತವೆ. ಇನ್ನು ಮನೆಯ ಹೊರಗಿಟ್ಟ ಸಿಲಿಂಡರ್ ಒಳಗೂ ಹಾವಿನ ಮರಿಗಳು ಸೇರಿಕೊಳ್ಳುತ್ತಿವೆ. ಹೀಗಾಗಿ, ಮನೆಯಲ್ಲಿ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು.
ಜೂನ್ ಹಾಗೂ ಜುಲೈ ತಿಂಗಳಲ್ಲಿ ನಮ್ಮ ದೇಶದ ಅತ್ಯಂತ ವಿಷಕಾರಿ 4 ಹಾವಿನ ಜಾತಿಗಳಾದ ನಾಗರಹಾವು ಹಾಗೂ ಕೊಳಕುಮಂಡಲ ಹಾವುಗಳು ಮರಿ ಮಾಡುವ ಅವಧಿಯಾಗಿದೆ. ಜೊತೆಗೆ ಕೇರೆ ಹಾವುಗಳು ಸೇರಿ ಇತರೆ ಜಾತಿಯ ಹಾವುಗಳೂ ಮರಿ ಹಾಕುತ್ತವೆ. ಹೀಗಾಗಿ, ಮಳೆಗಾಲ ಮುಗಿಯುವವರೆಗೆ ಹುಷಾರಾಗಿರಬೇಕು ಎಂದು ಉರಗ ತಜ್ಞರು ಸಲಹೆ ನಿಡಿದ್ದಾರೆ.
ಇನ್ನು ಕೊಳಕುಮಂಡಲ ಹಾವುಗಳು ಮೊಟ್ಟೆಯನ್ನಿಡದೇ ನೇರವಾಗಿ ಮರಿಗಳನ್ನು ಹಾಕುತ್ತವೆ. ಒಮ್ಮೆ ಕೊಳಕುಮಂಡಲ ಹಾವುಗಳು ಕನಿಷ್ಠ 40 ರಿಂದ 80 ಮರಿಗಳನ್ನು ಹಾಕುತ್ತದೆ. ಆಗ ತಾನೇ ಹುಟ್ಟಿದ ಹಾವಿನ ಮರಿಗಳೂ ಕೂಡ ಭಾರೀ ವಿಷಕಾರಿ ಆಗಿರುತ್ತವೆ. ಈ ಮರಿ ಹಾವುಗಳು ಕಚ್ಚಿದರೂ ಸಾವು ಸಂಭವಿಸುವುದು ಖಚಿತ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚೆಗೆ ನೆಲಮಂಗಲದ ಫಾರ್ಮ್‌ಹೌಸ್ ಒಂದರ ಬಳಿ ಸುಮಾರು 20 ಕೊಳಕುಮಂಡಲ ಹಾವಿನ ಮರಿಗಳನ್ನು ರಕ್ಷಣೆ ಮಾಡಲಾಗಿತ್ತು. ಸುಮಾರು 45ಕ್ಕಿಂತ ಹೆಚ್ಚಿದ್ದ ಹಾವಿನ ಮರಿಗಳ ಪೈಕಿ ಕೇವಲ 20 ಮರಿಗಳನ್ನು ರಕ್ಷಣೆ ಮಾಡಿ ಜನವಸತಿ ಇಲ್ಲದ ಪ್ರದೇಶಗಳಲ್ಲಿ ಬಿಡಲಾಗಿತ್ತು. ಇದೀಗ ಒಂದು ವಾರಗಳ ಅಂತರದಲ್ಲಿನಾಗರ ಹಾವುಗಳ ಮರಿಗಳು ಕಂಡುಬಂದಿವೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

