ನಾಸಿಕ್‌ನ ತ್ರಯಂಬಕೇಶ್ವರ ದೇವಾಲಯದ 'ಅಮೃತ್ ಕುಂಡ'ವನ್ನು ಭಾರತೀಯ ಪುರಾತತ್ವ ಇಲಾಖೆ ಸ್ವಚ್ಛಗೊಳಿಸುವಾಗ, ದಶಕಗಳಿಂದ ಹೂಳಿನಡಿ ಮುಚ್ಚಿಹೋಗಿದ್ದ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಪೇಶ್ವೆಗಳ ಕಾಲದ ಈ ಐತಿಹಾಸಿಕ ಕುಂಡದ ನೀರನ್ನು ಜ್ಯೋತಿರ್ಲಿಂಗದ ಪೂಜೆ ಮತ್ತು ಅಭಿಷೇಕಕ್ಕೆ ಬಳಸಲಾಗುತ್ತಿತ್ತು. ಈ ಅಲೌಕಿಕ ದೃಶ್ಯವು ಭಕ್ತರಲ್ಲಿ ಭಕ್ತಿಭಾವವನ್ನು ಹೆಚ್ಚಿಸಿದೆ.

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ವಿಶ್ವಪ್ರಸಿದ್ಧ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ತ್ರಯಂಬಕೇಶ್ವರ ಮಹಾದೇವ ದೇವಾಲಯದ ಆವರಣದಲ್ಲಿ ಅತ್ಯಂತ ಅಪರೂಪದ ಹಾಗೂ ಇತಿಹಾಸ ಪ್ರಸಿದ್ಧ ವಿಚಾರವೊಂದದು ಬಹಿರಂಗವಾಗಿದೆ. ದೇವಾಲಯದ ಸಂಕೀರ್ಣದಲ್ಲಿರುವ 65 ಅಡಿ ಆಳದ ಐತಿಹಾಸಿಕ 'ಅಮೃತ್ ಕುಂಡ'ದ (Amrut Kund) ಕೆಳಭಾಗದಲ್ಲಿ ದಶಕಗಳ ಬಳಿಕ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದ್ದು, ಇಡೀ ಶಿವಭಕ್ತರಲ್ಲಿ ಮತ್ತು ದೇವಾಲಯದ ಆಡಳಿತ ಮಂಡಳಿಯಲ್ಲಿ ಭಕ್ತಿಯ ಮಹಾಪೂರವೇ ಹರಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಎಸ್‌ಐ (ASI) ಸ್ವಚ್ಛತಾ ಕಾರ್ಯದ ವೇಳೆ ಬೆಳಕಿಗೆ ಬಂದ ಅಲೌಕಿಕ ದೃಶ್ಯ

ಪೇಶ್ವೆಗಳ ಕಾಲದ ಅತ್ಯಂತ ಪವಿತ್ರ ಜಲಾಶಯವೆಂದು ಪರಿಗಣಿಸಲ್ಪಟ್ಟಿರುವ ಈ ಅಮೃತ್ ಕುಂಡದ ಸಂರಕ್ಷಣೆ ಮತ್ತು ಶುಚಿಗೊಳಿಸುವಿಕೆಗಾಗಿ ಭಾರತೀಯ ಪುರಾತತ್ವ ಇಲಾಖೆ (ASI) ಯು ಇತ್ತೀಚೆಗೆ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯದ ಭಾಗವಾಗಿ ಜಲಾಶಯದಲ್ಲಿದ್ದ ನೀರನ್ನು ಸಂಪೂರ್ಣವಾಗಿ ಬರಿದು ಮಾಡಿ ಕ್ಲೀನ್ ಮಾಡಲು ಮುಂದಾಗಿತ್ತು. ಹಲವು ದಶಕಗಳಿಂದ ಶೇಖರಣೆಯಾಗಿದ್ದ ಹೂಳು ಮತ್ತು ಮಣ್ಣನ್ನು ತೆಗೆದುಹಾಕಿ, ನೀರು ಸಂಪೂರ್ಣವಾಗಿ ಕಡಿಮೆಯಾದಾಗ ಕುಂಡದ ಅತ್ಯಂತ ಕೆಳಭಾಗದಲ್ಲಿದ್ದ ಪ್ರಾಚೀನ ಹಾಗೂ ಪವಿತ್ರ ಶಿವಲಿಂಗವು ಗೋಚರಿಸಿತು. ವರ್ಷಪೂರ್ತಿ ನೀರು ತುಂಬಿರುತ್ತಿದ್ದರಿಂದ ಇಷ್ಟು ದಿನಗಳ ಕಾಲ ಯಾರಿಗೂ ಕಾಣಿಸದಿದ್ದ ಈ ಅಲೌಕಿಕ ದೃಶ್ಯವು, ಎಎಸ್‌ಐ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿಯ ಗಮನ ಸೆಳೆಯಿತು. ಸದ್ಯ ಈ ಅಪರೂಪದ ಶಿವಲಿಂಗದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತಿವೆ.

ಭದ್ರತೆಯ ದೃಷ್ಟಿಯಿಂದ ಭಕ್ತರ ಪ್ರವೇಶ ನಿಷೇಧ

ಅಮೃತ್ ಕುಂಡದ ತಳದಲ್ಲಿ ಪ್ರಾಚೀನ ಶಿವಲಿಂಗ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆಯೇ ದರ್ಶನಕ್ಕಾಗಿ ಭಕ್ತರು ಮುಗಿಬೀಳುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಭದ್ರತೆಯ ಕಾರಣಗಳಿಗಾಗಿ ಸಾರ್ವಜನಿಕ ಹಾಗೂ ಸಾಮಾನ್ಯ ಭಕ್ತರ ಪ್ರವೇಶವನ್ನು ಕುಂಡದ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಐತಿಹಾಸಿಕ ಅಮೃತ್ ಕುಂಡವನ್ನು ಅತ್ಯಂತ ಸುರಕ್ಷಿತವಾಗಿಡಲಾಗಿದ್ದು, ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿ ಸಂರಕ್ಷಿಸಲಾಗುತ್ತಿದೆ.

ಪೂಜೆ-ಅಭಿಷೇಕಕ್ಕೆ ಬಳಕೆಯಾಗುತ್ತಿದ್ದ ಪವಿತ್ರ ಜಲ

ಐತಿಹಾಸಿಕ ದಾಖಲೆಗಳು ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಪೇಶ್ವೆಗಳ ಕಾಲದ ಈ ವಿಶಿಷ್ಟ ವಾಸ್ತುಶಿಲ್ಪದ ಅಮೃತ್ ಕುಂಡಕ್ಕೆ ಅತ್ಯುನ್ನತ ಧಾರ್ಮಿಕ ಸ್ಥಾನವಿದೆ. ಶ್ರೀ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗದ ದಿನನಿತ್ಯದ ಪೂಜೆ, ಧಾರ್ಮಿಕ ಆಚರಣೆಗಳು ಮತ್ತು ಮಹಾ ಅಭಿಷೇಕಗಳಿಗಾಗಿ ಇದೇ ಅಮೃತ್ ಕುಂಡದ ಪವಿತ್ರ ನೀರನ್ನು ಬಳಸಲಾಗುತ್ತಿತ್ತು.

ತ್ರಯಂಬಕೇಶ್ವರ ದೇವಾಲಯದ ಭವ್ಯ ಇತಿಹಾಸ

ತ್ರ್ಯಂಬಕ ಪದದ ಅರ್ಥ: 'ತ್ರ್ಯಂಬಕ' ಎಂದರೆ ಸನಾತನ ಧರ್ಮದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದರ್ಥ ಇಲ್ಲಿನ ಜ್ಯೋತಿರ್ಲಿಂಗದ ಒಳಗೆ ಮೂರು ಸಣ್ಣ ಲಿಂಗಗಳಿದ್ದು, ಅವು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸುವುದು ಈ ಕ್ಷೇತ್ರದ ಅತ್ಯಂತ ವೈಶಿಷ್ಟ್ಯವಾಗಿದೆ

ನಾಸಿಕ್ ನಗರದಿಂದ ಸುಮಾರು 28 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಭವ್ಯವಾದ ಬ್ರಹ್ಮಗಿರಿ ಪರ್ವತದ ಬುಡದಲ್ಲಿದೆ. ಈ ಬ್ರಹ್ಮಗಿರಿ ಪರ್ವತವನ್ನೇ ದಕ್ಷಿಣ ಗಂಗೆ ಎಂದೇ ಕರೆಯಲಾಗುವ ಪವಿತ್ರ ಗೋದಾವರಿ ನದಿಯ ಮೂಲವೆಂದು ಪರಿಗಣಿಸಲಾಗಿದೆ. ದೇವಾಲಯದ ಸಮೀಪದಲ್ಲೇ ಇರುವ ಮತ್ತೊಂದು ಪವಿತ್ರ ಸರೋವರವಾದ 'ಕುಶಾವರ್ತ್ ಕುಂಡ್' ಅನ್ನು ಶ್ರೀಮಂತ್ ಸರ್ದಾರ್ ರಾವ್ ಸಾಹೇಬ್ ಪರ್ಣೇಕರ್ ಅವರು ನಿರ್ಮಿಸಿದ್ದರು. ಇದು ಕುಂಭಮೇಳದ ಶಾಹಿ ಸ್ನಾನಕ್ಕೆ ಪ್ರಸಿದ್ಧಿಯಾಗಿದೆ.

ಪ್ರಸ್ತುತ ನಾವು ಕಾಣುವ ಭವ್ಯವಾದ ಕಪ್ಪು ಕಲ್ಲಿನ ತ್ರ್ಯಂಬಕೇಶ್ವರ ದೇವಾಲಯವನ್ನು ಕ್ರಿ.ಶ. 1755 ಮತ್ತು 1786 ರ ನಡುವೆ ಶ್ರೀಮಂತ್ ನಾನಾಸಾಹೇಬ್ ಪೇಶ್ವೆ ಅವರು ಜೀರ್ಣೋದ್ಧಾರಗೊಳಿಸಿ, ಅತ್ಯಂತ ಆಕರ್ಷಕ ವಾಸ್ತುಶಿಲ್ಪದೊಂದಿಗೆ ಪುನರ್ ನಿರ್ಮಿಸಿದರು. ದಶಕಗಳ ಹೂಳಿನ ಕೆಳಗೆ ಸುಪ್ತವಾಗಿದ್ದ ಶಿವಲಿಂಗವು ಪ್ರಸ್ತುತ ಪುರಾತತ್ವ ಇಲಾಖೆಯ ಸಂರಕ್ಷಣಾ ಕಾರ್ಯದಿಂದಾಗಿ ಮರುದರ್ಶನ ನೀಡಿರುವುದು ಇತಿಹಾಸ ಸಂಶೋಧಕರಿಗೆ ಹಾಗೂ ಕೋಟ್ಯಂತರ ಶಿವಭಕ್ತರಿಗೆ ಒಂದು ಅಪೂರ್ವ ಎನಿಸಿದೆ.