ಸಿರಿ ಕನ್ನಡ ವಾಹಿನಿಯಲ್ಲಿ ಬರಲಿದೆ Matte Mayamruga
ಕ್ಲಾಸಿಕ್ ಧಾರಾವಾಹಿ ಮಾಯಾಮೃಗದ ಮುಂದುವರಿದ ಭಾಗ ಶುರು. ಸುದ್ಧಿಗೋಷ್ಠಿಯಲ್ಲಿ ಧಾರಾವಾಹಿ ವಿಶೇಷತೆ ಪ್ರಸ್ತಾಪ...
ಸಿರಿ ಕನ್ನಡ ವಾಹಿನಿಯಲ್ಲಿ ಟಿಎನ್ ಸೀತಾರಾಮ್, ಪಿ.ಶೇಷಾದ್ರಿ, ನಾಗೇಂದ್ರ ಶಾ ನಿರ್ದೇಶನದ ‘ಮತ್ತೆ ಮಾಯಾಮೃಗ’ ಧಾರಾವಾಹಿ ಪ್ರಸಾರವಾಗಲಿದೆ.
ಇದು ದೂದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕ್ಲಾಸಿಕ್ ಧಾರಾವಾಹಿ ‘ಮಾಯಾಮೃಗ’ದ ಮುಂದುವರೆದ ಭಾಗ. ಪ್ರಸ್ತುತ ಚಿತ್ರೀಕರಣ ಆರಂಭವಾಗಿದ್ದು, ಅಕ್ಟೋಬರ್‌ನಲ್ಲಿ ಪ್ರಸಾರ ಆರಂಭವಾಗುವ ಸಾಧ್ಯತೆ ಇದೆ.
ಮಾಯಾಮೃಗದಲ್ಲಿ ನಟಿಸಿದ್ದ ಲಕ್ಷ್ಮಿ ಚಂದ್ರಶೇಖರ್, ಶಶಿಕುಮಾರ್, ವಿಕ್ರಂ ಸೂರಿ, ಟಿಎನ್ ಸೀತಾರಾಮ್, ಪಿ. ಶೇಷಾದ್ರಿ, ಮಾಳವಿಕಾ ಮುಂತಾದವರು ‘ಮತ್ತೆ ಮಾಯಾಮೃಗ’ದಲ್ಲಿಯೂ ನಟಿಸುತ್ತಿದ್ದಾರೆ.
ಅವರೆಲ್ಲರ ಜೊತೆಗೆ ವಿದ್ಯಾಭೂಷಣರ ಪುತ್ರಿ ಮೇಧಾ ವಿದ್ಯಾಭೂಷಣ, ನಿಖಿತಾ, ಮಧುಮತಿ, ಕಾರ್ತಿಕ್ ವೈಭವ್, ನವೀನ್ ಅಭಿನಯಿಸುತ್ತಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಟಿಎನ್ ಸೀತಾರಾಮ್, ‘ಮಾಯಾಮೃಗ ಬಂದು 24 ವರ್ಷದ ಬಳಿಕ ಆ ಧಾರಾವಾಹಿಯ ಸೀಕ್ವೆಲ್ ಬರುತ್ತಿದೆ.
ಮನುಷ್ಯರ ಲೆಕ್ಕದಲ್ಲಿ ನೋಡುವುದಾದರೆ ಎರಡು ತಲೆಮಾರು, ಕಿರುತೆರೆ ವೀಕ್ಷಕರ ಮನಸ್ಥಿತಿ ಲೆಕ್ಕದಲ್ಲಿ ನೋಡಿದರೆ ಮೂರು ತಲೆಮಾರು ಬದಲಾಗಿದೆ. ಆಗ ಇದ್ದ ಅನೇಕರು ಈಗಿಲ್ಲ. ಹಲವರು ಎತ್ತರಕ್ಕೆ ಹೋಗಿದ್ದಾರೆ. ಇಂಥಾ ಸಂದರ್ಭದಲ್ಲಿ ಮತ್ತೆ ಮಾಯಾಮೃಗ ಬರುತ್ತಿದೆ.
ಮಯಾಮೃಗದಲ್ಲಿ ಮಧ್ಯಮ ವರ್ಗದ ಜನರು ಅನೇಕ ಕಾರಣಗಳಿಗೆ ದಿಗ್ಭ್ರಾಂತರಾಗಿದ್ದ ಕತೆಯನ್ನು ಸೂಕ್ಷ್ಮವಾಗಿ ಹೇಳಿದ್ದೆವು. ಈಗ ಆ ಪಾತ್ರಗಳ ಮುಂದಿನ ಜನರೇಷನ್ ಕತೆಯಲ್ಲಿ ಬಂದಿದೆ. ಅಲ್ಲಿದ್ದ ಪಾತ್ರಗಳ ಮಕ್ಕಳು, ಮೊಮ್ಮಕ್ಕಳ ಕತೆ ನಡೆಯುತ್ತದೆ.
ಮಾಳವಿಕ ಮಗ ಏನಾಗಿರಬಹುದು, ಮಂಜುಭಾಷಿಣಿ ಈಗ ಹೇಗೆ ಜಗತ್ತು ನೋಡುತ್ತಾರೆ ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ನಗು, ಸಂಭ್ರಮ ಕಾಲಕಾಲಕ್ಕೆ ಬೇರೆ ಆಗಿರುತ್ತದೆ. ಆದರೆ ಭಾವ, ಕಣ್ಣೀರು ಎಲ್ಲಾ ಕಾಲಕ್ಕೂ ಒಂದೇ.
ಹೊರಮೈ ವಿಭಿನ್ನ ಇರಬಹುದು. ಆದರೆ ಒಳಗು ಒಂದೇ. ಅದೇ ನಂಬಿಕೆಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ. ಆತಂಕ ಇದೆ. ಜೊತೆಗೆ ನಂಬಿಕೆಯೂ ಇದೆ’ ಎಂದರು.
ಪಿ. ಶೇಷಾದ್ರಿ, ‘ಮಾಯಾಮೃಗ ಯೂಟ್ಯೂಬಲ್ಲಿ ಪ್ರಸಾರವಾದಾಗಲೂ ಅತ್ಯುತ್ತಮ ಪ್ರತಿಕ್ರಿಯೆ ಬಂದಿತ್ತು. ಹಾಗಾಗಿ ಈ ಧಾರಾವಾಹಿ ನವನವೀನ. ಸಿರಿ ಕನ್ನಡದವರು ಕಥೆ ಹೇಗೆ ಇದೆಯೋ ಅದೇ ಥರ ಮಾಡಿ ಎಂದು ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅ ಅಚ್ಚ ಕನ್ನಡದ ವಾಹಿನಿ ಪ್ರೇಕ್ಷಕರಿಗೆ ವಿಶೇಷ ಅನುಭವ ಕೊಡುತ್ತದೆ ಎಂದು ನಂಬಿದ್ದೇನೆ’ ಎಂದರು.
ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ಸಂಜಯ್ ಶಿಂಧೆ, ‘ಸಿರಿ ಕನ್ನಡ ವಾಹಿನಿಗೆ ಇದು ಮಹತ್ವದ ಯೋಜನೆ. ತುಂಬಾ ಸಮಯ ಒತ್ತಾಯದ ಮನವಿ ಮಾಡಿ ಈ ಧಾರಾವಾಹಿಗೆ ತಂಡವನ್ನು ಒಪ್ಪಿಸಿದ್ದೇವೆ.
ಮೂವರು ನಿರ್ದೇಶಕರಿಗೂ ಧನ್ಯವಾದ. ಈ ಸೀಕ್ವೆಲ್ ಧಾರಾವಾಹಿ ಪ್ರಪಂಚದಲ್ಲಿಯೇ ಅಪರೂಪ. ಅಕ್ಟೋಬರ್ ತಿಂಗಳಲ್ಲಿ ಪ್ರಸಾರ ಆರಂಭಿಸುವ ಉದ್ದೇಶ ಇದೆ’ ಎಂದರು.
ನಿರ್ದೇಶಕ ನಾಗೇಂದ್ರ ಶಾ, ಹಿರಿಯ ನಟಿ ಲಕ್ಷ್ಮಿ ಚಂದ್ರಶೇಖರ್, ಧಾರಾವಾಹಿ ಬರಹಗಾರ ಜೆಎಂ ಪ್ರಹ್ಲಾದ್, ಸಿರಿ ಕನ್ನಡ ಪ್ರೋಗ್ರಾಮಿಂಗ್ ಹೆಡ್ ರಾಜೇಶ್ ರಾಜಘಟ್ಟ, ಸಂಚಿಕೆ ನಿರ್ದೇಶಕ ಪ್ರದೀಪ್, ಸಂಯೋಜಕ ಚಂದನ್ ಶಂಕರ್, ಅನುಪಮಾ ಶೇಷಾದ್ರಿ, ಅರವಿಂದ್, ಚಂದ್ರು ಇದ್ದರು.